ಅರಸೀಕೆರೆ:
ಬಸವಣ್ಣನವರ ತತ್ವ-ಸಿದ್ಧಾಂತಗಳು ಇಂದಿನ ಸಮಾಜಕ್ಕೆ ಸಂಪೂರ್ಣ ಮಾರ್ಗದರ್ಶಕವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಜೀವನದಲ್ಲಿ ಅರಿತು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಪಾಂಡೋಮಟ್ಟಿಯ ಪೂಜ್ಯ ಗುರುಬಸವ ಸ್ವಾಮೀಜಿ ಕರೆ ನೀಡಿದರು.
ತಾಲ್ಲೂಕಿನ ಬಾಣಾವರದ ತೊಂಡಿಗನಹಳ್ಳಿ ಗ್ರಾಮದ ಬಸವ ಮಂಟಪದಲ್ಲಿ ಈಚೆಗೆ ನಡೆದ ಬಸವ ಜಯಂತಿ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾವೆಲ್ಲರೂ ಒಂದೇ, ನಾವೆಲ್ಲಾ ಶರಣರು. ಶರಣರಿಗೆ ಯಾವುದೇ ದೇಗುಲಗಳಿಲ್ಲ. ಜಾತಿ-ಮತಗಳ ಭೇದ ಭಾವಗವಳಿಲ್ಲ. ಸರ್ವಧರ್ಮ ಸಮಾನತೆಯನ್ನು ಸಾರಿದ ಮಹಾನ್ ತತ್ವಜ್ಞಾನಿ ಬಸವಣ್ಣನವರಾಗಿದ್ದಾರೆ. ಅವರ ವಚನಗಳನ್ನು ಅರಿತರೆ ಸಮಾನತೆ, ಶಾಂತಿ ಮತ್ತು ಮಾನವೀಯತೆ ನೆಲೆಸಲು ಸಾಧ್ಯವಾಗುತ್ತದೆ ಎಂದರು.
ತಮ್ಮಡಿಹಳ್ಳಿ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವಚನಗಳು ಕಾರ್ತಿಕ ಮಾಸದ ಕಗ್ಗತ್ತಲಿನಲ್ಲಿ ಬೆಳಗುವ ದೀಪದಂತೆ ಜೀವನಕ್ಕೆ ದಾರಿದೀಪವಾಗಿವೆ. 12ನೇ ಶತಮಾನದಲ್ಲಿಯೇ ಹೆಣ್ಣು-ಗಂಡು ಎಂಬ ಭೇದಭಾವವನ್ನು ತೊಡೆದುಹಾಕಿ ಸಮಾನತೆಯ ಸಂದೇಶ ಸಾರಿದ ಮಹಾನ್ ಸಮಾಜ ಸುಧಾರಕರಾಗಿದ್ದರು ಎಂದು ಹೇಳಿದರು.

ಚಲನಚಿತ್ರ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಮನುಷ್ಯನ ಹುಟ್ಟು ಮತ್ತು ಸಾವು ಯಾರಿಗೂ ತಿಳಿದಿರುವುದಿಲ್ಲ. ಆದರೆ ಬದುಕಿರುವ ಅವಧಿಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿ, ಸಮಾಜಮುಖಿ ಕಾರ್ಯಗಳನ್ನು ಮಾಡುವುದೇ ಜೀವನದ ಸಾರ್ಥಕತೆಯಾಗಿದೆ. ಬಸವಣ್ಣನವರ ವಚನಗಳನ್ನು ಕೇವಲ ಓದುವುದಲ್ಲ, ಅವರ ತತ್ವ-ಸಿದ್ಧಾಂತಗಳನ್ನು ಆಚರಣೆಯಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ಮಾರಗೊಂಡನಹಳ್ಳಿ ಅಭಿನವ ಬಸವಲಿಂಗ ಸ್ವಾಮೀಜಿ ಅವರು ಸಹ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿವಿಟಿ ಬಸವರಾಜು, ಡಾ. ಜಿ.ವಿ. ಮಂಜುನಾಥ, ಹೊಳಲ್ಕೆರೆ ಕೊಟ್ಟ್ರೆ ನಂಜಪ್ಪ, ಮಂಜುನಾಥ್, ಜೆ.ಎಲ್. ಎಂ.ನ.ಗಂಗಾಧರಪ್ಪ ಶಿವಪುರ, ಯಮುನಾ ಮೋಹನ, ಮೋಹನಕುಮಾರ ಸೇರಿದಂತೆ ಅನೇಕರು, ಬಸವಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
