ಚಾಮರಾಜನಗರ
ವಿಶ್ವಗುರು ಬಸವಣ್ಣ ಅವರ ಬಸವ ಜಯಂತಿ ಮಹೋತ್ಸವವನ್ನು ಮೇ 22 ಶುಕ್ರವಾರ ನಗರದ ಜಿಲ್ಲಾ ಕೇಂದ್ರದಲ್ಲಿ ವಿಜೃಂಭಣೆಯಿಂದ ಆಚರಿಸಲು ಜಿಲ್ಲೆಯ ಎಲ್ಲಾ ಬಸವಪರ ಸಂಘಟನೆಗಳು, ಮಠಾಧೀಶರು ಹಾಗೂ ಬಸವ ಭಕ್ತರು ಭರ್ಜರಿ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಸಿದ್ದಮಲ್ಲೇಶ್ವರ ವಿರಕ್ತ ಮಠ ಹಾಗೂ ಚಾಮರಾಜನಗರ ಜಿಲ್ಲೆಯ ಬಸವ ಬಳಗಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಈ ಬಾರಿಯ ಬಸವ ಜಯಂತಿ ಉತ್ಸವಕ್ಕೆ ಈಗಾಗಲೇ ಜಿಲ್ಲೆಯಾದ್ಯಂತ ಅಪಾರ ಸ್ಪಂದನೆ ವ್ಯಕ್ತವಾಗಿದೆ.
ಸುತ್ತೂರು ಜಗದ್ಗುರು ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಜಿಲ್ಲೆಯ ವಿವಿಧ ಮಠಾಧೀಶರ ನೇತೃತ್ವದಲ್ಲಿ, ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತ ಮಠದ ಪೂಜ್ಯ ಚನ್ನಬಸವ ಸ್ವಾಮಿಗಳವರ ಸಮ್ಮುಖದಲ್ಲಿ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು, ಸಂಸದರು, ಶಾಸಕರು ಮಾಜಿ ಶಾಸಕರುಗಳು, ಸಂಘ ಸಂಸ್ಥೆಗಳ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಮೆರವಣಿಗೆ ಉದ್ಘಾಟನೆಗೊಳ್ಳಲಿದೆ.
ಅದಕ್ಕೆ ಪೂರಕವಾಗಿ ಈಗಾಗಲೇ ಜಿಲ್ಲೆಯ ಎಲ್ಲಾ ಬಸವಪರ ಸಂಘಟನೆಗಳ ಸಂಯುಕ್ತ ಸಭೆ ನಡೆಸಿ “ಬಸವ ಬಳಗಗಳ ಒಕ್ಕೂಟ” ರಚನೆ ಮಾಡಲಾಗಿದೆ. ಒಕ್ಕೂಟದ ಅಧ್ಯಕ್ಷರಾಗಿ ಪಿ. ಮರಿಸ್ವಾಮಿ ಅವರನ್ನು ಹಾಗೂ ಕಾರ್ಯದರ್ಶಿಯಾಗಿ ದೊಡ್ಡ ರಾಯಪೇಟೆ ಗಿರೀಶ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಬಸವ ಜಯಂತಿ ಉತ್ಸವವನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ.
ಬಸವ ಬಳಗಗಳ ಒಕ್ಕೂಟದ ಆಶ್ರಯದಲ್ಲಿ 2026ರ ಬಸವ ಜಯಂತಿ ಮಹೋತ್ಸವಕ್ಕಾಗಿ ಹಲವಾರು ಉಪಸಮಿತಿಗಳನ್ನು ರಚಿಸಲಾಗಿದ್ದು, ಉಪಸಮಿತಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಅತ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಶೇಷವಾಗಿ ಸ್ವಾಗತ ಸಮಿತಿ, ಪ್ರಚಾರ ಸಮಿತಿ, ಮೆರವಣಿಗೆ ಸಮಿತಿ, ವೇದಿಕೆ ಸಮಿತಿ, ಅಲಂಕಾರ ಸಮಿತಿ, ಪ್ರಸಾದ ಸಮಿತಿ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಬಸವ ಜಯಂತಿಯ ಯಶಸ್ಸಿಗಾಗಿ ಕಾಯ, ವಾಚಾ, ಮನಸಾ ಶ್ರದ್ಧಾ ಮತ್ತು ಭಕ್ತಿಯಿಂದ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿದ್ದಾರೆ.
ಈಗಾಗಲೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು, ಹೋಬಳಿಗಳು ಹಾಗೂ ಗ್ರಾಮಗಳಲ್ಲಿ ಬಸವ ಭಕ್ತರ ಮನೆ ಮನೆಗಳಿಗೆ ಆಹ್ವಾನ ಪತ್ರಿಕೆಗಳನ್ನು ವಿತರಿಸಲಾಗಿದೆ. ವಿವಿಧ ಗ್ರಾಮಗಳಲ್ಲಿ ರಾಲಿ, ಜಾಥಾ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಬಸವಭಕ್ತರನ್ನು ಬಸವ ಜಯಂತಿ ಮಹೋತ್ಸವಕ್ಕೆ ಶ್ರದ್ಧೆಯಿಂದ ಆಹ್ವಾನಿಸಲಾಗಿದೆ.
ಇಂದಿನಿಂದಲೇ ಚಾಮರಾಜನಗರ ಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು, ಬಸವಪರ ಚಿಂತನ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ನಾಟಕ ಪ್ರದರ್ಶನಗಳು ಜರುಗುತ್ತಿವೆ. ಜೊತೆಗೆ ಆಗಮಿಸುವ ಬಸವಭಕ್ತರಿಗಾಗಿ ಇಂದಿನಿಂದಲೇ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇಂದಿನಿಂದ ನಾಳೆ ಸಂಜೆವರೆಗೆ ಸುಮಾರು ಒಂದು ಲಕ್ಷ ಬಸವಭಕ್ತರಿಗೆ ಪ್ರಸಾದ ವಿತರಿಸುವ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಶುಕ್ರವಾರ ಬೆಳಗ್ಗೆ 10 ಗಂಟೆಗೆ ಚಾಮರಾಜನಗರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಬಸವೇಶ್ವರರ ಪುತ್ಥಳಿ ಆವರಣದಲ್ಲಿ ಬಸವ ಜಯಂತಿ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿಗಳವರ ಸಾನ್ನಿಧ್ಯದಲ್ಲಿ ಜಿಲ್ಲೆಯ ಪರಮಪೂಜ್ಯ ಮಠಾಧೀಶರುಗಳ ನೇತೃತ್ವದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು, ಸಂಸದರು, ಶಾಸಕರುಗಳು, ಮಾಜಿ ಶಾಸಕರುಗಳು, ವಿವಿಧ ಬಸವಪರ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೇರಿದಂತೆ ನಾಡಿನ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಜಿಲ್ಲೆಯ ಎಲ್ಲಾ ಬಸವಾಭಿಮಾನಿಗಳು, ವೀರಶೈವ ಲಿಂಗಾಯಿತ ಸಂಘ-ಸಂಸ್ಥೆಗಳ ಸದಸ್ಯರು, ಯುವಕರು, ಮಹಿಳೆಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಸಾಲಿನ ಬಸವ ಜಯಂತಿ ಮಹೋತ್ಸವವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.
