‘ನಾನು ಬಸವತತ್ವ ಪಾಲಿಸುವ ತತ್ವ ಲಿಂಗಾಯತ ಎಂದು ಹೇಳಿದ್ದ ಸಿದ್ಧರಾಮಯ್ಯ’

ಬಸವಕಲ್ಯಾಣ

ಸುದೀರ್ಘವಾಗಿ ಐದು ದಶಕಗಳ ಕಾಲ ಕರ್ನಾಟಕದಲ್ಲಿ ರಾಜಕಾರಣಿಯಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದುಕೊಂಡ ಸಿದ್ಧರಾಮಯ್ಯನವರು ಕರ್ನಾಟಕ ಕಂಡ ಶ್ರೇಷ್ಟ ಬಸವತತ್ವದ ಲಿಂಗಾಯತ ಎಂದರೆ ತಪ್ಪಾಗಲಿಕ್ಕಿಲ್ಲ.

2013ರಲ್ಲಿ ಬಸವ ಜಯಂತಿಯಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಆಡಳಿತ ಶುರು ಮಾಡಿದ ಸಿದ್ಧರಾಮಯ್ಯನವರು ಬುದ್ಧ, ಬಸವ, ಭೀಮ, ಲೋಹಿಯಾ, ಗಾಂಧಿ ತತ್ವ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾಜದ ಬಡವರ, ಶೋಷಿತರ, ದಲಿತರ, ಮಹಿಳೆಯರ ಧ್ವನಿಯಾಗಿ ಕಾರ್ಯನಿರ್ವಹಿಸಿದರು.

ಎರಡನೇ ಅವಧಿಗೂ ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅನೇಕ ಜನಪರ, ಜೀವಪರ, ರೈತಪರ, ಮಹಿಳಾಪರ, ಬಸವತತ್ವ ಪರ ಕೆಲಸ ಮಾಡಿ ತತ್ವ ಲಿಂಗಾಯತರ ನಾಡಿ ಮಿಡಿತವಾಗಿದ್ದಾರೆ. ಅವರ ವಿದಾಯವು ನಮಗೆಲ್ಲ ನೋವುಂಟು ಮಾಡಿದ್ದರೂ ಅವರಲ್ಲಿದ್ದ ಬಸವತತ್ವ ಚಿಂತನೆಗಳು ಮತ್ತು ಅವುಗಳನ್ನು ಸಾಕಾರಗೊಳಿಸಿದ ಯೋಜನೆಗಳಿಂದ ನಮ್ಮ ಮನದಲ್ಲಿ ಶಾಶ್ವತವಾಗಿ ಸದಾ ಉಳಿಯುತ್ತಾರೆ. ಈ ರಾಜ್ಯ ಕಂಡ “ಮಾಸ್ ಲೀಡರ್” ಎಂದರೆ ಸಿದ್ಧರಾಮಯ್ಯನವರು.

ಬಸವಕಲ್ಯಾಣಕ್ಕೊಮ್ಮೆ ಕಾರ್ಯಕ್ರಮ ನಿಮಿತ್ತ ಬಂದಾಗ 108 ಅಡಿ ಎತ್ತರದ ಬಸವೇಶ್ವರ ಪುತ್ಥಳಿ ನೋಡಲು ಬಂದಿದ್ದರು. ಅವರ ಜೊತೆ ಸುತ್ತಾಡಿ ಬಸವಧರ್ಮ ಪೀಠ ತೋರಿಸಿದಾಗ ಮಾತಾಜಿ ಕಾರ್ಯಗಳನ್ನು ಮೆಚ್ಚಿದ್ದಲ್ಲದೆ, ನಿಜವಾದ ಲಿಂಗಾಯತ ಧರ್ಮದ ಹೋರಾಟಗಾರರು ಮಾತೆ ಮಹಾದೇವಿಯವರು ಎಂದು ಬಣ್ಣಿಸಿದ್ದರು.

ಮಾತಾಜಿ ಜೊತೆ ದೂರವಾಣಿ ಮೂಲಕ ಮಾತಾಡುತ್ತಾ, ‘ಯಡಿಯೂರಪ್ಪನವರು ವೈದಿಕತೆಯನ್ನು ಬೆಳೆಸುವ ಜಾತಿ ಲಿಂಗಾಯತ’. ನಾನು ಜಾತಿಯಲ್ಲಿ ಕುರುಬನಾಗಿದ್ದರೂ ಬಸವತತ್ವ ಪಾಲಿಸುವ ತತ್ವ ಲಿಂಗಾಯತ ಎಂದು ನಗೆಯಾಡಿದ್ದರು.

ಹೌದು! ಜಾತಿ ಲಿಂಗಾಯತ ರಾಜಕಾರಣಿಗಳಿಗಿಂತ ತತ್ವ ಲಿಂಗಾಯತ ಸಿದ್ಧರಾಮಯ್ಯನವರು ಎಷ್ಟೋ ವಾಸಿ. ವಿರೋಧ ಮತ್ತು ಸ್ವಪಕ್ಷ ನಾಯಕರಿಂದ ಎಷ್ಟೇ ವಿರೋಧಗಳು ಬಂದರೂ ಅವಮಾನ, ಅಪಮಾನ ಬಂದರೂ ಬಗ್ಗದೆ-ಕುಗ್ಗದೇ ‘ಲಿಂಗಾಯತ ಧರ್ಮದ ಮಾನ್ಯತೆಯ ಶಿಫಾರಸ್ಸಿಗಾಗಿ ನಾಗಮೋಹನ್ ದಾಸ್ ಕಮಿಟಿ ರಚಿಸಿ ಲಿಂಗಾಯತ ಧರ್ಮಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ.

ಬಸವಣ್ಣನವರ ಭಾವಚಿತ್ರ ಕಛೇರಿಗಳಲ್ಲಿ ಹಾಕಿಸಿದ್ದು, ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ವಿಜಯಪುರ ವಿಶ್ವವಿದ್ಯಾಲಯಕ್ಕೆ ಅಕ್ಕನ ಹೆಸರಿಟ್ಟಿದ್ದು, ಅನುಭವ ಮಂಟಪಕ್ಕೆ ಹೆಚ್ಚುವರಿ ಅನುದಾನ ನೀಡಿದ್ದು, ಕೂಡಲ ಸಂಗಮ ಅಭಿವೃದ್ಧಿಗಾಗಿ ಶ್ರಮಿಸಿದ್ದು, ವಚನ ಸಾಹಿತ್ಯ ಸಂಶೋಧನಾ ಕೇಂದ್ರ ಸ್ಥಾಪಿಸಲು ಬಸವಕಲ್ಯಾಣಕ್ಕೆ 25 ಎಕರೆ ಭೂಮಿ ಘೋಷಿಸಿದ್ದು’ ಹೀಗೆ ಬಸವತತ್ವ ಬೆಳೆಸಲು ಅನೇಕ ಯೋಜನೆ ರೂಪಿಸಿದ್ದು ನೋಡಿದರೆ; ಬಸವಣ್ಣನವರ ಕಾರ್ಯ ಮಾಡಲಿಕ್ಕಾಗಿಯೇ ನಿಯೋಜನೆಗೊಂಡ ಮುಖ್ಯಮಂತ್ರಿ ಎಂದೆನಿಸುತ್ತದೆ. ಅವರು ಎಲ್ಲಿಯೇ ಕಾರ್ಯಕ್ರಮಗಳಲ್ಲಿ ಮಾತಾನಾಡುವಾಗ ಬಸವಣ್ಣ ಮತ್ತು ಅಂಬೇಡ್ಕರ್ ಹಾಗೂ ಸಂವಿಧಾನದ ಬಗ್ಗೆ ನಿರರ್ಗಳವಾಗಿ ಮಾತನಾಡುವುದನ್ನು ಕೇಳುವುದೇ ಆನಂದ.

ಮಾತಿನಲ್ಲಿ ಶಿಸ್ತು, ಭ್ರಷ್ಟಾಚಾರವಿಲ್ಲದ ಜೀವನ, ಶಿಸ್ತುಬದ್ಧ ಆಡಳಿತಗಾರ, ನಿಮ್ಮ ಕನ್ನಡಾಭಿಮಾನ, ಅಷ್ಟೇನೂ ಆಸ್ತಿ ಮಾಡದ ರಾಜಕಾರಣಿ, ವೈಯುಕ್ತಿಕ ಸಚ್ಚಾರಿತ್ರ್ಯವಂತನಾಗಿ ನಮ್ಮ ಹೃದಯದಲ್ಲಿ ಸ್ಥಾನ ಪಡೆದಿದ್ದೀರಿ. ಅಧಿಕಾರ ಹಂಚಿಕೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡು ಈ ಕಾಲದ ಶ್ರೇಷ್ಠ ರಾಜಕೀಯ ಮುತ್ಸದ್ದಿಯಾದಿರಿ. ನಿಮ್ಮ ನಡೆ ಈಗಿನ ರಾಜಕಾರಣಿಗಳಿಗೆ ಪ್ರೇರಣೆಯಾಗಬೇಕು. ನೀವು ಮುಖ್ಯಮಂತ್ರಿ ಸ್ಥಾನದಿಂದ ವಿದಾಯರಾದರೆಂಬ ನೋವಿಗಿಂತ ಲಿಂಗಾಯತ ಧರ್ಮಕ್ಕೆ ಬೆನ್ನೆಲುಬಾಗಿ ನಿಂತ ನಿಮ್ಮ ಸ್ಥಾನ ಮತ್ತಾರು ತುಂಬಲು ಸಾಧ್ಯ ಎಂಬ ನೋವು ಕಾಡುತ್ತದೆ.

ಲಿಂಗಾಯತ ಮಠಾಧೀಶರು ಯಾವತ್ತೂ ನಿಮ್ಮನ್ನು ಮರೆಯಲಾರದಂತಹ ಸೇವೆ ಸಲ್ಲಿಸಿದ್ದೀರಿ. ನನ್ನ ಗುರು ಜಗದ್ಗುರು ಲಿಂಗೈಕ್ಯ ಮಾತೆ ಮಹಾದೇವಿಯವರ ಪರವಾಗಿ ಮತ್ತು ನಮ್ಮ ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ-ಬಸವಕಲ್ಯಾಣದಿಂದ ನಿಮ್ಮ ಮುಂದಿನ ಜೀವನ ಸುಖಮಯವಾಗಿ ಸಾಗಲೆಂದು ನಿಮ್ಮ ಆರೋಗ್ಯ ಕ್ಷೇಮಕ್ಕೆ ಧರ್ಮಗುರು ಬಸವಣ್ಣನವರಲ್ಲಿ ಪ್ರಾರ್ಥಿಸುವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.