ಬೆಂಗಳೂರು
ಕಾಂಗ್ರೆಸ್ ನಾಯಕತ್ವ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸಲು ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ನೀಡುವಂತೆ ಕೇಳಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ನೇತೃತ್ವದಲ್ಲಿ ದಿಲ್ಲಿಯಲ್ಲಿ ಮಂಗಳವಾರ ನಡೆಸಲಾದ ಸರಣಿ ಸಭೆಗಳಲ್ಲಿ ಕರ್ನಾಟಕದ ನಾಯಕತ್ವದ ಸಂಘರ್ಷಕ್ಕೆ ಪರಿಹಾರ ಸೂತ್ರವನ್ನು ಹೈಕಮಾಂಡ್ ರಚಿಸಿತು.
ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷ ಸುಗಮ ಅಧಿಕಾರ ಪರಿವರ್ತನೆಯನ್ನು ಬಯಸುತ್ತದೆ ಎಂದು ಮುಖ್ಯಮಂತ್ರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಈ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ. ಶೀಘ್ರದಲ್ಲಿಯೇ ಕರ್ನಾಟಕಕ್ಕೆ ಹೊಸ ಸಿಎಂ ಆಯ್ಕೆಯಾಗಲಿದ್ದು, ಜೊತೆಗೆ 4 ಮಂದಿ ಡಿಸಿಎಂ ಆಗಿ ಅಧಿಕಾರ ನಡೆಸಲಿದ್ದಾರೆ ಎಂದು ವರದಿಯಾಗುತ್ತಿವೆ.
ಸಿಎಂ ಸ್ಥಾನಕ್ಕೆ ಕಳೆದ 3 ವರ್ಷದಿಂದ ಹೋರಾಟ ನಡೆಸುತ್ತಿರುವ ಡಿಕೆ ಶಿವಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಅವರನ್ನು ಬಿಟ್ಟರೆ ಡಾ. ಜಿ ಪರಮೇಶ್ವರ್ ಅವರು ಹೆಸರು ಕೇಳಿ ಬರುತ್ತಿದೆ. ಇನ್ನೂ ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅವಕಾಶ ಕೊಟ್ಟು ಗೌರವ ಸಲ್ಲಿಸುವ ನಿಟ್ಟಿನಲ್ಲಿಯೂ ಚಿಂತನೆ ನಡೆಸುತ್ತಿದೆ.
ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕರೆಸಿಕೊಂಡು, ರಾಜ್ಯ ನಾಯಕತ್ವವನ್ನು ಬದಲಾಯಿಸುವ ರಾಹುಲ್ ಗಾಂಧಿ ಅವರ ಮಾತಿಗೆ ಸಿದ್ದರಾಮಯ್ಯ ಭಾಗಶಃ ಒಪ್ಪಿದ್ದು, ರಾಜ್ಯ ರಾಜಕಾರಣದಲ್ಲಿಯೇ ಮುಂದುವರಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಸಿದ್ದರಾಮಯ್ಯ ನಾಯಕತ್ವವನ್ನು ಗೌರವಯುತವಾಗಿಯೇ ಬದಲಾಯಿಸಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದೆ.
4 ಡಿಸಿಎಂ ಹುದ್ದೆ ರಚನೆಯಾದರೆ ಡಾ. ಜಿ. ಪರಮೇಶ್ವರ್, ಎಂ.ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಜಮೀರ್ ಅಹ್ಮದ್ ಖಾನ್, ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಎಚ್.ಸಿ. ಮಹಾದೇವಪ್ಪ ಅವರ ಹೆಸರು ಕೇಳಿ ಬರುತ್ತಿದೆ.
ಮುಂದಿನ ಪ್ರಕ್ರಿಯೆಗಳಿಗಾಗಿ ಸುರ್ಜೇವಾಲಾ ಬೆಂಗಳೂರಿಗೆ ಬುಧವಾರ ಆಗಮಿಸಲಿದ್ದಾರೆ. ನಾಯಕತ್ವದ ಕುರಿತ ಕುತೂಹಲಕ್ಕೆ ಬಹುತೇಕ ಗುರುವಾರವೇ ತೆರೆ ಬೀಳುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಹೇಳುತ್ತವೆ.
ಸಿದ್ದರಾಮಯ್ಯಗೆ ಹೈಕಮಾಂಡ್ ರಾಜ್ಯಸಭೆ ಹಾಗೂ ಯತೀಂದ್ರ ಅವರಿಗೆ ರಾಜ್ಯ ಸರ್ಕಾರದಲ್ಲಿ ಪ್ರಮುಖ ಹುದ್ದೆ ನೀಡುವ ಆಫರ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದಾಗ್ಯೂ, ಸಿದ್ದರಾಮಯ್ಯ ಪ್ರತಿಕ್ರಿಯಿಸಲು ಸಮಯ ಕೋರಿದ್ದಾರೆ ಮತ್ತು ರಾಜ್ಯಸಭಾ ಸ್ಥಾನಕ್ಕೆ ಸ್ಪರ್ಧಿಸಬೇಕೆಂಬ ನಾಯಕತ್ವದ ಸಲಹೆಯನ್ನು ಸಹ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ.
ಸಿದ್ದರಾಮಯ್ಯ ರಾಜೀನಾಮೆ ನೀಡಲು ಒಪ್ಪಿಕೊಂಡರೂ ಸಹ, ಅಂತಹ ನಡೆಯ ನಂತರ ಏನಾಗಬಹುದು ಎಂಬುದರ ಕುರಿತು ಅನಿಶ್ಚಿತತೆ ಮುಂದುವರೆದಿದೆ ಎಂದು ಚರ್ಚೆಗಳ ಬಗ್ಗೆ ತಿಳಿದಿರುವವರು ಹೇಳಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದರೂ, ಮುಖ್ಯಮಂತ್ರಿ ಸ್ಥಾನಕ್ಕೆ ಶಿವಕುಮಾರ್ ಅವರನ್ನು ಅನುಮೋದಿಸದಿರಬಹುದು, ಉತ್ತರಾಧಿಕಾರ ಸಮಸ್ಯೆಯನ್ನು ಬಗೆಹರಿಸಲಾಗುವುದಿಲ್ಲ ಎಂದು ಒಬ್ಬ ನಾಯಕ ಹೇಳಿದರು.
ಶಿವಕುಮಾರ್ ವಿಜಯದ ಸಂಕೇತ
ಸಭೆ ಮುಗಿಸಿ ಹೊರ ಬಂದಾಗ ಸಿದ್ದರಾಮಯ್ಯ ಗಂಭೀರವಾಗಿದ್ದರು. ಶಿವಕುಮಾರ್ ಅವರು ನಗುನಗುತ್ತಾ ಹೊರಬಂದರು.
ಮಾಧ್ಯಮಗಳ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಒಂದು ಸಾಲಿನ ಉತ್ತರ ನೀಡಿದರು. ಈ ನಡುವೆ, ಮುಖ್ಯಮಂತ್ರಿ ಬಣದ ನಾಯಕರು ಮೌನಕ್ಕೆ ಶರಣಾದರು.
ಸಭೆಯ ಬಳಿಕ ಕರ್ನಾಟಕ ಭವನಕ್ಕೆ ಬಂದ ಶಿವಕುಮಾರ್ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲಿಲ್ಲ. ಆದರೆ ಭವನದಲ್ಲಿರುವ ಮುಖ್ಯಮಂತ್ರಿ ಸ್ವೀಟ್ಗೆ ತೆರಳುವಾಗ ಲಿಫ್ಟ್ನಲ್ಲಿ ವಿಜಯದ ಸಂಕೇತ ತೋರಿದರು.
ಮಂಗಳವಾರ ಬೆಳಿಗ್ಗೆ ಸಿದ್ದರಾಮಯ್ಯ ಅವರ ಸುತ್ತಮುತ್ತ ಕಾಣಿಸಿಕೊಂಡಿದ್ದ ನಾಯಕರೆಲ್ಲ ಶಿವಕುಮಾರ್ ಅವರನ್ನು ಕಾಣಲು ಬಂದರು.
