ಒಳ್ಳೆಯ ಜನ ರಾಜಕಾರಣದಿಂದ ದೂರ ಇರಬಾರದು: ಬಸವೋತ್ಸವದಲ್ಲಿ ಡಾ. ವಾಸು

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಗಿರಿಯಲ್ಲಿ ಎರಡು ದಿನಗಳ ಬಸವೋತ್ಸವ ಶುರು

ಬೀದರ :

ಆಧ್ಯಾತ್ಮಿಗಳು, ಬಸವತತ್ವ ಅಳವಡಿಸಿಕೊಂಡವರು ರಾಜಕೀಯದ ಕೊಳಕು ತೆಗೆಯಲು ಮುಂದೆ ಬರಬೇಕು ಎಂದು ಬೆಂಗಳೂರಿನ ಜಾಗೃತ ಕರ್ನಾಟಕದ ಡಾ. ಎಚ್.ವಿ. ವಾಸು ಸಲಹೆ ಮಾಡಿದರು.

ನಗರದ ಬಸವಗಿರಿಯಲ್ಲಿ ನಡೆದ ಬಸವೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮುಖ್ಯ ಅನುಭಾವ ಮಂಡಿಸಿದರು.

ಒಳ್ಳೆಯ ಜನ ರಾಜಕಾರಣದಿಂದ ದೂರ ಇರಬಾರದು ಎಂದು ತಿಳಿಸಿದರು. ರಾಜಕೀಯ ಹಾಗೂ ಸಂಸಾರದಲ್ಲಿ ಒಳ್ಳೆಯ ಆಯ್ಕೆಗೆ ಬಸವಣ್ಣನವರ ಕಳಬೇಡ ಕೊಲಬೇಡ ವಚನ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.

ಸಮಾಜ, ಸರ್ಕಾರ ಹಾಗೂ ಸಂಸಾರದಲ್ಲಿ ಬದಲಾವಣೆ ತರುವ ಶಕ್ತಿ ವಚನಗಳಿಗಿದೆ. ಎಂಟು ನೂರು ವರ್ಷ ಭೂಗತವಾಗಿದ್ದ ವಚನಗಳನ್ನು ಬೆಳಕಿಗೆ ತಂದವರು ಡಾ. ಫ.ಗು. ಹಳಕಟ್ಟಿ ಅವರು. ಬಸವತತ್ವ ಪ್ರಸಾರ ಮಾಡಿದವರಲ್ಲಿ ಅಕ್ಕ ಅನ್ನಪೂರ್ಣತಾಯಿ ಅವರ ಹೆಸರು ಮೇಲ್ಪಂಕ್ತಿಯಲ್ಲಿದೆ. ಅಕ್ಕ ಅನ್ನಪೂರ್ಣ ತಾಯಿ ಅವರ ಕಾರ್ಯವನ್ನೇ ಮುಂದುವರಿಸಿರುವ ಪ್ರಭುದೇವ ಸ್ವಾಮೀಜಿ ಅವರ ಕಾರ್ಯ ರಾಜ್ಯಕ್ಕೆ ಮಾದರಿಯಾಗುತ್ತಿದೆ ಎಂದು ಹೇಳಿದರು.

ಯಾಗ, ಪುರಾಣ ವಚನಕ್ಕೆ ಸಮವಲ್ಲ: ಬಸವದೇವರು

ಬಸವಾದಿ ಶರಣರ ಒಂದು ವಚನಕ್ಕೆ ಶತರುದ್ರೀಯಾ ಯಾಗ ಸಮವಲ್ಲ. ನೂರೆಂಟು ವಚನಗಳ ಓದಿಗೆ ವ್ಯಾಸನ ಪುರಾಣ ಸಮಬಾರದು ಎಂದು ಬಸವಕಲ್ಯಾಣದ ಬಸವತತ್ವ ಪ್ರಸಾರಕ ಬಸವದೇವರು ನುಡಿದರು.

ಇಲ್ಲಿಯ ಬಸವಗಿರಿಯಲ್ಲಿ ಬಸವೋತ್ಸವ ಅಂಗವಾಗಿ ನಡೆದ ಸಾಮೂಹಿಕ ವಚನ ಪಾರಾಯಣದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ವಚನಗಳು ಮನುಕುಲದ ಉದ್ಧಾರಕ್ಕೆ ಬಂದಿವೆ. ಬಸವಾದಿ ಶರಣರು ರಚಿಸಿದ ಅಮೂಲ್ಯ ವಚನಗಳನ್ನು ಉಳಿಸಲು ಪ್ರಾಣವನ್ನೇ ನೀಡಬೇಕಾಯಿತು. ಗುರುವಿನ ಕಾರ್ಯಕ್ಕೆ ಬಂದವರೆಲ್ಲ ತತ್ವ ಪ್ರಸಾರಕರಿಗೆ ದ್ರೋಹ ಬಗೆಯುವುದು ಮುಂದಿನ ಜನ್ಮದ ಕರ್ಮದ ಬುತ್ತಿಯಾಗುವುದು ಎಂದು ಹೇಳಿದರು.

ಅಕ್ಕ ಅನ್ನಪೂರ್ಣತಾಯಿ ಅವರ ಸ್ಮರಣೋತ್ಸವವನ್ನು ಬಸವೋತ್ಸವವಾಗಿ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣ. ಗುರು ಕಾರ್ಯಕ್ಕೆ ನಿಂದೆ, ಎಡರು, ತೊಡರುಗಳು ಬಂದರೂ ಹೆದರಬೇಕಿಲ್ಲ. ಅಂಥ ಕಾರ್ಯ ಪ್ರಭುದೇವರು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ವಚನವೆಂಬುದು ಆತ್ಮಜ್ಯೋತಿ, ಒಂದೊಂದು ವಚನವೂ ಜ್ಞಾನ ನಿಧಿ, ಸುಖದ ಶರಧಿ, ಸ್ಪರ್ಶಿಸಿ ಓದಿ, ಅರಗಿಸಿಕೊಂಡವರ ಬಾಳೆಲ್ಲ ಬೆಳಕು ಎಂದು ಹೇಳಿದರು.

ಜ್ಞಾನ ದೀಪ್ತಿಯ ತೈಲವಾಗಿರುವ ಶರಣರ ವಚನಳತ್ತ ನಾವೆಲ್ಲ ಮುಖ ಮಾಡಬೇಕಾಗಿದೆ. ವಚನಗಳು ತಾನು ಹೀನ, ದೀನನೆಂಬ ಕೀಳರಿಮೆ ಕಳೆದು ಪರ ವಸ್ತುವಿನ ಅಂಶವೇ ತಾನೆಂಬ ಅರಿವನ್ನು ನೆಲೆಗೊಳಿಸುತ್ತವೆ ಎಂದು ತಿಳಿಸಿದರು.

ಅಕ್ಕ ಅನ್ನಪೂರ್ಣತಾಯಿ ಅವರು ವಚನ ಪಾರಾಯಣದ ಪರಿಪಾಠ ಜಾರಿಗೆ ತಂದು ಸಾರ್ವತ್ರಿಕಗೊಳಿಸಿದರು ಎಂದು ಹೇಳಿದರು.

ಕಲಖೋರಾದ ಅನಿಲ ಮಹಾರಾಜರು ಮಾತನಾಡಿ, ಅಕ್ಕನವರ ಸಂಕಲ್ಪವನ್ನು ಪ್ರಭುದೇವರು ಬಸವೋತ್ಸವ ಮೂಲಕ ಈಡೇರಿಸುತ್ತಿದ್ದಾರೆ. ಸಾಮೂಹಿಕ ವಚನ ಪಾರಾಯಣದಲ್ಲಿ 12ನೇ ಶತಮಾನದ ಶರಣರೇ ಧರೆಗೆ ಬಂದಂಥ ಅನುಭವವಾಯಿತು ಎಂದು ತಿಳಿಸಿದರು.

ಬಸವಕಲ್ಯಾಣದ ಅನುಭವ ಮಂಟಪದ ಶಿವಾನಂದ ಸ್ವಾಮೀಜಿ ಮಾತನಾಡಿ, ಮನೆ ಮನೆಯಲ್ಲೂ ಬಸವ ತತ್ವ ಬಿತ್ತಿದ ಅಕ್ಕ ಅನ್ನಪೂರ್ಣ ತಾಯಿ ಅವರನ್ನು ಸ್ಮರಿಸುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.

ಅಕ್ಕ ಬಸವತತ್ವ ಅಗ್ರಗಣ್ಯರು. ಲಿಂಗಾಯತ ಧರ್ಮ ಗ್ರಂಥ ಗುರುವಚನ ಕೊಟ್ಟರು. ವಚನಗಳಿಗೆ ಪಟ್ಟ ಕಟ್ಟಿ ಮೆರೆಸಿದರು. ಅನಾರೋಗ್ಯವಾದಾಗಲೂ ಪ್ರವಚನ ಮಾಡಿದ್ದರು. ದೇಹಕ್ಕೆ ಬೆಲೆ ಕೊಡದೆ ಲಿಂಗ ತತ್ವಕ್ಕೆ ಸಮರ್ಪಿಸಿಕೊಂಡಿದ್ದರು ಎಂದು ತಿಳಿಸಿದರು.

ಬಸವತತ್ವ ಪ್ರಸಾರಕ ಸಿದ್ರಾಮಪ್ಪ ಕಪಲಾಪುರ, ಯಶವಂತ ಶರಣರು ಸಾನಿಧ್ಯ, ಲಿಂಗಾಯತ ಮಹಾಮಠದ ಪರುಷಕಟ್ಟೆ ಚನ್ನಬಸವಣ್ಣ ನೇತೃತ್ವ, ನೀಲಮ್ಮನ ಬಳಗದ ಶಾಮಲಾ ಎಲಿ ಅಧ್ಯಕ್ಷತೆ ವಹಿಸಿದ್ದರು.

ಕೊಪ್ಪಳದ ವೀರಭದ್ರಪ್ಪ ನಂದ್ಯಾಳ ಷಟ್‍ಸ್ಥಲ ಧ್ವಜಾರೋಹಣಗೈದರು. ಮಾತೆ ಗೋದಾವರಿ, ಪ್ರಮುಖರಾದ ಸಂಗೀತಾ ಚ. ಗಣಾಚಾರಿ, ಜಗದೇವಿ ಜ. ಚಿಮಕೋಡೆ, ಸಂಗೀತಾ ಕಾಡಾದಿ, ನಮ್ರತಾ ಪಾಟೀಲ, ಸುಪ್ರಿಯಾ ಲೋಕೇಶ ಭೂರೆ ಉಪಸ್ಥಿತರಿದ್ದರು.

ಲಿಂಗಾಯತ ಸೇವಾ ದಳದ ಪ್ರಜ್ವಲ್ ಪತಂಗೆ ನಿರೂಪಿಸಿದರು. ಬಸವ ಚಿಕಲಿಂಗೆ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KEa0QcMUeol3Lxo87TDFPa

Share This Article
Leave a comment

Leave a Reply

Your email address will not be published. Required fields are marked *