ಹಾವೇರಿ :
ಇಲ್ಲಿನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಈಚೆಗೆ ಉಣಕಲ್ಲ – ಹುಬ್ಬಳ್ಳಿಯ ಬಾಲ ಶರಣ ಸೇನೆಯ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.
ಬಸವಾದಿ ಶರಣರ ವಚನಗಳ ವೈಚಾರಿಕ ಪ್ರಜ್ಞೆ ಬೆಳೆಸುವ ‘ಮೂಢನಂಬಿಕೆ’ , ತಂತ್ರಜ್ಞಾನ ಹಾಗೂ ರೈತ ಎಂಬ ವಿಷಯ ಒಳಗೊಂಡ ನಾಟಕ ಮತ್ತು ‘ಸಾಫ್ಟವೇರ್ ಸಂಗಣ್ಣ ಒಕ್ಕಲಿಗ ಮುದ್ದಣ್ಣ’ ಎರಡು ಕಿರು ನಾಟಕಗಳ ಪ್ರದರ್ಶನ, ವಚನ ನೃತ್ಯ, ವಚನ ಗಾಯನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಆಪ್ತಸಮಾಲೋಚಕರಾದ ಗಾಯತ್ರಿ ಹೆಗಡೆ ನೇತೃತ್ವದಲ್ಲಿ ನಡೆದ ಪೊಲೀಸ್ ಸಿಬ್ಬಂದಿ ಮಕ್ಕಳ ಬೇಸಿಗೆ ಶಿಬಿರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಕೊನೆಗೆ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ಅವರು ಆಗಮಿಸಿ, ಬಾಲ ಶರಣ ಸೇನೆಯ ಮಕ್ಕಳಿಗೆ ಶುಭ ಹಾರೈಸಿ ಕಿರು ಕಾಣಿಕೆ ನೀಡಿ ಖುಷಿಪಟ್ಟರು. ಮತ್ತು ಅವರು ಈ ಸಂದರ್ಭದಲ್ಲಿ ಮಾತನಾಡಿ, ಮಕ್ಕಳ ಮನಸಿನ ಮೇಲೆ ಸತ್ಯದ ಅರಿವು ಬಿತ್ತುವ ಕಾರ್ಯ ತುಂಬಾ ದೊಡ್ಡದು ಎಂದು ಹೇಳಿದರು.

ಬಸವತತ್ವ ಪ್ರತಿಪಾದಕರು, ಕಚೇರಿ ಎಎಓ ಆಗಿರುವ ಪರಮೇಶ್ವರ ಬಾಳಿಕಾಯಿ ಅವರು ಮಕ್ಕಳ ಕಾರ್ಯಕ್ರಮ ಮೆಚ್ಚಿಕೊಂಡು ಮಾತನಾಡಿ, ಮೂಢನಂಬಿಕೆ ಗೆಲ್ಲಲು ಬಸವಣ್ಣವರ ವಚನಗಳು ಸಹಾಯಕ ಎಂದು ಹೇಳಿದರು. ನಮ್ಮ ಶಿಬಿರದಲ್ಲಿ ಸೇರಿರುವ ಮಕ್ಕಳಿಗೂ ಸಹ ಈ ಕಾರ್ಯಕ್ರಮ ದಾರಿ ದೀಪವಾಗಲಿ ಎಂದರು.

ಅವರು ಶರಣ ಸಾಹಿತಿ ರಂಜಾನ್ ದರ್ಗಾ ಅವರು ಬರೆದ ಬಸವ ಸಂದೇಶ ಪುಸ್ತಕಗಳನ್ನು ಮಕ್ಕಳಿಗೆ ಕಾಣಿಕೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಬಾಲ ಶರಣ ಸೇನೆಯ ಪೋಷಕರು, ವಚನಮೂರ್ತಿಗಳಾದ ಗೀತಾ ತಡಸದ ಅವರು ಉಪಸ್ಥಿತರಿದ್ದು ಮಾತನಾಡಿದರು.

ಬಾಲ ಶರಣ ಸೇನೆಯ ಬೇಸಿಗೆ ಶಿಬಿರ ಉಣಕಲ್ಲ ಬಾಲ ಶರಣ ಸೇನೆಯು ಸುಮಾರು 25 ಮಕ್ಕಳನ್ನು ಹೊಂದಿದೆ. ಈ ಬೇಸಿಗೆಯಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಮಕ್ಕಳು ಪ್ರತಿನಿತ್ಯ ಇಷ್ಟಲಿಂಗ ದೃಷ್ಟಿಯೋಗ, ವಚನ ಗಾಯನ, ವಚನ ನೃತ್ಯ ಮತ್ತು ನಿಜ ಜೀವನದಲ್ಲಿ ವಚನಗಳ ಪ್ರಾಮುಖ್ಯತೆ ತಿಳಿಸುವ ಕಿರು ನಾಟಕಗಳನ್ನು ಮಾಡಿ, ಕಲಿತು ಬೇಸಿಗೆ ರಜೆಯನ್ನು ಸದುಪಯೋಗ ಮಾಡಿಕೊಂಡಿದ್ದಾರೆ.

ಬಾಲ ಸೇನೆಯ ಶಿಬಿರದಲ್ಲಿ ಕಾವ್ಯ ಹೂಗಾರ, ದಿವ್ಯಾ ಎಸ್. ಕತ್ತಿಶೆಟ್ರ, ನಾಗವೇಣಿ ಕುರಿ ಅವರುಗಳು ಒಂದು ತಿಂಗಳು ಪರಿಯಂತ ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತ, ಅವರಿಗೆ ಪ್ರಸಾದ ದಾಸೋಹ ಕೊಡಮಾಡಿದರು.

ಬೇಸಿಗೆ ಶಿಬಿರದ ಮಕ್ಕಳಿಗೆ ಹಂದಿಗುಂದದ ಶಿವಾನಂದ ಮಹಾಸ್ವಾಮಿಗಳು ಬಂದು ಇಷ್ಟಲಿಂಗ ಯೋಗದ ಬಗ್ಗೆ ಪಾಠ ಹೇಳಿಕೊಟ್ಟು ಹೋಗಿದ್ದಾರೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa
