ವಚನಗಳು ಮಾನವ ಜೀವನದ ಕೈಪಿಡಿ : ವಚನ ಕುಮಾರಸ್ವಾಮಿ

ಬಸವ ಮೀಡಿಯಾ
ಬಸವ ಮೀಡಿಯಾ

ವಚನ ಸಂಸ್ಕೃತಿ ಚಿಂತನ-258ರಲ್ಲಿ ಉಪನ್ಯಾಸ

ಅಥಣಿ:

ಗೂಗಲ್ ಮೀಟ್ ಮೂಲಕ ಆಯೋಜಿಸಿದ್ದ ವಚನ ಸಂಸ್ಕೃತಿ ಚಿಂತನ-258 ಕಾರ್ಯಕ್ರಮದಲ್ಲಿ ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್‌ ಸಂಸ್ಥಾಪಕ ವಚನ ಕುಮಾರಸ್ವಾಮಿ “ಶರಣರ ವಚನಗಳು ಮಾನವ ಜೀವನದ ಕೈಪಿಡಿ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಶರಣರ ವಚನಗಳು ಕೇವಲ ಸಾಹಿತ್ಯ ಕೃತಿಗಳಲ್ಲ; ಅವು ಮಾನವ ಜೀವನಕ್ಕೆ ದಾರಿದೀಪವಾಗಿರುವ ಕೈಪಿಡಿಗಳಾಗಿವೆ. ಸಮುದ್ರದಲ್ಲಿ ದಾರಿ ತಪ್ಪಿದ ಹಡಗುಗಳಿಗೆ ದೀಪಸ್ತಂಭ ಮಾರ್ಗದರ್ಶನ ನೀಡುವಂತೆ, ಶರಣರ ವಚನಗಳು ಅಜ್ಞಾನ, ಗೊಂದಲ ಹಾಗೂ ದುಃಖದ ಕತ್ತಲಲ್ಲಿ ದಾರಿ ತಪ್ಪಿದ ಮನುಷ್ಯನಿಗೆ ಸತ್ಯ ಮತ್ತು ಸದಾಚಾರದ ಬೆಳಕನ್ನು ನೀಡುತ್ತವೆ.

ಬಸವಣ್ಣನವರ “ಎನ್ನ ವಾಮ-ಕ್ಷೇಮ ನಿಮ್ಮದಯ್ಯಾ…” ವಚನವನ್ನು ಉಲ್ಲೇಖಿಸಿ, ಜೀವನದ ಸುಖ-ದುಃಖ, ಲಾಭ-ನಷ್ಟ ಹಾಗೂ ಮಾನ-ಅಪಮಾನಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಯಿಸಿಕೊಳ್ಳಬೇಕೆಂದು ತಿಳಿಸಿ, ಪ್ರತಿದಿನದ ಆರಂಭವನ್ನು ವಚನ ಸ್ಮರಣೆಯೊಂದಿಗೆ ಮಾಡಿದರೆ ಮನಸ್ಸಿಗೆ ಶಾಂತಿ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆ ದೊರೆಯುತ್ತದೆ.

ವಚನಗಳ ಆಚರಣೆಯಿಂದ ಬದುಕು ಹೇಗೆ ಪರಿವರ್ತನೆಗೊಳ್ಳುತ್ತದೆ ಎಂಬುದನ್ನು ವಿವರಿಸಲು ಒಂದು ಸ್ಫೂರ್ತಿದಾಯಕ ಪ್ರಸಂಗವನ್ನು ನಿರೂಪಿಸಿ, ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ದಿನದಿಂದಲೇ ನಿಜವಾದ ಜೀವನ ಆರಂಭವಾಗುತ್ತದೆ ಎಂಬ ಸಂದೇಶವನ್ನು ಬಸವಣ್ಣನವರ ಹಾಗೂ ಇತರ ಶರಣರ ವಚನಗಳ ಮೂಲಕ ಮನದಟ್ಟುಗೊಳಿಸಲಾಯಿತು.

ಇದೇ ವೇಳೆ, ಆಸೆ ಮತ್ತು ಅಶಾಂತಿಯ ಕುರಿತು ಹಾಸ್ಯಮಯ ಪ್ರಸಂಗವೊಂದನ್ನು ಉಲ್ಲೇಖಿಸಿ, ಸಂಪತ್ತಿನ ಹಿಂದೆ ಓಡುವುದಕ್ಕಿಂತ ಸಂತೃಪ್ತಿಯ ಹಿಂದೆ ನಡೆಯುವುದು ಶ್ರೇಷ್ಠ ಎಂಬ ಸಂದೇಶವನ್ನು ಶರಣ ಮೋಳಿಗೆ ಮಾರಯ್ಯನವರ ವಚನದ ಮೂಲಕ ವಿವರಿಸಿ, ಮನುಷ್ಯನೊಂದಿಗೆ ಅಂತಿಮವಾಗಿ ಉಳಿಯುವುದು ಧರ್ಮ, ದಯೆ, ಕಾಯಕ ಮತ್ತು ಸತ್ಕಾರ್ಯಗಳಷ್ಟೇ ಎಂದು ತಿಳಿಸಿದರು.

ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಧನೆಗಳ ನಡುವೆಯೂ ಖಿನ್ನತೆ, ಒತ್ತಡ, ಆತಂಕ ಮತ್ತು ಏಕಾಂತದಂತಹ ಸಮಸ್ಯೆಗಳು ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು ಈ ಸಂದರ್ಭದಲ್ಲಿ ಅಕ್ಕಮಹಾದೇವಿಯವರ “ಹೆದರದಿರು ಮನವೆ, ಬೆದರದಿರು ತನುವೆ” ಎಂಬ ವಚನವನ್ನು ಉಲ್ಲೇಖಿಸಿ, ಸತ್ಯ ಮತ್ತು ಭಕ್ತಿಯ ಮಾರ್ಗದಲ್ಲಿ ನಡೆಯುವವರಿಗೆ ಭಯವಿಲ್ಲ ಹಾಗೂ ನೆಮ್ಮದಿ ಸದಾ ಜೊತೆಯಾಗಿರುತ್ತದೆ ಎಂದು ತಿಳಿಸಿದರು.

“ತಂತ್ರಜ್ಞಾನವು ವೇಗವನ್ನು ನೀಡಬಹುದು; ಆದರೆ ದಿಕ್ಕನ್ನು ನೀಡುವುದು ಮೌಲ್ಯಗಳು. ಕೃತಕ ಬುದ್ಧಿಮತ್ತೆ ಉತ್ತರಗಳನ್ನು ನೀಡಬಹುದು; ಆದರೆ ಬದುಕಿನ ಅರ್ಥವನ್ನು ನೀಡುವುದು ಶರಣರ ಚಿಂತನೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಶರಣರ ವಚನಗಳು ಪೂಜಾ ಕೋಣೆಯಲ್ಲಿರುವ ಪುಸ್ತಕಗಳಾಗದೆ, ಪ್ರತಿಯೊಬ್ಬರ ಜೀವನದಲ್ಲಿ ಆಚರಣೆಯ ಕೈಪಿಡಿಗಳಾಗಬೇಕು. ಪ್ರತಿದಿನ ಕನಿಷ್ಠ ಒಂದು ವಚನ ಓದಿ ಅದರಂತೆ ನಡೆಯುವ ಸಂಕಲ್ಪವನ್ನು ಮಾಡಬೇಕೆಂದು ಕರೆ ನೀಡಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶಿವಪುತ್ರಪ್ಪ ಕೃಷ್ಣಮೂರ್ತಿ ವಚನ ಪ್ರಾರ್ಥನೆ ಮಾಡಿದರು. ಶ್ರೀಶೈಲ ಜತ್ತಿ ಉಪಸ್ಥಿತರಿದ್ದು, ಮಲ್ಲಪ್ಪ ತಲ್ಲೂರ ಸ್ವಾಗತಿಸಿದರು. ವೀರೇಶ ಚಕ್ರಸಾಲಿ ಶರಣು ಸಮರ್ಪಣೆ ಮಾಡಿದರು. ಅಥಣಿ ಸದಾಶಿವ ಶರಣಪ್ಪ ಗುಡಗಂಟಿ ಕಾರ್ಯಕ್ರಮ ಆಯೋಜಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Ky8rMVgQct2AZDAbXDYq2U

Share This Article
Leave a comment

Leave a Reply

Your email address will not be published. Required fields are marked *