ಅನುಭಾವ ಪರಂಪರೆಗೆ ಸೇರಿದವರು ಮಧುರಚೆನ್ನರು: ಮರುಳಸಿದ್ಧ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಚಿಕ್ಕಮಗಳೂರು:

ಕನ್ನಡಕ್ಕೆ ಮಹರ್ಷಿ ಅರವಿಂದರ ವಿಚಾರಧಾರೆಗಳನ್ನು ಪರಿಚಯಿಸಿದ ಮಹಾನುಭಾವರು ಮಧುರಚೆನ್ನರು ಎಂದು ಬಸವತತ್ವ ಪೀಠದ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ದೊಡ್ಡಕುರುಬರಹಳ್ಳಿಯ ಕಲ್ಯಾಣನಗರದ ಬಸವತತ್ವಪೀಠದ ಬಸವ ಮಂದಿರದಲ್ಲಿ ‌ಭಾನುವಾರ 58ನೇ ಶಿವಾನುವಭವ ಗೋಷ್ಠಿ ಅಂಗವಾಗಿ ‘ಸೆಲ್ಫಿಬುಕ್’ ಜಾಲತಾಣದ ಆ್ಯಪ್ ಬಿಡುಗಡೆ ಹಾಗೂ ‘ಮಧುರಚೆನ್ನ’ ಏಕವ್ಯಕ್ತಿ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬೇಂದ್ರೆಯವರಿಂದ ಒಡಹುಟ್ಟಿದವ ಎಂದೆನಿಸಿಕೊಂಡವರು ಮಧುರಚೆನ್ನರು. ಅಲ್ಲದೆ ಮಧುರಚೆನ್ನರನ್ನು ಹೂತಿಲ್ಲ; ಬಿತ್ತೀರಿ ಎಂದ ಬೇಂದ್ರೆಯವರ ಮಾತು ನಿಜ‌. ಅವರನ್ನು ಉಳಿಸುವ, ಬೆಳೆಸುವ ಕೆಲಸ ‘ಮಧುರಚೆನ್ನ’ ಎಂಬ ಏಕವ್ಯಕ್ತಿ ನಾಟಕದ ಮೂಲಕ ನಡೆದಿದೆ ಎಂದು ಶ್ಲಾಘಿಸಿದರು.

ಮಹರ್ಷಿ ಅರವಿಂದರಿಗೂ ನಮ್ಮ ಬಸವತತ್ವಪೀಠಕ್ಕೂ ಸಂಬಂಧವಿದೆ‌. ದೈಹಿಕ, ಮಾನಸಿಕ ಹಾಗೂ ಆತ್ಮಿಕ ವಿಕಾಸದ ಮೂಲಕ ಪ್ರತಿಯೊಬ್ಬರೂ ಸಾಧಿಸಬೇಕು. ಇದೇ ಯೋಗ ಎಂದು ಜಗತ್ತಿಗೆ ತೋರಿಸಿಕೊಟ್ಟವರು ಅರವಿಂದರು. ಇದನ್ನೇ ಶರಣರು ಪ್ರತಿಪಾದಿಸಿದರು. ಇದನ್ನು ಮಧುರಚೆನ್ನರು ಮುಂದುವರಿಸಿದರು. ಇಂಥ ಅಪರೂಪದ ಕವಿಯ ಕುರಿತ ನಾಟಕವಿದು‌.

ವಿಶೇಷವೆಂದರೆ ಮಧುರಚೆನ್ನರ ಮೊಮ್ಮಗ ಜಗದೇವ ಗಲಗಲಿ ಅವರೇ ನಾಟಕವನ್ನು ಪ್ರಸ್ತುತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ಮಾತಿಗೆ ನಿಲುಕದ ಭಾವವನ್ನು ಅನುಭವಿಸಿದ್ದು ಅನುಭಾವ. ಇಂಥ ಅನುಭವ ಪಡೆದವರು ಅನುಭಾವಿಗಳು. ಇಂಥ ಅನುಭಾವ ಪರಂಪರೆಯು 12ನೇ ಶತಮಾನದಲ್ಲಿ ಆರಂಭಗೊಂಡು ಬೆಳೆಯಿತು. ಈ ಪರಂಪರೆಗೆ ಸೇರಿದವರು ಮಧುರಚೆನ್ನರು.

ಹಲಸಂಗಿ ಗೆಳೆಯರನ್ನು ಕಟ್ಟಿಕೊಂಡು ನಾಡು-ನುಡಿಗಾಗಿ ಜೊತೆಗೆ ಸಂಸ್ಕೃತಿ ಉದ್ದೀಪನಕ್ಕಾಗಿ ದುಡಿದರು ಎಂದು ಹೇಳಿದರು.

ಅನುಭವವನ್ನು ಕೇವಲ ಮಾತುಗಳಿಂದ ಹಿಡಿದಿಡಲು ಸಾಧ್ಯವಾಗದೆ ಇರುವುದು ಅನುಭಾವ. ಇದು ಆತ್ಮಕ್ಕೆ ದಕ್ಕುವಂಥದು. ಇದನ್ನು ಶರಣರು ಶಿಶು ಕಂಡ ಕನಸಿನಂತೆ, ಮೂಕ ಕಂಡ ಕನಸಿನಂತೆ ಇರುತ್ತದೆ ಎಂದರು. ಹೇಳಲಾಗದ ಪಾರಮಾರ್ಥಿಕ ಅನುಭವವನ್ನು ಹೇಳದಿದ್ದರೂ ಮುಖದಲ್ಲಿ ಗೋಚರವಾಗುತ್ತದೆ ಎನ್ನುವುದು ನಿಜ ಎಂದು ಅಭಿಪ್ರಾಯಪಟ್ಟರು.

ಸಿಂದಿಗೆರೆ ಕರಡಿ ಗವಿಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ ಹಾಗೂ ಶಿರಸಂಗಿಯ ಬಸವಮಹಾಂತ ಸ್ವಾಮೀಜಿಗಳು ಆಶೀರ್ವಚನ ನೀಡಿದರು.

ಸೆಲ್ಫಿ ಬುಕ್ ಆ್ಯಪ್ ಸಿದ್ಧಪಡಿಸಿದ ನಂಜೇಶ್ ಬೆನ್ನೂರು ಹಾಗೂ ರಂಗಕರ್ಮಿ ಗಣೇಶ ಅಮೀನಗಡ ವೇದಿಕೆ ಮೇಲಿದ್ದರು. ಮುಖ್ಯ ಅತಿಥಿಗಳಾಗಿ ಇಟಲಿ ಕನ್ನಡ ಅಸೋಸಿಯೇಷನ್ ಅಧ್ಯಕ್ಷ ಹೇಮೇಗೌಡ ರುದ್ರಪ್ಪ ಭಾಗವಹಿಸಿದ್ದರು.

ಕಾರ್ಯಕ್ರಮ ಆರಂಭಕ್ಕೆ ಮುನ್ನ ಅಕ್ಕನ ಬಳಗದ ಸದಸ್ಯೆಯರು ಹಾಗೂ ಗಾಯಕಿ ಅಕ್ಷತಾ ಹೆಗಡೆ ವಚನಗಳನ್ನು ಹಾಡಿದರು.

ನಂತರ ‘ಮಧುರಚೆನ್ನ’ ನಾಟಕ ಪ್ರದರ್ಶನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *