ಗಡಿ ಭಾಗದ ಬಸವಭಕ್ತರಲ್ಲಿ ಹುರುಪು ತುಂಬಿದ ಶರಣತತ್ವ ಕಮ್ಮಟ

ಚಾಮರಾಜನಗರ:

ಅಮೂಲ್ಯವಾದ ವಚನಗಳ ಅಂತರ್ಭಾವವನ್ನು ಜನಮಾನಸಕ್ಕೆ ಮುಟ್ಟಿಸುವ ಉದ್ದೇಶವನ್ನು ಸದಾ ಸ್ಮರಣೆಯಲ್ಲಿ ಇಟ್ಟುಕೊಂಡಿದ್ದ ದಾವಣಗೆರೆಯ ಜೀವ ಶರಣ ಸಿದ್ದಮಲ್ಲಪ್ಪ ಅಜ್ಜಂಪುರ ಶೆಟ್ರು ದಿನಾಂಕ 17.02.2012 ರಂದು ಬಯಲಲ್ಲಿ ಬಯಲಾದರು.

ಅವರು ವೈದ್ಯಕೀಯ ಉಪಚಾರಕ್ಕಾಗಿ ಬೆಂಗಳೂರಿಗೆ ತೆರಳುವಾಗ ತಮ್ಮ ತಂದೆ ತಾಯಿಗಳ ಹೆಸರಿನಲ್ಲಿ ಒಂದು ಟ್ರಸ್ಟ್ ಮಾಡಲು ಮತ್ತು ತಮ್ಮ ಭಾಗಕ್ಕೆ ಇದ್ದ ಹಣವನ್ನು ಬಸವತತ್ವ ಪ್ರಸಾರಕ್ಕಾಗಿಯೇ ವಿನಿಯೋಗ ಮಾಡಬೇಕೆಂದು, ತಮ್ಮ ಕುಟುಂಬದ ಸಹೋದರ ಸಹೋದರಿಯರ ಸಮ್ಮುಖದಲ್ಲಿ ವಿಲ್ ಮಾಡಿದ್ದು ಇತಿಹಾಸ. ಆ ವಿಲ್ ಬರೆವ ಕೆಲಸವನ್ನು ನನ್ನ ಮೂಲಕ ಮಾಡಿಸಿದ್ದು ನನ್ನ ಜೀವನದ ಒಂದು ಅಪೂರ್ವ ಸಂಧರ್ಭ.

ಆ ಟ್ರಸ್ಟ್ ಸದಸ್ಯತ್ವದಲ್ಲಿ ನಾನು ಅವರ ಕುಟುಂಬದ ಸದಸ್ಯ ಅಲ್ಲದಿದ್ದರೂ, ನನ್ನನ್ನು ಸೇರಿಸಿ, ತತ್ವದ ಪ್ರಸಾರದ ಗುರಿಯ ಬಗ್ಗೆ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತ ಮಾಡಿದರು. ಅದೇ ರೀತಿ ದಿನಾಂಕ 22.06.2012ರಂದು ಶರಣ ಬಸವರಾಜಪ್ಪ, ಶರಣೆ ಪುಟ್ಟಮ್ಮ ಅವರ ಹೆಸರಿನಲ್ಲಿ ಟ್ರಸ್ಟ್ ಪ್ರಾರಂಭವಾಯಿತು.

ಇಲ್ಲಿಯವರೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಾಗೂ ಕರ್ನಾಟಕದ ಗಡಿಭಾಗದ ಸೊಲ್ಲಾಪುರ ಸೇರಿದಂತೆ 20 ಶರಣತತ್ವ ಕಮ್ಮಟವನ್ನು ನಿಡಸೋಶಿಯಲ್ಲಿ ಅತ್ಯಂತ ಶಿಸ್ತುಬದ್ಧವಾಗಿ, ತಾತ್ವಿಕವಾಗಿ ನಡೆಸಲಾಯಿತು.

21 ನೇ ಶರಣತತ್ವ ಕಮ್ಮಟದ ಸಿದ್ಧತೆ :

21 ನೇ ಶರಣತತ್ವ ಕಮ್ಮಟವನ್ನು ಕರ್ನಾಟಕದ ಗಡಿ ಭಾಗವಾದ ಚಾಮರಾಜನಗರ ಜಿಲ್ಲೆಯಲ್ಲಿ ನಡೆಸಬೇಕೆಂಬುದು ಅಜ್ಜಂಪುರ ಟ್ರಸ್ಟ್‌ನ ಬಹುದಿನದ ಉದ್ದೇಶ ವಾಗಿತ್ತು. ಮೂರ್ನಾಲ್ಕು ವರ್ಷಗಳ ಹಿಂದೆಯೇ ಮರಿಯಾಲದ ಮುರುಘರಾಜೇಂದ್ರ ಮಠಕ್ಕೆ ಈ ಪ್ರಯುಕ್ತ ಭೇಟಿ ನೀಡಲಾಗಿತ್ತು. ಆದರೆ ಆಗ ಇನ್ನು ಕಾಮಗಾರಿಗಳು ನಡೆಯುತ್ತಿದ್ದ ಪ್ರಯುಕ್ತ ಹೊರಗಿನಿಂದ ಬರುವವರಿಗೆ ವಸತಿ ವ್ಯವಸ್ಥೆಗೆ ತೊಂದರೆ ಆಗುತ್ತದೆ, ಈ ಕಟ್ಟಡ ಕಾರ್ಯ ಮುಗಿದ ತಕ್ಷಣ ಕಮ್ಮಟ ಆಯೋಜನೆ ಮಾಡೋಣ ಎಂದು ಸ್ವಾಮೀಜಿ ತಿಳಿಸಿದರು.

ಅದರಂತೆ ಮುರುಘರಾಜೇಂದ್ರ ಸ್ವಾಮೀಜಿ ಅವರನ್ನು ಸಂಪರ್ಕಿಸಲಾಗಿ ಅವರು ಕೂಡಲೇ ಸ್ಪಂದಿಸಿ ಮೇ ತಿಂಗಳ 15, 16, 17ರಂದು ನಡೆಸಬಹುದು ಎಂದು ತಿಳಿಸಿದರು. ದಾವಣಗೆರೆಯ ಕಮ್ಮಟದ ವಿಷಯ ತಿಳಿದ ಕೂಡಲೇ ಸೇರಬಹುದಾದ ಬಸವಭಕ್ತರ ಸಂಖ್ಯೆ ಕನಿಷ್ಠ 200ರ ಗಡಿಯನ್ನು ದಾಟುತ್ತಿರುವದು ಪ್ರತಿ ಕಮ್ಮಟದ ಅನುಭವ, ಹಾಗಾಗಿ ಹೊರಗಿಂದ ಬಂದವರಿಗೆ ವಸತಿ ವ್ಯವಸ್ಧೆ ಕಲ್ಪಿಸುವ ಯೋಚನೆ ಬಗ್ಗೆ ಹಾಸಿಗೆ, ದಿಂಬುಗಳ ವ್ಯವಸ್ಥೆ ಮಾಡಲು ಸ್ವಾಮೀಜಿ ಮತ್ತು ಬಸವ ಸೇನೆಯ ಯುವಕರು ಒಪ್ಪಿದರು. ಆ ಪ್ರಯುಕ್ತ ದಿನಾಂಕ 15ರಿಂದ 17ರವರೆಗೆ ಮಠದ ಕಲ್ಯಾಣ ಭವನದಲ್ಲಿ ನಡೆಸಲು ತೀರ್ಮಾನ ಮಾಡಲಾಯಿತು.

ಕಾರ್ಯಕ್ರಮಗಳ ವಿವರ:

15ರಂದು ಬೆಳಿಗ್ಗೆ 10ಕ್ಕೆ ಷಟಸ್ಥಲ ಧ್ವಜಾರೋಹಣದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪೂಜ್ಯ ಇಮ್ಮಡಿ ಮುರುಘರಾಜೇಂದ್ರ ಸ್ವಾಮಿಗಳು ಮಹಾಸಂಸ್ಥಾನ ಮಠ, ಮಾರಿಯಾಲ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಕಮ್ಮಟದ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಪೂಜ್ಯ ಪಂಚಮ ಶಿವಲಿಂಗಶ್ವರ ಸ್ವಾಮೀಜಿ ದುರದುಂಡೇಶ್ವರ ಮಠ ನೀಡಸೋಶಿ ಅವರು, ಸಸಿಗೆ ನೀರೆರೆಯುವ ಮೂಲಕ ಉದ್ಘಾಟನೆ ಮಾಡಿದರು. ದಾವಣಗೆರೆ ಬಸವ ಬಳಗದ ಅಧ್ಯಕ್ಷೆ ಭುವನೇಶ್ವರಿ ತಾಯಿಯವರು ಅಧ್ಯಕ್ಷತೆ ವಹಿಸಿದ್ದರು. ಬಸವ ಕಲಾಲೋಕದ ವಚನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ   ಅಜ್ಜಂಪುರ ಸೇವಾ ಟ್ರಸ್ಟಿನ ಸದಸ್ಯರಾದ ರುದ್ರಪ್ಪ ಪಿ. ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಕಮ್ಮಟದ ಉದ್ದೇಶ ತಿಳಿಸಿ, ಶರಣ ಸಿದ್ದಮಲ್ಲಪ್ಪ ನವರ ಆಶಯದಂತೆ ನಡೆಯುತ್ತಿರುವ ಕಮ್ಮಟ ನಾಡಿನ ಮತ್ತು ಹೊರರಾಜ್ಯದಲ್ಲಿ ಬಸವ ಬೆಳಗನ್ನು ಪಸರಿಸುತ್ತಿರುವ ಈ ಪ್ರಸ್ತುತ ಸಂಧರ್ಭದಲ್ಲಿ, ತತ್ವಕ್ಕೆ ವಿರುದ್ಧವಾಗಿ ಪಟ್ಟಭದ್ರರು ಹಿಡಿದಿರುವ ಮಾರ್ಗದ ಬಗ್ಗೆಯೊ ಪ್ರಸ್ತಾಪಿಸಿದರು.

ಇಂದಿನ ಸಂಧರ್ಭದಲ್ಲಿ ಮಠಾಧೀಶರು, ಬಸವ ಸಂಘಟನೆಗಳು, ಬಸವ ಭಕ್ತರು ಎಚ್ಚರಗೊಳ್ಳಬೇಕಿರುವ ಅನಿವಾರ್ಯತೆಯನ್ನು ತಿಳಿಯಪಡಿಸಿದರು.

 ಬೆಂಗಳೂರಿನ ಬೇಲಿಮಠದ ಪೂಜ್ಯ ಶಿವರುದ್ರ ಸ್ವಾಮೀಜಿ ಅವರು “ಬಸವ ನಿಜ ಯೋಗ” ದ ಕುರಿತು ಮಾತನಾಡಿದರು. ಗೌರವ ಉಪಸ್ಥಿತಿ ಅತಿಥಿಗಳಾದ ಶರಣ ಅರವಿಂದ ಜತ್ತಿಯವರು ಸಂಕ್ಷಿಪ್ತವಾಗಿ ತತ್ವದ ಹಿರಿಮೆ ಕುರಿತು ಮಾತನಾಡಿದರು.

ಮತ್ತೊಬ್ಬ ಅತಿಥಿ ಅಶೋಕ ಆಲೂರ, ಉಪಕುಲಪತಿಗಳು ಕೊಡಗು ವಿಶ್ವವಿದ್ಯಾಲಯ, ಕೊಡಗು ಅವರು ವಿದ್ವತ್ ಪೂರ್ಣವಾಗಿ ಬಸವ ಸಿಂದ್ಧಾಂತದ ಒಳಸುಳಿಗಳನ್ನು ತಿಳಿಯಪಡಿಸಿದರು. ಭುವನೇಶ್ವರಿ ತಾಯಿಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಅದೇ ದಿನ 12.30ಕ್ಕೆ ಅರಸೀಕೆರೆಯ ಪೂಜ್ಯ ಮಹಾಲಿಂಗ ಮಹಾಸ್ವಾಮಿಗಳು ‘ಗುರು ಮತ್ತು ಲಿಂಗ” ತತ್ವಗಳ ಬಗ್ಗೆ ಅನುಭಾವ ನೀಡಿದರು. ಬಸವ ಸಿಂದ್ಧಾಂತ ಮಾನವನ ಆಂತರಿಕ ಶುದ್ಧತೆಯನ್ನು ಆಧರಿಸಿ ಅವನ ಬದುಕಿನ ಮಾರ್ಗವನ್ನು ತಿಳಿಸಿದೆ ಎಂದು ವಚನಗಳ ಮೂಲಕ ವಿಶ್ಲೇಷಣೆ ಮಾಡಿದರು.

1.30 ರಿಂದ 2.30 ರವರೆಗೆ ಅಷ್ಟವರಣದ “ಜಂಗಮ ” ತತ್ವದ ಬಗ್ಗೆ ಹೊಸಪೇಟೆಯ ಶರಣರಾದ ಬಸವ ಕಿರಣ ಅವರು ಅನುಭಾವ ನೀಡಿದರು. ಜಂಗಮ ಎಂದರೆ ಜಾತಿಯಲ್ಲ, ಪರಂಪರೆ ಅಲ್ಲ, ಅದು ಎಲ್ಲ ಜೀವ ಜಗತ್ತಿನಲ್ಲಿರುವ ಶಿವನ ವಿಶ್ವಸೃಷ್ಟಿಯವಿರಾಟಸ್ವರೂಪ ಎಂದು ವಚನಗಳ ಮೂಲಕ ವಿವರಿಸಿದರು.

ಮಧ್ಯಾಹ್ನದ ಪ್ರಸಾದದ ನಂತರ ದೇವನೂರಿನ ಪ್ರಶಾಂತ ಅವರು “ವಿಭೂತಿ – ರುದ್ರಾಕ್ಷಿ” ತತ್ವಗಳ ಬಗ್ಗೆ  ವಿವರಣೆ ನೀಡಿದರು. ಬಸವಪೂರ್ವದಲ್ಲಿಯೇ ಬಳಕೆಯಲ್ಲಿದ್ದ ವಿಭೂತಿ ರುದ್ರಾಕ್ಷಿ ತತ್ವಗಳಿಗೆ ಶರಣರು ಹೇಗೆ ವಿಭಿನ್ನ ನೆಲೆ ಒದಗಿಸಿದರು ಎಂದು ತಿಳಿಸಿದರು.

ಸಾಯಂಕಾಲ ಸಾರ್ವಜನಿಕ ಕಾರ್ಯಕ್ರಮ ಪೂಜ್ಯ ಇಮ್ಮಡಿ ಉದ್ಧಾನ ಸ್ವಾಮಿಗಳು, ಉದ್ದಾನೇಶ್ವರ ವಿರಕ್ತಮಠ ಮೂಡಗೂರು ಅವರು ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಪೂಜ್ಯ ಗುರುಸಿದ್ಧ ಸ್ವಾಮಿಗಳು ಜಂಗಮಮಠ, ಕಬ್ಬಳ್ಳಿ ಅವರು ವಹಿಸಿದ್ದರು. ವಿರೂಪಾಕ್ಷಪ್ಪ ಕಾಲನಹುಂಡಿ ವಕೀಲರು “ಸಮಾಜದ ಸರ್ವತೋಮುಖ ಪ್ರಗತಿಗೆ ಲಿಂಗಾಯತ ಧರ್ಮದ ಅವಶ್ಯಕತೆ ” ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶರಣ ಮಹದೇವಪ್ಪ ಮೈಸೂರು ಅವರು ಮತ್ತು ಬಸವ ಕಿರಣ ಅವರು ಉಪಸ್ಥಿತರಿದ್ದರು.

ಬಸವ ಕಲಾಲೋಕದ ವಚನ ಮಂಗಲದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.

16ರಂದು ಕಾರ್ಯಕ್ರಮಗಳು:

ಬೆಳಿಗ್ಗೆ 6.30 ಕ್ಕೆ ಸರಿಯಾಗಿ ಇಷ್ಟಲಿಂಗ ಯೋಗ ಪ್ರಾತ್ಯಕ್ಷಿಕೆಯನ್ನು ಸಿಂಧನೂರಿನ ಪಿ. ರುದ್ರಪ್ಪ ಅವರು ವಚನಾಧಾರಿತ ವಿವರಣೆ ನೀಡಿ, ಲಿಂಗದ ಬೆಳಗನ್ನು ಅಂಗಕ್ಕೆ ಅವಗ್ರಹಿಸಿಕೊಳ್ಳಬಹುದಾದ ಪ್ರಾರಂಭಿಕ ಹಂತವನ್ನು ವಿವರಿಸಿದರು. ಸರಿಯಾದ ದೀಕ್ಷೆ ಲಭ್ಯವಿರದ ಈ ಸಂಧರ್ಭದಲ್ಲಿ ವಚನಗಳನ್ನೇ ಗುರುಸ್ವರೂಪವಾಗಿ ಬಳಸಿಕೊಳ್ಳಬೇಕು, ಇದು ಪ್ರಾತ್ಯಕ್ಷಿಕೆಯೇ ಹೊರತು ಅನುಸಂಧಾನ ಅಲ್ಲ, ಇದನ್ನು ಅವರವರು ವೈಯಕ್ತಿಕ ನೆಲೆಯಲ್ಲಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

7.30 ರಿಂದ 8.30 ರವರೆಗೆ ಚಾಮರಾಜನಗರದ ಬೀದಿಗಳಲ್ಲಿ ಬಸವ ಭಕ್ತರು ವಚನಗಳೊಂದಿಗೆ ಪಥ ಸಂಚಲನ ನಡೆಸಿದರು.

ನಂತರ ಸರಿಯಾಗಿ 10 ಗಂಟೆಗೆ “ಪಾದೋದಕ ಪ್ರಸಾದ” ತತ್ವಗಳ ಬಗ್ಗೆ ರುದ್ರಪ್ಪ ಅವರು ವಿಷಯ ಪ್ರವೇಶ ಮಾಡಿ ಮಾತನಾಡಿದರು.

ಪಾದೋದಕ ಎನ್ನುವದು ಸೃಷ್ಟಿಯ ಉಗಮದಲ್ಲಿ ಹುಟ್ಟಿ, ಕಾರ್ಯಗೈಯುತ್ತಿರುವ, ಕರುಣೆ ವಿನಯ ಸಮತಾ ಜಲಗಳ ನೆಲೆ. ಇದು ಶಿವನಲ್ಲಿಯೇ ಅಂತರ್ಗತವಾಗಿರುವ ತತ್ವಗಳು, ಇವು ಸೃಷ್ಟಿಯ ಜೀವಿಗಳ ಜೀವಂತಿಕೆಗಾಗಿ ಇರುವ ತತ್ವ. ಅದೇ ರೀತಿ ಪ್ರಸಾದ ಸೃಷ್ಟಿಯಲ್ಲಿ ಅಡಗಿರುವ ಪ್ರಸನ್ನತಾ ಭಾವ. ಇದನ್ನು ಹೊಂದುವದೇ ಸದೇಹ ಮುಕ್ತತ್ವ ಎಂದು ತಿಳಿಸಿದರು.

11.30 ರಿಂದ “ಮಂತ್ರ” ತತ್ವದ ಬಗ್ಗೆ ಬೈಲಹೊಂಗಲದ ಶಿವಾನಂದ ಅರಭಾವಿ ವಿಷಯ ಪ್ರವೇಶ ಮಾಡಿದರು. ಅಹತ ಅನಾಹತ ಮಂತ್ರಗಳ ವಿವರಣೆ ನೀಡಿ, ಸೃಷ್ಟಿಯ ಮೂಲ ಸೂತ್ರವೇ ಅನಾಹತ ಪ್ರಣವ ಮಂತ್ರ ಎಂದು ತಿಳಿಸಿದರು. ಎಲ್ಲ ಮಂತ್ರಗಳಿಗೆ ರಾಜಮಂತ್ರ ಪಂಚಾಕ್ಷರಿ, ಉಳಿದವೆಲ್ಲಾ ಪಂಚಾಕ್ಷರಿಯನ್ನೇ ಆಧಾರ ಮಾಡಿಕೊಂಡ ಮಂತ್ರಗಳು ಎಂದು ತಿಳಿಸಿದರು.

ಗುರುವಿಗೆ ಬೇರೆ ಮಂತ್ರ, ಲಿಂಗಕ್ಕೆ ಬೇರೆ ಮಂತ್ರ ಎಂದು ವಿಂಗಡಿಸಲು ಶರಣರು ಎಲ್ಲಿಯೂ ಹೇಳಿಲ್ಲ ಎಂದು ವಚನಧಾರಿತವಾಗಿ ವಿಶ್ಲೇಷಣೆ ನೀಡಿದರು.

ಮಧ್ಯಾಹ್ನ 12.40 ಕ್ಕೆ ಪಂಚಾಚಾರಗಳ ಬಗ್ಗೆ ನೇಗಿನಾಳದ ಮಂಜುನಾಥ ಶಿಕ್ಷಕರು ವಿಷಯ ಪ್ರವೇಶ ಮಾಡಿ, ಅಂತರಂಗದಲ್ಲಿ ವಿಸ್ತರಿಸಿದ ಶಿವಬೆಳಗಿಗೆ ಪರಿಪೂರ್ಣತೆ ಸಿಗುವದು ಶುದ್ಧ ಆಚರಣೆಗಳಿಂದ ಮಾತ್ರ, ಅವುಗಳೇ ಪಂಚ ಆಚಾರಗಳು ಎಂದು ವಿವರಿಸಿದರು.

ಮಧ್ಯಾಹ್ನ 3 ಗಂಟೆಗೆ ಮಾರ್ಗ ಕ್ರಿಯಾ ಸ್ವರೂಪದ “ಭಕ್ತ – ಮಹೇಶ – ಪ್ರಸಾದಿ ” ಸ್ಥಳಗಳ ಸರಳ ವಿವರಣೆಯನ್ನು ಪೂಜ್ಯ ಶರತಚಂದ್ರ ಸ್ವಾಮೀಜಿ ಕುಂದೂರುಮಠ, ಮೈಸೂರು ಅವರು ವಿವರಣೆ ನೀಡಿದರು. ಷಟಸ್ಥಲಗಳನ್ನ ಇಷ್ಟು ಸುಲಭವಾಗಿ ತಿಳಿಸಬಹುದು ಎನ್ನುವದನ್ನು ಪೂಜ್ಯರು ನಿರೂಪಿದರು.

4..30 ರಿಂದ 5.30 ರವರೆಗೆ ಸಭಿಕರ ಪ್ರಶ್ನೆಗಳಿಗೆ ಸ್ಪಷ್ಟತೆ ನೀಡುವ ಸಂವಾದ ಕಾರ್ಯಕ್ರಮ ನಡೆಯಿತು. ಸಭಿಕರ ಪ್ರಶ್ನೆಗಳು ಎತ್ತರದ ನಿಲುವಿನಲ್ಲಿ ಇರುವದು ಶರಣತತ್ವ ಜನಮಾನಸದಲ್ಲಿ ಮೂಡಿಸಿರುವ ಪ್ರಜ್ಞಾವಂತಿಕೆಯ ವಿಸ್ತರಣೆಯನ್ನು ಸೂಚಿಸಿತು.

ಸಾಯಂಕಾಲ 6.30 ಸರಿಯಾಗಿ ಸಾರ್ವಜನಿಕ ಕಾರ್ಯಕ್ರಮ ಪ್ರಾರಂಭ ವಾಯಿತು.

ಪೂಜ್ಯ ಶ್ರೀಕಂಠ ಸ್ವಾಮಿಗಳು, ಮುಡುಗುಂಡಿ ವಿರಕ್ತಮಠ ಅವರು ಸಮ್ಮುಖ ವಹಿಸಿದ್ದರು. ಅಧ್ಯಕ್ಷತೆಯನ್ನು ಪೂಜ್ಯ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಅವರು ವಹಿಸಿದ್ದರು. ಶರಣ ಮಹಾಂತೇಶ ಕುಂಬಾರ ಕಲಬುರ್ಗಿ ಅವರು “ಬಸವಣ್ಣನವರ ಆದರ್ಶ ಬದುಕಿನ ಪ್ರಸ್ತುತತೆ ” ಕುರಿತು ವಿದ್ವತ್ಪೂರ್ಣ ಉಪನ್ಯಾಸ ನೀಡಿದರು.

ಬಸವ ಕಲಾಲೋಕದ ವಚನ ಮಂಗಲದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು. ಬೆಂಗಳೂರಿನ ಶರಣೆ ಬಿಂದು ರಾಜ್ ಅವರ ನಿರ್ದೇಶನದಲ್ಲಿ ಪ್ರಯೋಗಿಸಿದ ಕಿರು ರೂಪಕ, ಮಕ್ಕಳಿಗೆ ಸಂಸ್ಕಾರ ಕೊರತೆಯಿಂದ ಆಗುವ ಅನಾಹುತವನ್ನು ಪರಿಣಾಮಕಾರಿಯಾಗಿ ಬಿಂಬಿಸಿತು. ಚಿಕ್ಕೊಪ್ಪದ ಶರಣಜೀವಿ ಚನ್ನಪ್ಪ ನರಸಣ್ಣನವರ ಅಭಿನಯ ಚುರುಕಾಗಿತ್ತು. ಅಂದೇ ತಯಾರಾದ ಕಥೆಗೆ ಹೇಗೆ ಜೀವ ತುಂಬಬಹುದು ಎನ್ನುವದನ್ನು ಬಿಂದುರಾಜ ಅವರು ತಾವೂ ಪಾತ್ರ ಮಾಡಿ ನಿರೂಪಿಸಿ ತೋರಿಸಿದರು.

17ರಂದು ಕಾರ್ಯಕ್ರಮಗಳು:

 ಬೆಳಿಗ್ಗೆ 6.30 ಕ್ಕೆ ಇಷ್ಟಲಿಂಗಯೋಗ ಪ್ರಾತ್ಯಕ್ಷಿಕೆಯನ್ನು ಸಿಂಧನೂರಿನ ಪಿ. ರುದ್ರಪ್ಪ ಅವರು ವಚನಾಧಾರಿತ ವಿವರಣೆ ನೀಡಿದರು. ಅಲ್ಲಮರ ಸಾಧನೆಗೆ ಪೂರಕವಾಗಿರುವ ಅಲ್ಲಮ, ಸ್ವತಂತ್ರ ಸಿದ್ಧಲಿಂಗರ ಮತ್ತು ಇತರ ಶರಣರ ಶಿವಯೋಗ ಕುರಿತಾದ ವಚನಗಳ ಆಧಾರದಡಿ ಪ್ರಾಯೋಗಿಕವಾಗಿ ಹೇಗೆ ಮನಸ್ಸನ್ನು ದೇಹ ಭಾವಗಳ ನೆಲೆಯನ್ನು ನಿಲ್ಲಿಸಿ ನೆಲೆ ತಲುಪುವದು ಎನ್ನುವದನ್ನು ವಿವರಿಸಿದರು.

ಲಿಂಗದ ಬೆಳಗನ್ನು ಅಂಗಕ್ಕೆ ಅವಗ್ರಹಿಸಿಕೊಳ್ಳಬಹುದಾದ ನಂತರದ ಹಂತವನ್ನು ವಿವರಿಸಿದರು. ಸರಿಯಾದ ದೀಕ್ಷೆ ಲಭ್ಯವಿರದ ಈ ಸಂಧರ್ಭದಲ್ಲಿ ವಚನಗಳನ್ನೇ ಗುರು ಸ್ವರೂಪವಾಗಿ ಬಳಸಿಕೊಳ್ಳಬೇಕು ಎನ್ನುವದನ್ನು ಮತ್ತೆ ಮತ್ತೆ ನೆನಪಿಸಿದರು.

ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಷಟಸ್ಥಲದ ಮೀರಿದ ಕ್ರಿಯಾ ಸ್ವರೂಪದ “ಪ್ರಾಣ ಲಿಂಗಿ- ಶರಣ – ಐಕ್ಯ ” ಸ್ಥಳಗಳ ಕುರಿತು ವಚನಗಳನ್ನು ಆಧರಿಸಿ ಎಲ್ಲರಿಗೂ ತಿಳಿಯುವಂತೆ ವಿವರಣೆ ನೀಡಿದ್ದು ವಿಶೇಷತೆ ಎನಿಸಿತು.

ಮಧ್ಯಾನ್ಹ 12 ಗಂಟೆಯಿಂದ ಸಮಾರೋಪ ಸಮಾರಂಭ ಪ್ರಾರಂಭವಾಯಿತು. ಪೂಜ್ಯ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ಸಮ್ಮುಖವನ್ನು ಪೂಜ್ಯ ಶಿವಬಸವ ಸ್ವಾಮಿಗಳು ಬಸವಾನುಭವ ಮಂಟಪ ಮೇಲಾಜಿಪುರ ವಹಿಸಿದ್ದರು. ಅಧ್ಯಕ್ಷತೆಯನ್ನು ಶಂಭುಲಿಂಗಪ್ಪ ಅಜ್ಜಂಪುರ ಶೆಟ್ರು, ಕಾರ್ಯಧ್ಯಕ್ಷರು ಅಜ್ಜಂಪುರ ಶೆಟ್ರು ಸೇವಾ ಟ್ರಸ್ಟ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶರಣ ಬಸವ ಯೋಗೇಶ, ಅಧ್ಯಕ್ಷರು ವಿಶ್ವ ಬಸವ ಸೇನೆ ಹಾಗೂ ನಂಜಪ್ಪಣ್ಣ ಅನುಭಾವಿಗಳು ನಂಜನಗೂಡು ವಹಿಸಿದ್ದರು.

ಮುಡುಗೂರಿನ ಉದ್ದಾನೇಶ್ವರ ಸ್ವಾಮೀಜಿ ಮಾತನಾಡಿದರು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸಮಯಕ್ಕೆ ಸರಿಯಾಗಿ ಅಚ್ಚುಕಟ್ಟಾದ ಪ್ರಸಾದ ವಿತರಣೆ ಎಲ್ಲರ ಮಾತಿನ ವಿಷಯವಾಗಿತ್ತು. ಪ್ರಸಾದ ನೀಡುವ ಕಾರ್ಯದಲ್ಲಿ ಸತತವಾಗಿ ಮೂರು ದಿನಗಳ ಕಾಲ ಮೂರು ಹೊತ್ತು ವಿತರಣೆ ಸೇವೆ ಮಾಡಿದ ಮರಿಯಾಲ ಮತ್ತು ಸುತ್ತಮುತ್ತಲಿನ ಜನರ ಕಾರ್ಯವನ್ನು ಎಲ್ಲರೂ ಶ್ಲಾಘಿಸಿದರು.

ಪ್ರತಿದಿನ ದಾವಣಗೆರೆಯ ಬಸವ ಕಲಾಲೋಕದ ಅರುಣ ಅವರ ಭಾವಪೂರ್ಣ ವಚನ ಗಾಯನ ಇಡೀ ಕಮ್ಮಟದ ಆಕರ್ಷಣೆ ಆಗಿತ್ತು. ಮಧ್ಯಾಹ್ನ ಪ್ರಸಾದದ ನಂತರ, ಮಳೆಯ ಸಿಂಚನ ಎಲ್ಲರನ್ನು ಬೀಳ್ಕೊಡುವುದಕ್ಕಾಗಿ ಆಗಮಿಸಿದಂತಿತ್ತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *