ಗದಗ:
ಮನುಷ್ಯನ ಅತಿಯಾದ ದುರಾಸೆಯಿಂದ ಪರಿಸರದ ಅಸಮತೋಲನ ಹೆಚ್ಚಾಗುತ್ತಿದೆ. ಈ ಕಾರಣದಿಂದಾಗಿ ಮನುಷ್ಯ ಆರೋಗ್ಯಪೂರ್ಣ ಬದುಕು ನಡೆಸುವುದು ಬಹಳ ಕಷ್ಟವಾಗಿದೆ. ಹಾಗಾಗಿ ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೦೧ನೆಯ ಶಿವಾನುಭವದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಪ್ರಗತಿಯ ಹೆಸರಿನಲ್ಲಿ ಸಹಜವಾದ ಪರಿಸರವನ್ನು ನಾಶ ಮಾಡಿ ಅಸಹಜವಾದ ಕಾಂಕ್ರೀಟ್ ಕಟ್ಟಡಗಳನ್ನು ಅತಿಯಾಗಿ ನಿರ್ಮಿಸುತ್ತಿದ್ದೇವೆ.
ಪರಿಸರದಲ್ಲಿ ಅಸಮತೋಲನ ಉಂಟಾಗಿ ನೀರು, ಗಾಳಿ ಹಾಗೂ ಆಹಾರದಲ್ಲಿ ವಿಷಬೆರೆಕೆಯಾಗಿ ಮನುಷ್ಯ ಅನೇಕ ರೋಗಗಳಿಗೆ ಈಡಾಗುತ್ತಿದ್ದಾನೆ. ಮನುಷ್ಯ ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕು ಎಂದು ಹೇಳಿದರು.

‘ಅಂತರಾಷ್ಟ್ರೀಯ ಪರಿಸರ ದಿನಾಚರಣೆಯ’ ಕುರಿತು ಪ್ರೊ. ಸಿ. ಎಸ್. ಅರಸನಾಳ ಅವರು ಮಾತನಾಡಿ, ಪ್ರಕೃತಿ ತನ್ನ ಸಮತೋಲನಕ್ಕಾಗಿ ಅನೇಕ ಸಂಕೇತಗಳನ್ನು ಮನುಷ್ಯನಿಗೆ ನೀಡುತ್ತದೆ. ಪ್ರಕೃತಿಗೆ ಕಿವಿಗೊಡದೆ ಅತಿಯಾದ ದುರಾಸೆಯಿಂದ ಗಿಡ-ಮರಗಳನ್ನು ನಾಶ ಮಾಡುತ್ತಿದ್ದೇವೆ. ಶುದ್ಧ ಗಾಳಿ, ನೀರು, ಆಹಾರಗಳಿಲ್ಲದೆ ಪರಿತಪಿಸುವಂತಾಗಿದೆ. ಇದಕ್ಕೆ ಕಾರಣ ಪ್ರಕೃತಿ ನಾಶ. ಪ್ರತಿಯೊಬ್ಬ ಮನುಷ್ಯನು ಗಿಡಮರಗಳನ್ನು ಹಚ್ಚಿ ಸಂರಕ್ಷಣೆ ಮಾಡುವುದರ ಮೂಲಕ ಸಹಜವಾದ ಪ್ರಕೃತಿ ನಿರ್ಮಾಣ ಮಾಡಬೇಕು ಎಂದರು.

ಅಣ್ಣಿಗೇರಿಯ ಶಾಲಾ ಶಿಕ್ಷಕರಾದ ವಿ. ಎಂ. ಹಿರೇಮಠ ಅವರು ತಮ್ಮ ಮನೆಯ, ಶಾಲಾ ಆವರಣ ಹಾಗೂ ಸುತ್ತು ಮುತ್ತಲಿನ ಪರಿಸರದಲ್ಲಿ ಗಿಡಮರಗಳನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರಿಗೆ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸನ್ಮಾನ ಮಾಡಿ ಆಶೀರ್ವಾದ ಮಾಡಿದರು.
ಶ್ರೀಮಠದ ಆವರಣವನ್ನು ನಿತ್ಯವೂ ಸ್ವಚ್ಛ ಮಾಡುತ್ತ ಬಂದಿರುವ ಚೌರಮ್ಮ ಕರಿಗಾರ ಅವರನ್ನು ಸನ್ಮಾನಿಸಲಾಯಿತು.

ನಗರಸಭೆಯ ಹಾಗೂ ಆಸ್ಪತ್ರೆಗಳಲ್ಲಿಯ ತ್ಯಾಜ್ಯಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಸಿಬ್ಬಂದಿಯನ್ನು ಶ್ರೀಮಠದಿಂದ ಅಭಿನಂದಿಸಿ ಸನ್ಮಾನಿಸಲಾಯಿತು.
ಡಾ. ಉಮೇಶ ವೀ. ಪುರದ ಸ್ವಾಗತವನ್ನು, ಸುರೇಖಾ ಪಿಳ್ಳಿ ನಿರೂಪಣೆಯನ್ನು, ಮೃತ್ಯುಂಜಯ ಹಾಗೂ ಸುತಾರ ವಚನ ಸಂಗೀತವನ್ನು, ಭೂಮಿಕಾ ಕೆ. ತುಕ್ಕಪ್ಪನವರ ಧರ್ಮಗ್ರಂಥ ಪಠಣವನ್ನು, ಬಸವರಾಜ್ ಕೆ. ತುಕ್ಕಪ್ಪನವರ ವಚನ ಚಿಂತನವನ್ನು ನೆರವೇರಿಸಿದರು.

ಪ್ರಾರಂಭದಲ್ಲಿ ಪರಿಸರ ಗೀತೆಗಳನ್ನು ಮುಂಡರಗಿಯ ಡಾ. ನಿಂಗು ಸೊಲಗಿ ಅವರು ಪ್ರಸ್ತುತಪಡಿಸಿದರು. ದಾಸೋಹ ಸೇವೆಯನ್ನು ಬಳ್ಳಾರಿ ಜಿಲ್ಲೆಯ ತಂಬ್ರಹಳ್ಳಿಯ ಅಕ್ಕಿ ಮಂಜುನಾಥ ಅವರ ಸ್ಮರಣಾರ್ಥ ಶಿವಕುಮಾರ ಅಕ್ಕಿ ವಹಿಸಿಕೊಂಡಿದ್ದರು.
ವೇದಿಕೆಯ ಮೇಲೆ ಪ್ರಭಾವತಿ ಕಲ್ಲನಗೌಡರ ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರ್ಮನ್ನ ಡಾ. ರಮೇಶ ಮ. ಕಲ್ಲನಗೌಡರ, ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಹಾಗೂ ಶ್ರೀಮಠದ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿವಾನುಭವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U
