‘ಮನೆಮನೆಗೆ ತಿರುಗಿ ವಚನ ಸಾಹಿತ್ಯ ಸಂಗ್ರಹಿಸಿದ ಹಳಕಟ್ಟಿ’

ನರಗುಂದ:

ಕನ್ನಡದ ಶ್ರೇಷ್ಠ ಸಂಶೋಧಕರು, ಸಾಹಿತಿ, ವಕೀಲರು ಮತ್ತು ಪ್ರಕಾಶಕರಾಗಿದ್ದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರು ೧೨ನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವನ್ನು ಮನೆ ಮನೆ ತಿರುಗಿ ಸಂಗ್ರಹಿಸಿ, ಸಂರಕ್ಷಿಸಿ, ಪ್ರಕಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಅವರ ಈ ಮಹೋನ್ನತ ಸೇವೆಯನ್ನು ಗೌರವಿಸಿ ಜನ್ಮದಿನವಾದ ಜುಲೈ ೨ರಂದು ವಚನ ಸಾಹಿತ್ಯ ಸಂರಕ್ಷಣಾ ದಿನ ಎಂದು ಕರ್ನಾಟಕ ಸರಕಾರ ಘೋಷಿಸಿದ್ದು ಶ್ಲಾಘನೀಯವಾದುದು ಎಂದು ಉಪನ್ಯಾಸಕರಾಗಿ ಆಗಮಿಸಿದ್ದ ಗದುಗಿನ ಸರ್ ಸಿದ್ದಪ್ಪ ಕಂಬಳಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿದಾರರಾದ ವೀರನಗೌಡ ಮರಿಗೌಡರ ಬಣ್ಣಿಸಿದರು.

ಅವರು ತಾಲೂಕಿನ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿ ವೇದಿಕೆ ಭೈರನಹಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದಲ್ಲಿ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದಲ್ಲಿ ಹಮ್ಮಿಕೊಂಡಿದ್ದ ಡಾ. ಫ. ಗು. ಹಳಕಟ್ಟಿ ಜಯಂತಿ ನೆನಪಿನಲ್ಲಿ ವಚನ ಸಾಹಿತ್ಯ ಸಂರಕ್ಷಣಾ ದಿನದ ಪ್ರಯುಕ್ತ ವಚನ ವೈಭವ ವಚನ ಸಂಸ್ಕೃತಿಯ ಅನಾವರಣ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.

ಅಂದಿನ ಕಾಲದಲ್ಲಿ ಮರೆತುಹೋಗಿದ್ದ ಮತ್ತು ಧೂಳು ಹಿಡಿಯುತ್ತಿದ್ದ ಶರಣರ ವಚನಗಳ ತಾಳೆಗರಿ ಹಾಗೂ ಹಸ್ತಪ್ರತಿಗಳನ್ನು ಹುಡುಕಲು ಹಳ್ಳಿ ಹಳ್ಳಿಗೆ ಸೈಕಲ್ ಮೇಲೆ ಸುತ್ತಿ ಮನೆ-ಮನೆಗಳಿಂದ ಸಂಗ್ರಹಿಸಿದರು. ಸಂಗ್ರಹಿಸಿದ ವಚನಗಳನ್ನು ಮುದ್ರಿಸಲು ಹಣದ ಕೊರತೆಯಾದಾಗ ತಮ್ಮ ಸ್ವಂತ ಮನೆಯನ್ನೇ ಮಾರಿ ಹಿತಚಿಂತಕ ಮುದ್ರಣಾಲಯವನ್ನು ಸ್ಥಾಪಿಸಿದ ಮಹಾನುಭಾವರು. ಅವರು ಸ್ಥಾಪಿಸಿದ ಹಿತಚಿಂತಕ ಮುದ್ರಣಾಲಯಕ್ಕೆ ಇಂದಿಗೆ ನೂರು ವರ್ಷಗಳು ಸಂದಿವೆ ಎಂದರೆ ನಾವೆಲ್ಲರೂ ಹೆಮ್ಮೆಪಡುವಂತಹ ವಿಷಯ ಎಂದು ಹೇಳಿದರು.

ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ರಾಮದುರ್ಗ ತಾಲೂಕ ಕುರುಬರ ಸಂಘದ ಅಧ್ಯಕ್ಷರಾದ ಪಡಿಯಪ್ಪ ಕ್ವಾರಿ ಮಾತನಾಡಿ, ಪೂಜ್ಯರು ಪುಟ್ಟ ಹಳ್ಳಿಯಲ್ಲಿದ್ದುಕೊಂಡು ಕನ್ನಡ ಸೇವೆಗಾಗಿ ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ತಾಯಿ ಕನ್ನಡಾಂಭೆಯ ಸೇವೆಯನ್ನು ನಿರಂತರವಾಗಿ ಮಾಡುತ್ತಿರುವುದು ಅಭಿನಂದನೀಯವಾದುದು.

ಅಷ್ಟೆ ಅಲ್ಲದೆ ನಾಡು-ನುಡಿ ನೆಲ-ಜಲ ಹಾಗೂ ಶೈಕ್ಷಣಿಕ , ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಪೂಜ್ಯರ ನಾಡಪ್ರೇಮ ಸರ್ವರಿಗೂ ಮಾದರಿಯಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಶ್ರದ್ಧಾ ಸ್ವರ ವೆಲ್ಪರ್ ಸಂಸ್ಥೆಯಿಂದ ಹಾಗೂ ಹಲವಾರು ಬಾಲ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಭಜನಾ ಮಂಡಳಿಯವರಿಂದ ವಚನ ಸಂಗೀತ ನೆರವೇರಿತು.

ವೇದಿಕೆ ಮೇಲೆ ಪೂಜ್ಯ ಶಾಂತಲಿಂಗ ಶ್ರೀಗಳು ಸಾನಿಧ್ಯ ವಹಿಸಿದ್ದರು. ಚನ್ನಬಸಪ್ಪ ಕಂಠಿ, ಎಸ್ ಜಿ ಮಣ್ಣೂರಮಠ, ಸುಕನ್ಯಾ ಸಾಲಿ, ಮಹೇಶ ಸಾಲಿಮಠ, ಮಾಲಾ ಪಾಟೀಲ, ಮಂಗಳಾ ಪಾಟೀಲ, ಭಾರತಿ ಹೊಂಗಲ್, ಡಾ. ಎ ಆಯ್ ಹುಯಿಲಗೋಳ, ಜಗದೀಶ ಜಾದವ, ಚಂದ್ರಶೇಖರ ಸೊಬರದ, ಗಂಗಯ್ಯ ವಸ್ತ್ರದ ಪ್ರಮುಖರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *