ವಚನಗಳು ಶರಣರು ಹಚ್ಚಿಟ್ಟ ದೊಂದಿಗಳು: ಡಾ. ಜಯಪ್ಪ ಹೊನ್ನಾಳಿ

‘ವಚನ ಸಂಗೀತೋತ್ಸವ’

ಮೈಸೂರು:

ವಚನಗಳು ಬಸವಾದಿ ಪ್ರಮಥರು ೧೨ ನೇ ಶತಮಾನದಲ್ಲೇ ನಮ್ಮ ಸುತ್ತಮುತ್ತಲಿನ ಕತ್ತಲೆ ಕಳೆಯಲು ಹಚ್ಚಿಟ್ಟ ನಂದಾ ದೀಪಗಳು, ದೊಂದಿಗಳು, ಪಂಜುಗಳು, ಅವುಗಳನ್ನು ಹಿಡಿದುಕೊಂಡೇ ನಾವು ಈ ಭವದ ಕಾರಿರುಳಿನಾಚೆಯ ಬೆಳಕಿನೂರ ತಲುಪಬೇಕಾಗಿದೆ, ಎಂದು ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ, ಕವಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ಮೈಸೂರಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಸಪ್ತಸ್ವರ ಬಳಗ ಸಂಯುಕ್ತವಾಗಿ, ಮೈಸೂರಿನ ರಾಮಕೃಷ್ಣ ನಗರದ, ನೃಪತುಂಗ ಕನ್ನಡ ಶಾಲೆಯ, ರಮಾಗೋವಿಂದ ಕಲಾಮಂದಿರದಲ್ಲಿ ಏರ್ಪಡಿಸಿದ್ದ ವಚನ ಸಂಗೀತೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಿದ್ದರು.

ಬೆಲ್ಲದ ಕೆಸರು, ಸಕ್ಕರೆಯ ಮರಳ ಮೇಲೆ ಹರಿವ ಹಾಲಿನ ತೊರೆಯೇ ೧೨ ನೇ ಶತಮಾನದ ಶರಣರ ವಚನ ಸಾಹಿತ್ಯ, ನಡೆ-ನುಡಿ ಮೇಳೈಸಿದ್ದ ಆ ಸಮಷ್ಟಿಮುಖಿ ಹಾಗೂ ಜೀವನ್ಮುಖಿ ಸಾಹಿತ್ಯ ೨೧ ನೇ ಶತಮಾನದ ಇಂದಿನ ನಮ್ಮ ಬದುಕಿನ ಎಲ್ಲಾ ನೋವು, ಗಾಯಗಳಿಗೂ ಅಕ್ಷರಶಃ ಮಾತ್ರೆ, ಮುಲಾಮು ಔಷಧಿಯಾಗಬಲ್ಲದು, ಅದೇ ಅದರ ಹೆಗ್ಗಳಿಕೆ ಎಂದರು.

ಮಾನವೀಯವಾದ ನಾಡೊಂದನ್ನು ಕಟ್ಟಲಾಶಿಸಿದ ಶರಣರು, ಕೇವಲ ಆದರ್ಶಮಯವಾದ ಸಾಹಿತ್ಯ ಬರೆದು ತೋರದೆ, ಮಾದರಿಯಾದ ಅದರಂತೆ ಮೌಲಿಕ ಬದುಕನ್ನು ಬಾಳಿ ತೋರಿದರು, ಆ ಮೂಲಕ ಕಲ್ಯಾಣ ಕರ್ನಾಟಕ ಕಟ್ಟುವುದು ಅವರ ಕನಸಾಗಿತ್ತು, ಅವರ ಆ ಕನಸನ್ನು ನನಸಾಗಿಸುವ ಜವಾಬ್ದಾರಿ ಇಂದು ಬಸವಾನುಯಾಯಿಗಳಾದ ನಮ್ಮ ಮೇಲಿದೆ ಎಂದರು.

ಸಾಂಸ್ಕೃತಿಕ ನಗರಿ ಮೈಸೂರಿನ ಅತ್ಯುತ್ತಮ ಗಾಯಕಿಯರಾದ ಸುಮಂಗಳ ಜಂಗಮಶೆಟ್ಟಿ ಹಾಗೂ ಶುಭಾ ರಾಘವೇಂದ್ರ ಅವರು ತಮ್ಮ ಸಹಕಲಾವಿದರೊಂದಿಗೆ ವಚನ ಸಂಗೀತೋತ್ಸವ ನಡೆಸಿಕೊಡಲು ಆಗಮಿಸಿರುವುದು ತುಂಬಾ ಸಂತೋಷದ ವಿಚಾರವಾಗಿದೆ ಎಂದ ಅವರು, ವಚನಕಾರರ ಹಾಗೂ ವಚನಗಳ ಆಶಯಗಳನ್ನು ನಮ್ಮ ಬದುಕ ಬೆಳಕಾಗಿಸಿಕೊಳ್ಳಲು ಬಳಸಿಕೊಳ್ಳೋಣ ಎಂದರು.

ಸಮಾರಂಭದ ಉದ್ಘಾಟನೆಯನ್ನು ಜ್ಯೋತಿ ಬೆಳಗುವ ಮೂಲಕ ಹಿರಿಯ ಸಂಶೋಧಕರು, ಸಾಹಿತಿಗಳಾದ ಪ್ರೊ. ಎಸ್.ಜಿ. ಕೃಷ್ಣಪ್ಪ ನೆರವೇರಿಸಿ, ಶರಣ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯ ಬಗ್ಗೆ ಮೆಚ್ಚುಗೆ ಸೂಚಿಸಿ, ಇದೊಂದು ಅರ್ಥಪೂರ್ಣವಾದ ಕಾರ್ಯಕ್ರಮ, ವಚನ ಸಂಗೀತೋತ್ಸವಕ್ಕೆ ಇಷ್ಟೊಂದು ಸಹೃದಯಿಗಳು ಆಗಮಿಸಿರುವುದು ಶರಣರ ವಚನಗಳಿಗಿರುವ ಮಹತ್ವ ಇಂದಿಗೂ ಕಡಿಮೆಯಾಗಿಲ್ಲವೆಂಬುದನ್ನು ತೋರುತ್ತಿದೆ ಎಂದು ಹೇಳಿ, ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿರುವುದಕ್ಕಾಗಿ ಶರಣ ಸಾಹಿತ್ಯ ಪರಿಷತ್ತನ್ನು ಶ್ಲಾಘಿಸಿದರು.

ನಂತರ ಖ್ಯಾತ ಗಾಯಕಿಯರಾದ ವಿದುಷಿ ಸುಮಂಗಳ ಜಂಗಮಶೆಟ್ಟಿ ಹಾಗೂ ವಿದುಷಿ ಶುಭಾ ರಾಘವೇಂದ್ರ ಸುಶ್ರಾವ್ಯವಾಗಿ ವಚನಗಳ ಗಾಯನ ಮಾಡುವ ಮೂಲಕ ವಚನ ಸಂಗೀತೋತ್ಸವ ಫಲಪ್ರದಗೊಳಿಸಿದರು.

ದತ್ತಿ ದಾನಿಗಳಾದ ದಾಕ್ಷಾಯಣಿ ಸೋಮಶೇಖರ, ಪ್ರದೀಪಕುಮಾರ ಮುದ್ದುಮಾದಪ್ಪ, ವಿದುಷಿ ಸುಮಂಗಳ ಜಂಗಮಶೆಟ್ಟಿ, ವಿದುಷಿ ಶುಭಾ ರಾಘವೇಂದ್ರ ವೇದಿಕೆಯಲ್ಲಿದ್ದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡೀಕೆರೆ ಗೋಪಾಲ, ನಿಕಟಪೂರ್ವ ಪರಿಷತ್ತಿನ ಅಧ್ಯಕ್ಷರಾದ ಮ. ಗು. ಸದಾನಂದಯ್ಯ, ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶೋಭಾರಾಣಿ ಜೈಪ್ರಕಾಶ, ಡಾ. ಶೈಲಜ ತಿಪ್ಪೇರುದ್ರಸ್ವಾಮಿ, ಖಜಾಂಚಿ ಡಾ. ಮುದ್ದುಮಲ್ಲೇಶ ಹೆಚ್. ಎನ್., ಜಗದೀಶ್ ಬಿ. ಚಿಕ್ಕಮಠ, ಅಭಿನೇತ್ರಿ ಶ್ರುತಿ, ಕಲಾವಿದೆ ರಾಧಾ ಮಲ್ಲಪ್ಪ, ಚನ್ನಬಸಪ್ಪ, ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯದರ್ಶಿ ನಂದೀಶ್ವರ ಬಿ.ಎನ್. ನಿರೂಪಿಸಿದರು. ಸುಮತಿ ಬಾಲಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿದರು. ಪರಿಷತ್ತಿನ ಸಂಚಾಲಕರಾದ ಡಾ. ಲೋಕೇಶಪ್ಪ ಹೆಚ್.ಎನ್. ಸ್ವಾಗತ ಮಾಡಿದರು. ವೀಣಾ ನಂದೀಶ ಹಾಗೂ ಪ್ರೊ. ಶೈಲಜ ಗಾಯಕಿಯರ ಪರಿಚಯಿಸಿದರು. ಲೋಕೇಶ್ವರ ವಂದನಾರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *