‘ವ್ಯಸನಮುಕ್ತ ಸಮಾಜ ನಿರ್ಮಾಣ ಪ್ರತಿ ಪ್ರಜೆಯ ಜವಾಬ್ದಾರಿ’

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು:

ಸಮಾಜವನ್ನು ವ್ಯಸನಮುಕ್ತವಾಗಿಸುವುದು ಕೇವಲ ಸರ್ಕಾರದ ಹೊಣೆಯಲ್ಲ. ಅದು ಸಮಾಜದಲ್ಲಿನ ಪ್ರತಿ ನಾಗರಿಕ, ಪೋಷಕ, ಶಿಕ್ಷಕ, ಧಾರ್ಮಿಕ ಮುಖಂಡ ಮತ್ತು ಸಮಾಜದ ಎಲ್ಲ ವರ್ಗಗಳ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ ತಿಳಿಸಿದ್ದಾರೆ.

ಇತ್ತಿಚೆಗೆ ನಗರದ ಕೆಂಗೇರಿಯ ಸಮೀಪದ ವಿಶ್ವ ಒಕ್ಕಲಿಗರ ಮಠದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಗಾಂಧಿ ಸ್ಮಾರಕ ನಿಧಿ ಹಾಗೂ ವಿಶ್ವ ಒಕ್ಕಲಿಗರ ಮಠದ ಆಶ್ರಯದಲ್ಲಿ ಆಯೋಜಿಸಿದ್ದ ‘ವಿಶ್ವ ಮಾದಕ ವಸ್ತುಗಳ ವಿರೋಧಿ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉತ್ತಮ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವುದು, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಚಿಸಿ, ವ್ಯಸನದ ದುಷ್ಟರಿಣಾಮಗಳ ಬಗ್ಗೆ ನಿರಂತರ ಜಾಗೃತಿ ಮೂಡಿಸುವುದರ ಮೂಲಕ ಈ ಪಿಡುಗನ್ನು ತಡೆಯಬಹುದು ಎಂದು ಅವರು ತಿಳಿಸಿದರು.

ಮದ್ಯಪಾನ ಮತ್ತು ಮಾದಕ ವಸ್ತುಗಳ ವ್ಯಸನದಿಂದ ವ್ಯಕ್ತಿ ಆರೋಗ್ಯ ಹದಗೆಡುವುದಲ್ಲದೇ, ತನ್ನ ಕುಟುಂಬದ ನೆಮ್ಮದಿ ಮತ್ತು ಸಮಾಜದ ಶಾಂತಿ ಹಾಗೂ ದೇಶದ ಭವಿಷ್ಯಕ್ಕೆ ಗಂಭೀರ ಸವಾಲಾಗಿ ಪರಿಣಮಿಸುವದು ಎಂದು ಸಲಾದಪುರ ಅಭಿಪ್ರಾಯಪಟ್ಟರು.

ಮದ್ಯವ್ಯಸನದಿಂದ ಉಂಟಾಗುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯ ಸಂಬಂಧಿ ದುಷ್ಪರಿಣಾಮಗಳನ್ನು ನಿಯಂತ್ರಿಸಲು ದೇಶದ ಎಲ್ಲ ರಾಜ್ಯಗಳಲ್ಲಿ ಸಂಪೂರ್ಣ ಮದ್ಯಪಾನ ನಿಷೇಧವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಕುರಿತಾಗಿ ಕೇಂದ್ರ ಸರಕಾರ ಸಮಗ್ರ ನೀತಿ ರೂಪಿಸಬೇಕು ಎಂದು ಅಳಂದ ಶಾಸಕ ಬಿ.ಆರ್. ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಇಳಕಲ್‌-ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ, ಭಾಲ್ಕಿಯ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ, ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ. ಕೃಷ್ಣ ಕೋಶಾಧ್ಯಕ್ಷ ಎಚ್.ಬಿ. ದಿನೇಶ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಶಶಿಧರ್ ಎಸ್. ಕೋಸಂಬೆ, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ಮಾಜಿ ನಿರ್ದೇಶಕ ಗಿರಿಗೌಡರ್ ಮತ್ತು ಇತರರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *