ಕನ್ನೇರಿ ಸ್ವಾಮಿ ಬೆಂಬಲಿಸುವ ಸ್ವಾಮಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ

ಬಸವ ಕಲ್ಯಾಣ

ಕಾವಿ ಧರಿಸಿದರೆ ಸಾಕೆ? ಕಾವಿ ಎಂದರೆ ಕಾಯಕ, ದಾಸೋಹ ಮತ್ತು ಮಾನವೀಯತೆ, ವಿನಯತೆ, ಭಕ್ತಿ ಸುಭಾಷೆಯೇ ನಿಜವಾದ ಸನ್ಯಾಸದ ಅಳತೆ.

ಬಸವಣ್ಣನವರು ಕಟ್ಟಿದ ಶರಣ ಸಂಸ್ಕೃತಿಯು ಸಮಾನತೆ, ಸಹಿಷ್ಣುತೆ, ವಿನಯತೆ, ಸಂವಾದ ಮತ್ತು ಮಾನವೀಯತೆಯ ಮೇಲೆ ನಿಂತಿದೆ. ಕಾವಿ, ವೇಷ, ಅಧಿಕಾರ ಅಥವಾ ಹುದ್ದೆಗಳಿಂದ ಶ್ರೇಷ್ಠತೆ ಸಿಗುವುದಿಲ್ಲ; ವ್ಯಕ್ತಿಯ ನಡೆ, ನುಡಿ ಮತ್ತು ಚಿಂತನೆಯಿಂದಲೇ ಅವನ ಮಹತ್ವ ನಿರ್ಧಾರವಾಗುತ್ತದೆ.

ಆದ್ದರಿಂದ ಒಬ್ಬ ಕಾವಿಧಾರಿ ಸ್ವಾಮೀಜಿ ಮತ್ತೊಬ್ಬ ಕಾವಿಧಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಸಮಾಜದ ಒಂದು ವರ್ಗದ ಭಕ್ತರನ್ನು “ತಾಲಿಬಾನಿಗಳು” ಎಂದು ಕರೆಯುವುದು ಬಸವತತ್ವಕ್ಕೆ ವಿರುದ್ಧವಾದ ನಡೆ.

ಗುರು ಬಸವಣ್ಣನವರು ಯಾರನ್ನೂ ದ್ವೇಷದ ಭಾಷೆಯಲ್ಲಿ ನಿಂದಿಸಲಿಲ್ಲ. ವಿರೋಧಿಗಳನ್ನು ಸಹ ತರ್ಕ, ಅನುಭವ ಮತ್ತು ಮಾನವೀಯತೆಯ ಮೂಲಕ ಎದುರಿಸಿದರು. “ನುಡಿದರೆ ಮುತ್ತಿನ ಹಾರದಂತಿರಬೇಕು” ಎಂಬ ಶರಣರ ಆದರ್ಶವು ಮಾತಿನ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ.

ಇಂತಹ ಸಂದರ್ಭದಲ್ಲಿ ಸಮಾಜದ ಧಾರ್ಮಿಕ ನಾಯಕರಿಂದ ಅವಹೇಳನಕಾರಿ ಪದಗಳು ಹೊರಬರುವುದು ನೋವಿನ ಸಂಗತಿ. ಬಸವ ಭಕ್ತರನ್ನು ಅಥವಾ ಯಾವುದೇ ಸಮುದಾಯದ ಜನರನ್ನು “ತಾಲಿಬಾನಿಗಳು” ಎಂದು ಕರೆಯುವುದು ಕೇವಲ ವ್ಯಕ್ತಿಗಳ ಅವಮಾನವಲ್ಲ; ಅದು ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಕೃತ್ಯವಾಗಿದೆ.

ಭಿನ್ನಾಭಿಪ್ರಾಯಗಳಿದ್ದರೆ ವಿಚಾರಗಳ ಮೂಲಕ ಚರ್ಚಿಸಬಹುದು; ಆದರೆ ಅವಹೇಳನ, ಹೋಲಿಕೆ ಮತ್ತು ದ್ವೇಷದ ಭಾಷೆ ಸಮಾಜದಲ್ಲಿ ವೈಮನಸ್ಸನ್ನು ಹೆಚ್ಚಿಸುತ್ತದೆ. ಇದಕ್ಕಿಂತಲೂ ಹೆಚ್ಚು ಆತಂಕಕಾರಿ ಸಂಗತಿ ಎಂದರೆ, ಇಂತಹ ಹೇಳಿಕೆಗಳನ್ನು ಮಾಡಿದವರೊಂದಿಗೆ ಬಸವಾದಿ ಶರಣರ ಹೆಸರಿನಲ್ಲಿ ನಡೆಯುವ ಸಮಾವೇಶಗಳಲ್ಲಿ ಕೆಲವು ಸ್ವಾಮೀಜಿಗಳು ಯಾವುದೇ ಪ್ರಶ್ನೆ ಇಲ್ಲದೆ ವೇದಿಕೆ ಹಂಚಿಕೊಳ್ಳುವುದು ಅವರ ನೈತಿಕತೆಯನ್ನು ಪ್ರಶ್ನಿಸುವಂತಿದೆ.

ಗುರು ಬಸವಣ್ಣನವರ ತತ್ವಗಳನ್ನು ಪ್ರತಿಪಾದಿಸುವವರು ಮೊದಲಿಗೆ ತತ್ವಕ್ಕೆ ಬದ್ಧರಾಗಬೇಕು. ತತ್ವವನ್ನು ಬದಿಗಿಟ್ಟು ವ್ಯಕ್ತಿ ಅಥವಾ ಅಧಿಕಾರಕ್ಕೆ ಮಣಿಯುವುದು ಶರಣ ಸಂಸ್ಕೃತಿಗೆ ಸಲ್ಲದು. ಬಸವಣ್ಣನವರು ಹೇಳುವಂತೆ: “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ.” ಹುಸಿ ಆರೋಪ, ಅವಹೇಳನ ಮತ್ತು ಸಮಾಜವನ್ನು ವಿಭಜಿಸುವ ಮಾತುಗಳು ಈ ವಚನದ ಆತ್ಮಕ್ಕೆ ವಿರುದ್ಧವಾಗಿವೆ.

ಬಸವತತ್ವವು ವ್ಯಕ್ತಿಪೂಜೆಯನ್ನು ಅಲ್ಲ, ತತ್ವಪೂಜೆಯನ್ನು ಒಪ್ಪುತ್ತದೆ. ಆದ್ದರಿಂದ ಯಾವ ಸ್ವಾಮೀಜಿ, ನಾಯಕ ಅಥವಾ ಸಂಸ್ಥೆಯೇ ಆಗಿದ್ದರೂ ಬಸವತತ್ವಕ್ಕೆ ವಿರುದ್ಧವಾದ ಮಾತುಗಳನ್ನಾಡಿದರೆ ಅದನ್ನು ಪ್ರಶ್ನಿಸುವುದು ಪ್ರತಿಯೊಬ್ಬ ಬಸವಭಕ್ತನ ಕರ್ತವ್ಯವಾಗಿದೆ.

ಬಸವಾದಿ ಶರಣರ ಹಿಂದೂ ಸಮಾವೇಶವೆಂಬ ಹೆಸರಿನಲ್ಲಿ ವೇದಿಕೆಗಳನ್ನು ನಿರ್ಮಿಸುವವರು ಮೊದಲು ಬಸವಣ್ಣನವರ ಸಮಾನತೆಯ ಸಂದೇಶವನ್ನು ಗೌರವಿಸಬೇಕು. ಬಸವಭಕ್ತರನ್ನು ಅವಮಾನಿಸಿದವರಿಂದ ಸಾರ್ವಜನಿಕ ಕ್ಷಮೆಯಾಚನೆ ಆಗಬೇಕು. ಹಾಗೆಯೇ ಆ ವೇದಿಕೆಯಲ್ಲಿ ಭಾಗವಹಿಸುವ ಸ್ವಾಮೀಜಿಗಳು ಕೂಡ ತಮ್ಮ ನೈತಿಕ ಹೊಣೆಗಾರಿಕೆಯನ್ನು ಅರಿತು, ತತ್ವಕ್ಕೆ ಬದ್ಧತೆಯನ್ನು ಪ್ರದರ್ಶಿಸಬೇಕು.

ಗುರು ಬಸವಣ್ಣನವರು ನಮಗೆ ಕಲಿಸಿದ್ದು ದ್ವೇಷವಲ್ಲ, ದಯೆ; ನಿಂದೆಯಲ್ಲ, ಸಂವಾದ; ಅಹಂಕಾರವಲ್ಲ, ಅನುಭವ. ಆದ್ದರಿಂದ ಬಸವಭಕ್ತರನ್ನು ಅವಮಾನಿಸುವ, ಸಮಾಜವನ್ನು ವಿಭಜಿಸುವ ಮತ್ತು ಧಾರ್ಮಿಕ ವೇಷದ ಹೆಸರಿನಲ್ಲಿ ದ್ವೇಷದ ಭಾಷೆ ಬಳಸುವ ಯಾವುದೇ ಮನೋಭಾವವನ್ನು ಬಸವತತ್ವದ ಹೆಸರಿನಲ್ಲಿ ಖಂಡಿಸಬೇಕಾಗಿದೆ.

ತತ್ವಕ್ಕಿಂತ ವ್ಯಕ್ತಿ ದೊಡ್ಡವನಲ್ಲ; ಗುರು ಬಸವಣ್ಣನವರ ಮಾರ್ಗಕ್ಕಿಂತ ಯಾವ ವೇದಿಕೆಯೂ ದೊಡ್ಡದಲ್ಲ. ಅದು ಹಿಂದೂ ಸಮಾವೇಶವಿರಲಿ ಅಥವಾ ಮತ್ಯಾವುದೇ ಇರಲಿ.

ನಾವು ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಜನಸಾಮಾನ್ಯರಲ್ಲಿ ಸಂಸ್ಕಾರವನ್ನು ಕಲಿಸಿ ನಾಗರಿಕ ಪ್ರಜ್ಞೆಯನ್ನು ಮೂಡಿಸುವಂತಿರಬೇಕು. ಆದರೆ ಬಸವಾದಿ ಶರಣರ ಹಿಂದೂ ಸಮಾವೇಶ ಮಾಡುವ ಕನೇರಿ ಸ್ವಾಮಿಗಳೇ ಭಾರತದ ನ್ಯಾಯಾಂಗ ವ್ಯವಸ್ಥೆಯ ಕಾನೂನಿನ ಕಟಕಟೆಯಲ್ಲಿ ತಪ್ಪಿತಸ್ಥನಾಗಿ ನಿಂತಿರುವಾಗ ಸಮಾಜಕ್ಕೆ ಏನು ತಾನೆ ಸಂದೇಶ ಕೊಡುತ್ತಾರೆ ಹೇಳಿ. ಬೇವಿನ ಬಿಜವ ಬಿತ್ತಿ ಬೆಲ್ಲದ ಕಟ್ಟೆಯ ಕಟ್ಟಿ ಆಕಳ ಹಾಲನೆರೆದರೆ ಕಹಿಯವುದಲ್ಲದೆ ಸಿಹಿಯಾಗಿ ಬಲ್ಲುದೆ?…..” ಎನ್ನುವ ಗುರು ಬಸವಣ್ಣನವರ ವಚನದಂತೆ ಬಾಯಲ್ಲಿ ಅನಾಗರಿಕ ಶಬ್ದಗಳನ್ನೇ ತುಂಬಿಕೊಂಡ ಕನೇರಿ ಸ್ವಾಮಿಗಳು ತಮ್ಮ ಮಾತುಗಳ ಮೂಲಕ ಅನಾಗರಿಕರನ್ನೆ ಸೃಷ್ಟಿಸುತ್ತಿದ್ದಾರೆ ಎಂಬುದಕ್ಕೆ ಹಿಂದೂ ಸಮಾವೇಶವೇ ಉತ್ತಮ ಉದಾಹರಣೆ.

ಈ ಸಮಾವೇಶದಲ್ಲಿ ಭಾಗಿಯಾಗುವ ಯುವ ಜನಾಂಗವೂ ಸಾಮಾಜಿಕ ಜಾಲತಾಣದಲ್ಲಿ ಅಂತದ್ದೇ ಶಬ್ದಗಳಿಂದ ಮಾತಾಡುವುದನ್ನು ರೂಢಿಸಿಕೊಳ್ಳುತ್ತಿರುವುದು ದುರಂತದ ಸಂಗತಿ‌.

“ಒಬ್ಬ ಕೆಟ್ಟ ವ್ಯಕ್ತಿಯಿಂದ ಸಮಾಜದ ವ್ಯವಸ್ಥೆ ಹದಗೆಡುತ್ತದೆ, ಒಬ್ಬ ಒಳ್ಳೆಯ ವ್ಯಕ್ತಿಯಿಂದ ಈ ಸಮಾಜ ಸುಧಾರಿಸುತ್ತದೆ.” ಎಂಬ ಉಕ್ತಿಯಂತೆ ಬುದ್ಧ, ಬಸವ, ಮಹಾವೀರ, ನಾನಕ, ಗಾಂಧಿ, ವಿವೇಕ, ಭೀಮ, ಕನಕ, ಇನ್ನಿತರ ಮಹಾ ದಾರ್ಶನಿಕ ಗುರುಗಳಂಥವರಿಂದ ಈ ಜಗತ್ತು ಸುಧಾರಿಸಿದೆ. ಅದೇ ಉಗ್ರವಾದಿಗಳು, ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುವಂತಹ ಕನೇರಿ ಸ್ವಾಮಿಗಳಂಥ ಕೆಟ್ಟ ವ್ಯಕ್ತಿಗಳಿಂದ ಈ ಸಮಾಜದ ಸುವ್ಯವಸ್ಥೆ ಹಾಳಾಗುತ್ತದೆ.

ಆದ್ದರಿಂದ ಸಮಾಜದ ಸುವ್ಯವಸ್ಥೆ ಹದಗೆಡಿಸುವ ಕನೇರಿ ಸ್ವಾಮಿಗಳು “ಒಳ್ಳೆಯ ಪ್ರಜೆಯಲ್ಲ.” ಇಂಥಹ ಒಳ್ಳೆಯ ಪ್ರಜೆಯಲ್ಲದವರನ್ನು ಹಾರ, ತುರಾಯಿಗಳಿಂದ ಸತ್ಕರಿಸುವ, ವೇದಿಕೆ ಹಂಚಿಕೊಳ್ಳುವ ಮತ್ತು ಅವರನ್ನು ಹಾಡಿ ಕೊಂಡಾಡುವ ಸ್ವಾಮಿಗಳನ್ನು ಹಾಗೂ ಗಣ್ಯರನ್ನು ಯಾವ ಸಾಲಿಗೆ ಸೇರಿಸಬೇಕು ನೀವೆ ಯೋಚಿಸಿ. ಇಲ್ಲಿ ಭಾಗಿಯಾಗುವವರು ಒಂದೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ.

Share This Article
1 Comment
  • ಕನ್ನೇರಿಯಂಥ ಹೊಲಸು ಬಾಯಿಯ ಕನಿಷ್ಠ ನಾಲಿಗೆಯಿಂದ ನಾವು ಏನೂ ನೀರೀಕ್ಷೆ ಮಾಡುವಂತಿಲ್ಲ,ಅವನ ಹಿಂಬಾಲಕರು ಅವನದೇ ಚಾಳಿಯನ್ನು ಮುಂದುವರಿಸಿದ್ದಾರೆ.ಈ ಭಯೋತ್ಪಾದಕನ ಕರಿನೆರಳಿನಲ್ಲಿ ಆಶ್ರಯ ಪಡೆದುಕೊಂಡು ಅವನನ್ನೇ ಅನುಸರಿಸುತಿರುವ ಅವನ ಶಿಷ್ಯ ವೃಂದ ದೇಶಕ್ಕೇನು ಮಾಡಿಯಾರು.ಇವರೆಲ್ಲರೂ ೧೨ ನೇ ಶತಮಾನದಿಂದಲೂ ಬಸವಣ್ಣನವರ ಸತ್ಯದ ವಿರೋಧಿಗಳೇ ಅಲ್ಲವೇ.

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.