ಸಂಘ ಪರಿವಾರದ ಮುಖವಾಡಗಳನ್ನು ಕಳಚೋಣ
ಗದಗ
ಇದೇ ತಿಂಗಳ 31ರಂದು ಗದಗ ನಗರದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ವನ್ನು ಹಿಂದುತ್ವವಾದಿ ಸಂಘಟನೆಗಳು ಹಮ್ಮಿಕೊಂಡಿವೆ.
ಈಗಾಗಲೇ ರಚಿತಗೊಂಡಿರುವ ಈ ಹಿಂದೂ ಸಮಾವೇಶದ ಸಮಿತಿಯನ್ನು ಒಮ್ಮೆ ಗಮನವಿಟ್ಟು ನೋಡಿದರೆ ಇದರಲ್ಲಿ ಇರುವ ಎಲ್ಲರೂ ಬಿ.ಜೆ.ಪಿ. ಪಕ್ಷದ ಸದಸ್ಯರೇ ಹಾಗೂ ಇದರ ಮುಂಚೂಣಿಯಲ್ಲಿರುವರು ಸಂಘ ಪರಿವಾರದ ಮುಖಂಡರು. ಇದು ಒಂದು ಕೋಮುವಾದಿ ಪಕ್ಷದ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಮತ್ತೂ ಹೇಳುವದಾದರೆ ಇದೊಂದು ಲಿಂಗಾಯತ ಮತ್ತು ಶರಣ ಪರಂಪರೆ ಅಳಿಸಿಹಾಕುವ ಆರ್ ಎಸ್ ಎಸ್ ನ ಅಜೆಂಡಾ ಆಗಿದೆ.
ಈ ಬಸವಾದಿ ಶರಣರ ಹಿಂದೂ ಸಮಾವೇಶ ಇದು ಗದಗ ನಗರಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಈ ಹಿಂದೂ ಸಮಾವೇಶ ಇದರ ಉದ್ದೇಶ. ನಾಟಕದ ಪ್ರಮುಖ ಸೂತ್ರದಾರರು ಆರ್.ಎಸ್.ಎಸ್. ಹಾಗೂ ಸಂಘ ಪರಿವಾರ. ಆರ್.ಎಸ್.ಎಸ್. ನ ಪ್ರಮುಖ ಪ್ರಚಾರಕರಲ್ಲಿ ಒಬ್ಬರಾದ ಈ ಕನೇರಿ ಸ್ವಾಮಿಯನ್ನು ಕೈಕೋಲಾಗಿ ಬಳಸಿಕೊಂಡಿದ್ದಾರೆ.
ಅವರು ಕೇವಲ ಹಿಂದೂ ಸಮಾವೇಶ ಮಾಡಿದ್ದರೆ ತಮ್ಮ ತಕರಾರು ಇರುತ್ತಿರಲಿಲ್ಲ. ಅವರು ಹಿಂದೂ ಸಮಾವೇಶದ ಹೆಸರಿನಲ್ಲಿ ತಗಲಾಕಿಕೊಂಡಿರುವುದು ಬಸವಾದಿ ಶರಣರನ್ನು.
ಯಾವ ಬಸವಾದಿ ಶರಣರು ಇವರ ಅಸಮಾನತೆಯ ವೈದಿಕ (ಈಗಿನ ಹಿಂದುತ್ವ) ಪರಂಪರೆಯನ್ನು, ಜಾತಿ ವ್ಯವಸ್ಥೆಯನ್ನು, ಮೇಲು, ಕೀಳು, ಸ್ತ್ರೀ ಅಸಮಾನತೆಯನ್ನು ಕಠೋರವಾಗಿ ವಿರೋಧಿಸಿದ್ದರೊ, ಅವರ ಹೆಸರಿನಲ್ಲಿ ಈ ಸಂಘ ಪರಿವಾರದ ನಾಟಕ ಕಂಪನಿ ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶವನ್ನು ಮಾಡುತ್ತಿದ್ದಾರೆ.
ಇದರ ಹಿಂದೆ ದೊಡ್ಡ ರಾಜಕಾರಣ ಅಡಗಿದೆ. ಈ ಹಿಂದೆಯೂ ಕೂಡ ಇದೆ ಸಂಘ ಪರಿವಾರ ಹಿಂದೂ, ಹಿಂದುತ್ವದ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಆದರೆ ಲಿಂಗಾಯತ ಜನ ಅಷ್ಟಾಗಿ ಇವರಿಗೆ ಪ್ರತಿಕ್ರಿಯೆ ಕೊಟ್ಟಿದ್ದಿಲ್ಲ. ಜನ ಇವರನ್ನು ತಿರಸ್ಕರಿಸುತ್ತ ಬಂದಿದ್ದಾರೆ.
ಆದರೆ ಹಿಂದುತ್ವದ ಸಿದ್ಧಾಂತವನ್ನು ವಿರೋಧಿಸುತ್ತ ಬಂದಿರುವ ಬಸವಾದಿ ಶರಣರ ಹೆಸರನ್ನ ಬಳಸಿಕೊಂಡು ಇಡೀ ರಾಜ್ಯದ ಲಿಂಗಾಯತ ಧರ್ಮವನ್ನು ಸರ್ವನಾಶ ಮಾಡಿ ಸಂಘ ಪರಿವಾರ ತನ್ನ ಹಿಂದುತ್ವದ ತೆಕ್ಕೆಗೆ ಶರಣರನ್ನು ತರಲು ಈ ಸಮಾವೇಶ ಮಾಡಲು ಹೊರಟಿದ್ದಾರೆ.
ರಾಜ್ಯದ ಬುದ್ಧಿವಂತ ಲಿಂಗಾಯತರು ಇವರ ದಾಳಕ್ಕೆ ಬಲಿಯಾಗದೆ ಇವರಿಗೆ ತಕ್ಕ ಉತ್ತರವನ್ನು ನೀಡಬೇಕಾದ ಸಮಯ ಈಗ ಒದಗಿಬಂದಿದೆ.
ಈ ಹಿಂದೂ ಸಮಾವೇಶ ನಾಟಕದ ಪ್ರಮುಖ ಪಾತ್ರಧಾರಿಯನ್ನಾಗಿ ಆರ್. ಎಸ್.ಎಸ್. ಕನೇರಿ ಸ್ವಾಮಿಯನ್ನು ಮುಂದು ಮಾಡಿದೆ. ಕನೇರಿ ಸ್ವಾಮಿ ಈಗ ಇಡೀ ವಚನ ಚಳುವಳಿಯನ್ನು ಹತ್ತಿಕ್ಕುವ ಕೆಲಸದಲ್ಲಿ ನಿರತರನಾಗಿದ್ದಾನೆ.
ಬಸವಾದಿ ಶರಣರ ಹೆಸರಿನಲ್ಲಿ ಸುಳ್ಳು ಸುಳ್ಳು ಇತಿಹಾಸವನ್ನು ಜನರ ತಲೆಗೆ ತುಂಬಲು ಹೊರಟಿದ್ದಾನೆ. ಅಶ್ಲೀಲ, ಕೆಟ್ಟ ಶಬ್ದಗಳಿಂದ ಲಿಂಗಾಯತ ಸ್ವತಂತ್ರ ಧರ್ಮದ ಪರವಾಗಿ ಇರುವ, ಅದಕ್ಕಾಗಿ ಹೋರಾಡುತ್ತಿರುವ, ಕೆಲಸ ಮಾಡುವ ಲಿಂಗಾಯತ ಮಠಾಧೀಶರಿಗೆ ಹಿಯಾಳಿಸುವ ಕೆಲಸದಲ್ಲಿ ನಿರತನಾಗಿದ್ದಾನೆ.
ಅಷ್ಟೇ ಅಲ್ಲದೆ ಹಿಂದುತ್ವ ಸಿದ್ಧಾಂತದ ಜಾತಿವ್ಯವಸ್ಥೆ, ತಾರತಮ್ಯ, ಮೇಲು ಕೀಳು, ಇವು ಸ್ವಾಭಾವಿಕ, ಇಲ್ಲಿ ಎಲ್ಲರನ್ನು ಸಮನಾಗಿ ಕಾಣಲು ಬರುವುದಿಲ್ಲ. ನಮ್ಮ ಐದು ಬೆರಳುಗಳು ಸಮವಾಗಿ ನೋಡಲು ಬರುತ್ತಾ..? ಜಾತಿ ವ್ಯವಸ್ಥೆಯು ಹಾಗೆ ಎಂದು ದಲಿತರನ್ನು ಹೀಯಾಳಿಸಿಕೊಂಡು ಬರುತ್ತಿದ್ದಾನೆ. ಇರುವ ಜಾತಿ ವ್ಯವಸ್ಥೆ ಇದ್ದಂತೆಯೇ ಇರಲಿ ಎಂದು ಪ್ರತಿಪಾದಿಸುತ್ತ ನೇರ ಅಸ್ಪೃಶ್ಯತೆ ಆಚರಣೆಯನ್ನು ಬೆಂಬಲಿಸುತ್ತಿದ್ದಾನೆ.
ಗದಗ ನಗರಕ್ಕೆ ಇಂಥ ಕಾರ್ಯಕ್ರಮ ಮೊದಲೇನಲ್ಲ. ಈ ಹಿಂದೆ 2023 ರಲ್ಲಿ ಸಂಘ ಪರಿವಾರದ ಸಹಭಾಗಿ ಸಂಘಟನೆಗಳ ಮೂಲಕ ಗದಗ ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ ಇಡೀ ವಚನ ಚಳುವಳಿಯನ್ನು ಅಪ್ರಸ್ತುತ ಗೊಳಿಸುವ ‘ವಚನ ದರ್ಶನ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದರು. ಆಗ ನಾವೆಲ್ಲರೂ ತೀವ್ರ ಪ್ರತಿರೋಧ ಒಡ್ಡಿ ಆ ವಿಚಾರ ಸಂಕಿರಣ ಯಶಸ್ವಿ ಆಗದ ಹಾಗೆ ನೋಡಿಕೊಂಡಿದ್ದೆವು. ಆದರೆ ಈಗ ಅದೇ ಬಸವಾದಿ ಶರಣರ ಹೆಸರಿನಲ್ಲಿ ಹಿಂದೂ ಸಮಾವೇಶವನ್ನು ಮಾಡಲು ಹೊರಟಿದ್ದಾರೆ.
ಗದಗದ ನಿಜಾಚರಣೆಯ ಲಿಂಗಾಯತರು, ಪ್ರಜ್ಞಾವಂತ ನಾಗರಿಕರು, ದಲಿತ, ಪ್ರಗತಿಪರ ಸಂಘಟನೆಗಳು ಕೂಡಿ ಈ ಶರಣರು ಹೆಸರಿನ ಹಿಂದುತ್ವದ ಈ ಸಮಾವೇಶಕ್ಕೆ ತೀವ್ರ ಪ್ರತಿರೋಧವನ್ನು ಒಡ್ಡಬೇಕು.
ವಚನ ಚಳುವಳಿ ಹಾಗೂ ನಮ್ಮ ಸಂವಿಧಾನವನ್ನು ಅಪ್ರಸ್ತುತಗೊಳಿಸಲು ಹೊರಟಿರುವ ಈ ಸಂಘ ಪರಿವಾರದ ಮುಖವಾಡಗಳನ್ನು ಕಳಿಚಿ ಇವರ ಬಣ್ಣ ಬಯಲು ಮಾಡಬೇಕಿದೆ.
ಹೀಗಾಗಿ ಈಚೆಗೆ ನಡೆದ ಪೂರ್ವಭಾವಿ ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಂಡು ದೊಡ್ಡ ಪ್ರತಿರೋಧದ ಸಮಾವೇಶವನ್ನು ಮಾಡಲು ತೀರ್ಮಾನಿಸಲಾಗಿದೆ. ಈಗ ಎರಡನೇ ಪೂರ್ವಭಾವಿ ಸಭೆ ಮೇ 24 ರಂದು ರವಿವಾರ ಸಾಯಂಕಾಲ 4 ಗಂಟೆಗೆ ಶಿವಾನಂದ ನಗರದ ಬಸವ ಮಂಟಪದಲ್ಲಿ ನಡೆಯಲಿದೆ, ತಾವೆಲ್ಲ ಬರಬೇಕು. ಪರ್ಯಾಯ ಸಮಾವೇಶ ಮಾಡುವ ಕುರಿತು ಚರ್ಚಿಸಲು ನಾವೆಲ್ಲ ಕೂಡೋಣ.

ಈ ಕುಂಕುಮಧಾರಿ ಸ್ವಾಮಿಜಿ , ಸುಳ್ಳು ಹಾಗು ತಿರುಚಿ ಹೇಳುವುದು ಬಿಟ್ಟರೆ ಹೆಚ್ಚಿನ ಜ್ಞಾನ ಇಲ್ಲದಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಕಮ್ಯೂನಿಸ್ಟರು ಸಮಾನತೆ ಮಾತನಾಡುತ್ತಾರೆ, ಹಾಗೆಂದು ಎಲ್ಲ ಬಟ್ಟುಗಳನ್ನು ಸಮಾನ ಮಾಡಲು ಸಾಧ್ಯವೆ? ಎಂದು, ಅಪಾರ್ಥದಲ್ಲಿ ಹೇಳುತ್ತಾರೆ. ಕಮ್ಯುನಿಸ್ಟರು ಎಂದರೆ ಮನುಷ್ಯರಲ್ಲಿ ಸಮಾನತೆ ಬಯಸು ವವರು ಎಂಬುದು ಇವರಿಗೆ ತಿಳಿದಿಲ್ಲ . ಈ ದೇಶದ ಸಮಾಜವಾದಿ ನಾಯಕರಾದ , ರಾಮ ಮನೋಹರ ಲೋಹಿಯಾ ಹಾಗು ಅಂಬೇಡ್ಕರ, ರವರೂ ಮನುಷ್ಯರಲ್ಲಿ ಸಮಾನತೆ , ಸಾಮಾಜಿಕ ನ್ಯಾಯಕ್ಕಾಗಿ ಸಮಾಜವಾದ ವನ್ನೇ ಹೇಳಿದ್ದಾರೆ. ದೇಶದ ಸಂವಿಧಾನವೂ ಸಮಾನತೆ ಹಾಗು ಸಮಾಜವಾದಿ ಆಶಯ ಗಳನ್ನು ಬಯಸುತ್ತದೆ. ಇವೆಲ್ಲವೂ ಬೆರಳು ಗಳನ್ನು ಕತ್ತರಿಸಿ ಸಮಾನ ಮಾಡುವುದನ್ನು ಹೇಳುತ್ತವೆಯೇ? ಸುಳ್ಳು ಹಾಗು ತಿರುಚಿ ಹೇಳುವುದರಲ್ಲಿ ಬಿಜೆಪಿ-RSS ನ ಐಟಿ ಸೆಲ್ ನ್ನೂ , ಈ ಸ್ವಾಮಿಜಿ ಮೀರಿಸುತ್ತಾರೆ.
ಬಸವಾದಿ ಶರಣರು ಬಂದದ್ದು 12 ನೇಯ ಶತಮಾನದಲ್ಲಿ. ಅಂದು ಹಿಂದು ಧರ್ಮ ವೆಂಬುದೇ ಇರಲಿಲ್ಲ. ಹಿಂದುಸ್ತಾನ್ ಎಂಬದೂ ಇರಲಿಲ್ಲ. ಆಗ ಇದ್ದದ್ದು, ವೈಧಿಕರ ವೇದ, ಶಾಸ್ತ್ರ, ಆಗಮ ಗಳಲ್ಲಿನ ವರ್ಣಾಶ್ರಮದ ಕ್ರೂರತೆಯ ಮೇಲು ಕೀಳಿನ ಜಾತಿ ವ್ಯವಸ್ಥೆ ಹಾಗು ರಾಜ ಪ್ರಭುತ್ವ ಮಾತ್ರ. ವೇದ, ಶಾಸ್ತ್ರ, ಆಗಮ ಗಳನ್ನು ತಿರಸ್ಕರಿಸಿದ ಬಸವಣ್ಣ ಹಿಂದು ಹೇಗೆ ಆಗುತ್ತಾನೆ?
ಕಮ್ಯೂನಿಸ್ಟ್ ರು , ಲೋಹಿಯಾ, ಹಾಗು ಅಂಬೇಡ್ಕರ್ ಬಂದದ್ದು 19-20 ರ ಶತಮಾನದಲ್ಲಿ. ಅಂದರೆ, ಬಸವಾದಿ ಶರಣರು ಬಂದು 700 ವರ್ಷಗಳ ನಂತರ ಕಮ್ಯೂನಿಸ್ಟ್ ಸಿದ್ದಾಂತ ಜಗತ್ತಗೆ ಬಂದಿದೆ. ಈಗ , ಜಗತ್ತಿನಲ್ಲಿ ಹಲವಾರು ಸಮಾಜವಾದಿ ದೇಶಗಳು ಅಸ್ತಿತ್ವ ದಲ್ಲಿ ಬಂದಿವೆ. ಜಗತ್ತಿನಾದ್ಯಂತ , ಎಲ್ಲ ದೇಶ ಗಳಲ್ಲಿ ಮಾನವ ಸಮಾನತೆಗಾಗಿ ಸಂಘರ್ಷ ಗಳು ನಡದೇ ಇವೆ. ಇಂತಹ ಮನುಷ್ಯ ಸಮಾನತೆಯ ದ್ರೋಹಿಗಳು ಅಸಮಾನತೆ ಹಾಗು ಶೋಷಣೆ ಸಮರ್ಥಸಿಕೊಳ್ಳುವ ಶ್ರೀಮಂತ ವರ್ಗಗಳ ಆಸ್ಥಾನದ ಅಧರ್ಮಿಗಳು ಎಲ್ಲ ಕಾಲಕ್ಕೂ ಇದ್ದೇ ಇರುತ್ತಾರೆ. ಈ ಕುಂಕುಮಧಾರಿ ಸ್ವಾಮಿಜಿಗೆ ಇತಿಹಾಸದ ಕಲ್ಪನೇಯೂ ಇಲ್ಲದಿರುವುದು ದುರದೃಷ್ಟಕರ ಅಥವಾ ಈ ಹಿಂದುತ್ವದ ಮೇಲು ಕೀಳನ್ನು ವಿರೋಧಿಸುವ ಹಾಗು ಸಾಮಾಜಿಕ ಸಮಾನತೆ ಬಯಸುವವರ ಅವಹೇಳನಕ್ಕೆ, ಈ ಸ್ವಾಮಿಜಿ ಅವಕಾಶವನ್ನು ಬಳಸಿ ಕೊಂಡು, ಎಲ್ಲವನ್ನೂ ತಿರುಚಿ ಸುಳ್ಳು ಹೇಳುತ್ತಿದ್ದಾರೆ.
ಆದರೆ, ಈ ಮೂಲಕ , ಈ ಕುಂಕುಮಧಾರಿ ಸ್ವಾಮಿಜಿ ಬಹಿರಂಗವಾಗಿ ಬಸವಾದಿ ಶರಣರ ಸಾಮಾಜಿಕ ಸಮಾನತೆಯ ವಿರೋಧಿ ಗಳಾಗಿರುವುದು ಸ್ಪಷ್ಟವಾಗಿದೆ. ಹಿಂದುತ್ವದ ಸನಾತನಿಗಳ ವರ್ಣಾಶ್ರಮದ ಮೇಲು ಕೀಳಿನ ಭಕ್ತರಾಗಿರುವುದು ಹಾಗು ಸಂವಿಧಾನದ ಆಶಯಗಳ ವಿರೋಧಿ ಆಗಿರುವುದು ಸಿದ್ದವಾಗಿದೆ. ಆದರೆ , ಹಿಂದುತ್ವದ ಹೆಸರಿನಲ್ಲಿ ಅಮಾಯಕ ಜನರ ತಲೆಯ ಮೇಲೆ ಸುಳ್ಳಿನ ಕೊಳುಕು ತುಂಬಿದ ಕುಂಭಗಳನ್ನು ಹೊರಸಿ ಎಲ್ಲ ಕಾಲಕ್ಕೂ ಮೂರ್ಖರನ್ನಾಗಿಸ ಬಹುದೆಂದು ತಿಳಿದಿದ್ದಾರೆ. ಅದು ಅವರ ತಪ್ಪು ಕಲ್ಪನೆ ಯಾಗಿದೆ. ಬಸವಾದಿ ಶರಣರ ಸಮಾನತೆಯ ತತ್ವ ಸಿದ್ಧಾಂತಗಳ ಸತ್ಯತೆಯನ್ನು ಜನರಿಗೆ ತಲುಪುವುದನ್ನು ಇಂತಹ ದರ್ಮ ಬೃಷ್ಟರು ಗಳಿಂದ ತಡೆ ಹಿಡಿಯಲು ಸಾಧ್ಯವಿಲ್ಲ.
ಭಾರತ ದೇಶ – ಜೈ ಬಸವೇಶ.