ಕಾಯಕ, ದಾಸೋಹ, ಇಷ್ಟಲಿಂಗ ವೈದಿಕ ಮೂಲದ್ದು ಎನ್ನುವ ಭ್ರಾಂತಿ ಬೇಡ

ಇವೆಲ್ಲಾ ಉತ್ತಮ ಸಮಾಜ ರೂಪಿಸಲು ಬಸವಾದಿ ಶರಣರು ನೀಡಿದ ವಿಶಿಷ್ಟ ತತ್ವ ಸಿದ್ಧಾಂತಗಳು

ಗಂಗಾವತಿ

“ಮಂಡೆಯ ಬೋಳಿಸಿಕೊಂಡು
ತುಂಡುಗಂಬಳಿ ಹೊದ್ದವರ ಕಂಡಡೆ
ನಂಬಲಾರೆ ನಚ್ಚಲಾರೆ
ಈ ವೇಷವ ನಾಚಿದೆ ಅಮುಗೇಶ್ವರಾ “

ಅಮುಗೆ ರಾಯಮ್ಮ

ಜೂನ್ 28 ಬಸವ ಕಲ್ಯಾಣದಲ್ಲಿ ನಡೆದ ಬಸವಾದಿ ಶಿವಶರಣ ಹಿಂದೂ ಸಮಾವೇಶದ ವೇದಿಕೆಯನ್ನು ನೋಡಿದಾಗ ಅಮುಗೆ ರಾಯಮ್ಮನವರ ಈ ವಚನ ತಟ್ಟನೆ ನೆನಪಾಯಿತು.

ತಲೆ ಬೋಳಿಸಿಕೊಂಡು ಕಾವಿ ಹೊದ್ದವರ ಕಂಡಡೆ ನಂಬಲಾರೆ ನಚ್ಚಲಾರೆ ಎಂದು ದಿಟ್ಟತನದಿಂದ ಅವರು ಅಂದು ಹೇಳಿದ ಮಾತು ಇಂದು ಎಷ್ಟು ಪ್ರಸ್ತುತವಲ್ಲವೇ?

ಸತ್ಯ, ತ್ಯಾಗ, ನಿಸ್ವಾರ್ಥ, ವೈರಾಗ್ಯದ ಸಂಕೇತದ ಕಾವಿ ತೊಟ್ಟವರು ತಮ್ಮ ಸ್ವಹಿತಾಸಕ್ತಿಗಾಗಿ ಎಂತ ಸ್ವಾರ್ಥಿಗಳು ಆಗಿದ್ದಾರೆ.

ಮುಖ್ಯವಾಗಿ, ಅಂದು ವೇದಿಕೆ ಮೇಲೆ ಮಾತಾಡಿದ ಬೆಂಗಳೂರಿನ ಆರೂಢ ಭಾರತಿ ಸ್ವಾಮಿ ಎಂಬ ಕಾವಿಧಾರಿಯ ಭಾಷಣ ನಿಜಕ್ಕೂ ಬಾಲಿಶತನದ ಮಾತುಗಳು ಅನಿಸಿತು. ಜಾತಿ, ಮತ, ಪಂಥಗಳ ಕಟ್ಟುಪಾಡುಗಳನ್ನು ಮೀರಿ ಆಧ್ಯಾತ್ಮದ ಉನ್ನತೆಗೆ ಏರಿದವರು ಆರೂಢರು. ಆದರೆ ಇವರು ‘ಆರೂಢ’ ಎಂದರೆ ಏನು ಅನ್ನುವುದನ್ನೇ ಮರೆತು ಮಾತಾಡಿದರು.

ಅವರು ಭಾಷಣದಲ್ಲಿ “ಕಾಯಕ, ದಾಸೋಹ ಬಸವಣ್ಣನವರಿಂದ ಮಾತ್ರ ಬಂದಿಲ್ಲ, ಅವು ಮೂಲತ: ವೈದಿಕ ಸಿದ್ದಾಂತಗಳು,” ಎಂದು ಹೇಳಿದರು.

ಈ ಮಾತುಗಳು ಅವರು ವೈದಿಕರೊ, ಆರೂಢ ಪರಂಪರೆಯವರೊ ಎಂದು ಸಂಶಯ ಮೂಡಿಸಿತು. ಅವರು ವಾದಿಸಿದಂತೆ ಬಸವಣ್ಣನವರು ಪ್ರತಿಪಾದಿಸಿದ ಕಾಯಕ ಮತ್ತು ದಾಸೋಹದ ಪರಿಕಲ್ಪನೆ ವೇದ ಉಪನಿಷತ್ತುಗಳಲ್ಲಿಲ್ಲ.

ಅವುಗಳಲ್ಲಿರುವುದು ಕರ್ಮ ಮತ್ತು ದಾನದ ಪರಿಕಲ್ಪನೆ. ಯಜ್ಞ ಯಾಗಾದಿ ಆಚರಣೆಗಳ ಕ್ರಿಯೆಗೆ ಕರ್ಮ ಎಂದಿದ್ದಾರೆ ಹೊರತು ಕಾಯಕ ಎಂದಿಲ್ಲ.

ನ ಮರ್ಷಯನ್ತಿ ನ ದರ್ಭನ್ತಿ.
ವಾಜಿನೋ ಯೇ ಶ್ರದ್ದಯಾ
ದದತಿ ಸೋಮಿನೋ ಜನಾ:
ಉತೇಷಾಂ ದೇವಾವವಿತಾ
ಭವನ್ತ್ಯುತ ಪ್ರಜಾಂ
ವರ್ಧಯನ್ತಿ ಮೇಷ್ಯಾಮ್.

ಯಾರು ಶ್ರದ್ದೆಯಿಂದ ಕರ್ಮಗಳನ್ನು ಮಾಡುತ್ತಾರೊ ಮತ್ತು ದಾನವನ್ನೂ ನೀಡುತ್ತಾರೊ ಆ ಉದಾರ ಗುಣದ ಜನರನ್ನು ಯಾರು ವಂಚಿಸಲು ಸಾಧ್ಯವಿಲ್ಲ ದೇವತೆಗಳು ಅವರ ರಕ್ಷಕರಾಗಿರುತ್ತಾರೆ, ಅವರ ಸಂತತಿ ವೃದ್ದಿಸುತ್ತಾರೆ.

ಇದು ನೀವು ಹೇಳುವ ವೇದಗಳ ಕಲ್ಪನೆಯ ಕರ್ಮ ಮತ್ತು ದಾನ.

ಲಿಂಗಾಯತದ ಕಾಯಕ ಮತ್ತು ದಾಸೋಹ ಸಿದ್ದಾಂತ ನಿಮ್ಮ ವೈದಿಕ ಧರ್ಮದ “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು” ಎಂದು ಹೇಳುವ ಕರ್ಮ ಸಿದ್ದಾಂತವಲ್ಲ.

“ನೇಮದ ಕೂಲಿಯ ಬಿಟ್ಟು ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದರೆ ಮಾಡುವ ಸೇವೆ ನಷ್ಟ” ಎಂದು ಹೇಳುವ ಕಾಯಕ ಸಿದ್ದಾಂತ ಶರಣರದು.

ಕಾಯಕಕ್ಕೆ ತಕ್ಕಂತೆ ಫಲ ಇರಬೇಕು ಎಂದು ಫಲದ ವಿಷಯವಾಗಿ ಹೊಸ ನೀತಿಯನ್ನು ಬರೆದವರು ಶರಣರು. “ಬೆವಸಾಯವ ಮಾಡಿ ಮನೆಯಲ್ಲಿ ಬಿಯಕ್ಕೆ ಭತ್ತವಿಲ್ಲದಿದ್ದಡೆ ಆ ವ್ಯೆವಸಾಯದ ಘೋರವೇತಕ್ಕಯ್ಯಾ ” ಎಂದ ಕಾಯಕ ಸಿದ್ದಾಂತ ಶರಣರದು.

ನಿಮ್ಮ ವೇದ ಉಪನಿಷತ್, ಆಗಮ ಪುರಾಣಗಳಲ್ಲಿನ ದೇವರುಗಳಿಗೆ ಕಾಯಕವೆ ಇಲ್ಲ. ಆದರೆ ಶರಣರು
“ಗುರು ಲಿಂಗ ಜಂಗಮಕ್ಕಾದಡೆಯೂ ಕಾಯಕದಿಂದಲೇ ಜೀವನ್ಮುಕ್ತಿ” ಎಂದು ದೇವರಿಗೂ ಕಾಯಕ ಕಡ್ಡಾಯಗೊಳಿಸಿದರು.

ನಿಮ್ಮ ವೇದ ,ಉಪನಿಷತ್, ಆಗಮ, ಪುರಾಣಗಳಲ್ಲಿ ದಾಸೋಹದ ಪರಿಕಲ್ಪನೆ ಇಲ್ಲ. ಅಲ್ಲಿ ದಾನದ ಪರಿಕಲ್ಪನೆ ಇದೆ. “ದಾನ” ನೀಡಿದೆನೆಂಬ ಅಹಂಕಾರವನ್ನು ಹುಟ್ಟಿಸಿದರೆ ದಾಸೋಹ ಎನ್ನುವುದು ಹಂಚಿ ಉಣ್ಣುವ ಸಮಾನತೆಯ ಭಾವ. ಇದನ್ನೆ ಶರಣರು “ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ” ಎಂದರು.

“ಸೋಹಂ ಎಂಬುದಕ್ಕೆ ದಾಸೋಹವ ಮಾಡದಿರ್ದಡೆ ಅತಿಗೆಳೆವೆ ನೋಡಾ ಗುಹೇಶ್ವರಾ” ಎಂದು ಅಲ್ಲಮ ಪ್ರಭು ಹೇಳಿದ್ದಾರೆ.

ಸಿದ್ದರಾಮೇಶ್ವರ ಶರಣರು ಇದನ್ನು ಇನ್ನೂ ಸ್ಪಷ್ಟವಾಗಿ ಹೇಳುತ್ತಾರೆ. ಸೋಹಂ ಎನ್ನುವುದು ಅಂತರಂಗದ ಮದ, ಶಿವೋಹಂ ಎನ್ನುವುದು ಬಹಿರಂಗದ ಮದ. ಈ ದ್ವಂದ್ವವನಳಿದು ದಾಸೋಹಂ ಎಂದೆನಿಸಯ್ಯಾ ಎಂದಿದ್ದಾರೆ.

ಇಂತಹ ದಾಸೋಹದ ಹೊಸತನದ ಪರಿಕಲ್ಪನೆ ನಿಮ್ಮ ವೈದಿಕ ಯಾವ ಗ್ರಂಥಗಳಲ್ಲಿ ಇಲ್ಲ. ಇದು ಸತ್ಯ.

ಇನ್ನೂ ತಾವು ದೇವಾಲಯದ ನಿರಾಕರಣೆ, ಇಷ್ಟಲಿಂಗ ಕಲ್ಪನೆ ಇದೆಲ್ಲಾ ವೇದ ಉಪನಿಷತ್ತುಗಳಲ್ಲಿವೆ, ಇದು ಬಸವಣ್ಣನಿಂದಲೇ ಶುರುವಾಯಿತು ಎನ್ನುವ ಭ್ರಾಂತಿ ಬೇಡ ಎಂದು ಹೇಳುತ್ತೀರಿ. ಇವು ನಿಜಕ್ಕೂ ಬಾಲಿಶತನದ ಮಾತುಗಳು.

ನಾವ್ಯಾರು ಆ ಭ್ರಾಂತಿಯಲ್ಲಲ್ಲ, ಶರಣರು ರೂಪಿಸಿದ ವಾಸ್ತವದಲ್ಲಿ ಬದುಕುತ್ತಿದ್ದೆವೆ. ತಾವುಗಳೇ ವೇದ, ಉಪನಿಷತ್, ಆಗಮ, ಪುರಾಣಗಳೆಂಬ ಭ್ರಮೆಯಲ್ಲಿ ಬದುಕುತ್ತಿದ್ದೀರಿ ಎಂದು ಅನಿಸುತ್ತಿದೆ.

ವೇದಗಳಲ್ಲಿ ಇಷ್ಟಲಿಂಗದ ಪರಿಕಲ್ಪನೆ ಇದೆ ಎಂಬ ಭ್ರಾಂತಿಯಲ್ಲಿ ತಾವು ಇದ್ದೀರಿ. ಋಗ್ವೇದದಲ್ಲಿ ಇಷ್ಟಲಿಂಗದ ಬಗೆಗೆ ಹೇಳಲಾಗಿದೆ ಎನ್ನುವ ಭ್ರಾಂತಿ ತಮ್ಮನ್ನು ಆವರಿಸಿದೆ.

ಋಗ್ವೇದದ ಈ ಶ್ಲೋಕ ನೋಡಿ.

“ಅಯಂ ಹೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರ:
ಅಯಂ ಮೇ ವಿಶ್ವಭೇಷಜೋಯಂ ಶಿವಾಭಿಮರ್ಶನಃ”
(-ಋಗ್ವೇದ 10-06-12,7)

ಈ ಶ್ಲೋಕದಲ್ಲಿ ಎಲ್ಲಿಯೂ ಇಷ್ಟಲಿಂಗದ ಪ್ರಸ್ತಾಪವಿಲ್ಲ. ಅಪಾರ ಶಕ್ತಿಯುಳ್ಳ ಪರಶಿವನೇ ನನ್ನ ಹಸ್ತದಲ್ಲಿ ವಿರಾಜಮಾನನಾಗಿರುವನೆಂದರೆ ಅದು ಹಸ್ತ ಮಸ್ತಕದ ವಿಚಾರವೆ ಹೊರತು ಇಷ್ಟಲಿಂಗದ ಪರಿಕಲ್ಪನೆ ಅಲ್ಲ.

ಅದಾಗ್ಯೂ ತಮ್ಮಂತ ಕಾವಿ ತೊಟ್ಟವರು ಜನಸಾಮಾನ್ಯರ ಮುಂದೆ ನಿರ್ಲಜ್ಯರಾಗಿ ಇಷ್ಟೊಂದು ಸುಳ್ಳು ಹೇಳುವುದು ನೋಡಿದರೆ ಮೇಲೆ ಉಲ್ಲೇಖಿಸಿದ ಅಮುಗೆ ರಾಯಮ್ಮನವರ ವಚನ ಸರಿ ಎನಿಸುತ್ತೆ.

ಕಾವಿ ತೊಟ್ಟು ಸುಳ್ಳು ಹೇಳುವವರನ್ನು ಜನ ಹೇಗೆ ನಂಬಬೇಕು ನಚ್ಚಬೇಕು ನೀವೆ ಹೇಳಿ ಆರೂಢ ಭಾರತಿ ಸ್ವಾಮಿಗಳೆ?

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
2 Comments
  • ಲಾಂಛನವ ಧರಿಸಿಪ್ಪ ಉದರ ಪೋಷಕರು ಇಂತವರೆ ಇರಬೇಕು..

  • ಉತ್ತಮ ಬರಹ ಇದ ವಿಡಿಯೋ ರೂಪದಲ್ಲಿ ಬಂದರೆ ಇನ್ನೂ ಉಪಯೋಗಿ

Leave a Reply

Your email address will not be published. Required fields are marked *