ಅನ್ನ ಕೊಡುವುದಕ್ಕಿಂತ ಅನ್ನ ಗಳಿಸುವ ಕಾಯಕ ಕಲಿಸಬೇಕು : ಪಂಡಿತಾರಾಧ್ಯ ಶ್ರೀಗಳು

ಸಾಣೇಹಳ್ಳಿ:

“ಇವತ್ತಿನ ರಾಜಕೀಯ ಕ್ಷೇತ್ರದಲ್ಲಿ ಸರ್ಕಾರಗಳು ಜನರಿಗೆ ಉದ್ಯೋಗ ನೀಡಿ ಸ್ವಾವಲಂಬಿಗಳನ್ನಾಗಿ ಮಾಡುವ ಬದಲು, ವಿವಿಧ ಯೋಜನೆಗಳ ಮೂಲಕ ಸೋಮಾರಿಗಳನ್ನಾಗಿ ಮಾಡುತ್ತಾ ದುಡಿಮೆಯ ಕಾಯಕವನ್ನು ಕಸಿದುಕೊಳ್ಳುತ್ತಿರುವುದು ನೋವಿನ ಸಂಗತಿ” ಎಂದು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತೀವ್ರ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಎಸ್ಸೆಸ್ ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಶ್ರೀ ಶಿವಕುಮಾರ ಕಲಾಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦ ದಿನಗಳ ಯುವಜನ ರಂಗ ತರಬೇತಿ ಶಿಬಿರದ ರೂಪರೇಷೆಗಳನ್ನು ಹಾಗೂ ‘ನುಲಿಯ ಚಂದಯ್ಯ’ ನಾಟಕ ವೀಕ್ಷಿಸಿ ಮಾತನಾಡಿದರು.

“ಮನುಷ್ಯ ಹಸಿವಿಗಾಗಿ ತಪ್ಪು ದಾರಿ ತುಳಿಯದಂತೆ ತಡೆಯಲು ಅವನಿಗೆ ಅನ್ನ ಕೊಡುವುದಕ್ಕಿಂತ, ಅನ್ನ ಗಳಿಸುವ ‘ಕಾಯಕ’ವನ್ನು ಕಲಿಸಬೇಕು. ಮನುಷ್ಯನಿಗೆ ಹಸಿವಾದಾಗ ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದನ್ನು ಕಲಿಸುವುದು ಮುಖ್ಯ. ಆದರೆ ಇಂದಿನ ವ್ಯವಸ್ಥೆ ಕಾಯಕ ಸಂಸ್ಕೃತಿಯನ್ನೇ ಹಾಳು ಮಾಡುತ್ತಿದೆ. “ಇಂದಿನ ಸಮಾಜದಲ್ಲಿ ಆಧುನಿಕ ಭಸ್ಮಾಸುರರು ಹೆಚ್ಚಾಗುತ್ತಿದ್ದಾರೆ. ಸಂಪತ್ತಿನ ಹಿಂದೆ ಬಿದ್ದು ಮನುಷ್ಯ ಹಾಳಾಗುತ್ತಿದ್ದಾನೆ.

ರಂಗಭೂಮಿ ಕೇವಲ ರಂಜನೆಯಾಗದೆ, ಇನ್ನೊಬ್ಬರ ನೋವಿಗೆ ಸ್ಪಂದಿಸುವ ಗುಣವನ್ನು ಕಲಿಸಬೇಕು. ಬಸವಣ್ಣನವರ ‘ಅವರ ಸುಖವೆನ್ನ ಸುಖ, ಅವರ ದುಃಖವೆನ್ನ ದುಃಖ’ ಎಂಬ ತತ್ವದಂತೆ ಬದುಕುವುದೇ ನಿಜವಾದ ಪೂಜೆ. ಸಮಾಜದಲ್ಲಿ ಕ್ರಾಂತಿಕಾರಕ ವಿಚಾರಗಳನ್ನು ಬಿತ್ತುವ ಕೆಲಸವನ್ನು ರಂಗಭೂಮಿ ಮಾಡಬೇಕಿದೆ ಎಂದರು.

‘ನುಲಿಯ ಚಂದಯ್ಯ’ ನಾಟಕ ವೀಕ್ಷಿಸಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ಮಾತನಾಡಿ, “ಬೇರೆ ಬೇರೆ ಶಿಕ್ಷಣ ಕೋರ್ಸ್‌ಗಳು ಡಾಕ್ಟರ್, ಇಂಜಿನಿಯರ್ ಅಥವಾ ಐಎಎಸ್ ಅಧಿಕಾರಿಗಳನ್ನು ಸೃಷ್ಟಿಸಬಹುದು. ಆದರೆ ರಂಗಭೂಮಿ ಮೊದಲು ಒಬ್ಬ ಮನುಷ್ಯನನ್ನು ಸೃಷ್ಟಿಸುತ್ತದೆ. ಇಲ್ಲಿ ಜಾತಿ, ಧರ್ಮ, ವರ್ಣಗಳ ಭೇದವಿಲ್ಲದೆ ಒಟ್ಟಿಗೆ ಬದುಕುವುದನ್ನು, ಪರಸ್ಪರ ಪ್ರೀತಿಸುವುದನ್ನು ಕಲಿಸಲಾಗುತ್ತದೆ.

ಸಾಣೇಹಳ್ಳಿಯ ಈ ರಂಗಶಿಬಿರದ ಮುಖ್ಯ ಉದ್ದೇಶ ಕೇವಲ ನಟರನ್ನು ತಯಾರು ಮಾಡುವುದಲ್ಲ, ಬದಲಿಗೆ ಮನುಷ್ಯತ್ವವಿರುವ ಸತ್ಪ್ರಜೆಗಳನ್ನು ರೂಪಿಸುವುದಾಗಿದೆ” ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ನಾಟಕ ಅಕಾಡೆಮಿ ಸದಸ್ಯ ಲವಕುಮಾರ್ ಮಾತನಾಡಿ, “ರಂಗಭೂಮಿ ನಮಗೆ ಸಮಾಜವನ್ನು ನೋಡಲು ಹೊಸ ಕಣ್ಣು ಮತ್ತು ಹೃದಯವನ್ನು ನೀಡುತ್ತದೆ. ಶಿಬಿರ ಮುಗಿಸಿ ಹಳ್ಳಿಗಳಿಗೆ ವಾಪಸ್ ಹೋದಾಗ ನೀವು ಕೇವಲ ನಟರಾಗಿ ಉಳಿಯದೆ, ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ನಾಯಕರಾಗಬೇಕು, ಆಯುಧಗಳಾಗಬೇಕು.

ಮನೆಯಲ್ಲಿ ತಾಯಿಯ ಕೆಲಸಕ್ಕೆ ಕೈಜೋಡಿಸುವುದರಿಂದಲೇ ರಂಗಭೂಮಿಯ ನಿಜವಾದ ಯಶಸ್ಸು ಹಾಗೂ ಲಿಂಗ ಸಮಾನತೆ ಆರಂಭವಾಗುತ್ತದೆ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವವರು ಪ್ರೋಗ್ರೆಸಿವ್ ಮತ್ತು ವಿಚಾರಶೀಲರಾಗಿರಬೇಕು. ಇದಕ್ಕಾಗಿ ವಚನ ಸಾಹಿತ್ಯ, ದಾಸರ ಪದ ಹಾಗೂ ತತ್ವಪದಗಳ ಓದು ಅತ್ಯಗತ್ಯ” ಎಂದರು.

ಶಿಬಿರದ ನಿರ್ದೇಶಕರಾದ ರಾಘು ಮತ್ತು ವೆಂಕಟೇಶ್ವರ ಉಪಸ್ಥಿತರಿದ್ದರು.

ಆರಂಭದಲ್ಲಿ ರಾಜಪ್ಪ ದಳವಾಯಿ ರಚನೆಯ ವೆಂಕಟೇಶ ನಿರ್ದೇಶನದ ಅಮ್ಮ ತಾಯಿ ನಾಟಕವನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *