ಮಾಯೆಯ ಸ್ವರೂಪವನ್ನು ಸರಳವಾಗಿ ವಿವರಿಸುವ ಶರಣ ಚಂದಿಮರಸರ ವಚನ

ಗುಳೇದಗುಡ್ಡ:

ಬಸವ ಕೇಂದ್ರದ ವತಿಯಿಂದ ಶನಿವಾರ ವಸಂತ ಚೌಹಾನ, ನಿವೃತ್ತ ಶಿಕ್ಷಕರು ಇವರ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ನಡೆಯಿತು. ಚಿಂತನೆಗಂದು ಚಂದಿಮರಸ ಶರಣರ ವಚನವನ್ನು ಅಯ್ದುಕೊಳ್ಳಲಾಗಿತ್ತು.

ಹಿರಿದಪ್ಪ ಮಾಯೆಯನೆಂತು ಕೆಡಿಸುವೆನೆಂದು ಬೆಂಬೀಳದಿರು ಮರುಳೆ!
ಮಾಯೆ ದಿಟಕ್ಕಿಲ್ಲ ; ಇಲ್ಲದುದನೆಂತು ಕೆಡಿಸುವಿರೊ?
ತನ್ನನರಿದಡೆ ಸಾಕು.
ಅರಿದೆನರಿಯೆನೆಂಬುದು ಮಾಯೆ.
ಈ ಮಾಯೆ ನಿನಗಿಲ್ಲ, ಚಿನ್ಮಯ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ.

ಬಸವ ಕೇಂದ್ರದ ಅನುಭಾವಿಗಳಾದ ಪ್ರೊ. ಶ್ರೀಕಾಂತ ಗಡೇದ ಅವರು ಪ್ರಾರಂಭದಲ್ಲಿ ವಚನಕಾರರ ಪರಿಚಯವನ್ನು ಮಾಡಿಕೊಡುತ್ತಾ, ಸಿಮ್ಮಲಿಗೆ ಚೆನ್ನರಾಮ ಎಂಬ ಅಂಕಿತದಲ್ಲಿ ಶರಣ ಚಂದಿಮರಸರ ಸುಮಾರು 157 ವಚನಗಳು ದೊರೆತಿವೆ. ಆಲಮಟ್ಟಿ ಹತ್ತಿರದ ಚಿಮ್ಮಲಿಗೆ ಎಂಬ ಗ್ರಾಮದ ಈ ಶರಣರು ಬಸವ ಸಮಕಾಲೀನರಾಗಿದ್ದು, ಅವರ ವಚನಗಳಲ್ಲಿ ತಾತ್ವಿಕ ಅಂಶಗಳೇ ಎದ್ದು ಕಾಣುತ್ತಿದ್ದು, ಅತ್ಯಂತ ಸರಳವಾಗಿ ವಿಷಯ ಪ್ರತಿಪಾದನೆಯನ್ನು ಅವರ ವಚನಗಳಲ್ಲಿ ಕಾಣಬಹುದು.

ನಮಗೆ ತಳಕು ಹಾಕಿಕೊಂಡಿರುವ ಮಾಯೆಯನ್ನು ನಾಶಪಡಿಸುತ್ತೇನೆ ಎಂಬ ಭ್ರಮೆ ಬೇಡ. ಏಕೆಂದರೆ ಮಾಯೆ ಎಂಬುದೇ ಇಲ್ಲ.  ಇಲ್ಲದ ಮಾಯೆಯನ್ನು ವಿರೋಧಿಸುವುದಕ್ಕಿಂತ ತನ್ನನ್ನು ತಾನು ಅರಿತರೆ ಸಾಕು. ಒಳ್ಳೆಯದನ್ನು ಕೆಟ್ಟದ್ದನ್ನು ನೋಡಿ ಅದರಲ್ಲಿ ಒಳ್ಳೆಯದನ್ನು ಆಯ್ದುಕೊಂಡು ಆಚರಿಸಿದರೆ ಸಾಕು. ಪ್ರತಿ ಜೀವಿಗಳನ್ನು ಶಿವ ಸ್ವರೂಪಿಗಳೆಂದೇ ಭಾವಿಸಿದರೆ ಸಾಕು ಎಂದು ಹೇಳಿದರು.

ಇನ್ನೋರ್ವ ಅನುಭಾವಿಗಳಾದ ಮಹಾಲಿಂಗಪ್ಪ ಕರನಂದಿ ಅವರು ವಚನಗಳು 8-9 ನೂರು ವರ್ಷಗಳಿಂದಲೂ ಜನರ ಬಾಯಲ್ಲಿ ಉಳಿದುಕೊಂಡು ಬಂದಿವೆ ಎಂದರೆ ಅದರ ಮಹತ್ವವನ್ನು ಅರಿಯಬೇಕು. ತತ್ವಜ್ಞಾನದ ವಿಷಯವನ್ನು ಎಲ್ಲ ಭಾಷೆಗಳಲ್ಲಿ ಬರೆಯೋದು ಅಸಾಧ್ಯವೆಂದಿದ್ದಾಗ ಅದನ್ನು ಕನ್ನಡದಲ್ಲಿ ಬರೆದು ಅನುಭಾವ ಸಾಹಿತ್ಯವನ್ನು ಕನ್ನಡದಲ್ಲಿ ಹಿಡಿದಿಟ್ಟಿದ್ದರಿಂದ ಕನ್ನಡವೂ ದೇವ ಭಾಷೆಯಾಯಿತು.

ಈ ವಚನದಲ್ಲಿ ಮಾಯೆ ಕುರಿತಾದ ವಿವರವಿದೆ. ಅನಿತ್ಯವಾದ ಮಾಯೆಯ ಹಿಂದೆ ಬೀಳದೆ ತನ್ನ ತಾನು ಅರಿತರೆ ತಾನೇ ಶಿವಾಂಶಿಕನೆಂದು ತಿಳಿದುಕೊಂಡರೆ ಸಾಕು. ಅಲ್ಲಿ ಮಾಯೆ ಎಂಬುದು ಇರುವುದಿಲ್ಲ. ಇರುವುದೊಂದೇ ಅದು ಲಿಂಗ ಸ್ವರೂಪ ಎಂದು ತಿಳಿ ಹೇಳಿದರು.

ನಿವೃತ್ತ ಪ್ರಾಚಾರ್ಯ ಪ್ರೊ. ಸಿದ್ದಲಿಂಗಪ್ಪ ಬರಗುಂಡಿ ಅವರು ಈ ವಚನವನ್ನು ಕುರಿತು, ಚಂದಿಮರಸ ಶರಣರು ಅನುಭಾವಿಗಳು. ಮಾಯೆಯನ್ನು ಕುರಿತು ಮಾತನಾಡುತ್ತಾ, ಮಾಯೆಯನ್ನು ಹಲವು ಬಗೆಯಲ್ಲಿ ವಿಶ್ಲೇಷಿಸಿದ್ದಾರೆ. ಲಿಂಗಸ್ವರೂಪಿಯಾದ ಜೀವಾತ್ಮ ತನಗಂಟಿದ ಅಂಗ ಗುಣಗಳನ್ನೇ ಮಾಯೆ ಎಂದು ಕರೆದಿದ್ದಾನೆ.

ಶರಣರು ಈ ಮಾಯೆಯನ್ನು ತಮೋಶಕ್ತಿ ಎಂದು ಗುರುತಿಸಿದ್ದಾರೆ. ಇದು ತನಗಿಂತ ಭಿನ್ನವಾಗಿದ್ದು ತನು ಮನ ಭಾವದಲ್ಲಿ ಸೇರಿ ಕೆಟ್ಟ ಕಾರ್ಯಗಳನ್ನು ಕೆಟ್ಟ ಗುಣಗಳನ್ನು ಹಾಗೂ ಕೆಟ್ಟ ಭಾವ ಭ್ರಾಂತಿಯನ್ನು ಹುಟ್ಟು ಹಾಕುತ್ತದೆ. ಈ ಮಾಯಾ ಸ್ವರೂಪದ ತಮೋಶಕ್ತಿಯು ಮೂಲದಿಂದಲೇ ಬಂದಿದ್ದಲ್ಲ. ಅದು ನಡುವೆಯೇ ಸೇರಿಕೊಂಡದ್ದು.

ಹೀಗಾಗಿ ಇದಕ್ಕೊಂದು ಅಂತ್ಯವಿದೆ ತನಗಂಟಿದ ಈ ದುರ್ಗುಣಗಳನ್ನು ಸರಿಸಿದರೆ ತನ್ನ ಸ್ವರೂಪವೇ ಉಳಿಯುತ್ತದೆ. ಹೀಗಾಗಿ ಈ ಮಾಯೆ ಎಂಬುದು ನಿಜವಲ್ಲ. ಅದಕ್ಕೆ ಪ್ರಾಧಾನ್ಯತೆಯನ್ನು ಕೊಡುವುದು ಬೇಡ.

ತಾನಲ್ಲದ ತನ್ನದಲ್ಲದ ಮಾಯೆಯನ್ನು ಕಿತ್ತೆಸೆಯುತ್ತೇನೆ ಎಂಬುದೇ ದಡ್ಡತನ. ನಾನು ದೇಹವಲ್ಲ ಇಂದ್ರಿಯವಲ್ಲ ಅಂತ:ಕರಣವಲ್ಲ ಎಂಬ ಅರಿವಿನಲ್ಲಿ ನಿಂತಾಗ ಸ್ವತಃ ಮೂಲ ಚಿನ್ಮಯ ಸ್ವರೂಪನೇ ಆಗುವುದರಿಂದ ಮಾಯೆ ಕುರಿತು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂಬುದು ಚಂದಿಮರಸರ ಅಭಿಪ್ರಾಯವಾಗಿದೆ ಎಂದು ಹೇಳಿದರು.

ಆರಂಭದಲ್ಲಿ ಜಯಶ್ರೀ ಬರಗುಂಡಿ ಇವರಿಂದ ಪ್ರಾರ್ಥನೆ, ಲಕ್ಷ್ಮಿ ನಾಯನಾಗಲಿ ಅವರು ವಚನ ಗಾಯನ ಮಾಡಿದರು.  ಕಾರ್ಯಕ್ರಮದಲ್ಲಿ ಬಸವರಾಜ ಖಂಡಿ, ಪುತ್ರಪ್ಪ ಬೀಳಗಿ, ಬಸಲಿಂಗಯ್ಯ ಕಂಬಾಳಿಮಠ, ರಾಜಣ್ಣ ಕೆರೂರ, ಪಾಂಡಪ್ಪ ಕಳಸ, ರಾಜಪ್ಪ ಯಂಡಿಗೇರಿ, ಶರಣೆ ಗೀತಾ ತಿಪ್ಪಾ, ಶಾರದಾ ನಾಯನೇಗಲಿ, ವಿಶಾಲಾಕ್ಷೆ ಗಾಳಿ, ಸುರೇಖಾ ಗೆದ್ದಲಮರಿ ಮೊದಲಾದವರು ಇದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *