ತಾತ್ವಿಕ ಸಂಘರ್ಷಕ್ಕೆ ಸನಾತನಿಗಳು ಬಹಿರಂಗವಾಗಿ ಕರೆಕೊಟ್ಟಿದ್ದಾರೆ

ಬಸವ ಸಂಘಟನೆಗಳು, ಲಿಂಗಾಯತ ಮಠಗಳು ರಚನಾತ್ಮಕ ಕಾರ್ಯಕ್ರಮ ರೂಪಿಸಲಿ

ಬಸವ ಕಲ್ಯಾಣ

ಕಲ್ಯಾಣ ಬಸವಾದಿ ಶರಣರ ನೆಲವು “ಅಯ್ಯಾ ಎಂದರೆ ಸ್ವರ್ಗ ಎಲವೋ ಎಂದರೆ ನರಕ” “ನುಡಿದಡೆ ಮುತ್ತಿನ ಹಾರದಂತಿರಬೇಕು” ಎಂದು ಇಡೀ ಮನುಕುಲಕ್ಕೆ ನೈತಿಕ ಮತ್ತು ವ್ಯಕ್ತಿ ಗೌರವನ್ನು ಎತ್ತಿ ಹಿಡಿದ ಪುಣ್ಯಭೂಮಿಯಾಗಿದೆ.

ಜೂನ್ 28ಕ್ಕೆ ಕನೇರಿ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶದ ವಿರುದ್ಧ ಮತ್ತು ಕನೇರಿ ಸ್ವಾಮಿಗಳ ವ್ಯಕ್ತಿ ನಿಂದನೆ ವಿರುದ್ಧ ಹೋರಾಟ, ವಾದ-ವಿವಾದಗಳು ನಡೆದು ಅಂತಿಮವಾಗಿ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿತು.

ವಾದ ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ಕನೇರಿ ಸ್ವಾಮಿಯ ಹರಕು ಬಾಯಿಗೆ ಬೀಗ ಹಾಕಿದೆ. ಅಲ್ಲಿಗೆ ಹೈಕೋರ್ಟ್ ನ್ಯಾಯಾಂಗ ವ್ಯವಸ್ಥೆ ವಚನ ಮತ್ತು ಭಾರತೀಯ ಸಂವಿಧಾನದ ಆಶಯಗಳನ್ನು ಎತ್ತಿಹಿಡಿದು ಎಲ್ಲೇ ಮೀರಿ ಮಾತಾಡುವ ಹಿಂದೂ ಸಂಘಟಕರಿಗೂ ಮತ್ತೊಮ್ಮೆ ಪಾಠ ಕಲಿಸಿದೆ.

ಆ ಮೂಲಕ ವೈಯುಕ್ತಿಕ ನಿಂದನೆ ಹಾಗೂ ತಾತ್ವಿಕ ಚಿಂತನೆಯ ಆತ್ಮಾವಲೋಕನಕ್ಕೆ ಅನುವು ಮಾಡಿಕೊಟ್ಟಂತಾಗಿದೆ.

ಇಲ್ಲಿ ಯಾರಿಗೆ ಸೋಲು, ಯಾರಿಗೆ ಗೆಲುವು ಎಂಬ ಪ್ರಶ್ನೆ ಇಲ್ಲ. ರಾಜಕೀಯ ಹಿನ್ನೆಲೆ ಮತ್ತು ದುರುದ್ಧೇಶ ಹೊಂದಿದ ವ್ಯಕ್ತಿಗಳು ತಾವು ಗೆದ್ದೆವು ಎಂದು ಪಠಾಕಿ ಸಿಡಿಸಿ ಸಂಭ್ರಮಿಸಿದರೆ ಅವರ ಅಜ್ಞಾನಕ್ಕೆ ಮರುಗಬೇಕು ಅಷ್ಟೆ.

ಹಾಗೆ ನೋಡಿದರೆ ಎದುರಾಳಿಗಳಿಗೆ ಕನೇರಿ ಸ್ವಾಮಿಗಳು ಕಲ್ಯಾಣಕ್ಕೆ ಬರಲು ಅನುಮತಿ ಸಿಕ್ಕಿತು ಎಂಬ ಸಂಭ್ರಮವಾದರೆ; ಈ ಕಡೆಯವರಿಗೆ ಬಂದರೂ ಏನು ಪ್ರಯೋಜನ ‘ಆತ್ಮವಿಲ್ಲದ ದೇಹದಂತೆ’ ವೇದಿಕೆಯಲ್ಲಿ ಮಾತಾಡಲು ಅವಕಾಶವಿಲ್ಲವಲ್ಲ ಎಂಬ ಸಂಭ್ರಮ.

ಅದೇನೇ ಇರಲಿ ಹೈಕೋರ್ಟಿನ ನಿರ್ಣಯದ ಹಿಂದೆ ಒಂದು ದೊಡ್ಡ ಪಾಠ ಇದೆ. ಅದನ್ನು ನಾವೀರ್ವರೂ ಅರ್ಥೈಸಿಕೊಳ್ಳಬೇಕು.

ಹಲವಾರು ಸಿದ್ಧಾಂತ, ಧರ್ಮಗಳ ಆಗರವಾದ ಈ ಭಾರತ ದೇಶದಲ್ಲಿ ಒಂದಿಲ್ಲ ಒಂದು ರೀತಿಯಲ್ಲಿ ಧಾರ್ಮಿಕ, ತಾತ್ವಿಕ, ಸೈದ್ಧಾಂತಿಕ ಚರ್ಚೆಗಳು ನಡೆಯುತ್ತಲಿವೆ. ಅವು ಸಂವಿಧಾನದ ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕೇ ವಿನಾ ವೈಯುಕ್ತಿಕ ನಿಂದನೆಗೊಳಗಾಗಿ ಎಲ್ಲೇ ಮೀರಬಾರದು ಮತ್ತು ವ್ಯಕ್ತಿ ಸ್ವಾತಂತ್ರ ದುರುಪಯೋಗವಾಗಬಾರದು ಎಂಬುದನ್ನು ಸೂಚ್ಯವಾಗಿ ತಿಳಿಸಿ, ಈ ಪ್ರಕರಣದಲ್ಲಿ ನ್ಯಾಯಾಂಗವು, ಕನೇರಿ ಸ್ವಾಮಿಗೆ ವ್ಯಕ್ತಿ ನಿಂದನೆ ಮಾಡದ ಹಾಗೆ ಅವರಿಗೆ ಮಾತಾಡಬಾರದೆಂದು ನಿರ್ಬಂಧನೆ ಹೇರಿದೆ.

ಆ ಮೂಲಕ ಇಬ್ಬರಿಗೂ ಹಾಗೆ ಪಾಲಿಸುವಂತೆ ಪರೋಕ್ಷವಾಗಿ ತೀರ್ಪುಕೊಟ್ಟಿದೆ. ಅದಕ್ಕಾಗಿ ನ್ಯಾಯಾಲಯಕ್ಕೆ ಅಭಿನಂದಿಸುತ್ತೇವೆ.

ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ನಮ್ಮ ತಾತ್ವಿಕ ವಿರೋಧ ಇದ್ದೇ ಇದೆ. ಯಾವ ವೈದಿಕ ಸನಾತನ ವ್ಯವಸ್ಥೆ ಬಸವಾದಿ ಪ್ರಮಥರ ಸಮಾನತೆಯ ಆಶಯಗಳಿಗೆ ಕೊಳ್ಳಿ ಇಟ್ಟು ಅಂದು ಕೇಕೆ ಹಾಕಿತೋ, ಅದೇ ಸನಾತನಿಗಳು ಈಗ ಬಸವಣ್ಣನವರ ಹೆಸರನ್ನು ಹಿಂದೂ ಶಬ್ದಕ್ಕೆ ಜೋಡಿಸಿ ಕಾರ್ಯಕ್ರಮ ಮಾಡುತ್ತಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರ ಇರುವದಂತೂ ಸ್ಪಷ್ಟ.

ಈ ಷಡ್ಯಂತ್ರವನ್ನು ನಾವು ಸಂವಿಧಾನದ ನ್ಯಾಯಲಯದಲ್ಲಿ ತೆಗೆದುಕೊಂಡು ಹೋಗದೆ ಜನತಾ ನ್ಯಾಯಾಲಯದಲ್ಲಿ ಗೊತ್ತು ಮಾಡಬೇಕಾಗಿದೆ. ಹೀಗೆ ಮಾಡಲು ನಾವು ಎರಡು ಮಾರ್ಗವನ್ನು ಅನುಸರಿಸಬೇಕಾಗಿದೆ‌.

ಒಂದು ಅವರು ಮಾಡುವ ಈ ಕಲಬೆರಕೆ ಕಾರ್ಯಕ್ರಮಗಳ ವಿರುದ್ಧ ಅಹಿಂಸಾತ್ಮಕ ಹೋರಾಟ ಮಾಡುವುದು. ಇನ್ನೊಂದು ನಿರಂತರ ನಮ್ಮ ಜನಗಳಿಗೆ, ಯುವ ಜನತೆಗೆ ಶಿಬಿರಗಳ ಮೂಲಕ ಈ ತಾತ್ವಿಕ ವ್ಯತ್ಯಾಸ ತಿಳಿಸುವುದು.

ಈ ನಿಟ್ಟಿನಲ್ಲಿ ಪೂಜ್ಯ ಶ್ರೀ ಜಗದ್ಗುರು ಮಾತೆ ಮಹಾದೇವಿಯವರ ಚಿಂತನಾಕ್ರಮ ಮತ್ತು ಹೋರಾಟದ ದಾರಿಯನ್ನು ಮಾದರಿಯಾಗಿಟ್ಟುಕೊಂಡು ಬಸವಪರ ಸಂಘಟನೆಗಳು ಮತ್ತು ಲಿಂಗಾಯತ ಮಠಗಳು ಒಗ್ಗಟ್ಟಾಗಿ ಒಂದು ಕಡೆ ಸೇರಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.

ಇಂದೆಂದಿಗಿಂತಲೂ ಇಂದು ತಾತ್ವಿಕ ಸಂಘರ್ಷಕ್ಕೆ ಸನಾತನಿಗಳು ಬಹಿರಂಗವಾಗಿ ಕರೆಕೊಟ್ಟಿದ್ದಾರೆ. ಇದನ್ನು ಸವಲಾಗಿ ಸ್ವೀಕರಿಸಿ ನಮ್ಮ ಲಿಂಗಾಯತ ಧರ್ಮದ ಸೈದ್ಧಾಂತಿಕ ನಿಲುವನ್ನು ಗಟ್ಟಿಗೊಳಿಸಿಕೊಂಡು ತಾತ್ವಿಕವಾಗಿ ಅವರನ್ನು ಗೆಲ್ಲಬೇಕಾಗಿದೆ. ಕೋಮುಭಾವನೆ ಇಟ್ಟುಕೊಂಡು ಸನಾತನ ಎಂಬ ‘ಡೆಡ್ ಸೀ’ ಸತ್ತ ಸಮುದ್ರದಲ್ಲಿ ಈಜಾಡುತ್ತಿರುವ ನಮ್ಮ ಲಿಂಗಾಯತ ಯುವಕರನ್ನು ‘ಘರ್ ವಾಪಾಸಿ’ ಮಾಡಬೇಕಾಗಿದೆ.

ಇಂತಹ ಚಿಂತನೆಗೆ ಅಥವಾ ಆತ್ಮಾವಲೋಕನ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯದ ತೀರ್ಪು ನಮಗೆ ಸಹಕಾರಿಯಾಗಿದೆ.

ಭಾರತ ದೇಶದ ಜನ ಮತ್ತು ದೇಶದ ಧರ್ಮಗಳು ಸಂವಿಧಾನದ ಚೌಕಟ್ಟನ್ನು ಮೀರಬಾರದು ಜೊತೆಗೆ ಸಂವಿಧಾನಕ್ಕೆ ಧಕ್ಕೆ ತರುವಂತಹ ಉಗ್ರ ಚಟುವಟಿಕೆಗಳನ್ನು ಮಾಡಬಾರದು. ಆದರೆ ವೈದಿಕ ಸನಾತನ ಧರ್ಮ ಮತ್ತು ಇಸ್ಲಾಂ ಧರ್ಮ ಇವುಗಳು ತಮ್ಮ ಧರ್ಮವೇ ದೇಶಧರ್ಮವಾಗಬೇಕೆಂಬುವುದು, ತಮ್ಮ ಧರ್ಮದ ಆಚರಣೆಗಳನ್ನೇ ಎಲ್ಲರೂ ಒಪ್ಪಬೇಕೆಂದು ಒತ್ತಾಯಪೂರ್ವಕವಾಗಿ ಹೇರುವುದು ಸರಿಯಲ್ಲ.

ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುವುದು ನಮ್ಮ ದೇಶದ ನಿಲುವು. ಅದನ್ನು ಈ ಮಣ್ಣಿನ ನೆಲದ ಧರ್ಮಗಳು ಒಪ್ಪಿಕೊಳ್ಳಬೇಕು. ಸನಾತನ ಧರ್ಮವು ಜೈನ್, ಬೌದ್ಧ, ಸಿಖ್ ಧರ್ಮ ಒಪ್ಪಿಕೊಂಡಂತೆ ಲಿಂಗಾಯತ ಧರ್ಮವನ್ನು ಒಪ್ಪಿಕೊಳ್ಳಬೇಕು. ಆ ಧರ್ಮಗಳ ಇಲ್ಲದ ತಕರಾರು ಬಸವಪ್ರಣೀತ ಲಿಂಗಾಯತ ಧರ್ಮದ ಮೇಲೆ ಏಕೆ? ಎಂಬ ಪ್ರಶ್ನೆಯನ್ನು ಲಿಂಗಾಯತ ಧರ್ಮಿಯರು ಕೇಳುವಂತಾಗಬೇಕು ಮತ್ತು ನಮ್ಮ ಅಸ್ಮಿತೆಗಾಗಿ ನಿರಂತರ ತಾತ್ವಿಕ ಹೋರಾಟಕ್ಕೆ ಅಣಿಯಾಗಬೇಕು.

ನಾವು ಸನಾತನ ಧರ್ಮದ ವ್ಯಕ್ತಿಗಳ ವಿರುದ್ಧ ಹೋರಾಟಕ್ಕೆ ಅಷ್ಟೊಂದು ಮಹತ್ವ ಕೊಡದೆ, ಸನಾತನ ಧರ್ಮದ ವರ್ಣಾಶ್ರಮ ಪದ್ಧತಿ ಮತ್ತು ಅವರ ಲಿಂಗಾಯತ ಧರ್ಮವನ್ನು ಹತ್ತಿಕ್ಕುವ ನೀತಿ ವಿರುದ್ಧ ಹೋರಾಡಬೇಕಾಗಿದೆ.

ನಮ್ಮ ಲಿಂಗಾಯತ ಧರ್ಮ ಮಠಾಧೀಶರು ಮತ್ತು ಬಸವಪರ ಸಂಘಟನೆಗಳು ಜಾತಿಯ ವ್ಯವಸ್ಥೆಗೆ ಅಂಟಿಕೊಳ್ಳದೆ, ಕಾಯಕವರ್ಗವನ್ನು, ಹಿಂದುಳಿದ ಮಠಾಧೀಶರನ್ನು ಗೌರವಿಸಿ ಅವರನ್ನು ಅಪ್ಪಿಕೊಂಡು ಸಂಘಟನೆ ಬಲಪಡಿಸಬೇಕು.

ವೈಯಕ್ತಿಕ ಸ್ವಪ್ರತಿಷ್ಠೆ ಬಿಟ್ಟು ಒಗ್ಗಟ್ಟಿನ ಪ್ರದರ್ಶನ ಮಾಡಬೇಕು. ಲಿಂಗಾಯತ ಧರ್ಮ ಎಡಪಂಥವು ಅಲ್ಲ; ಬಲಪಂಥವೂ ಅಲ್ಲ ಇದು ನೇರ ಪಂಥ. ಆದ್ದರಿಂದ ಎಡ-ಬಲ ಪಂಥ ವ್ಯಕ್ತಿಗಳನ್ನು ದೂರವಿಟ್ಟು ಸೈದ್ಧಾಂತಿಕ ನೆಲಗಟ್ಟಿನಲ್ಲಿ ಹೋರಾಟ ದಾರಿಯನ್ನು ಕಂಡುಕೊಳ್ಳುವುದು ಈ ಕಾಲದ ಅನಿವಾರ್ಯತೆ ಇದೆ.

ಒಟ್ಟಾರೆ ನಮ್ಮ ಹೋರಾಟಗಳು, ಎದುರಾಳಿಯ ಹೋರಾಟಗಳು ವ್ಯಕ್ತಿ ಅಥವಾ ವ್ಯಕ್ತಿತ್ವದ ನಿಂದನೆಗಳಿಗೆ ಸೀಮಿತವಾಗದೆ; ತತ್ವ ಮತ್ತು ಸಿದ್ಧಾಂತಗಳ ಅನುಗುಣವಾಗಿ, ಆರೋಗ್ಯಪೂರ್ಣವಾಗಿ ನಡೆಯಬೇಕೆಂಬ ನ್ಯಾಯಾಲಯದ ತೀರ್ಪನ್ನು ನಾನೊಬ್ಬ ಭಾರತದ ಸತ್ಪ್ರಜೆಯಾಗಿ, ಲಿಂಗಾಯತ ಧರ್ಮದ ಹೋರಾಟಗಾರರನಾಗಿ ಒಪ್ಪಿಕೊಳ್ಳುತ್ತೇನೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.