ಬಸವಕಲ್ಯಾಣ
ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶದ ವಿರುದ್ಧ ಬಸವಕಲ್ಯಾಣದಲ್ಲಿ ಜೂನ್ 28 ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ದಾವಣಗೆರೆಯಿಂದ 15 ಜನರ ಬಸವಭಕ್ತರ ತಂಡ ಮತ್ತೆ ಹೊರಟಿದೆ.
ನಾಳೆ ಸಂಜೆಯ ರೈಲಿನಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ಶರಣ ಸಾಹಿತ್ಯ ಪರಿಷತ್, ವೀರ ಗಣಾಚಾರಿ ಪಡೆ ಮುಂತಾದ ಸಂಘಟನೆಗಳ ಸದಸ್ಯರು ಬಸವ ಕಲ್ಯಾಣಕ್ಕೆ ಹೊರಡಲಿದ್ದಾರೆಂದು ತಿಳಿದು ಬಂದಿದೆ.
“ಒಂದು ವಾರದ ಮುಂಚೆಯೇ ಬಸವ ಕಲ್ಯಾಣಕ್ಕೆ ಹೋಗಲು ಸಿದ್ಧತೆ ಮಾಡಿಕೊಂಡಿದ್ದೆವು. ಭಾಲ್ಕಿ ಸ್ವಾಮೀಜಿ, ಬಸವರಾಜ ಧನ್ನೂರ ಪ್ರತಿಭಟನೆ ರದ್ದು ಪಡಿಸಿದ ಮೇಲೆ ಗೊಂದಲವಾಯಿತು.
ನಂತರ ಪೂಜ್ಯ ಕೋರಣೇಶ್ವರ ಸ್ವಾಮೀಜಿ, ಮೀನಾಕ್ಷಿ ಬಾಳಿ ಅವರು ಹೋರಾಟ ನಿಂತಿಲ್ಲ ಎಂದು ಕರೆ ನೀಡಿದ ಮೇಲೆ ಮತ್ತೆ ಹೋಗಲು ನಿರ್ಧರಿಸಿದೆವು,” ಎಂದು ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ವಿಶ್ವೇಶ್ವರಯ್ಯ ಬಸವಬಳ್ಳಿ,” ಹೇಳಿದರು.
“ಭಾಲ್ಕಿ ಸ್ವಾಮೀಜಿ, ಬಸವರಾಜ ಧನ್ನೂರ ಪ್ರತಿಭಟನೆ ರದ್ದು ಪಡಿಸಿದ್ದು ಸರಿಯಲ್ಲ. ರಾಜ್ಯ ಮಟ್ಟದ ಪ್ರತಿಭಟನೆಗೆ ಕರೆ ನೀಡಿದ ಮೇಲೆ ರಾಜ್ಯ ಮಟ್ಟದಲ್ಲಿಯೇ ಸಭೆ ನಡೆಸಿ ನಿರ್ಣಯಿಸಬೇಕಿತ್ತು, ಇವರು ಏಕಾಏಕಿ ಆ ನಿರ್ಣಯ ತೆಗೆದುಕೊಂಡಿದ್ದರ ಬಗ್ಗೆ ಎಲ್ಲರಲ್ಲೂ ಅಸಮಾಧಾನವಿದೆ.
ನಮ್ಮ ಉದ್ದೇಶ ಇದ್ದಿದ್ದು ಕನ್ನೇರಿ ಸ್ವಾಮಿ ಬಸವ ಕಲ್ಯಾಣಕ್ಕೆ ಬರಬಾರದು ಎನ್ನುವುದು. ಅವರನ್ನು ಮೌನವಾಗಿ ಕೂರಿಸಬೇಕೆಂದಲ್ಲ. ಕೋರ್ಟು ಕೂಡ ಪ್ರತಿಭಟನೆ ಮಾಡಬೇಡಿ ಎಂದು ಹೇಳಿಲ್ಲ.
ಹಿಂದಿನ ಸಿರಿಗೆರೆ ಗುರುಗಳು,”ಯಾವ ಸಮಾಜದ ಮುಖಂಡರು ಸ್ವಾರ್ಥ, ಉದಾಸೀನ, ಲಂಚಕ್ಕೆ ಬಲಿಯಾಗುತ್ತಾರೋ ಅಂತಹ ಸಮಾಜ ಮುಂದುವರೆಯುವುದಿಲ್ಲ ಎಂದು ಹೇಳುತ್ತಿದ್ದರು. ಆ ಮಾತು ನೆನಪಾಗಿ ಮತ್ತೆ ಬಸವಕಲ್ಯಾಣಕ್ಕೆ ಹೊರೆಟೆವು, ಎಂದು ಹೇಳಿದರು.
