‘ಯೋಗ ಸಂಸ್ಕೃತಿ ಜಗತ್ತಿಗೆ ಭಾರತ ನೀಡಿದ ಅಪೂರ್ವ ಕೊಡುಗೆ’

ನಾಗನೂರು ರುದ್ರಾಕ್ಷಿಮಠದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಬೆಳಗಾವಿ:

ಇಡೀ ವಿಶ್ವಕ್ಕೆ ಭಾರತ ನೀಡಿದ ಅತ್ಯಂತ ಅಮೂಲ್ಯವಾದ ಕೊಡುಗೆಗಳಲ್ಲಿ ಯೋಗ ಮತ್ತು ಅಧ್ಯಾತ್ಮ ಸಂಸ್ಕೃತಿಗೆ ವಿಶಿಷ್ಟ ಸ್ಥಾನವಿದೆ. ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ; ಅದು ಮನುಷ್ಯನ ದೇಹ, ಮನಸ್ಸು ಮತ್ತು ಆತ್ಮವನ್ನು ಸಮನ್ವಯಗೊಳಿಸುವ ಜೀವನ ಪದ್ಧತಿಯಾಗಿದೆ ಎಂದು ಪ್ರೊ. ಅಶೋಕ ಹಂಚಲಿ ಹೇಳಿದರು.

ನಾಗನೂರು ರುದ್ರಾಕ್ಷಿಮಠದ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಇಂದು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯೋಗ ದಿನಾಚರಣೆಯನ್ನು ಆಚರಿಸುತ್ತಿರುವುದು ಭಾರತದ ಯೋಗ ಪರಂಪರೆಯ ಜಾಗತಿಕ ಮಹತ್ವಕ್ಕೆ ಸಾಕ್ಷಿಯಾಗಿದೆ ಎಂದರು.

ಪಾಶ್ಚಾತ್ಯ ಜಗತ್ತು ಹೆಚ್ಚಾಗಿ ಭೌತಿಕ ಸುಖ ಮತ್ತು ಭೋಗ ಸಂಸ್ಕೃತಿಯ ಕಡೆಗೆ ಸಾಗುತ್ತಿದ್ದರೆ, ಭಾರತವು ಯೋಗ, ಧ್ಯಾನ ಮತ್ತು ಅಧ್ಯಾತ್ಮದ ಮೂಲಕ ಮಾನವ ಜೀವನಕ್ಕೆ ಶಾಂತಿ ಮತ್ತು ನೆಮ್ಮದಿಯ ಮಾರ್ಗವನ್ನು ತೋರಿಸುತ್ತಿದೆ. ಭಾರತದ ಆಧ್ಯಾತ್ಮಿಕ ಪರಂಪರೆಯ ಬಗ್ಗೆ ಅರ್ನಾಲ್ಡ್ ಟಾಯ್ನಬಿ, ವಿಲ್ ಡ್ಯೂರಾಂಟ್, ಮ್ಯಾಕ್ಸ್ ಮುಲ್ಲರ್ ಮೊದಲಾದ ವಿದ್ವಾಂಸರು ಅಪಾರ ಗೌರವದಿಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

ಮಹಾನ್ ಚಿಂತಕ ಓಶೋ ಅವರು “ಭಾರತ ಕೇವಲ ಒಂದು ದೇಶವಲ್ಲ, ಅದು ಕೋಟ್ಯಂತರ ಜನರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಅಸ್ತಿತ್ವವಾಗಿದೆ”ಎಂದು ಹೇಳಿರುವುದನ್ನು ಸ್ಮರಿಸಿದ ಪ್ರೊ. ಹಂಚಲಿ, ಭಾರತ ನಮ್ಮ ಮಾತೃಭೂಮಿಯಾಗಿದ್ದು, ಅದರ ಬಗ್ಗೆ ಪ್ರತಿಯೊಬ್ಬರಲ್ಲೂ ಭಕ್ತಿ, ಶ್ರದ್ಧೆ ಮತ್ತು ಗೌರವದ ಭಾವನೆ ಇರಬೇಕು ಎಂದರು.

ಸುಮಾರು ಎರಡು ಸಾವಿರ ವರ್ಷಗಳ ಹಿಂದೆಯೇ ಪತಂಜಲಿ ಮಹರ್ಷಿಗಳು ಯೋಗಸೂತ್ರಗಳ ಮೂಲಕ ಮಾನವಕುಲಕ್ಕೆ ಅಮೂಲ್ಯವಾದ ಮಾರ್ಗದರ್ಶನ ನೀಡಿದ್ದಾರೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಧ್ಯಾನ ಮೊದಲಾದ ಅಷ್ಟಾಂಗ ಯೋಗ ಮಾರ್ಗವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸಮತೋಲನವೂ ದೊರೆಯುತ್ತದೆ. ಯೋಗಯುಕ್ತ ಜೀವನವು ರೋಗಮುಕ್ತ ಬದುಕಿಗೆ ದಾರಿ ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹಿಮಾಲಯನ್ ಧ್ಯಾನಯೋಗ ಗುರುಗಳಾದ ನಿರಂಜನ ಮಹಾಸ್ವಾಮಿಗಳು ಯೋಗದ ಪ್ರಾತ್ಯಕ್ಷಿಕೆ ನೀಡಿದರು. ಧ್ಯಾನಯೋಗ, ಸೂರ್ಯನಮಸ್ಕಾರ, ವಿವಿಧ ಆಸನಗಳು ಮತ್ತು ಪ್ರಾಣಾಯಾಮಗಳ ಅಭ್ಯಾಸದಿಂದ ದೇಹದ ಆರೋಗ್ಯದ ಜೊತೆಗೆ ಮನಸ್ಸಿಗೆ ಶಾಂತಿ ದೊರೆಯುತ್ತದೆ. ಯೋಗವು ಮನುಷ್ಯನೊಳಗಿನ ರಾಗ-ದ್ವೇಷಗಳನ್ನು ದೂರ ಮಾಡಿ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಡಾ. ಅಲ್ಲಮಪ್ರಭು ಸ್ವಾಮಿಗಳು ಮಾತನಾಡಿ, ಭಾರತೀಯ ಯೋಗ ಪರಂಪರೆಯಲ್ಲಿ ಅನೇಕ ವಿಶಿಷ್ಟ ಸಾಧನಾ ಮಾರ್ಗಗಳಿವೆ. ಅವುಗಳಲ್ಲಿ ಶಿವಯೋಗವೂ ಮಹತ್ವದ ಸ್ಥಾನ ಹೊಂದಿದೆ. ೧೨ನೇ ಶತಮಾನದ ಬಸವಾದಿ ಶಿವಶರಣರು ಲಿಂಗಪೂಜೆಯ ಮೂಲಕ ಶಿವಯೋಗದ ಸಂದೇಶವನ್ನು ಸಾರಿದರು. ಶಿವಯೋಗ-ಲಿಂಗಾಂಗಯೋಗವು ಮನುಷ್ಯನಿಗೆ ಆಂತರಿಕ ಶಾಂತಿ, ನೆಮ್ಮದಿ ಮತ್ತು ಆರೋಗ್ಯವನ್ನು ನೀಡುವ ಶ್ರೇಷ್ಠ ಸಾಧನಾ ಮಾರ್ಗಗಳಾಗಿವೆ ಎಂದರು.

ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ರಾಜಶೇಖರ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಅರವಿಂದ ಪರುಶೆಟ್ಟಿ, ಅಶೋಕ ಮಳಗಲಿ, ಶಂಭು ಹಿರೇಮಠ, ಡಾ. ಬಿ. ಆರ್. ಪಟಗುಂದಿ, ಚಂದ್ರಗೌಡ ಪಾಟೀಲ, ಶಿವಲೀಲಾ ಪೂಜಾರ, ಎಮ್.ಎನ್. ಮಠಪತಿ ಸೇರಿದಂತೆ ಹಲವು ಗಣ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *