ಚಲೋ ಬಸವಕಲ್ಯಾಣ: ಆರೆಸ್ಸೆಸ್ ಸ್ವಯಂಸೇವಕರು ಸ್ವಾಮಿ ವೇಷ ಹಾಕಿಕೊಂಡು ಬಂದಿದ್ದಾರೆ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

‘ಆರೆಸ್ಸೆಸ್ ಸ್ವಯಂಸೇವಕರು ಸ್ವಾಮಿ ವೇಷ ಹಾಕಿಕೊಂಡು ಬಂದಿದ್ದಾರೆ,’ ಎಂದು ಬಸವ ಚಿಂತಕಿ ಮೀನಾಕ್ಷಿ ಬಾಳಿ ಭಾನುವಾರ ಹೇಳಿದರು.

ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ವಿರೋಧಿಸಿ ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

“ನಮಗೆ ಆ ಸ್ವಾಮಿ, ಈ ಸ್ವಾಮಿ ವಿರುದ್ಧ ಹೋರಾಟವಿಲ್ಲ. ಇದು ಸೈದ್ಧಾಂತಿಕ ಸಂಘರ್ಷ,” ಎಂದು ಹೇಳಿದರು.

ಚಲೋ ಬಸವಕಲ್ಯಾಣ ಹೋರಾಟ ಸಮಿತಿ, ಸೌಹಾರ್ದ ಕರ್ನಾಟಕ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 2 ಸಾವಿರದಷ್ಟು ಬಸವಾನುಯಾಯಿಗಳು ಬಂದು ಭಾಗವಹಿಸಿದರು.

ಬೀದರ, ಕಲಬುರಗಿ, ಯಾದಗಿರಿ, ಕೊಪ್ಪಳ, ರಾಯಚೂರು, ದಾವಣಗೆರೆ, ಚಿತ್ರದುರ್ಗ, ವಿಜಯಪುರ ಮತ್ತಿತರ ಭಾಗಗಳಿಂದ ವಿವಿಧ ಬಸವ ಸಂಘಟನೆಗಳ ಸದಸ್ಯರು ಬಂದಿದ್ದರು.

ಪ್ರತಿಭಟನೆ ಹಿಂದೆಸರಿದಿದ್ದ ರಾಷ್ಟ್ರೀಯ ಬಸವದಳದಂತಹ ಸಂಘಟನೆಗಳ ಸದಸ್ಯರು, ಮುಖಂಡರೂ ಪ್ರತಿಭಟನೆಗೆ ಕೈ ಜೋಡಿಸಿದರು. ಪ್ರತಿಭಟನೆ ಅಗತ್ಯವಿಲ್ಲವೆಂದು ಹೇಳಿದ್ದ ಕೆಲವು ಪೂಜ್ಯರೂ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಪಟ್ಟಣದ ಬಸವ ಮಹಾದ್ವಾರ ಸಮೀಪದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪುತ್ಥಳಿಗೆ ಮಾಲಾರ್ಪಣೆ, ಪ್ರಾರ್ಥನೆಯೊಂದಿಗೆ ಪ್ರತಿಭಟನೆ ಶುರುವಾಯಿತು.

ಸ್ವಲ್ಪ ಮಟ್ಟಿಗೆ ಮಳೆ ಕಾಡಿದರೂ, ಮೇಲ್ಸೇತುವೆ ಕೆಳಗೆ ಮಳೆಯಲ್ಲೆ ಪ್ರತಿಭಟನೆ ಮುಂದುವರೆಯಿತು.

ಬಸವ ಅನುಯಾಯಿಗಳು ಬಸವಾದಿ ಶರಣರ ಹಿಂದೂ ಸಮಾವೇಶ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂ ಸಮಾವೇಶಕ್ಕೂ ಶರಣರಿಗೆ ಯಾವುದೇ ಸಂಬಂಧವಿಲ್ಲ. ಕೇವಲ ಹಿಂದೂ ಸಮಾವೇಶ ನಡೆಸಲು ನಮ್ಮ ಅಭ್ಯಂತರವಿಲ್ಲ. ಆದರೆ, ಬಸವಾದಿ ಶರಣರ ಹೆಸರಿನೊಂದಿಗೆ ಹಿಂದೂ ಪದ ಹೋಲಿಸುವುದು ನಾವು ಒಪ್ಪುವುದಿಲ್ಲ. ಇದು ಹಿಂದೂ ಸಮಾವೇಶ ಅಲ್ಲ. ಮನುವಾದ ಸಮಾವೇಶ ಆಗಿದೆ. ಈ ತಂತ್ರಗಾರಿಕೆ ಹಿಂದೆ ಸಂಘ ಪರಿವಾರವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಆರ್.ಜಿ. ಶೆಟಗಾರ, ಆರ್.ಕೆ. ಹುಡಗಿ, ಮೀನಾಕ್ಷಿ ಬಾಳಿ, ಮಾರುತಿ ಗೋಖಲೆ, ಕೆ.ನೀಲಾ, ಕಾಶೀನಾಥ ಅಂಬಲಗೆ, ಪಿ. ರುದ್ರಪ್ಪ, ಬಸವಲಿಂಗಪ್ಪ ಬಾದರ್ಲಿ, ಚಂದ್ರೇಗೌಡ, ಸತ್ಯಕ್ಕ ತಾಯಿ, ವಿಶ್ವೇಶ್ವರಯ್ಯ ಬಿ.ಎಂ, ಶಶಿಧರ ಸಿರಿಗೆರೆ ಸೇರಿದಂತೆ ಚಲೋ ಬಸವಕಲ್ಯಾಣ ಹೋರಾಟ ಸಮಿತಿಯ ಪ್ರಮುಖರಾದ ಸಿದ್ದಪ್ಪ ಮೂಲಗೆ, ರವಿ ಪಾಪಡೆ, ಸಿದ್ರಾಮ ಶೆಟಕಾರ, ಬಸವ ಪಾಟೀಲ, ಬಸವರಾಜ ಬುಳ್ಳಾ, ವಿಜಯಲಕ್ಷ್ಮಿ ಗಡ್ಡೆ, ಕಲ್ಯಾಣಮ್ಮ, ರವೀಂದ್ರ ಕೋಳಕೂರ ಮುಂತಾದವರು ಭಾಗವಹಿಸಿದರು.

ಬುದ್ಧ, ಬಸವ, ಅಂಬೇಡ್ಕರ್ ಸಂಘಟನೆಗಳ ಅನುಯಾಯಿಗಳು ಕೂಡ ಹೋರಾಟ ಬೆಂಬಲಿಸಿ ಭಾಗಿಯಾದರು.

ಇಲ್ಲಿನ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಸಂಜೆ ಕನ್ನೇರಿ ಸ್ವಾಮಿ ಸಮಾವೇಶ ನಡೆಯಲಿದೆ.

ಪ್ರತಿಭಟನೆಯಲ್ಲಿ ಮೊಳಗಿದ ಘೋಷಣೆಗಳು

ಬಸವಾದಿ ಶರಣರ ಹಿಂದೂ ಸಮಾವೇಶಕ್ಕೆ ಧಿಕ್ಕಾರ ಧಿಕ್ಕಾರ

ಕೋಟಿ ಕನ್ನೇರಿ ಸ್ವಾಮಿಗಳಂಥವರು ಬಂದರೂ ಲಿಂಗಾಯತ ಧರ್ಮ ಶಾಶ್ವತ

ವೇದಕ್ಕೆ ಹೊರೆಯನಿಕ್ಕುವೆ

ಬಸವಾದಿ ಶರಣರ ಹೆಸರನ್ನು ದುರ್ಬಳಕೆ ಮಾಡಲು ಬಿಡುವುದಿಲ್ಲ

ಬಸವಕಲ್ಯಾಣಕ್ಕೆ ಬರುತ್ತಿರುವ ಕೋಮುವಾದಿ ಶಕ್ತಿಗಳಿಗೆ ಧಿಕ್ಕಾರ

ಬಸವಾದಿ ಶರಣರ ವಚನ ಸಾಹಿತ್ಯವನ್ನು ಉಳಿಸುತ್ತೇವೆ

ವಚನ ಸಾಹಿತ್ಯ ತಿರುಚಲು ಹೊರಟಿರುವ ಕನ್ನೇರಿ ಕುನ್ನಿಗೆ ಧಿಕ್ಕಾರ

ಲಿಂಗಾಯತ ಧರ್ಮ ಸ್ವತಂತ್ರ ಧರ್ಮ

ನಮ್ಮದು ತಾತ್ವಿಕ, ಸೈದ್ಧಾಂತಿಕ ಹೋರಾಟ ಹೋರಾಟ

ಬಸವ ತತ್ವ ಸಿದ್ಧಾಂತಕ್ಕೆ ಜಯವಾಗಲಿ

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *