ಬೆಂಗಳೂರು:
ಬಸವಣ್ಣ ತಮ್ಮ ಸಾಮಾಜಿಕ ಚಿಂತನೆ, ವಚನಗಳ ಮೂಲಕವೇ ನಿಜವಾದ ಸಾಂಸ್ಕೃತಿಕ ನಾಯಕ ಎನ್ನಿಸಿಕೊಂಡರು. ಜಾತಿ, ಭೇದವನ್ನು ಮಾಡದೇ ಎಲ್ಲರನ್ನೂ ಸಮಾನವಾಗಿ ನೋಡಿದ ಬಸವಣ್ಣನ ತತ್ವಗಳನ್ನು ಅಳವಡಿಸಿಕೊಳ್ಳುವುದರಿಂದ ಬದುಕಿನಲ್ಲಿ ಬದಲಾವಣೆಗೆ ದಾರಿಯಾಗಲಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ರವಿವಾರ ಬನಶಂಕರಿ 2ನೇ ಹಂತದಲ್ಲಿರುವ ಜೆಎಸ್ಎಸ್ ಪಬ್ಲಿಕ್ ಸ್ಕೂಲ್ನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಬೆಂಗಳೂರು ಜಿಲ್ಲಾ ಘಟಕದ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಸರಕಾರ ಬಸವಣ್ಣನವರಿಗೆ ಎರಡು ವರ್ಷದ ಹಿಂದೆ ಸಾಂಸ್ಕೃತಿಕ ನಾಯಕ ಎನ್ನುವ ಗೌರವ ನೀಡಿದ್ದನ್ನು ಮೆಚ್ಚಲೇಬೇಕು. ಸಮಾನತೆ ತತ್ವ ಅಳವಡಿಸಿಕೊಂಡರೆ ಸಮಾಜ ಸ್ವಾಸ್ಥ್ಯ ಹಾಳಾಗದಂತೆ ಮಾಡಬಹುದು ಎಂದು ಹಲವು ದಾರ್ಶನಿಕರು ಹೇಳಿದರು. ಆದರೆ, ಬಸವಣ್ಣ 12ನೇ ಶತಮಾನದಲ್ಲಿಯೇ ತೋರಿಸಿಕೊಟ್ಟ ಈ ಹಾದಿ ಜಗತ್ತಿಗೆ ಮಾದರಿಯಾಗಿದೆ ಎಂದು ಹೊರಟ್ಟಿ ಹೇಳಿದರು.

ಹಿರಿಯ ವಕೀಲ ಡಾ.ಸಿ.ಎಸ್. ದ್ವಾರಕಾನಾಥ ಮಾತನಾಡಿ, ಸಿದ್ದರಾಮಯ್ಯ ಅವರು 2024ರಲ್ಲಿ ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಬಸವಣ್ಣನವರ ಭಾವಚಿತ್ರ ಸರಕಾರಿ ಕಚೇರಿಗಳಲ್ಲಿ ಬಳಸುವಂತೆ ಆದೇಶ ಮಾಡಿದರು. ಇಂತಹ ದೃಢ ನಿರ್ಧಾರ ತೆಗೆದುಕೊಂಡ ಸಿದ್ದರಾಮಯ್ಯ ಅಭಿನಂದನಾರ್ಹರು ಎಂದರು.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಂ. ಕೆಂಪಗೌಡರ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಪ್ರಮುಖ ನಿರ್ಧಾರ ಕೈಗೊಂಡರು. ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಟ್ಟಿದ್ದು, ಅನುಭವ ಮಂಟಪ ಅಭಿವೃದ್ಧಿ, ಕಿತ್ತೂರು ಚನ್ನಮ್ಮ ಉತ್ಸವ, ಕಿತ್ತೂರಿಗೆ ಚನ್ನಮ್ಮನ ಹೆಸರು ಇಟ್ಟಿದ್ದು ಇವೆಲ್ಲವೂ ಸಿದ್ದರಾಮಯ್ಯ ಕಾಲದಲ್ಲಾದ ಪ್ರಮುಖ ಕಾರ್ಯಗಳು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಮಹಾಸಭಾ ಬೆಂಗಳೂರು ನಗರ ಅಧ್ಯಕ್ಷ ವೀರಭದ್ರಯ್ಯ, ಪ್ರಧಾನ ಕಾರ್ಯದರ್ಶಿ ಕೃಪಾಶಂಕರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೃಪೆ : ವಾರ್ತಾ ಭಾರತಿ
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

ತುಂಬಾ ಸಂತೋಷ JLM ನ ರೂವಾರಿ ಶರಣ ಜಾಮ್ ದಾರ್ ಅಣ್ಣಾಜಿ ಗೆ ಶರಣು ಶರಣಾರ್ಥಿ
We are respect your social work