ಕಲಬುರಗಿ: ೨೦೨೬ನೇ ಸಾಲಿನ ಫ.ಗು.ಹಳಕಟ್ಟಿ ಪ್ರಶಸ್ತಿ ಪ್ರದಾನ

ಕಲಬುರಗಿ:

ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯವನ್ನು ಸಂರಕ್ಷಿಸುವಲ್ಲಿ ಡಾ. ಫ.ಗು. ಹಳಕಟ್ಟಿ ಅವರ ಪರಿಶ್ರಮ, ತ್ಯಾಗಗಳು ಸದಾ ಸ್ಮರಣೀಯ. ಹಳ್ಳಿ ಹಳ್ಳಿಗೂ ಸಂಚರಿಸಿ ವಚನಗಳನ್ನು ಸಂಗ್ರಹಿಸಿ, ಸಂಶೋಧಿಸಿ, ಪ್ರಕಟಿಸಿದ ಕಾರ್ಯಗಳು ಇಂದು ವಚನಗಳನ್ನು ಅರಿಯಲು ಸಾಧ್ಯವಾಗಿದೆ.

ಗೋಳ ಗುಮ್ಮಟಕ್ಕಿಂತ ವಚನ ಗುಮ್ಮಟ ನೋಡಲು ಬಂದಿರುವೆ ಎಂದು ಬಿಎಂಶ್ರೀ ಅವರ ಮಾತುಗಳು ನಮ್ಮ ವೈಚಾರಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ. ಇಂದು ಎಲ್ಲಾ ಜಾತಿ ಧರ್ಮದವರಿಗೆ ವಚನ ಸಾಹಿತ್ಯ ಸಂಗ್ರಹಿಸಿ ಕೊಟ್ಟ ಕೀರ್ತಿ ಡಾ. ಫ.ಗು. ಹಳಕಟ್ಟಿ ಅವರಿಗೆ ಮಾತ್ರ ಸಲ್ಲುತ್ತದೆ. ಈ ದಿಸೆಯಲ್ಲಿ ಯುವಕರಿಗೆ ನಾವೆಲ್ಲ ವಚನಗಳ ಮಹತ್ವವನ್ನು ತಿಳಿಸಿ ಕೊಡಬೆಕಾಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಶನಿವಾರ ಏರ್ಪಡಿಸಿದ ವಚನ ಸಂಶೋಧನಾ ಪಿತಾಮಹ ಡಾ. ಫ.ಗು. ಹಳಕಟ್ಟಿ ಅವರ ಬದುಕು-ಸಾಧನೆ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಶರಣ ಚಿಂತಕಿ ಜಯಶ್ರೀ ಚಟ್ನಳ್ಳಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣ ಸಾಹಿತ್ಯ ಪರಿಷತ್ತು ಇವು ಒಂದು ನಾಣ್ಯದ ಎರಡು ಮುಖಗಳು. ಕನ್ನಡ ಸಾಹಿತ್ಯಕ್ಕೆ  ವಚನ ಸಾಹಿತ್ಯದ ಕೊಡುಗೆ ಬಹುದೊಡ್ಡದು. ಫ.ಗು. ಹಳಕಟ್ಟಿ ಇರದಿದ್ದರೆ ವಚನ ಸಾಹಿತ್ಯ ಲಭ್ಯವಿರುತ್ತಿರಲಿಲ್ಲ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಬಸವಾದಿ ಶರಣರ ವಚನ ಸಾಹಿತ್ಯವನ್ನು ಬೆಳಕಿಗೆ ತರುವಲ್ಲಿ ಡಾ. ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರ ಶ್ರಮ ಅಮೋಘವಾಗಿದೆ. ಒಂದು ವಿಶ್ವವಿದ್ಯಾಲಯ ಸಾಧಿಸಿದಷ್ಟು ಕೆಲಸವನ್ನು ಏಕಾಂಗಿಯಾಗಿ ಮಾಡಿದ್ದಾರೆ ಎಂದು ಹೇಳಿದ ಅವರು, ವೈಚಾರಿಕ ನೆಲೆಯಲ್ಲಿ ಬದುಕು ರೂಪಿಸಿಕೊಂಡ ಹಳಕಟ್ಟಿ ಅವರ ಸಾಧನೆ ಇಂದು ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು.

ಎಪಿಎಂಸಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ಅಫಜಲಪೂರ ಭಾರತೀಯ ಬಸವ ಬಳಗದ ಮಹೇಶ ಆಲೇಗಾಂವ, ಜಿಲ್ಲಾ ಕಸಾಪ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ಜಯಶ್ರೀ ಜಮಾದಾರ ಮಾತನಾಡಿದರು.

ಪ್ರಮುಖರಾದ ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ಸೋಮಶೇಖರಯ್ಯ ಹೊಸಮಠ, ದಿನೇಶ ಮದಕರಿ, ಜಗದೀಶ ಮರಪಳ್ಳಿ, ವಿನೋದ ಜೇನವೇರಿ, ಜ್ಯೋತಿ ಕೋಟನೂರ, ಶಿವಲೀಲಾ ಕಲಗುರ್ಕಿ, ಶಿವಾನಂದ ಪೂಜಾರಿ, ಶಿವನಂದ ಸುರವಸೆ, ಬಂಗಾರಪ್ಪ ಆಡಿನ, ಬಸವರಾಜ ಪಾಟೀಲ ಹೇರೂರ, ರವಿ ಶಹಾಪೂರಕರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

೨೦೨೬ನೇ ಸಾಲಿನ ಡಾ.ಫ.ಗು. ಹಳಕಟ್ಟಿ ಪ್ರಶಸ್ತಿ:

ಶರಣ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡುತ್ತಿರುವ ಗಣ್ಯರಾದ ಚಿದಂಬರರಾವ ಪಾಟೀಲ ಮರಗುತ್ತಿ, ಬೈಲಪ್ಪ ನೇದಲಗಿ ನೆಲೋಗಿ, ಪ್ರೊ. ಶಿವರಾಜ ಪಾಟೀಲ, ಬಂಡಪ್ಪ ಕೇಸೂರ, ಜಗನ್ನಾಥ ರಾಚೋಟ್ಟಿ, ಕಮಲಾ ಬಿ ಪಾಟೀಲ ಹೇರೂರ, ಅಶೋಕ ಘೂಳಿ, ಡಾ. ಶ್ರೀಮಂತ ಹೋಳಕರ್, ಡಾ. ಆನಂದ ಸಿದ್ಧಾಮಣಿ ಅವರನ್ನು ೨೦೨೬ ನೇ ಸಾಲಿನ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *