ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕಕ್ಕೆ ಚಾಲನೆ, ಪ್ರತಿಭಾ ಪುರಸ್ಕಾರ
ಹಾವೇರಿ:
ಹಿಂದಿನಿಂದಲೂ ಸತ್ಯಶುದ್ಧ ಕಾಯಕ ನಿಷ್ಠೆ, ಜಂಗಮ ಪ್ರೇಮಕ್ಕೆ ಬಣಜಿಗ ಸಮಾಜದವರು ಆದರ್ಶ ಉದಾಹರಣೆಯಾಗಿದ್ದಾರೆ ಎಂದು ಹುಕ್ಕೇರಿ ಮಠದ ಪೂಜ್ಯ ಸದಾಶಿವ ಸ್ವಾಮೀಜಿ ಅವರು ಹೇಳಿದರು.
ರಜನಿ ಸಭಾಂಗಣದಲ್ಲಿ ಈಚೆಗೆ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಶಹರ ಘಟಕದಿಂದ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಮಹಿಳಾ ಘಟಕದ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಈ ಸಮಾಜದ ಅನೇಕ ಮಹಾನ್ ವ್ಯಕ್ತಿಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿ ಸ್ಮರಣೀಯರಾಗಿರುತ್ತಾರೆ.

ಬಣಜಿಗ ಸಮುದಾಯವು ಬಸವಣ್ಣನವರ ಹಾಗೂ ಶಿವಶರಣರ ಆಚಾರ, ವಿಚಾರ, ತತ್ವಗಳ ಪಾಲಕರಾಗಿ ಕಾಯಕ ಮತ್ತು ದಾಸೋಹ ಸೇವೆಯನ್ನು ಅಂದಿನಿಂದಲೂ ಮುಂದುವರೆಸಿಕೊಂಡು ಮಾದರಿಯ ಸೇವೆಯನ್ನು ನೀಡುತ್ತಾ ಬಂದಿದ್ದಾರೆ.
ಪ್ರತಿಭಾನ್ವಿತ ವಿದ್ಯಾರ್ಥಿ ಸಮೂಹವನ್ನು ಗುರುತಿಸಿ ಅವರನ್ನು ಪುರಸ್ಕರಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಉಪಾಧ್ಯಕ್ಷ ಕೆ.ಸಿ. ಪಾವಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಧ್ಯೇಯೋದ್ಧೇಶ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿ, ನಮ್ಮ ಲಿಂಗಾಯತ ಧರ್ಮದ ಆಚರಣೆಗಳು ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ಅವುಗಳ ಪುನರ್ ಸ್ಥಾಪನೆ ಅನಿವಾರ್ಯವಾಗಿದೆ ಎಂದರು.
ರಾಣೇಬೆನ್ನೂರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಜಿ.ವಿ ಕೋರಿ ಉಪನ್ಯಾಸ ನೀಡಿ, ನಮ್ಮ ಸಮಾಜದ ಮಹನೀಯರು ನೀಡಿದ ಶ್ರೇಷ್ಠ ಕೊಡುಗೆಗಳನ್ನು ಇಂದಿನ ಯುವಜನಾಂಗಕ್ಕೆ ತಿಳಿಸುವ, ಅದರಂತೆ ನಡೆಯುವ ಮಾರ್ಗದರ್ಶನಗಳನ್ನು ಅವರಿಗೆ ನೀಡುವ ಮಹತ್ಕಾರ್ಯ ಆಗಬೇಕಿದೆ ಎಂದರು.

ಕಾರ್ಯಾಧ್ಯಕ್ಷ ಅಜಿತ ಮಾಗಾವಿ ಸಂಘದ ಶಹರ ಘಟಕ ಹಾಗೂ ಮಹಿಳಾ ಘಟಕದ ರಚನೆಯ ಉದ್ಧೇಶ ಮತ್ತು ಸಂಘದಿಂದ ಕಾಲಕಾಲಕ್ಕೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಮುಂಬರುವ ದಿವಸಗಳಲ್ಲಿ ಸಂಘದಿಂದ ಶೈಕ್ಷಣಿಕ, ಔಧ್ಯಮಿಕ ಕ್ಷೇತ್ರದಲ್ಲಿನ ಸಾಧಕ, ಪರಿಣತರನ್ನು ಕರೆಸಿ ಅವರಿಂದ ಮಾರ್ಗದರ್ಶನದ ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸುವ ಯೋಜನೆ ಇದೆ ಎಂದರು.
ಬಸವಾದಿ ಶಿವಶರಣರ ತತ್ವಗಳು ಅತ್ಯಮೂಲ್ಯವಾಗಿದ್ದು ಅವುಗಳನ್ನು ಜನಮಾನಸಕ್ಕೆ ಬಿತ್ತುವ ನಿಟ್ಟಿನಲ್ಲಿ ನಗರದಲ್ಲಿ ಬಸವ ಧ್ಯಾನ ಮಂದಿರವನ್ನು ನಿರ್ಮಿಸುವ ಕುರಿತಾಗಿ ಸರ್ವರ ಮಹದಾಸೆಯಿದ್ದು ಅದಕ್ಕಾಗಿ ಎಲ್ಲರ ಸಹಕಾರ ಅವಶ್ಯಕತೆ ಎಂದರು.
ಉಪಾಧ್ಯಕ್ಷ ಶಿವಕುಮಾರ ಮುದುಗಲ್ಲ ಉಪಸ್ಥಿತರಿದ್ದರು. 2025 -26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ 90ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಸಮಾಜದ 20 ಮಕ್ಕಳಿಗೆ ರಜತ ಪದಕ ಹಾಗೂ ಅಭಿನಂದನಾ ಪತ್ರದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಪೂಜ್ಯರಿಗೆ ಗೌರವಾರ್ಪಣೆ ಮಾಡಲಾಯಿತು. ಜಿ.ವಿ. ಕೋರಿ ಮತ್ತು ಮಲ್ಲಿಕಾರ್ಜುನ ಹಿಂಚಿಗೇರಿ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸನ್ಮಾನ ಕಾರ್ಯಕ್ರಮವನ್ನು ಕಾರ್ಯದರ್ಶಿ ಬಸವರಾಜ ಕೋರಿ ನಡೆಸಿಕೊಟ್ಟರು. ಶಹರ ಘಟಕದ ಅಧ್ಯಕ್ಷ ಕಿರಣ ಕೊಳ್ಳಿ ಸ್ವಾಗತಿಸಿದರು. ಕಾವ್ಯ ಅಂಗಡಿ ವಚನ ಪ್ರಾರ್ಥನೆ ಮಾಡಿದರು. ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹಿಂಚಿಗೇರಿ ಕಾರ್ಯಕ್ರಮ ನಿರೂಪಿಸಿದರು. ಪ್ರಭುಗೌಡ ಬಸನಗೌಡ ವಂದಿಸಿದರು.
ಮಹಿಳಾ ಘಟಕಕ್ಕೆ ಸಲಹಾ ಸಮಿತಿ ಸದಸ್ಯರನ್ನಾಗಿ ಮೀನಾಕ್ಷಿ ಮಾಗಾವಿ, ಗಿರಿಜಕ್ಕ ಯಳವತ್ತಿ, ಸುಮಾ ಹೇರೂರು, ರೇಖಾ ಮಾಗನೂರ, ಸ್ಮಿತಾ ಕುರುಬಗೊಂಡ ಶೆಟ್ಟರ, ಗೌರವಾಧ್ಯಕ್ಷರಾಗಿ ವಿಮಲಾ ವರ್ತೂರ, ಅಧ್ಯಕ್ಷರಾಗಿ ವಿಮಲ ಹಿಂಚಿಗೇರಿ, ಉಪಾಧ್ಯಕ್ಷರಾಗಿ ಮಮತಾ ಬಾಲೆಹೊಸೂರ, ಸುಧಾ ಆನೂರಶೆಟ್ಟರ, ಕಾರ್ಯದರ್ಶಿಯಾಗಿ ರುದ್ರಾಕ್ಷಿ ಬೆಂಬಳಗಿ, ಸಹ ಕಾರ್ಯದರ್ಶಿಯಾಗಿ ಅನುಪಮಾ ವಾಲಿಶೆಟ್ಟರ, ಅನ್ನಪೂರ್ಣ ಹತ್ತಿ ಅವರನ್ನು ನೇಮಕಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಗಿರೀಶ ಶೆಟ್ಟರ, ಶಿವಣ್ಣ ಶೆಟ್ಟರ, ಶಿವಲಿಂಗಪ್ಪ ಗುಂಜಟ್ಟಿ, ಪ್ರಭು ಬೆನ್ನೂರ, ದಯಾನಂದ ಯಡ್ರಾಮಿ, ನಿರಂಜನ ತಾಂಡೂರ, ವಿ.ಜಿ. ಎಳಗೇರಿ, ವಿಭೂತಿ, ಕುಮಾರ ಹತ್ತಿ, ಸಂತೋಷ ಮಾಗಾವಿ, ಮಹಾಂತಣ್ಣ ಮಾಸೂರ, ಮಹೇಶ್ ಚಿನ್ನಿಕಟ್ಟಿ, ಸಂತೋಷ ಮಾಸೂರ, ರಾಜಣ್ಣ ಮಾಗನೂರ, ಚಂದ್ರಶೇಖರ ತುರಕಾಣಿ, ಬಸವರಾಜ ಯಳವತ್ತಿ ಗಂಗಾಧರ ಮಳಗಿ, ವಿಜಯಕುಮಾರ ಕೂಡ್ಲಪ್ಪನವರ, ಪ್ರಕಾಶ ಹಂದ್ರಾಳ, ನಾಗರಾಜ ವಿಭೂತಿ, ಬಸವರಾಜ ಬೆಲ್ಲದ, ಲೀಲಾವತಿ ಮಾಗಾವಿ, ಲಲಿತಕ್ಕ ಹೊರಡಿ ಅನೇಕರು ಭಾಗವಹಿಸಿದ್ದರು.
ಕಾರ್ಯಕ್ರಮದ ನಂತರ ಎಲ್ಲರಿಗೂ ದಾಸೋಹ ವ್ಯವಸ್ಥೆ ಮಾಡಲಾಗಿತ್ತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U
