ಜೂಲೈ 7, 8 ಬೆಂಗಳೂರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ

ಬಸವ ಮೀಡಿಯಾ
ಬಸವ ಮೀಡಿಯಾ

ಸರ್ವಾಧ್ಯಕ್ಷರಾಗಿ ಹಿರಿಯ ಶರಣ ಸಾಹಿತಿ ಗೊ.ರು. ಚೆನ್ನಬಸಪ್ಪ ಆಯ್ಕೆ

ಬೆಂಗಳೂರು:

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ 14ನೇ ಸಮ್ಮೇಳನವು ಜುಲೈ 7 ಮತ್ತು 8ರಂದು ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯಲಿದೆ.

ಶರಣ ಸಾಹಿತ್ಯ ಗೋಷ್ಠಿಗಳು, ಆಧುನಿಕ ವಚನ ಗೋಷ್ಠಿ, ವಚನ ಗಾಯನ, ಸಂಸ್ಮರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಸಮ್ಮೇಳನ ಒಳಗೊಂಡಿದೆ.

ಈ ಕುರಿತು ಈಚೆಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಸಿ. ಸೋಮಶೇಖರ್‌, ಜು.7ರಂದು ಬೆಳಗ್ಗೆ 10.30ಕ್ಕೆ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು ಹಾಗೂ ಸಿದ್ದಗಂಗಾ ಕ್ಷೇತ್ರದ ಸಿದ್ದಲಿಂಗ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಸಮ್ಮೇಳನ ಆರಂಭವಾಗಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಮ್ಮೇಳನವನ್ನು ಉದ್ಘಾಟಿಸುವರು ಎಂದು ತಿಳಿಸಿದರು.

ಸಮ್ಮೇಳನದಲ್ಲಿ ‘ಕಲ್ಯಾಣ ಸಂಗಮ’ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವ ವಿ. ಸೋಮಣ್ಣ ಬಿಡುಗಡೆ ಮಾಡಲಿದ್ದು, ‘ಮಹಾಮನೆ’ವಿಶೇಷ ಸಂಚಿಕೆಯನ್ನು ಸಚಿವ ಎಂ.ಬಿ. ಪಾಟೀಲ ಲೋಕಾರ್ಪಣೆ ಮಾಡುವರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೊ.ರು. ಚನ್ನಬಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ಎರಡು ದಿನಗಳ ಸಮ್ಮೇಳನದಲ್ಲಿ ‘ಸಾಂಸ್ಕೃತಿಕ ನಾಯಕ ಬಸವಣ್ಣ’, ‘ಶರಣ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ’, ‘ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಸಂಸ್ಮರಣೆ’ಹಾಗೂ ‘ಯುವ ಜನರತ್ತ ಶರಣ ಸಾಹಿತ್ಯ’ ವಿಷಯಗಳ ಕುರಿತು ಗೋಷ್ಠಿಗಳು ನಡೆಯಲಿವೆ. ಜೊತೆಗೆ ಆಧುನಿಕ ವಚನ ಗೋಷ್ಠಿ, ವಚನ ಗಾಯನ ಮತ್ತು ನೃತ್ಯರೂಪಕ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕಲಾವಿದೆ ವೈಜಯಂತಿ ಕಾಶಿ ಅವರಿಂದ ನೃತ್ಯರೂಪಕ ಹಾಗೂ ಗಾಯಕಿ ಎಂ.ಡಿ. ಪಲ್ಲವಿ, ಸಂಗೀತಾ ಕಟ್ಟಿ, ಮೃತ್ಯುಂಜಯ ದೊಡ್ಡವಾಡ, ರವೀಂದ್ರ ಸೊರಗಾವಿ, ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಪಾವನಿ ಭಾರದ್ವಾಜ್ ಅವರಿಂದ ವಚನ ಗಾಯನ ನಡೆಯಲಿದೆ.

ಜು.8ರಂದು ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಗದಗ ತೋಂಟದ ಸಿದ್ದರಾಮ ಸ್ವಾಮೀಜಿ, ಹುಬ್ಬಳ್ಳಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ಭಾಲ್ಕಿಯ ಬಸವಲಿಂಗ ಪಟ್ಟದೇವರು ಸಾನಿಧ್ಯ ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನಾ ಭಾಷಣ ಮಾಡಲಿದ್ದಾರೆ.

ಶರಣ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ಸಚಿವ ಈಶ್ವರ ಬಿ. ಖಂಡ್ರೆ ಬಿಡುಗಡೆ ಮಾಡಲಿದ್ದು, ಪ್ರಭಾಕರ ಕೋರೆ, ಬಿ.ವೈ. ವಿಜಯೇಂದ್ರ, ಬಿ.ಎಸ್. ಪರಮಶಿವಯ್ಯ ಹಾಗೂ ಎಸ್. ಷಡಕ್ಷರಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಕೆ.ವಿ. ನಾಗರಾಜಮೂರ್ತಿ, ಪುಟ್ಟರಾಜು ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *