ಶರಣರು ಭಾವ, ಹೃದಯ ತುಂಬಿ ಮಾತನಾಡಿದರು: ಲಕ್ಷ್ಮೀ ದೊಡ್ಡಮನಿ

ಕಲಬುರಗಿ:

ದ್ರಾವಿಡ ಕಾಲದಲ್ಲಿ ಮಾತೃ ಪ್ರಧಾನವಾಗಿದ್ದ, ಆರ್ಯರ ಕಾಲದಲ್ಲಿ ಪುರುಷ ಪ್ರಧಾನ ಸಮಾಜ ವ್ಯವಸ್ಥೆ ನಿರ್ಮಾಣವಾಗಿತ್ತು. ನಂತರ ಶಾಸ್ತ್ರ, ಧರ್ಮದ ಕಟ್ಟು ಕಟ್ಟಳೆಗಳನ್ನು ವಿಧಿಸಿ ಮಹಿಳೆ ಮಗುವನ್ನು ಹೆರುವ ಯಂತ್ರ ಎಂದು ಪರಿಭಾವಿಸಲಾಗಿತ್ತು. ಆದರೆ 12ಶತಮಾನದ ಶರಣರು ಅಸಮಾನತೆ, ಅನ್ಯಾಯ, ಅತ್ಯಾಚಾರ ಹಿಮ್ಮೆಟ್ಟಿಸಿ ಉಭಯರೂ ಸಮಾನರು ಎಂಬ ಸಮಸಮಾಜ ಕಟ್ಟಿದರು ಎಂದು ಸೊಲ್ಲಾಪುರದ ಲಕ್ಷ್ಮೀ ದೊಡ್ಡಮನಿ ಅಭಿಪ್ರಾಯಪಟ್ಟರು.

ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರ, ಬಸವ ಸಮಿತಿ ಅಕ್ಕನ ಬಳಗ ವತಿಯಿಂದ ಜಯನಗರದ ಅನುಭವ ಮಂಟಪದಲ್ಲಿ ಶನಿವಾರ ಜರುಗಿದ ಮಹಾದೇವಿ ಅಕ್ಕಗಳ ಸಮ್ಮೇಳನದ 5ನೇ ಗೋಷ್ಠಿಯಲ್ಲಿ ಮಾತನಾಡುವ ಸ್ವಾತಂತ್ರ್ಯ ವಿಷಯ ಕುರಿತು ಅವರು ಮಾತನಾಡಿ, ಮಹಿಳೆಯರಿಗೆ ಶರಣರು ಪ್ರಾಪಂಚಿಕ ಮತ್ತು ಪಾರಮಾರ್ಥಿಕ ಚಿಂತನೆ ಮಾಡಲಿಕ್ಕೆ ಸ್ಥಾನ ಕಲ್ಪಿಸಿಕೊಟ್ಟರು ಎಂದರು.

ವ್ಯಕ್ತಿ, ಕುಟುಂಬ, ಸಮಾಜ ಸೇರಿದಂತೆ ಬದುಕಿನ ಎಲ್ಲ ಕ್ಷೇತ್ರಗಳ ಬಗ್ಗೆ ಮಾತನಾಡಿದರು. ಬಸವಾದಿ ಶಿವಶರಣರು ಭಾವತುಂಬಿ, ಹೃದಯತುಂಬಿ ಮಾತನಾಡಿದರು ಎಂದು ತಿಳಿಸಿದರು.

ಬರೆಯುವ ಸ್ವಾತಂತ್ರ್ಯವಿಷಯ ಕುರಿತು ಲಿಂಗಾರತಿ ನಾವದಗೆರೆ ಮಾತನಾಡಿ, ವಚನ ಸಾಹಿತ್ಯ ವಿಶಿಷ್ಟ ಸಾಹಿತ್ಯವಾಗಿದ್ದು, ಈ ಶರಣ ಸಾಹಿತ್ಯದ ಮೇಲೆ ಅವ್ಯಾಹತ ದಾಳಿ ನಡೆಯುತ್ತಿದ್ದು, ಇಂದಿನ ಮಹಿಳೆಯರು ಫ್ಯಾಶನ್ ಸೋಗಿಗೆ ಬಲಿಯಾಗದೆ ಲಿಂಗ, ವಿಭೂತಿ ಧಾರಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಡಾ. ಮಹೇಶ್ವರಿ ಹೇಡೆ ಹೋರಾಡುವ ಸ್ವಾತಂತ್ರ್ಯ ವಿಷಯ ಕುರಿತು ಮಾತನಾಡಿ, ಆಲೋಚಿಸುವ, ಮಾತನಾಡುವ ಜೀವಿಯಾಗಿರುವ ಮನುಷ್ಯ ಹೋರಾಟದ ಸ್ವಾತಂತ್ರ್ಯ ಹೊಂದಿರಬೇಕು. ಶರಣರು ಸರ್ವಾಧಿಕಾರದ ವಿರುದ್ಧ ಹೋರಾಡಿದರು. ಎಲ್ಲ ಬಗೆಯ ಸಂಕೋಲೆಗಳನ್ನು ಕಿತ್ತು ಹಾಕಿದ ಶರಣರು, ಮಾತನಾಡುವ, ಬರೆಯುವ ಹೋರಾಟದ ಸ್ವಾತಂತ್ರ್ಯ ಒದಗಿಸಿಕೊಟ್ಟರು. ಇದು ಜಗತ್ತಿನ ಮೊದಲ ಸಾಮೂಹಿಕ ಹೋರಾಟ. ಅಂತರಂಗ-ಬಹಿರಂಗದ ಹೋರಾಟ ನಡೆಸಿದರು ಎಂದರು. ಸಮ್ಮೇಳನಾಧ್ಯಕ್ಷೆ ಡಾ. ನೀಲಮ್ಮ ಕತ್ನಳ್ಳಿ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HyjxiPYAeioCDGVqP9ADsE

Share This Article
Leave a comment

Leave a Reply

Your email address will not be published. Required fields are marked *