ಬೆಂಗಳೂರು:
ಬಸವನಗರದ ಬಸವ ಸೇವಾ ಸಮಿತಿಯ ಮಾಸಿಕ ೬೩ನೇ ವಚನಾಮೃತ ಕಾರ್ಯಕ್ರಮ ಶಿವತತ್ವ ವಿಷಯವಾಗಿ ನಡೆಯಿತು.
ಭಾನುವಾರ ಸಾಯಂಕಾಲ ಶರಣ ದಂಪತಿಗಳಾದ ಬಸಮ್ಮ ಮತ್ತು ಮಲ್ಲಿಕಾರ್ಜುನ ಕಲಹಾಳ ಅವರ ಬಸವನಗರ ನಿವಾಸದಲ್ಲಿ ನಡೆದ ಮುಕ್ತ ಚರ್ಚೆಯ ಕಾರ್ಯಕ್ರಮ ಸುರೇಶ ಪಾಟೀಲ ಅವರ ವಚನ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.

ಬಸವ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಶರಣ ಎ.ಎಸ್. ಓಂಕಾರಪ್ಪ ಎಲ್ಲರನ್ನು ಸ್ವಾಗತಿಸಿದರು. ಪದ್ಧತಿಯಂತೆ ನಿವೃತ್ತ ತತ್ವಜ್ಞಾನ ಪ್ರೊಫೆಸರ್ ಅವರನ್ನು ಸರ್ವಾನುಮತದಿಂದ ಸಭಾಧ್ಯಕ್ಷರನ್ನಾಗಿಸಲಾಯಿತು.
ಬಸವ ಸೇವಾ ಸಮಿತಿಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಹಂಜಿ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಶಿವತತ್ವವನ್ನು ವೈಜ್ಞಾನಿಕ ರೀತಿಯಲ್ಲಿ ಅರ್ಥೈಸುತ್ತಾ, ಪೊಟೆನ್ಷಿಯಲ್ ಎನರ್ಜಿಯ ಬಗ್ಗೆ ವಿಷಯ ಮಂಡನೆ ಮಾಡಿದರು. ಮತ್ತು ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ, ಅನುಭವಗಳನ್ನು ಮಂಡಿಸಲು ವಿನಂತಿಸಿದರು.

ಈ ಭಾಗದ ಸಮಾಜ ಸೇವಕರಾದ ಮನೋಜಕುಮಾರ ಅವರು, ವಚನಾಮೃತ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿದರು. ತಮ್ಮ ಉದ್ಘಾಟನಾ ನುಡಿಯಲ್ಲಿ ಬಸವ ಸೇವಾ ಸಮಿತಿಯ ಕಾರ್ಯಕ್ರಮಗಳನ್ನು ಪ್ರಶಂಸೆ ಮಾಡುತ್ತಾ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಬಸವಣ್ಣನವರ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವಲ್ಲಿ ಯಶಸ್ವಿಯಾಗಲೆಂದು ಹಾರೈಸಿದರು.
ವಿಷಯ ಮಂಡನೆ ಮಾಡಿದ ಸಮಿತಿಯ ಪ್ರಥಮ ಅಧ್ಯಕ್ಷರಾದ ಚಿತ್ರಕಲಾ ಕಲಾವಿದರು, ಶರಣ ಸಾಹಿತಿಗಳು ಮೈಸೂರಿನ ಎಲ್. ಶಿವಲಿಂಗಪ್ಪನವರು, ಶಿವತತ್ವ ವೈದಿಕ ಪರಂಪರೆಯ ಹುನ್ನಾರದಿಂದ ಹೇಗೆ ಲಿಂಗಾಯತರನ್ನು ಹಳಿತಪ್ಪಿಸುತ್ತಿದೆ ಮತ್ತು ಈ ಕುರಿತು ಲಿಂಗಾಯತರು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕೆಂದು ಕಿವಿಮಾತು ಹೇಳಿದರು.

ಕಲ್ಲಿನಾಥ ಅವರು ಶಿವತತ್ವ ಆಧ್ಯಾತ್ಮಿಕ ಸಾಧನೆಯಲ್ಲಿ ಯಾವ ರೀತಿ ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರೀ ವಿಭೂತಿಪುರ ಮಠದ ಕಾರ್ಯದರ್ಶಿಗಳಾದ ಸಿ. ಬಸವರಾಜ ಅವರು ಶಿವಪೂಜಾ ವಿಧಾನಗಳನ್ನು ಸವಿಸ್ತಾರವಾಗಿ ತಿಳಿಸುತ್ತಾ, ಅದು ಶಿವತತ್ವವನ್ನು ಅರಿಯಲು ಸಹಕಾರಿಯಾಗುತ್ತದೆ ಎಂದರು.
ನಿವೃತ್ತ ಶಿಕ್ಷಕರಾದ ಶಾಬಾದಿ ಅವರು ಶಿವತತ್ವ ಶಿವನ ಬಗ್ಗೆ ಇರುವ ಮೂಢನಂಬಿಕೆಗಳನ್ನು ಹೋಗಲಾಡಿಸಲು ಅನುಕೂಲವಾಗುತ್ತದೆಂದು ಅಭಿಪ್ರಾಯಪಟ್ಟರು.
ಮಲ್ಲೇಶಗೌಡ ಪಾಟೀಲರು, ಶಿವತತ್ವ ಶಿವನ ಅಸ್ತಿತ್ವವನ್ನು ಸಮರ್ಪಕವಾಗಿ ತಿಳಿದುಕೊಳ್ಳಲು ನೆರವಾಗುವುದೆಂದು ಹೇಳಿದರು.

ಕೆ.ಆರ್. ಪುರದ ಜನಪದ ಸಮಿತಿಯ ಅಧ್ಯಕ್ಷರಾದ ಪಿ. ಎಸ್. ಸಾಲಿಮಠ ಅವರು ಲಿಂಗಪೂಜೆಯ ಮಹತ್ವ ಶಿವತತ್ವವನ್ನು ಅರಿಯಲು ಮುಖ್ಯ ಮಾರ್ಗವೆಂದು ವಿಷಯ ಮಂಡಿಸಿದರು.
ಸಮಿತಿಯ ಅಧ್ಯಕ್ಷರಾದ ಡಾ. ಮಲ್ಲಿಕಾರ್ಜುನ ಹಂಜಿ ಅವರು ೧೪೯ ಬಸವಾದಿ ಶರಣರು ಶಿವತತ್ವ ಕುರಿತು ತಮ್ಮ ೪೩೯೧ ವಚನಗಳಲ್ಲಿ, ೮,೫೮೬ ಸಾರಿ ಉಲ್ಲೇಖಿಸಿದ್ದು ಅವರ ಅಭಿಪ್ರಾಯ ವೇದ, ಉಪನಿಷತ್, ಪುರಾಣ ಮತ್ತು ಸನಾತನ ಧರ್ಮಕ್ಕಿಂತ ಹೇಗೆ ಭಿನ್ನವಾಗಿದೆ ಎಂದು ಪ್ರತಿಪಾದಿಸಿದರು.
ಸಭಾಧ್ಯಕ್ಷರಾದ ನಂಜುಂಡಯ್ಯ ಅವರು ಎಲ್ಲರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಶಿವತತ್ವ ಯೂನಿವರ್ಸಲ್ ಕಾನ್ಸಿಯಸ್ ಅರ್ಥೈಸುವಲ್ಲಿ ಹೇಗೆ ಮಾರ್ಗದರ್ಶನ ಮಾಡುತ್ತದೆ ಅಂತಾ ವಿವರಿಸಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎ. ಎಸ್. ಓಂಕಾರಪ್ಪ ಅವರು ಕಾರ್ಯಕ್ರಮ ವ್ಯವಸ್ಥಿತವಾಗಿ ನಡೆಸಿಕೊಟ್ಟರು ಹಾಗೂ ಎಲ್ಲರಿಗೂ ವಂದನಾರ್ಪಣೆ ಮಾಡಿದರು.
ರಾಜೇಶ್ವರಿ ಪಾಟೀಲ ಮತ್ತು ಶಕುಂತಲಾ ಸಾಲಿಮಠ ಅವರು ಬಸವ ಗೀತೆಯೊಂದಿಗೆ ಸಭೆಗೆ ಮಂಗಳ ಹಾಡಿದರು.
ಹಿಂದಿನ ಅಧ್ಯಕ್ಷರಾದ ಶರಣ ಆರ್.ಡಿ. ಪಾಟೀಲ, ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಣ್ಣೇಗೌಡರು, ರಾಣಿ ಚೆನ್ನಮ್ಮ ಮಹಿಳಾ ಸಂಘದ ಅಧ್ಯಕ್ಷರಾದ ವಿಶಾಲಮ್ಮನವರು ಮತ್ತು ಈ ಭಾಗದ ರಾಜಕೀಯ ನಾಯಕರಾದ ಗಿರಿಜಮ್ಮ, ಸಮಿತಿಯ ಸಹಕಾರ್ಯದರ್ಶಿಯಾದ ವೀರೇಶ ಜಿ ಕೆ, ಶಿವಶಂಕರ ರೆಡ್ಡಿಯವರು ಉಪಸ್ಥಿತರಿದ್ದರು.

ನಂತರ ಚರ್ಚೆಯಲ್ಲಿ ಭಾಗವಹಿಸಿದ ಮತ್ತು ಪ್ರಾರ್ಥನೆ ಮಾಡಿದ ಎಲ್ಲರಿಗೂ ಶರಣ ಸಾಹಿತ್ಯ ಒಳಗೊಂಡ ಪುಸ್ತಕಗಳನ್ನು ವಿತರಿಸಲಾಯಿತು.
ಸಮಿತಿಯ ಪರವಾಗಿ ಸಭಾಧ್ಯಕ್ಷರನ್ನು ಮತ್ತು ಕಾರ್ಯಕ್ರಮದ ಪ್ರಾಯೋಜಕರಾದ ಮಲ್ಲಿಕಾರ್ಜುನ ಕಲಹಾಳ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವು ಪ್ರಸಾದ ದಾಸೋಹದೊಂದಿಗೆ ಮಂಗಲಗೊಂಡಿತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U
