ಜೂನ್ 28 ಬಸವಕಲ್ಯಾಣ ಚಲೋ
ಕಲಬುರಗಿ:
ಬಸವಕಲ್ಯಾಣದಲ್ಲಿ ಜೂನ್ 28 ನಡೆಸಲು ಉದ್ದೇಶಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶ ನಡೆಯಲು ಬಿಡುವುದಿಲ್ಲ.
ಸಮಾಜದಲ್ಲಿ ವಿಷ ಬೀಜ ಬಿತ್ತುವ ಇಂತಹ ಕೋಮುವಾದಿ ಸಮಾವೇಶಕ್ಕೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ಇಲ್ಲಿನ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಠ್ರೀಯ ಬಸವದಳ, ಬಸವ ಕೇಂದ್ರ ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮುಖಂಡರು ಆಗ್ರಹಿಸಿದರು.

ಶನಿವಾರ ನಗರದ ಬಸವ ಮಂಟಪದಲ್ಲಿ ಸಭೆ ಸೇರಿ, 28ರಂದು ಬಸವಕಲ್ಯಾಣ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದರು.
ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕನ್ನೇರಿ ಸ್ವಾಮಿಗೆ ಪ್ರವೇಶ ಹಾಗೂ ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಅನುಮತಿ ನೀಡಬಾರದು ಎಂದು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ಸೂಚಿಸಲಾಯಿತು.
ಸೋಮವಾರ ಕಲಬುರಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಎಲ್ಲ ತಾಲ್ಲೂಕು ಕೇಂದ್ರಗಳಿಗೆ ಸಂಚರಿಸಿ ಸಭೆ ಮಾಡಿ ಬಸವಕಲ್ಯಾಣ ಚಲೋ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಲಾಗುವುದು ಎಂದರು.
ಈಗಾಗಲೇ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದ್ದು, ಜೂನ್ 23ರಂದು ಬಸವಕಲ್ಯಾಣದಲ್ಲಿ ನಡೆಯುವ ಅಂತಿಮ ಸಭೆಯಲ್ಲಿ ಭಾಗವಹಿಸಿ ಸಭೆಯ ನಿರ್ದೇಶನದಂತೆ ಕನ್ನೇರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಹಿಂದೂ ಸಮಾವೇಶ ವಿರೋಧಿಸಿ ಸಮಾವೇಶ ನಡೆಸಲಾಗುವುದು ಎಂದು ಆರ್.ಜಿ. ಶೆಟಗಾರ ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಆರ್.ಜಿ. ಶೆಟಗಾರ, ಪ್ರಧಾನ ಕಾರ್ಯದರ್ಶಿ ಅಶೋಕ ಘೂಳಿ, ರವೀಂದ್ರ ಶಾಬಾದಿ, ಶಿವಶರಣಪ್ಪ ದೇಗಾಂವ, ಅಯ್ಯಣ್ಣಗೌಡ ಪಾಟೀಲ, ಶಾಂತಪ್ಪ ಪಾಟೀಲ, ಓಂಕಾರಪ್ಪ ಚೊಂಡಿ, ಹಣಮಂತರಾವ ಪಾಟೀಲ ಕುಸನೂರ ಸೇರಿದಂತೆ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.
