ಭಾಲ್ಕಿಯ ಪೂಜ್ಯರಿಗೆ ನೀಡಿರುವ ಬೆದರಿಕೆಗೆ ನಮ್ಮ ಖಂಡನೆಯಿದೆ.
ಬಸವ ಕಲ್ಯಾಣ
ಕಳೆದ ವಾರ ಪಂಚ ಕಮಿಟಿಯವರು ಪತ್ರಿಕಾಗೋಷ್ಠಿ ನಡೆಸಿ ಅರಿವಿನ ಮನೆಯಲ್ಲಿ ಹಡಪದ ಅಪ್ಪಣ್ಣನವರ ಗವಿ ಇರುವ ಯಾವುದೇ ಕುರುಹುಗಳಿಲ್ಲ, ಹಾಗಾಗಿ ಯಾರಿಗೂ ಒಂದಿಂಚು ಜಾಗ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಈ ವಿವಾದದಲ್ಲಿ ಹಡಪದ ಅಪ್ಪಣ್ಣನವರ ಸಮಾಜದ ಬೆಂಬಲಕ್ಕೆ ಬಂದಿರುವ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಪೂಜ್ಯ ಡಾ.ಬಸವಲಿಂಗ ಪಟ್ಟದೇವರು ಬಸವಕಲ್ಯಾಣಕ್ಕೆ ಬಂದರೆ ಘೇರಾವ್ ಮಾಡುತ್ತೇವೆ ಎಂದು ಬೆದರಿಕೆಯನ್ನೂ ಒಡ್ಡಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿದ್ಧ ಕೆಲವರು ಇತ್ತೀಚೆಗೆ ಬಸವಾದಿ ಶರಣರ ಹೆಸರಿನಲ್ಲಿ ನಡೆದ ಹಿಂದೂ ಸಮಾವೇಶದಲ್ಲಿಯೂ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. ಮತ್ತೆ ಕೆಲವರು ಪರೋಕ್ಷವಾಗಿ ಬೆಂಬಲ ನೀಡಿದ್ದರು.
ಅಲ್ಲಿ ಅವರು ಹಾಕಿದ್ದ ಘೋಷಣೆ: ನಾವೆಲ್ಲ ಹಿಂದೂ, ನಾವೆಲ್ಲ ಒಂದು. ಇಲ್ಲಿ ಅವರು ಹೇಳುತ್ತಿರುವುದು: (ಹಡಪದ ಸಮಾಜಕ್ಕೆ) ಒಂದು ಇಂಚು ಜಾಗವನ್ನೂ ಕೊಡುವುದಿಲ್ಲ.
ಈ ಜಾತಿವಾದಿ, ಅಜ್ಞಾನದ ನಿಲುವಿಗೆ ನಮ್ಮ ಖಂಡನೆಯಿದೆ. ಭಾಲ್ಕಿಯ ಪೂಜ್ಯರಿಗೆ ನೀಡಿರುವ ಬೆದರಿಕೆಗೂ ನಮ್ಮ ಖಂಡನೆಯಿದೆ.
ಮೊನ್ನೆಯವರೆಗೆ ‘ನಾವೆಲ್ಲ ಹಿಂದೂ, ನಾವೆಲ್ಲ ಒಂದು’ ಎಂದು ಕೂಗಾಡುತ್ತಾ ಸಮಾವೇಶ ಮಾಡಿದ ಎಲ್ಲಾ ಪಕ್ಷಗಳು, ಸ್ವಾಮಿಗಳು, ಆಯೋಜಕರು ಈ ವಿಷಯದಲ್ಲಿ ತಮ್ಮ ನಿಲುವನ್ನು ಸ್ಪಷ್ಟ ಪಡಿಸಬೇಕು.
ಪಂಚ ಕಮಿಟಿಯವರ ನಿಲುವು ಬಸವಣ್ಣನವರ ಸಮಾನತೆ ಮತ್ತು ಜಾತಿವಿರೋಧಿ ತತ್ವಗಳಿಗೆ ಸಂಪೂರ್ಣ ವಿರುದ್ಧವಾಗಿದೆ.
ಬಸವಣ್ಣನವರು ಜಾತಿ, ಕುಲ, ವರ್ಣಗಳ ಗೋಡೆಗಳನ್ನು ಒಡೆದು ಮಾನವೀಯತೆಯ ಹೊಸ ಸಮಾಜ ನಿರ್ಮಿಸಿದರು. ಅನುಭವ ಮಂಟಪದಲ್ಲಿ ಶರಣರಿಗೆ ಸ್ಥಾನಮಾನ ಸಿಕ್ಕಿದ್ದು ಜನ್ಮದ ಆಧಾರದ ಮೇಲೆ ಅಲ್ಲ; ಗುಣ, ಕಾಯಕ ಮತ್ತು ಭಕ್ತಿಯ ಆಧಾರದ ಮೇಲೆ.
ಅಂತಹ ಬಸವಣ್ಣನವರ ಹೆಸರಿನಲ್ಲಿ ಹಿಂದೂ ಸಮಾವೇಶ ಮಾಡುವವರು ಅವರ ತತ್ವಗಳನ್ನು ಆಚರಣೆಯಲ್ಲಿ ಪಾಲಿಸದೆ ಇದ್ದರೆ, ಅದು ಬಸವತತ್ವಕ್ಕೇ ಮಾಡಿದ ಅಪಚಾರವಾಗುತ್ತದೆ.
ಹಡಪದ ಅಪ್ಪಣ್ಣನವರು ಬಸವಾದಿ ಶರಣರ ಪರಂಪರೆಯ ಬಹು ಮುಖ್ಯ ಭಾಗ. ಆದ್ದರಿಂದ ಅರಿವಿನ ಮನೆಯ ವಿವಾದದಲ್ಲಿ ಎದ್ದಿರುವ ವಿವಾದವನ್ನು ಸಂವಾದದ ಮೂಲಕ ಪರಿಹರಿಸಬೇಕು.
ನಾವು ಹಡಪದ ಸಮಾಜದ ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಹಕ್ಕಿನ ಹೋರಾಟಕ್ಕೆ ನೈತಿಕ ಬೆಂಬಲ ವ್ಯಕ್ತಪಡಿಸುತ್ತೇವೆ. ಭಾಲ್ಕಿ ಸ್ವಾಮೀಜಿ, ಬೆಲ್ದಾಳ ಶರಣರಂತಹ ಪೂಜ್ಯರು ಈ ಬಗ್ಗೆ ನ್ಯಾಯ ಒದಗಿಸಲು ಮುಂದಾಗಿದ್ದು ನ್ಯಾಯಯುತವಾದ ನಡೆಯಾಗಿದೆ.
ಬಸವಣ್ಣನವರ ಹೆಸರನ್ನು ಬಳಸುವ ಮೊದಲು ಅವರ ವಚನಗಳ ಪಾಠವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದನ್ನು ಕಲಿಯಬೇಕು. ಆಮೇಲೆ ಬೇಕಾದರೆ ಸಮಾವೇಶ ಮಾಡುವ ಬಗ್ಗೆ ಯೋಚನೆ ಮಾಡಿ.

Baswanna philosophy is great
ಪಂಚ ಕಮಿಟಿಯಲ್ಲಿ ಹಿಂದುತ್ವದ ಮುಖವಾಣಿಗಳು ಸೇರಿಕೊಂಡಿವೆಯಾ? ಇದ್ದರೆ ದುರಂತ, ಬಹುತೇಕ ಲಿಂಗಾಯತ ಸಂಘಟನೆಗಳಲ್ಲಿ ಅಧಿಕಾರ, ಅವರ ಹೊಲ, ಆಸ್ತಿ, ವ್ಯಾಪಾರ , ಜಾತಿ ಪ್ರಾಭಲ್ಯ ನೋಡಿ ಅಧಿಕಾರ ಕೊಟ್ಟಿದುದರ ಪರಿಣಾಮ ವಿದು.
ಬಹುತೇಕ ಆಯಕಟ್ಟಿನ ಜಾಗದಲ್ಲಿ ಕುಳಿತವರಿಗೆ ಬಸವ ತತ್ವದ ಅಸ್ಮಿತೆಯ ಅರಿವಿಲ್ಲದೆ ಇರುವುದು ದುರಂತವೇ ಸರಿ, ಇವರಿಗೆ ಅಧಿಕಾರ ಸಿಗುತ್ತದೆ ಎಂದರೆ ಎಲ್ಲಿಗೆ ಬೇಕಾದರೂ ಹೋಗುವ ಜಾಯಮಾನದವರೆ ಹೆಚ್ಚು.
ಇನ್ನು ಮುಂದಾದರು ಇಂತವರಿಗೆ ಅವಕಾಶ ಕೊಡುವಾಗ ಯೋಚಿಸಿ.
ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಎಂಬ ಘೋಷಣೆ ಆಗಿದ್ದೆ ತಡ ಕೆಲವರಿಗೆ ನಿದ್ದೆಕೆಡುವಂತೆ ಮಾಡಿದೆ ಆದ್ದರಿಂದ ಈ ಬಸವ ವಿರೋಧಿಗಳು ತಕತಕ ಕುಣಿವಂತೆ ಮಾಡಿದೆ. ಇವರು ಬಸವಣ್ಣನವರನ್ನ ವಿರೋಧಿಸಿದಷ್ಟು ಬಸವಣ್ಣನವರ ವಿಚಾರಗಳು ಬೆಳೆಯುತ್ತಿವೆ.