ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮ

ಗುರು ಲಿಂಗ ಜಂಗಮ ವ್ಯಕ್ತಿಗಳಲ್ಲ, ಅವು ತತ್ವಗಳು

ಗುಳೇದಗುಡ್ಡ:

ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ ಬಸವ ಕೇಂದ್ರದ ವತಿಯಿಂದ ಮಿಥುನ್ ಮ. ಸತ್ತಿಗೇರಿ ಅವರ ಮನೆಯಲ್ಲಿ ಮಹಾಮನೆ ನಡೆಯಿತು.

ಅಂದು ಶರಣ ಮೋಳಿಗೆ ಮಾರಯ್ಯನವರ ವಚನವನ್ನು ಚಿಂತನೆಗೆ ಆಯ್ದುಕೊಳ್ಳಲಾಗಿತ್ತು …

ತನುವಿನಾಶೆಯ ಬಿಟ್ಟು ಕಂಡೆಹೆನೆಂದಡೆ,

ಗುರುವಿನ ಹಂಗು ಬಿಡಬೇಕು.

ಮನಾದಾಶೆಯ ಬಿಟ್ಟು ಕಂಡೆಹೆನೆಂದಡೆ,

ಲಿಂಗದ ಹಂಗು ಬಿಡಬೇಕು.

ಸರ್ವವ್ಯಾಪಾರದ ಹಿಂಗಿ ಕಂಡೆಹೆನೆಂದಡೆ,

ಜಂಗಮದ ಹಂಗು ಬಿಡಬೇಕು.

ಒಂದ ಬಿಟ್ಟು, ಒಂದ ಕಂಡೆಹೆನೆಂದಡೆ,

ಒಂದಕ್ಕೂ ನೆಲೆಯಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.

ಈ ವಚನವನ್ನು ಪ್ರಾರಂಭದಲ್ಲಿ ಚಿಂತನೆಗೆ ಒಳಪಡಿಸಿದ ಪ್ರೊ. ಶ್ರೀಕಾಂತ ಗಡೇದ ಅವರು ವಚನಕಾರ ಶರಣ ಮೋಳಗೆ ಮಾರಯ್ಯನವರ ಕಿರು ಪರಿಚಯ ಮಾಡಿಕೊಟ್ಟರು. ಕಾಶ್ಮೀರದಲ್ಲಿ ರಾಜನಾಗಿದ್ದ ಮಹಾದೇವ ಭೂಪಾಲ ತನ್ನ ಅರಸೊತ್ತಿಗೆಯನ್ನು ತೊರೆದು ಪತ್ನಿ ಮಹಾದೇವಿ ಸಹಿತ ಕಲ್ಯಾಣಕ್ಕೆ ಬಂದು ಕಟ್ಟಿಗೆ ಮಾರಿ ಉಪಜೀವನವನ್ನು ಸಾಗಿಸುತ್ತ ಮೋಳಿಗೆ ಮಾರಯ್ಯ ಎಂದು ಕರೆಸಿಕೊಂಡರು.

ತಾನು ಲಿಂಗವಾಗಬೇಕಾದರೆ ಗುರು ಲಿಂಗ ಜಂಗಮದ ಹಂಗು ತೊರೆದು ಪರಶಿವನೇ ಆಗಬೇಕು. ನಮ್ಮದು ಅರಿವಿನ ಬದುಕಾಗಬೇಕು. ನಮ್ಮ ಜೀವನದಲ್ಲಿನ ದೈಹಿಕ ಬಯಕೆಗಳೆಲ್ಲ ನೀಗಿ ಲಿಂಗವೇ ತಾನಾಗಬೇಕು ಎಂದರು.

ಹಿರಿಯರಾದ ಮಹಾಲಿಂಗಪ್ಪ ಕರನಂದಿಯವರು ಗುರು ಲಿಂಗ ಜಂಗಮ ಎಂಬವು ವ್ಯಕ್ತಿಗಳಲ್ಲ, ಅವು ತತ್ವಗಳು, ಗುರುಲಿಂಗ ಜಂಗಮಕ್ಕೆ ಭಕ್ತನಾದವನು ತನ್ನ ತನು ಮನ ಭಾವಗಳನ್ನು ಪರಿವರ್ತಿಸಬೇಕು. ವಚನಗಳಲ್ಲಿ ಹೇಳಿದ ತತ್ವಗಳನ್ನು ಒಂದಿಷ್ಟಾದರೂ ನಮ್ಮಲ್ಲಿ ಅಳವಡಿಸಿಕೊಂಡರೆ ಜೀವನ ಹಸನಾಗುತ್ತದೆ ಎಂದರು.

ಪ್ರೊ. ಸುರೇಶ ರಾಜನಾಳ ಅವರು ಶರಣರು ಮೂರು ವಿಷಯಗಳನ್ನು ಪ್ರಸ್ತಾಪಿಸಿದರು. ಅವುಗಳು ಅರಿವೇ ಗುರು, ಆಚಾರವೇ ಲಿಂಗ, ಅನುಭಾವವೇ ಜಂಗಮವೆಂದು ಸಾರಿದರು.

ಇವಕ್ಕೆ ಕಾಯಕ ಮತ್ತು ದಾಸೋಹ ತತ್ವಗಳನ್ನು ಜೋಡಿಸಿ ಜನರ ಇಹ-ಪರ ಬದುಕಿಗೆ ಅರ್ಥವನ್ನು ನೀಡಿದರು. ಅದರಂತೆಯೇ ಬದುಕಿ ತತ್ವಗಳಿಗೆ ಉದಾಹರಣೆಯಾಗಿ ನಿಂತರು. ಇದರಿಂದ ಸುಂದರ ಸಮಾಜವನ್ನು ಕಟ್ಟಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ಪ್ರೊ. ಸಿದ್ದಲಿಂಗಪ್ಪ ಬರಗುಂಡಿ ಅವರು ಈ ವಚನದ ಅರ್ಥವನ್ನು ಹೇಳುತ್ತಾ, ಇಲ್ಲಿ ಬರುವ ಗುರು ಲಿಂಗ ಜಂಗಮದ ಹಂಗು ಬಿಡಬೇಕು ಎಂದರೆ ಅವನ್ನು ತೊರೆಯುವುದು ಅಥವಾ ತಿರಸ್ಕರಿಸುವುದು ಎಂದರ್ಥವಲ್ಲ. ಬದಲಾಗಿ ಅವನ್ನು ಮೀರಿ ನಿಲ್ಲುವುದು ಎಂದರ್ಥವಾಗಿದೆ.

ತನುವಿನ ಆಸೆ ಬಿಡಬೇಕು. ಎಲ್ಲಿಯವರೆಗೆ ಈ ಶರೀರವಿದೆಯೋ ಅಲ್ಲಿಯವರೆಗೆ ಷಡೂರ್ಮಿಗಳ ಕಾಟ ತಪ್ಪಿದ್ದಲ್ಲ. ಈ ಶರೀರದ ನಶ್ವರತೆಯನ್ನು ಗುರು ಅರಿವನ್ನು ನೀಡುವ ಮೂಲಕ ನಿವಾರಿಸುತ್ತಾನೆ. ಪಂಚಭೂತಗಳಿಂದ ಆದ ಈ ಸ್ಥೂಲ ಶರೀರ ಸಹಜವಾಗಿ ಆಹಾರ, ನಿದ್ರೆ, ಭಯ, ಮೈಥುನಗಳಿಗೆ ಒಳಗಾಗಿ ಇರುತ್ತದೆ. ಇದನ್ನು ತನ್ನ ಅರಿವೆಂಬ ಗುರುವಿನಿಂದ ಅರಿತು ಬಾಳಬೇಕು. ಗುರುವಿನ ಹಂಗಲ್ಲೇ ಬದುಕುವ ಬದಲು ತಾನೇ ಗುರು ಮುಟ್ಟಿ ಗುರುವಾಗಬೇಕು ಎಂದು ಅರ್ಥೈಸಿಕೊಳ್ಳಬೇಕು.

ಹಾಗೆಯೇ ಪಂಚ ಜ್ಞಾನೇಂದ್ರಿಯ ಪಂಚ ಕರ್ಮೇಂದ್ರಿಯಗಳಿಂದಾದ ಈ ಮನ, ಸದಾ ಅರಿಷಡ್ವರ್ಗಕ್ಕೆ ಅಷ್ಟಮದಗಳಿಗೆ ಒಳಗಾಗಿ ಲಿಂಗಗುಣಗಳಿಂದ ಅತೀತವಾಗಿರುತ್ತದೆ. ಇದರಿಂದ ಹೊರಬರಲು ಸರ್ವ ಇಂದ್ರಿಯಗಳಲ್ಲಿ ಲಿಂಗವನ್ನಿರಿಸಿ ಲಿಂಗಗುಣಗಳನ್ನು ಅಳವಡಿಸಿಕೊಂಡು ಲಿಂಗವೇ ತಾನಾದಾಗ ಲಿಂಗದ ಗುಣದ ಪರಾಮರ್ಶೆ ನಡೆಯುವುದಿಲ್ಲ. ಹಾಗೆಯೇ ಅನುಭಾವದಲ್ಲಿ ಮುಳುಗಿ ತಾನೇ ಜಂಗಮವಾಗುತ್ತಾನೆ.

ಹೊರಗಿನ ಜಂಗಮದ ಹಂಗು ಆತನಿಗೆ ಇರುವುದಿಲ್ಲ. ಹೀಗೆ ಸದ್ಭಕ್ತನ ತನು ಮನ ಭಾವಗಳು ಅನುಕ್ರಮವಾಗಿ ಗುರು ಲಿಂಗ ಜಂಗಮವೇ ಆದಾಗ ಇದರಲ್ಲಿ ಯಾವುದಾದರೊಂದು ಕೊರತೆಯಾದರೂ ಆತ ಶರಣನಾಗಲಾರ ಎನ್ನುವುದು ಮೋಳಿಗೆ ಮಾರಯ್ಯನವರ ಭಾವವಿದೆ ಎಂದು ಬರಗುಂಡಿಯವರು ಹೇಳಿದರು.

ಪ್ರಾರಂಭದಲ್ಲಿ ಕುಮಾರಿ ಲಕ್ಷ್ಮಿ ನಾಯನೇಗಲಿ ಪ್ರಾರ್ಥನೆಗೈದರು. ಕೊನೆಯಲ್ಲಿ ವಚನ ಮಹಾಮಂಗಲ ನೇರವೇರಿಸಿಕೊಟ್ಟರು.  ಕಾರ್ಯಕ್ರಮದಲ್ಲಿ ಪಾಂಡಪ್ಪ ಕಳಸಾ, ಡಾ. ಗೀರಿಶ ನೀಲಕಂಠಮಠ, ಹುಚ್ಚೇಶ ಯಂಡಿಗೇರಿ, ನೇತ್ರಾವತಿ ರಕ್ಕಸಗಿ, ರೇವಣಸಿದ್ಧೇಶ್ವರಮಠ, ಬಸಲಿಂಗಯ್ಯ ಕಂಬಾಳಿಮಠ ರಾಚಣ್ಣ ಕೆರೂರು, ಗೀತಾ ತಿಪ್ಪಾ, ಮಹಾಲಿಂಗಪ್ಪ ಕರನಂದಿ, ಬಸವರಾಜ ಖಂಡಿ, ಶೋಭಾ ಯಳಮೇಲಿ, ದಾಕ್ಷಾಯಣಿ ತೆಗ್ಗಿ, ಮಹಾನಂದ ಸತ್ತಿಗೇರಿ, ದೀಪ್ತಿ ಬರಗುಂಡಿ, ವಿಶಾಲಕ್ಷಿ ಗಾಳಿ, ಸುರೇಖಾ ಗೆದ್ದಲಮರಿ ಇನ್ನಿತರು, ಮಹಾಮನೆಯ ಕುಟುಂಬದ ಬಂಧುಗಳಲ್ಲದೆ ನೆರೆಹೊರೆಯವರು ಮೊದಲಾದರು ಸೇರಿದಂತೆ ಬಸವ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು ಪ್ರೊ. ಮಹಾದೇವಯ್ಯ ಪಂ. ನೀಲಕಂಠಮಠ, ಮಹೇಂದ್ರಕರ, ಶಿರೂರ ಸರ್, ಪ್ರೊ. ಚಂದ್ರಶೇಖರ ಹೆಗಡೆ, ಡಾ. ಶೈಲಾ ಬೆನಕನಾಳ, ಡಾ. ಸಣ್ಣವೀರಣ್ಣ ದೊಡ್ಡಮನಿ, ಜ್ಯೋತಿ ಶೇಬಿನಕಟ್ಟಿ, ಕವಿತಾ ಬರಗುಂಡಿ, ಶಿವಾನಂದ ಸಿಂದಗಿ, ಕಲಬುರ್ಗಿಯಿಂದ ಮಂಗಳೂರ ಸಿ. ಎಸ್., ಮಹೇಂದ್ರಕರ, ಬೆಂಗಳೂರಿನಿಂದ ಶಿರೂರ ಸರ್ ಮುಂತಾದವರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರೆಲ್ಲರಿಗೂ ಕಾರ್ಯಕ್ರಮದ ನಿರೂಪಕರು ಸ್ವಾಗತಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಗೈದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *