ಹೊಸದುರ್ಗ:
“ತಲೆ ತಗ್ಗಿಸಿ ಪುಸ್ತಕ ಓದಿದರೆ, ಅದು ಮುಂದೆ ಸಮಾಜದಲ್ಲಿ ತಲೆ ಎತ್ತಿ ಬಾಳುವಂತೆ ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆದರೆ, ತಲೆ ಎತ್ತಿ ಮೊಬೈಲ್ ನೋಡುತ್ತಾ ಕೂತರೆ, ಅದು ಮುಂದೆ ಸಮಾಜದಲ್ಲಿ ತಲೆ ಎತ್ತದ ಹಾಗೆ ಮಾಡುತ್ತದೆ” ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದರು.
ತಾಲ್ಲೂಕಿನ ಸಾಣೇಹಳ್ಳಿಯ ಶ್ರೀ ಗುರುಪಾದೇಶ್ವರ ಪ್ರೌಢಶಾಲೆ ಹಾಗೂ ಶ್ರೀ ಶಿವಕುಮಾರ ಸ್ವಾಮೀಜಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ 2026-27 ನೇ ಸಾಲಿನ ವಿದ್ಯಾರ್ಥಿ ಸಂಘಗಳ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹಾಗೂ ವಿದ್ಯಾರ್ಥಿ ವೃಂದದಲ್ಲಿ ಮೊಬೈಲ್ ವ್ಯಾಮೋಹ ಅತಿಯಾಗುತ್ತಿದ್ದು, ಇದು ಅವರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಶ್ರೀಗಳು ತೀವ್ರ ಕಳಕಳಿ ವ್ಯಕ್ತಪಡಿಸಿದರು.
“ಬರಬರುತ್ತಾ ರಾಯನ ಕುದುರೆ ಕತ್ತೆಯಾಯಿತು” ಎಂಬ ಗಾದೆಯಂತೆ, ಇಂದು ಎಷ್ಟೇ ಒಳ್ಳೆಯ ಮಾತುಗಳನ್ನು ಹೇಳಿದರೂ ಕೇಳುವ ಮನಸ್ಥಿತಿ ಯುವಕರಲ್ಲಿ ಇಲ್ಲದಂತಾಗಿದೆ. ಶಿಸ್ತು, ಏಕಾಗ್ರತೆ ಮತ್ತು ಸಾಧನೆ ಇಲ್ಲದಿದ್ದರೆ ಬದುಕಿನಲ್ಲಿ ಮಹತ್ತರ ಸಾಧನೆ ಮಾಡಲು ಸಾಧ್ಯವಿಲ್ಲ. ಸಾಧನೆ ಎಂಬುದು ಸುಮ್ಮನೆ ಬರಲ್ಲ, ಅದು ಸಾಧಕನ ಸ್ವತ್ತು.

ಇಂದಿನ ದಿನಗಳಲ್ಲಿ ತಂದೆ-ತಾಯಿ ಮತ್ತು ಗುರು-ಹಿರಿಯರ ಮಾತನ್ನು ಕೇಳದೆ, ಸ್ವೇಚ್ಛಾಚಾರದಿಂದ ವರ್ತಿಸುವ ವಿಚಿತ್ರ ಗುಣ ಬೆಳೆದು ಬರುತ್ತಿರುವುದು ವಿಷಾದನೀಯ ಸಂಗತಿ.
ಮೊಬೈಲ್‌ನಲ್ಲಿ ಒಳ್ಳೆಯ ಅಂಶಗಳೂ ಇವೆ, ದಾರಿ ತಪ್ಪಿಸುವ ಅಂಶಗಳೂ ಇವೆ. ಆದರೆ ನಮ್ಮ ಯುವ ಪೀಳಿಗೆ ಬದುಕಿಗೆ ಶಕ್ತಿ ಕೊಡುವ ಅಂಶಗಳಿಗಿಂತ ದಾರಿ ತಪ್ಪಿಸುವ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳು ಇಂದಿನಿಂದಲೇ ಜಾಗೃತರಾಗಿ ಮೊಬೈಲ್ ವ್ಯಾಮೋಹದಿಂದ ಹೊರಬಂದು, ಸಾಮೂಹಿಕವಾಗಿ ಓದುವುದು, ಚರ್ಚಿಸುವುದು ಮತ್ತು ಜ್ಞಾನ ವಿಕಾಸ ಮಾಡಿಕೊಳ್ಳುವುದರ ಮೂಲಕ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
“ಭೂಮಿ, ಚಿನ್ನ, ಹೆಣ್ಣು ಯಾವುದೂ ನಮ್ಮದಲ್ಲ. ನಮ್ಮ ನಿಜವಾದ ಸಂಪತ್ತು ಎಂದರೆ ಅದು ‘ಜ್ಞಾನರತ್ನ’ ಮಾತ್ರ. ಅಂತಹ ಜ್ಞಾನವನ್ನು ಸಂಪಾದಿಸಿದರೆ ನಿಮಗಿಂತ ಶ್ರೀಮಂತರು ಜಗತ್ತಿನಲ್ಲಿ ಯಾರೂ ಇರಲು ಸಾಧ್ಯವಿಲ್ಲ” ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ಜ್ಞಾನದ ಜೊತೆಗೆ ಉತ್ತಮ ಆಚಾರ-ವಿಚಾರಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಸದ್ಬುದ್ಧಿ ಬೆಳೆಯಲು ಸಾಧ್ಯ. ಕೇವಲ ಪಠ್ಯಪುಸ್ತಕದ ಶಿಕ್ಷಣಕ್ಕೆ ಸೀಮಿತವಾಗದೆ, ನೈತಿಕ ಮೌಲ್ಯಗಳು ಮತ್ತು ಸ್ವಚ್ಛತೆಯ ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಬಾಲ್ಯದಲ್ಲಿ ಸಿಗುವ ಸಂಸ್ಕಾರ ಮತ್ತು ಶಿಕ್ಷಣವೇ ಜೀವನದ ಭದ್ರ ಬುನಾದಿ. ಮನೆಗೆ ಫೌಂಡೇಶನ್ ಎಷ್ಟು ಮುಖ್ಯವೋ, ವ್ಯಕ್ತಿತ್ವ ವಿಕಾಸಕ್ಕೆ ಬಾಲ್ಯದ ಶಿಸ್ತು ಅಷ್ಟೇ ಮುಖ್ಯ ಎಂದು ಒತ್ತಿ ಹೇಳಿದರು.
ಪ್ಯಾಕೆಟ್ ಆಹಾರ ಹಾಗೂ ಕರಿದ ತಿಂಡಿಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ವಿದ್ಯಾರ್ಥಿಗಳು ಇಂತಹ ಆಹಾರಗಳಿಂದ ದೂರವಿದ್ದು ಮನೆಯ ಸಾತ್ವಿಕ ಆಹಾರಕ್ಕೆ ಆದ್ಯತೆ ನೀಡಬೇಕು.
ಸುತ್ತಮುತ್ತಲಿನ ಸ್ವಚ್ಛತೆ: ಶಾಲಾ ಆವರಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಗೂ ಖಾಲಿ ಪ್ಯಾಕೆಟ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಕಸದ ತೊಟ್ಟಿಯಲ್ಲಿಯೇ ಹಾಕುವ ಮೂಲಕ ಶಿಸ್ತು ಕಾಪಾಡಿಕೊಳ್ಳಬೇಕು. ಪರಿಸರ ಸ್ವಚ್ಛತೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಜಂಟಿಯಾಗಿ ಶ್ರಮಿಸಬೇಕು.
ವಿದ್ಯಾರ್ಥಿಗಳಲ್ಲಿ ಕೇವಲ ಕಲೆ, ನೃತ್ಯದಂತಹ ಪ್ರತಿಭೆಗಳಿದ್ದರೆ ಸಾಲದು, ಅದನ್ನು ಉತ್ತಮ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ಚಿಂತನೆ ಇರಬೇಕು. ಇತರರನ್ನು ನೋಡಿ ಸ್ಪೂರ್ತಿ ಪಡೆದು, ನನಗಿಂತ ಉತ್ತಮವಾಗಿ ಸಾಧಿಸುವ ಛಲ ಹಾಗೂ ಮನೋಬಲವನ್ನು ಬೆಳೆಸಿಕೊಳ್ಳಬೇಕು.
ಶ್ರವಣ, ಮನನ, ಮತ್ತು ನಿಧಿದ್ಯಾಸನಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಪಠ್ಯೇತರ ಚಟುವಟಿಕೆಗಳ ಮಹತ್ವ: ಕೇವಲ ಪಠ್ಯದಿಂದಲೇ ಎಲ್ಲವೂ ಸಿಗುವುದಿಲ್ಲ. ನಾಟಕೋತ್ಸವ, ಗೋಷ್ಠಿಗಳು ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಬದುಕಿಗೆ ಹೊಸ ಬೆಳಕು ಸಿಗುತ್ತದೆ.
ಶಿಕ್ಷಕರು ಕೇವಲ ಪಾಠ ಮಾಡುವುದಷ್ಟೇ ಅಲ್ಲದೆ, ವಿದ್ಯಾರ್ಥಿಗಳಲ್ಲಿ ಉತ್ತಮ ನಡವಳಿಕೆ ಮತ್ತು ಪರಿಸರ ಪ್ರಜ್ಞೆಯನ್ನು ಮೂಡಿಸಲು ಸದಾ ಮಾರ್ಗದರ್ಶಕರಾಗಿರಬೇಕು ಎಂದು ಕರೆ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷರಾದ ಎ. ಸಿ. ಚಂದ್ರಪ್ಪ ಮಾತನಾಡಿ, “ವಿದ್ಯಾರ್ಥಿ ಸಂಘಗಳ ಮೂಲಕ ವರ್ಷದ ಉದ್ದಕ್ಕೂ ಕ್ರೀಡೆ, ಕಲೆ, ಸಾಹಿತ್ಯ ಮತ್ತು ಪಾಠಕ್ಕೆ ಪೂರಕವಾದ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು. ಸಾಣೇಹಳ್ಳಿಯ ಶ್ರೀಮಠದಲ್ಲಿ ಗ್ರಂಥಾಲಯ ಗೋಷ್ಠಿ, ರಾಷ್ಟ್ರೀಯ ನಾಟಕೋತ್ಸವ ಸೇರಿದಂತೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಸಕಲ ವ್ಯವಸ್ಥೆಗಳಿದ್ದು, ವಿದ್ಯಾರ್ಥಿಗಳು ಇಲ್ಲಿನ ಶಿಸ್ತು ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ಪ್ರಜೆಗಳಾಗಬೇಕು” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಿವಕುಮಾರ ಸ್ವಾಮೀಜಿ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಸಿ. ಕೆ. ಸ್ವಾಮಿ ಮಾತನಾಡಿ, “ಜಗತ್ತಿಗೆ ಸಂವಿಧಾನದ ತಳಹದಿಯನ್ನು ಕೊಟ್ಟವರು ಪೂಜ್ಯ ಶ್ರೀ ಬಸವಣ್ಣನವರು. ಅವರ ವಚನಗಳು ಇಡೀ ಮಾನವಕುಲಕ್ಕೆ ದಾರಿದೀಪ. ವಿದ್ಯಾರ್ಥಿಗಳು ಇಂದಿನ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪ್ರಾಮಾಣಿಕತೆಯ ಬದುಕನ್ನು ಸಾಗಿಸಬೇಕು. ಹೆಣ್ಣುಮಕ್ಕಳಂತೆ ಗಂಡುಮಕ್ಕಳೂ ಸಮಯ ವ್ಯರ್ಥ ಮಾಡದೆ ಸಾಧನೆ ಮಾಡಬೇಕು” ಎಂದರು.
ಹೊಸದುರ್ಗ ತಾಲ್ಲೂಕು ಶಿಕ್ಷಣ ಸಂಯೋಜಕರಾದ ಶಶಿಧರ ಮಾತನಾಡಿ, “ವಿದ್ಯೆ, ಬುದ್ಧಿ, ಸಂಸ್ಕೃತಿ ಮತ್ತು ಸಂಸ್ಕಾರಕ್ಕೆ ಸಾಣೆ ಹಿಡಿಯುವ ಏಕೈಕ ಜಾಗ ಸಾಣೇಹಳ್ಳಿ ಶ್ರೀಮಠ. ತರಗತಿ ಕೋಣೆಯಿಂದ ದೇಶದ ಸಂಪನ್ಮೂಲ ರೂಪಿಸುವ ವಿದ್ಯಾರ್ಥಿಗಳಿಗೆ ಶಿಕ್ಷಕರು ಮೂಲ ನೀರೆರೆಯುತ್ತಿದ್ದಾರೆ. ಮೊಬೈಲ್ ಇಲ್ಲದ ಈ ಪವಿತ್ರ ವಾತಾವರಣದಲ್ಲಿ ಪೋಷಕರ ನಂಬಿಕೆಯನ್ನು ಉಳಿಸಿ, ಶ್ರವಣ, ಮನನ, ನಿಧಿದ್ಯಾಸನಗಳ ಮೂಲಕ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಪೂಜ್ಯರಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಶಿವಸಂಚಾರದ ಕಲಾವಿದರಾದ ಹೆಚ್. ಎಸ್. ನಾಗರಾಜ ಹಾಗೂ ಶರಣ್ ವಚನಗೀತೆಗಳನ್ನು ಪ್ರಸ್ತುತಪಡಿಸಿದರು. ಉಭಯ ಶಾಲೆಗಳ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ರೂಪಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಶ್ರೀನಿವಾಸ, ಮುಖ್ಯೋಪಾಧ್ಯಾಯ ಕೆ. ಆರ್. ಬಸವರಾಜ, ಬಿ. ಎಸ್. ಶಿವಕುಮಾರ, ಎ. ಎಸ್. ಶಿಲ್ಪಾ, ಶಿಕ್ಷಕ ವೃಂದ, ಸಲಹಾ ಸಮಿತಿಯ ಸದಸ್ಯರು, ಪೋಷಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಶಿಕ್ಷಕಿ ಕೆ. ಎಂ. ವೀಣಾ ಎಲ್ಲರನ್ನೂ ಸ್ವಾಗತಿಸಿದರೆ, ಶಿಕ್ಷಕಿ ಎಸ್. ಪಿ. ಶೋಭಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP
