‘ತಮ್ಮನ್ನೇ ಸುಟ್ಟುಕೊಂಡು ವಚನಗಳಿಗೆ ಬೆಳಕು ಕೊಟ್ಟ ಫ. ಗು. ಹಳಕಟ್ಟಿ’

ಹಳಕಟ್ಟಿ ಅವರ ಮರಿಮೊಮ್ಮಗಳು ಪ್ರಭಾವತಿ ಅವರಿಗೆ ಗೌರವ ನಮನ

ಅಣ್ಣಿಗೇರಿ:

ಸಕಲ ವೈಭೋಗಗಳನ್ನು ಅನುಭವಿಸಿ, ಸುಖದ ಸುಪ್ಪತ್ತಿಗೆಯಲ್ಲಿ ಬದುಕಬಹುದಾಗಿದ್ದ ವ್ಯಕ್ತಿ ತನ್ನ ಮೈಹಿಂಡಿಕೊಂಡು ಸಿಹಿಕೊಡುವ ಕಬ್ಬಿನಂತೆ, ಗಂಧದ ಕೊರಡಿನಂತೆ, ಉರಿವ ದೀಪದಂತೆ ತಮ್ಮ ಬದುಕನ್ನೇ ಸುಟ್ಟುಕೊಂಡು ವಚನಗಳಿಗೆ ಬೆಳಕು ಕೊಟ್ಟು ನಮ್ಮನ್ನು ಕಾಪಾಡಿದ ಪುಣ್ಯಾತ್ಮ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿಯವರು ಎಂದು ಚಿಂತಕ ಪ್ರೊ. ಎಸ್. ಎಸ್‌. ಹರ್ಲಾಪೂರ ಸ್ಮರಿಸಿದರು.

ಸ್ಥಳೀಯ ಶ್ರೀಮತಿ ನಿಂಗಮ್ಮ ಎಸ್. ಹೂಗಾರ ವಿದ್ಯಾಲಯದಲ್ಲಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನೋತ್ಸವ ಹಾಗೂ ವಚನ ಸಂರಕ್ಷಣಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಹಳಕಟ್ಟಿ ಅವರು ಇಲ್ಲದಿದ್ದರೆ ವಚನಗಳು, ವಚನಕಾರರು ಇತಿಹಾಸದ ಪುಟಗಳಲ್ಲಿ ಕಣ್ಮರೆಯಾಗುವ ಸಂಭವವಿತ್ತು. ಈ ಕಾರಣದಿಂದ ಅವರನ್ನು ಎಷ್ಟು ನೆನೆದರೂ ಕಡಿಮೆಯೇ ಎಂದರು.

ಹಳಕಟ್ಟಿ ಅವರು ಪಟ್ಟ ಕಷ್ಟಗಳು ಸಾರ್ಥಕತೆ ಕಾಣಬೇಕಾದರೆ ನಾವೆಲ್ಲ ವಚನಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಅದರಂತೆ ಬದುಕಬೇಕು ಎಂದರು.

ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಎರಡೂ ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ. ಇಂತಹ ವಚನ ಸಾಹಿತ್ಯವನ್ನು ಅಂದಿನ ದಿನಮಾನಗಳಲ್ಲಿ ಇಡೀ ಕರ್ನಾಟಕದ ಏಕೈಕ ಮುದ್ರಣಾಲಯ ಹೊಂದಿದ್ದ ಮಂಗಳೂರಿನ ಕ್ರಿಶ್ಚಿಯನ್ ಮಿಷೀನರಿ ಯವರು ಕ್ರಿಶ್ಚಿಯನ್ ಸಿದ್ದಾಂತವನ್ನೇ ಹೋಲುವ ವಚನ ಸಾಹಿತ್ಯವನ್ನು ಪ್ರಕಟಿಸಿದರೆ ಕ್ರಿಶ್ಚಿಯನ್ ಧರ್ಮ ಪ್ರಸಾರ ನಿಲ್ಲಿಸಬೇಕಾದೀತು ಎಂದು ಆತಂಕಪಟ್ಟು ಪ್ರಕಟಣೆಗೆ ನಿರಾಕರಿಸಿರು. ಆಗ ತಮ್ಮ ಮನೆಯನ್ನೇ ಮಾರಿದ ಹಳಕಟ್ಟಿ ಅವರು ಆ ಹಣದಿಂದ ವಿಜಯಪುರದಲ್ಲಿ ಹಿತಚಿಂತಕ ಎನ್ನುವ ಮುದ್ರಣಾಲಯ ಸ್ಥಾಪಿಸಿ ವಚನ ಸಾಹಿತ್ಯವನ್ನು ಪ್ರಕಟಿಸಿದರು.

ವಚನ ಸಾಹಿತ್ಯವನ್ನು ಕ್ರಮವಾಗಿ ಹಳಕಟ್ಟಿ ಅವರ ಶಿವಾನುಭವ ಪತ್ರಿಕೆ, ಕರ್ನಾಟಕ ವಿಶ್ವವಿದ್ಯಾಲಯ, ಕರ್ನಾಟಕ ಸರಕಾರ, ಗದುಗಿನ ತೋಂಟದಾರ್ಯ ಮಠ, ಹಳಕಟ್ಟಿ ಅವರೇ ಸ್ಥಾಪಿಸಿದ್ದ ವಿದ್ಯಾ ಸಂಸ್ಥೆ ವಿಜಯಪುರದ ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆ ಪ್ರಕಟಿಸಿ ನೀಡಿವೆ ಎಂದರು.

ಹಿರಿಯ ಪತ್ರಕರ್ತ ವೀರೇಶ ಶಾನುಭೋಗರ ಮಾತನಾಡಿ, ಶ್ರೇಷ್ಠತೆಯ ರೋಗ ಹೊಂದಿದ ಮೂಲಭೂತವಾದಿಗಳ ಅಟ್ಟಹಾಸದ ನಡುವೆ ಉತ್ತರ ಭಾರತದಲ್ಲಿ ಮಹಾವೀರ, ಗುರುನಾನಕ, ಬುದ್ಧ, ಹೊಸ ಧರ್ಮ ಸ್ಥಾಪಿಸಿದರೆ, ಅಚ್ಚ ಕನ್ನಡದ ನೆಲದಲ್ಲಿ ಬಸವಣ್ಣನವರು ಕನ್ನಡ ಧರ್ಮವನ್ನು ಕರ್ನಾಟಕಕ್ಕೆ ತನ್ಮೂಲಕ ಇಡೀ ಜಗತ್ತಿಗೆ ಕೊಡುಗೆಯಾಗಿ ನೀಡಿದರು ಎಂದು ಹೇಳಿ ಹಳಕಟ್ಟಿ ಅವರ ಬದುಕನ್ನು ಸ್ಮರಿಸಿದರು. ಯು

ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಕಿರಣ ಬೂದಿಹಾಳ ಮಾತನಾಡಿ, ಬುದ್ಧ, ಬಸವರ ವಿಚಾರಧಾರೆಗಳಿಗೆ ಅಂಬೇಡ್ಕರ್ ಕಾನೂನು ರೂಪ ಕೊಟ್ಟರು ಎಂದರು.

ಹಳಕಟ್ಟಿ ಅವರ ಆಶಯ ಆದರ್ಶಗಳಿಗೆ ತಕ್ಕಂತೆ ಬದುಕುತ್ತಿರುವ ಅವರ ಮರಿಮೊಮ್ಮಗಳು 83 ವರ್ಷದ  ಅಣ್ಣಿಗೇರಿಯ ಪ್ರಭಾವತಿ ರಬರಬಿ ಅವರಿಗೆ ಗೌರವಪೂರ್ಣವಾಗಿ ಸನ್ಮಾನಿಸಿ ನಮನಗಳನ್ನು ಸಲ್ಲಿಸಲಾಯಿತು.

ಅಣ್ಣಿಗೇರಿ ಪಟ್ಟಣದಲ್ಲಿ ಹಳಕಟ್ಟಿ ಅವರ ಮರಿಮೊಮ್ಮಗಳು ನಮ್ಮ ಜೊತೆ ಬದುಕಿರುವುದು, ಹಳಕಟ್ಟಿ ಅವರ ತಂದೆ ಗುರುಬಸಪ್ಪ ಹಳಕಟ್ಟಿ ಅವರು ಅಣ್ಣಿಗೇರಿಯ ಒಂದನೇ ನಂಬರ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಅಣ್ಣಿಗೇರಿಯ ಭಾಗ್ಯ ಎನ್ನಲಾಯಿತು.

ನಿಂಗಮ್ಮ ಹೂಗಾರ ವಿದ್ಯಾಲಯದ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಶರಣ ಶರಣೆಯರ ವೇಷಭೂಷಣಗಳಲ್ಲಿ ವಚನಗಳನ್ನು ಹೇಳಿದರು. ಫ. ಗು. ಹಳಕಟ್ಟಿಯವರ ವೇಷದಲ್ಲಿಯೇ ಅವರ ಬದುಕನ್ನು ತೆರೆದಿಟ್ಟ ವಿದ್ಯಾರ್ಥಿಗಳು ಗಮನ ಸೆಳೆದರು.

ವೇದವತಿ ಕಟ್ಟಿ, ಚಂದ್ರಶೇಖರ ಮುಂಡರಗಿ, ಉಪಸ್ಥಿತರಿದ್ದರು. ಸುಮಿತ್ರಾ ಹುಣಸಿಮರದ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಕ್ಷಿ ಹರ್ಲಾಪೂರ ಬಸವಾದಿ ಶರಣರನ್ನು ಪ್ರಾರ್ಥಿಸಿದರು. ಅಂಜಲಿ ಅಡಾಡಿ ಸ್ವಾಗತಿಸಿದರು. ಶಂಕ್ರಮ್ಮ ಕೋರಿ ವಂದಿಸಿದರು. ಲಕ್ಷ್ಮಿ ಬನ್ನೆಣ್ಣವರ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
1 Comment

Leave a Reply

Your email address will not be published. Required fields are marked *

ಪತ್ರಕರ್ತರು, ಅಣ್ಣಿಗೇರಿ