ಬಸವಗಿರಿಯಲ್ಲಿ ‘ಬಸವೋತ್ಸವ’ಕ್ಕೆ ಚಾಲನೆ
ಬೀದರ :
ನಿಸರ್ಗದ ಮಡಿಲಲ್ಲಿ ಇರುವ ಇಲ್ಲಿಯ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣತಾಯಿ ಅವರ ದ್ವಿತೀಯ ಸ್ಮರಣೋತ್ಸವ ಅಂಗವಾಗಿ ಲಿಂಗಾಯತ ಮಹಾಮಠದಿಂದ ಹಮ್ಮಿಕೊಳ್ಳಲಾದ ಎರಡು ದಿನಗಳ ‘ಬಸವೋತ್ಸವ’ಕ್ಕೆ ಶುಕ್ರವಾರ ವಿಧ್ಯುಕ್ತ ಚಾಲನೆ ದೊರೆಯಿತು.

ಮುಂಜಾವಿನ ಆಹ್ಲಾದಕರ ವಾತಾವರಣದಲ್ಲಿ ಶ್ರದ್ಧೆ, ಭಕ್ತಿಯ ಸಾಮೂಹಿಕ ವಚನ ಪಾರಾಯಣದೊಂದಿಗೆ ಬಸವೋತ್ಸವದ ಚಟುವಟಿಕೆಗಳು ಆರಂಭಗೊಂಡವು.

ಕೊಪ್ಪಳದ ವಿಶ್ವಗುರು ಬಸವೇಶ್ವರ ಟ್ರಸ್ಟ್ ಅಧ್ಯಕ್ಷ ವೀರಭದ್ರಪ್ಪ ನಂದ್ಯಾಳ ಷಟ್‍ಸ್ಥಲ ಧ್ವಜಾರೋಹಣಗೈದರು. ನೆರೆದಿದ್ದ ಶರಣ ಶರಣೆಯರು ನೂರೆಂಟು ವಚನಗಳ ಪಾರಾಯಣವನ್ನು ಸುಶ್ರಾವ್ಯವಾಗಿ ಮಾಡಿದರು. ವಚನ ನಾದ ಪರಿಸರದಲ್ಲಿ ಅನುರಣಿಸಿತು.
ಅಶ್ವಿನಿ ರಾಜಕುಮಾರ ಅವರ ಸಂಗೀತ ಭಕ್ತಿ ಭಾವ ವೃದ್ಧಿಸಿ ವಚನ ಪಾರಾಯಣಕ್ಕೆ ಮೆರುಗು ನೀಡಿತು. ಬಸವಕಲ್ಯಾಣದ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ ಸಾಮೂಹಿಕವಾಗಿ ವಚನ ಓದಿಸಿ, ವಚನ ಪಾರಾಯಣಕ್ಕೆ ಚಾಲನೆ ನೀಡಿದರು.
ಇದಕ್ಕೂ ಮುನ್ನ ಅಕ್ಕ ಅನ್ನಪೂರ್ಣತಾಯಿ ಅವರ ಐಕ್ಯಮಂಟಪದಲ್ಲಿ ಗುರುಬಸವ ಪೂಜೆ, ಪ್ರಾರ್ಥನೆ ಸಲ್ಲಿಸಿ, ಅಕ್ಕನವರಿಗೆ ಗೌರವ ಸಮರ್ಪಿಸಲಾಯಿತು.
ಪ್ರಜಾಪ್ರಭುತ್ವದ ಬೀಜ ವಚನಗಳಲ್ಲಿ: ಪ್ರಭುದೇವ ಸ್ವಾಮೀಜಿ

ಪ್ರಜಾಪ್ರಭುತ್ವದ ಬೀಜ ವಚನಗಳಲ್ಲೇ ಇದೆ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.
ಅಕ್ಕ ಅನ್ನಪೂರ್ಣತಾಯಿ ಅವರ ದ್ವಿತೀಯ ಸ್ಮರಣೋತ್ಸವ ಅಂಗವಾಗಿ ಲಿಂಗಾಯತ ಮಹಾಮಠದ ವತಿಯಿಂದ ಇಲ್ಲಿಯ ಬಸವಗಿರಿಯಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ‘ಬಸವೋತ್ಸವ’ದ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಸಂವಿಧಾನದ ಆಶಯಗಳು, ಬದುಕನ್ನು ಉನ್ನತಿಗೇರಿಸುವ ಮೌಲ್ಯಗಳು ವಚನಗಳಲ್ಲಿ ಅಡಕವಾಗಿವೆ ಎಂದು ತಿಳಿಸಿದರು.
ಶರಣರ ನಾಡಿನಲ್ಲಿರುವ ನಾವು ವಚನಗಳ ಶೇಷ್ಠತೆಯ ಅರಿವಿಲ್ಲದೆ, ನಿಧಿ ಮೇಲೆ ಕುಳಿತು ತುತ್ತು ಅನ್ನಕ್ಕೆ ಕೈಚಾಚುವವರಂತಾಗಿದ್ದೇವೆ. ಅಂದು ಶರಣರು ಅಡುಗೆ ಮಾಡಿ ಇಟ್ಟಿದ್ದಾರೆ. ಈಗ ಅದನ್ನು ಬಡಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡಬೇಕಾಗಿದೆ ಎಂದು ತಿಳಿಸಿದರು.
ಅಕ್ಕ ಅನ್ನಪೂರ್ಣತಾಯಿ ಅವರು ಬಸವತತ್ವ ಪ್ರಚಾರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಪ್ರವಚನವೇ ಅವರಿಗೆ ತಪಸ್ಸು ಆಗಿತ್ತು ಎಂದು ಸ್ಮರಿಸಿದರು.
ಕಲಬುರಗಿಯ ಅಕ್ಕಮಹಾದೇವಿ ಆಶ್ರಮದ ಮಾತೆ ಪ್ರಭುಶ್ರೀ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಸೈಕಲ್ ತುಳಿದು ಬಸವತತ್ವ ಪ್ರಚಾರಗೈದಿದ್ದರು, ಮಠ ಕಟ್ಟಿದ್ದರು. ಬಸವತತ್ವದ ಪುನರುತ್ಥಾನಗೈದವರೆನಿಸಿದ್ದರು ಎಂದು ಹೇಳಿದರು.

ಅಕ್ಕ ಸತ್ಯದ ದಾರಿಯಲ್ಲಿ ಹಿಡಿದದ್ದನ್ನು ಬಿಡದ ಛಲವಾದಿಯಾಗಿದ್ದರು. ತಪ್ಪಿದವರನ್ನು ತಿದ್ದುವ ಗುಣ ಅವರಲ್ಲಿತ್ತು. ಅಕ್ಕನವರಂತೆ ಆಗಲು ಪ್ರಯತ್ನಿಸೋಣ ಎಂದರು.
ಮುಖಂಡ ನಾಗರಾಜ ಕರ್ಪೂರ ಮಾತನಾಡಿ, ಯುವಕರಿಗೆ ಅಕ್ಕ ಅನ್ನಪೂರ್ಣತಾಯಿ ಅವರ ಮಾತುಗಳೇ ಪ್ರೇರಣೆ ಎಂದು ಹೇಳಿದರು.

ನಂಜನಗೂಡಿನ ಎಚ್.ಎಂ. ಮಂಜುಳಾ ಮಧು ಮಾತನಾಡಿ, ಬಸವನಾಡಿನವರು ಹೃದಯಲ್ಲಿ ಪ್ರೀತಿಯನ್ನೇ ತುಂಬಿಕೊಂಡಿದ್ದಾರೆ ಎಂದು ತಿಳಿಸಿದರು.
ಬೇಲೂರಿನ ಉರಿಲಿಂಗ ಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿ, ಬಸವತತ್ವ ಎಲ್ಲ ಜಾತಿ, ವರ್ಗ, ವರ್ಣದವರಿಗೆ ಬೇಕು. ಬಸವಣ್ಣನವರ ಅನುಯಾಯಿಗಳಾದವರು ಅಸ್ಪೃಶ್ಯರನ್ನೂ ಅಪ್ಪಿಕೊಳ್ಳಬೇಕು. ಇಲ್ಲದಿದ್ದರೆ ಅವರು ದೂರ ಸರಿಯುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಲಬುರಗಿಯ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ ಮಾತನಾಡಿ, ಪ್ರತಿಯೊಬ್ಬರಲ್ಲಿನ ಪ್ರತಿಭೆ ಗುರುತಿಸುವ ಶಕ್ತಿ ಅಕ್ಕ ಅನ್ನಪೂರ್ಣತಾಯಿ ಅವರಲ್ಲಿತ್ತು. ಕಲಬುರಗಿ ಮಹಾನಗರದಲ್ಲಿ ಬಸವ ಸೇವಾ ಪ್ರತಿಷ್ಠಾನ ಕಟ್ಟಿ ಬೆಳೆಸಿದ ಅವರು ನಮಗೆಲ್ಲ ಬಸವ ತತ್ವ ಕಲಿಸಿದ್ದಾರೆ ಎಂದು ತಿಳಿಸಿದರು.
ರಾಷ್ಟ್ರೀಯ ಬಸವ ದಳದ ಜಿಲ್ಲಾ ಅಧ್ಯಕ್ಷ ಸೋಮಶೇಖರ ಪಾಟೀಲ ಗಾದಗಿ ಉದ್ಘಾಟಿಸಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ರಾಜಕುಮಾರ ಮಾಳಗೆ, ಉದ್ಯಮಿ ವೀರಶೆಟ್ಟಿ ಪಟ್ನೆ, ನೀಲಮ್ಮನ ಬಳಗದ ಸಂಗೀತಾ ಆರ್. ಪಾಟೀಲ, ಸಾಹಿತಿ ರಮೇಶ ಮಠಪತಿ ಮತ್ತಿತರರು ಇದ್ದರು.
ಡಾ. ಪ್ರಿಯಾ ಎಲಿ, ಪೂರ್ಣಚಂದ್ರ ಮೈನಾಳೆ ವಚನ ನೃತ್ಯ ಪ್ರದರ್ಶಿಸಿದರು. ಚಂದ್ರಕಾಂತ ಪಟ್ನೆ, ಕಂಟೆಪ್ಪ ಗಂದಿಗುಡೆ, ಚಂದ್ರಶೇಖರ ಹೆಬ್ಬಾಳೆ ಹಾಗೂ ರೇವಣಪ್ಪ ಮೂಲಗೆ ವಚನ ಸಂಗೀತ ನಡೆಸಿಕೊಟ್ಟರು.
ನೀಲಮ್ಮನ ಬಳಗದ ಗುರುಶ್ರೀ ಮಠಪತಿ ನಿರೂಪಿಸಿದರು. ಲಿಂಗಾಯತ ಸೇವಾ ದಳದ ಅಭಿಷೇಕ ಮಠಪತಿ ಸ್ವಾಗತಿಸಿದರು.
