ವಚನ ವ್ಯಾಖ್ಯಾನ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಮೈಸೂರು:
ಹೆಣ್ಣು ಮಕ್ಕಳ ಸ್ವಾಭಿಮಾನದ ಪ್ರತೀಕವಾದ ಅಕ್ಕ, ಸ್ತ್ರೀವಾದಿ ಚಳುವಳಿಯ ನಿಜವಾದ ಪ್ರತಿಪಾದಕಿ ಹಾಗೂ ಬೆಳಕ ತೊಟ್ಟು ಬಯಲುಟ್ಟು ಬೆಳೆದ ವೈರಾಗ್ಯನಿಧಿ, ಅರಿವಿನ ಆರದ ಜ್ಯೋತಿ ಎಂದು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಮೈಸೂರು ನಗರ ಘಟಕದ ಅಧ್ಯಕ್ಷರು, ಕವಿಗಳಾದ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

‘ಅಕ್ಕನ ವಚನಗಳಲ್ಲಿ ಜೀವನ ಮೌಲ್ಯಗಳು’ ಎಂಬ ವಿಷಯ ಕುರಿತು, ಮೈಸೂರಿನ ದಟ್ಟಗಳ್ಳಿಯಲ್ಲಿರುವ ಡಿ. ದೇವರಾಜ ಅರಸು ವೃತ್ತಿಪರ ಬಾಲಕಿಯರ ವಸತಿ ನಿಲಯದಲ್ಲಿ ನಡೆದ ಪರಿಷತ್ತಿನ ದತ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಅಕ್ಕನ ವಚನಗಳಲ್ಲಿ ಜೀವನ ಮೌಲ್ಯಗಳೆ ತುಂಬಿ ತುಳುಕಾಡುತ್ತಿದ್ದು, ಸ್ವಾಭಿಮಾನ, ಆತ್ಮವಿಶ್ವಾಸ, ನಿರ್ಮೋಹ, ಪ್ರಾಮಾಣಿಕತೆ, ಸಮರ್ಪಣೆಗಳಂತಹ ಅದ್ಭುತವಾದ ಆದರ್ಶಗಳು ಅಲ್ಲಿವೆ. ಸ್ವತಃ ಅಲ್ಲಮನೇ ಹೇಳುವಂತೆ, ಮಾಯೆ ಮುಟ್ಟದ; ಮರಹು ಸೋಕದ, ಕಾಮ ಕೆಡಿಸದ ಅವಳ ಜ್ಞಾನ ಘನ, ವಿರತಿ ಘನ, ಅವಳನ್ನು ಪಡೆದ ಜಗತ್ತೇ ಪಾವನ ಎಂದರು.

ಲೇಖಕಿ ಪ್ರೊ. ಹುಸ್ಕೂರು ಅಂಬಿಕಾ ಶಿವನಂಜಪ್ಪ ಸಸಿಗೆ ನೀರೆರೆವ ಮೂಲಕ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದರು.
ನಿಲಯ ಪಾಲಕಿ ರೇಖಾದೇವಿ ಎಂ. ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಚನ ನಿರ್ವಚನ ಸ್ಪರ್ಧೆಯಲ್ಲಿಯ ವಿಜೇತ ವಿದ್ಯಾರ್ಥಿಗಳಿಗೆ ನಗದು ಹಾಗೂ ಪುಸ್ತಕ ಬಹುಮಾನ ವಿತರಿಸಿದರು.

ದತ್ತಿ ದಾನಿಗಳಾದ ಕೆ.ಎನ್. ರಾಜೇಂದ್ರಸ್ವಾಮಿ, ಬಿ.ಎನ್. ನಂದೀಶ್ವರ, ಡಾ. ಮುದ್ದುಮಲ್ಲೇಶ, ಡಾ. ಲೋಕೇಶಪ್ಪ, ಜಗದೀಶ ಬಿ. ಚಿಕ್ಕಮಠ, ವೀಣಾ ನಂದೀಶ, ಶ್ರುತಿ ಮೊದಲಾದವರು ಉಪಸ್ಥಿತರಿದ್ದರು.
