ಈ ವರ್ಷದ ಶರಣ ಸಂಸ್ಕೃತಿ ಉತ್ಸವದಲ್ಲಿ ಹಳಕಟ್ಟಿ ನಾಟಕ ಪ್ರದರ್ಶನ

ಬಸವ ಮೀಡಿಯಾ
ಬಸವ ಮೀಡಿಯಾ

ಬಿ.ಎಲ್.ಡಿ.ಇ. ಸಂಸ್ಥೆಯಿಂದ ಫ.ಗು. ಹಳಕಟ್ಟಿ ಜೀವನಾಧಾರಿತ ಚಲನಚಿತ್ರ ಸೆಟ್ಟೇರಲಿದೆ

ಚಿತ್ರದುರ್ಗ:

ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರು ವಚನ ವಾಜ್ಞಯ ತಪಸ್ವಿ. ಬೆಳಗಾವಿಯಲ್ಲಿ ವಕೀಲಿ ವೃತ್ತಿ ಪ್ರಾರಂಭ ಮಾಡಿ ತದನಂತರ ಬಿಜಾಪುರಕ್ಕೆ ಆಗಮಿಸಿ ಅಲ್ಲಿಯೇ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಳ್ಳುತ್ತಾರೆ. ದೇವೇಂದ್ರಕುಮಾರ ಹಕಾರಿ ಹೇಳುವಂತೆ, ಹಳಕಟ್ಟಿಯವರು ಕ್ಲೈಂಟ್‌ಗಳ ಬಳಿ ಕೇಸಿನ ವಿಚಾರ ಮಾಡುವುದಕ್ಕಿಂತ ತಾಡೋಲೆಗಳ ಹುಡುಕಾಟದ ಬಗ್ಗೆ ಮಾತನಾಡಿದ್ದೇ ಜಾಸ್ತಿ.

ಒಮ್ಮೆ ಶಿವಲಿಂಗಪ್ಪ ಅವರ ಮನೆಯಲ್ಲಿ ತಾಡೋಲೆಗಳಿರುವುದನ್ನು ಕಂಡು ಅವುಗಳ ಸಂಗ್ರಹಕ್ಕೆ ಮುಂದಾಗುತ್ತಾರೆ ಎಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪ್ರವೀಣ ಅಭಿಪ್ರಾಯಪಟ್ಟರು.

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಶ್ರೀ ಮುರುಗಿಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಆವರಣದಲ್ಲಿ ನಡೆದ ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ 146ನೇ ಶರಣೋತ್ಸವದ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಸಮಾರಂಭದಲ್ಲಿ ವಿಷಯಾವಲೋಕನ ಮಾಡುತ್ತಿದ್ದರು.

ಚೆನ್ನವೀರ ಕಣವಿ ಅವರು ಹೂತಿಟ್ಟ ಗಣಿ ತೋಡಿ ತೋಡಿ ತುಂಬಿದಿರಿ ಚಿನ್ನದ ಅದಿರು ಎಂದು ಹಳಕಟ್ಟಿಯವರ ವಚನ ಸಂಗ್ರಹ ಕಾರ್ಯವನ್ನು ಶ್ಲಾಘಿಸಿದ್ದಾರೆ. ಶಾಂತಾದೇವಿ ಮಾಳವಾಡ ಅವರು ಫ.ಗು. ಹಳಕಟ್ಟಿ ಕುರಿತು ಹೇಳುತ್ತ, ಬರೆದು ಬರೆದು ಬೆರಳು ಸವೆದಾಗ ಬಟ್ಟೆ ಕಟ್ಟಿ ಬರೆಯುತ್ತಿದ್ದರು ಎಂದಿದ್ದಾರೆ.

ಬಾಸೆಲ್ ಮಿಷನ್‌ಗೆ ಪುಸ್ತಕ ಪ್ರಕಟಣೆಗೆ ಕಳುಹಿಸಿದಾಗ ತಮ್ಮ ಧರ್ಮಪ್ರಚಾರಕ್ಕೆ ಅಡ್ಡಿ ಆಗುವ ಸಂಗತಿಗಳು ವಚನಗಳಲ್ಲಿವೆ ಎಂದು ಪ್ರಕಟಿಸದೆ ವಾಪಾಸ್ ಕಳುಹಿಸಿಕೊಡುತ್ತಾರೆ. ನಂತರ ಹಳಕಟ್ಟಿಯವರು ಮನೆ ಮಾರಿ ಹಿತಚಿಂತಕ ಹೆಸರಿನಲ್ಲಿ ಮುದ್ರಣಾಲಯ ಪ್ರಾರಂಭಿಸುತ್ತಾರೆ.

ಶಿವಾನುಭವ, ನವಕರ್ನಾಟಕ ಎಂಬ ಪತ್ರಿಕೆಗಳನ್ನು ಹೊರತರುತ್ತಾರೆ. ಒಮ್ಮೆ ಬಿ.ಎಂ.ಶ್ರೀ ಅವರು ಬಿಜಾಪುರಕ್ಕೆ ಹೋದಾಗ ಗೋಳಗುಮ್ಮಟ ನೋಡುವುದಕ್ಕಿಂತ ವಚನ ಗುಮ್ಮಟ ಹಳಕಟ್ಟಿಯವರನ್ನು ನೋಡೋಣ ಎಂದು ಭೇಟಿ ಆಗುತ್ತಾರೆ ಎಂದರು.

ಹಳಕಟ್ಟಿಯವರ ಜೀವನದ ಪ್ರಮುಖ ಘಟನಾವಳಿಗಳು :

ಧಾರವಾಡದಲ್ಲಿ ಜನನ. ತಂದೆ ಗುರುಬಸಪ್ಪ ತಾಯಿ ದಾನಾದೇವಿ. ಮೂರುವರ್ಷ ವಯಸ್ಸಿನವರಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಅಜ್ಜಿ ಬಸಮ್ಮನವರ ಆಶ್ರಯದಲ್ಲಿ ಬೆಳೆಯುತ್ತಾರೆ. ತಂದೆ ಗುರುಬಸಪ್ಪ ಶಿಕ್ಷಕ ಹಾಗೂ ಸಾಹಿತಿಗಳಾಗಿದ್ದು ಅವರು ಪ್ರೇರಣೆ ನೀಡುತ್ತಾರೆ. ಹೈಸ್ಕೂಲ್ ವಿದ್ಯಾರ್ಥಿ ಆಗಿದ್ದಾಗ ಅನೇಕ ಗ್ರಂಥಗಳನ್ನು ಓದಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಆಲೂರು ವೆಂಕಟರಾಯರ ಕರ್ನಾಟಕ ಏಕೀಕರಣ ಚಳವಳಿಯಿಂದ ಪ್ರಭಾವಿತರಾಗಿದ್ದರು.

ಮೈಸೂರು ರಾಜ್ಯದ ರಾಜ್ಯಪಾಲ 10ನೇ ಜಯಚಾಮರಾಜೇಂದ್ರ ಒಡೆಯರ್ ಅವರು ಒಮ್ಮೆ ಇವರನ್ನು ಭೇಟಿ ಮಾಡಿ ಮಾತನಾಡಿಸಲು ಬಿಜಾಪುರಕ್ಕೆ ಆಗಮಿಸುತ್ತಾರೆ. ನಾಗನೂರು ರುದ್ರಾಕ್ಷಿಮಠದ ಪುಟ್ಟಶಿವಬಸವಸ್ವಾಮಿಗಳು ಅವರು ಭೇಟಿ ಆದಾಗ ಇವರ ಹರಿದ ಬಟ್ಟೆ ನೋಡಿ ಹೊಸ ಬಟ್ಟೆ ತರಿಸಿ ಸನ್ಮಾನಿಸಿದಾಗ, ಇದಕ್ಕೆ ಖರ್ಚು ಮಾಡುವ ಬದಲು ಹಣ ಕೊಟ್ಟಿದ್ದರೆ ನಾನು ಇನ್ನೊಂದಿಷ್ಟು ವಚನಗಳನ್ನು ಪ್ರಕಟಿಸುತ್ತಿದ್ದೆ ಎನ್ನುತ್ತಾರೆ ಹಳಕಟ್ಟಿಯವರು.

ಸಿರಿಗೆರೆಯ ಶಿವಕುಮಾರ ಸ್ವಾಮಿಗಳು ಇವರನ್ನು ಕರೆಸಿ ಸನ್ಮಾನಿಸಿ ಚಿನ್ನದ ಪದಕ ಕೊಟ್ಟು, ಈ ಪದಕ ಮಾರಿ ನಿಮ್ಮ ಸಾಲ ತೀರಿಸಿಕೊಳ್ಳಿ ಎನ್ನುತ್ತಾರೆ. ಸಿದ್ದೇಶ್ವರ ಸ್ವಾಮಿಗಳ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಗಳು, ನಿಮ್ಮ ಕೊನೆ ಆಸೆ ಏನು ಎಂದಾಗ, ದಿಂಬಿನಡಿ ಇಟ್ಟಿದ್ದ 12 ವಚನಗಳನ್ನು ತೆಗೆದುಕೊಟ್ಟು ಇದನ್ನು ಪ್ರಕಟಿಸಿ ಕೃಪೆ ಮಾಡಿ ಎನ್ನುತ್ತಾರೆ. ಚೆನ್ನವೀರ ಕಣವಿ ಅವರು ಇವರ ಬಗ್ಗೆ, ಶರಣ ಸಾಹಿತ್ಯವನ್ನು ಬೆಳಕಿಗೆ ತರುವುದೇ ಹಳಕಟ್ಟಿಯವರ ಲಿಂಗಪೂಜೆ ಎಂದು ಹೇಳಿದ್ದಾರೆ.

1964 ಜೂನ್ 27ರಂದು ಇವರು ತೀರಿಕೊಂಡಾಗ ಶವಸಂಸ್ಕಾರಕ್ಕೆ ಬಂದವರೆ ಇವರ ಸಂಸ್ಕಾರಕ್ಕೆ ಹಣ ಹೊಂದಿಸಿಕೊಟ್ಟು ಶವಸಂಸ್ಕಾರ ಮಾಡುತ್ತಾರೆ. ಬಿಜಾಪುರದಲ್ಲಿ ಇವರು ಎಲ್ಲಿ ಕಡಿಮೆ ಇರುತ್ತಿತ್ತೋ ಆ ಮನೆ ಬಾಡಿಗೆ ಹಿಡಿಯುತ್ತಿದ್ದರು. ಹಾಗಾಗಿ ವರ್ಷಕ್ಕೆ, ಎರಡುವರ್ಷಕ್ಕೆ ಬಾಡಿಗೆ ಮನೆ ಬದಲಾಯಿಸುತ್ತಿದ್ದರು. ಇಂತಹ ಅಪರೂಪದ ವ್ಯಕ್ತಿತ್ವದ ಬಗೆಗೆ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿ ಅಳವಡಿಸುವುದು ಅವಶ್ಯ ಎಂದರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಯಾವೊಬ್ಬ ವ್ಯಕ್ತಿ ಇಡೀ ತನ್ನ ಜೀವಿತಾವಧಿಯನ್ನು ವಚನಗಳನ್ನು ಹುಡುಕಿ ಅವುಗಳನ್ನು ಮುದ್ರಿಸುವುದರಲ್ಲಿಯೇ ಪ್ರಾಣಾರ್ಪಣೆ ಮಾಡಿದರೋ ಅವರ ಬಗ್ಗೆ ಈಗಿನ ಪೀಳಿಗೆಗೆ ಅರಿವು ಮೂಡಿಸುವ ಪ್ರಯತ್ನ ಆಗಬೇಕಿದೆ. ಹಾಗಾಗಿ ಹಳಕಟ್ಟಿಯವರ ವ್ಯಕ್ತಿತ್ಯ ಮತ್ತು ಸಾಧನೆಯ ಬಗ್ಗೆ ಪಠ್ಯದಲ್ಲಿ ಸೇರಿಸಲೇಬೇಕೆಂದು ನಾವು ಆಗ್ರಹ ಮಾಡುತ್ತೇವೆಂದರು.

ಸ್ವಾಮಿಗಳಾದವರಿಗೆ ವಚನಶಾಸ್ತ್ರ ಕೈದೀವಿಗೆಯಾಗಿದೆ. ಫ.ಗು. ಹಳಕಟ್ಟಿಯವರ ಬಗೆಗೆ ಇನ್ನೂ ಮಾಹಿತಿ ಕೊರತೆಯಿದೆ. 1997-98 ಎಸ್‌.ಆರ್. ಗುಂಜಾಳ ಅವರು ಹಳಕಟ್ಟಿಯವರ ಬಗ್ಗೆ ಸಮಾರಂಭವೊಂದರಲ್ಲಿ 2-3 ಗಂಟೆ ಮಾತನಾಡುತ್ತ, ನಾಲೈದು ಬಾರಿ ಕಣ್ಣೀರಾಗುತ್ತಾರೆ. ವಚನಗಳ ಸಂಗ್ರಹಕ್ಕೆ ಅವರು ಪಟ್ಟ ಕಷ್ಟವನ್ನು ಕಂಡು ಕೇಳಿದವರಿಗೆ ಗೊತ್ತು. ಕರ್ನಾಟಕದ ಲಿಂಗಾಯತ ಮಠ ಮಾನ್ಯಗಳಿಗೆ ಕಾಯಕ ಅರ್ಥಾತ್ ಕೆಲಸ ಕೊಟ್ಟವರು ಹಳಕಟ್ಟಿಯವರು. ಚೆನ್ನವೀರ ಕಣವಿಯವರು ಹೇಳುವಂತೆ ವಚನಗಳ ಸಂಗ್ರಹವೇ ಅವರಿಗೆ ಲಿಂಗಪೂಜೆಯಾಗಿತ್ತು.

ಸಮಯ ಬಂದರೆ 3-4 ದಿನಗಟ್ಟಲೆ ಊಟ-ನಿದ್ರೆ ಬಿಟ್ಟು ಕೆಲಸ ಮಾಡಿದ್ದಾರೆ. ಅವರು ಆರಂಭಿಸಿ 35 ವರ್ಷಗಟ್ಟಲೆ ನಡೆಸಿದ ಹಿತಚಿಂತಕ ಎನ್ನುವ ಮಾಸಪತ್ರಿಕೆಯಲ್ಲಿ ಲಿಂಗಾಯತ ಪರಂಪರೆಯ ಬಗೆಗೆ, ಅಸ್ತಿತ್ವದ ಬಗ್ಗೆ, ಹೀಗೇನು ಸಾಕಷ್ಟು ಅಭಿಯಾನ, ಚರ್ಚೆ ಮತ್ತು ಪರ್ಯಾಯ ಸಭೆ-ಸಮಾರಂಭಗಳು ನಡೆಯುತ್ತಿವೆ. ಆ ಎರಡೂ ಪಂಗಡದವರಿಗೆ 35 ವರ್ಷಗಳ ಶಿವಾನುಭವ ಪತ್ರಿಕೆಗಳನ್ನು ಕೊಡಬೇಕು, ಓದಲು ಹೇಳಬೇಕು ಆಗ ಗೊತ್ತಾಗುತ್ತದೆ. ಗೊಂದಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ಹೇಳಿದರು.

ಇಂದಿನ ಉಪನ್ಯಾಸಕರಾದ ಡಾ. ಪ್ರವೀಣ್ ಅವರು ಹೇಳಿದ್ದು ಅಕ್ಷರಶಃ ಸತ್ಯ. ಹಳಕಟ್ಟಿಯವರ ಕೆಲಸಕ್ಕೆ ಕರ್ನಾಟಕದ ಕೆಲ ಸ್ವಾಮಿಗಳು ಸಹಾಯ ಮಾಡಿದ್ದಾರೆ. ಅದು ಉಲ್ಲೇಖ ಆಗಿದೆ. ಚಿತ್ರದುರ್ಗ ಮುರುಘರಾಜೇಂದ್ರ ಬೃಹನ್ಮಠದ ಜಯದೇವ ಶ್ರೀಗಳು ಸಹ ನೆರವು ನೀಡಿದ್ದಾರೆ. ಅದು ಬಹುತೇಕರಿಗೆ ಗೊತ್ತಿಲ್ಲ. ಹೇಗೆಂದರೆ ಬಳ್ಳಾರಿಯ ಬಸವಂತಪ್ಪ ಎನ್ನುವ ಭಕ್ತರೊಬ್ಬರು ಚಿತ್ರದುರ್ಗದ ಬೃಹನ್ಮಠದ ದಾಸೋಹಕ್ಕೆ ಧನ-ಧಾನ್ಯ ಕೊಡಬೇಕೆಂದು ಅಪೇಕ್ಷೆಪಟ್ಟು ಪತ್ರ ಬರೆಯುತ್ತಾರೆ. ಅದಕ್ಕೆ ಪ್ರತ್ಯುತ್ತರವಾಗಿ ಜಯದೇವ ಶ್ರೀಗಳಿಂದ ಬಸವಂತಪ್ಪರಿಗೊಂದು ಪತ್ರ ಹೋಗುತ್ತದೆ. ನೀವು ಅಂದುಕೊಂಡ ಹಾಗೆ ಧನ- ಧಾನ್ಯಗಳನ್ನು ಬೃಹನ್ಮಠದ ದಾಸೋಹಕ್ಕೆ ತರುವುದು ಬೇಡ. ಅದೆಲ್ಲವನ್ನು ಬಿಜಾಪುರದಲ್ಲಿ ಹಳಕಟ್ಟಿಯವರು ಅಂತಾ ಇದ್ದಾರೆ ಅವರಿಗೆ ತಲುಪಿಸಿ ಎಂದು ತಿಳಿಸುತ್ತಾರೆ.

ಅದರಂತೆ ಬಸವಂತಪ್ಪ ಅವರು ಬಿಜಾಪುರಕ್ಕೆ ಹೋಗಿ ಹಳಕಟ್ಟಿಯವರ ಮನೆ ಹುಡುಕಿಕೊಂಡು ಹೋಗುತ್ತಾರೆ. ಆ ಮನೆಯ ತುಂಬಾ ವಚನ ಕಟ್ಟುಗಳ ತಾಡೋಲೆಗಳ ರಾಶಿಯೇ ಹರಡಿರುತ್ತದೆ. ತಾವು ಬಂದ ಮತ್ತು ಜಯದೇವ ಶ್ರೀಗಳು ಹೇಳಿದ ವಿಷಯವನ್ನು ಹಳಕಟ್ಟಿಯವರಿಗೆ ಹೇಳುತ್ತಾರೆ. ತಾವು ತೆಗೆದುಕೊಂಡು ಹೋಗಿದ್ದ ಧನ-ಧಾನ್ಯಗಳನ್ನು ಕೊಟ್ಟುಬಂದ ನಂತರ ಮತ್ತೆ ಚಿತ್ರದುರ್ಗ ಬೃಹನ್ಮಠಕ್ಕೆ ಬಸವಂತಪ್ಪ ಪತ್ರ ಬರೆಯುತ್ತಾರೆ. ನನಗೆ ಒಳ್ಳೆಯ ಕೆಲಸಕ್ಕೆ ದಾಸೋಹ ಮಾಡಲು ಮಾಹಿತಿ ನೀಡಿದಿರಿ ಎಂದು. ಇದು ಬೃಹನ್ಮಠದ ಪತ್ರಾಗಾರದಲ್ಲಿದೆ ಎಂದರು.

ಫ.ಗು. ಹಳಕಟ್ಟಿಯವರ ಜೀವನ ಚರಿತ್ರೆಯ ಬಗೆಗೆ ನಾಟಕ ರಚನೆಯಾಗಬೇಕು. ಅದು ಶ್ರೀಮಠದಿಂದ ಬರುವ ಶರಣಸಂಸ್ಕೃತಿ ಉತ್ಸವದಲ್ಲಿ ಆಗಲಿದೆ. ಹಾಗೆಯೇ ವಿಜಯಪುರದ ಬಿ.ಎಲ್.ಡಿ.ಇ. ಸಂಸ್ಥೆ ಮತ್ತಿತರರ ಪರಿಶ್ರಮದಿಂದ ಫ.ಗು. ಹಳಕಟ್ಟಿಯವರ ಜೀವನಾಧಾರಿತ ಚಲನಚಿತ್ರವೂ ಸೆಟ್ಟೇರಲಿದೆ. ಅದು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಬಹುದು. ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಸ್ಮರಿಸಿದರು.

ವೇದಿಕೆಯಲ್ಲಿ ಶಿರಸಂಗಿಯ ಬಸವ ಮಹಾಂತ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ತುಮಕೂರಿನ ಇಂಜಿನಿಯರ್ ಸತೀಶ್ ಶರ್ಮ, ಬಸವೇಶ್ವರ ಅಲೈಡ್ ಸೈನ್ಸ್‌ನ ಪ್ರಾಚಾರ್ಯ ಡಾ. ರಾಜನ್ ಜಿ., ಡಾ. ಕೆ. ಸುಧೀಂದ್ರ ಅವರುಗಳು ಉಪಸ್ಥಿತರಿದ್ದರು.

ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಎಸ್. ಷಣ್ಮುಖಪ್ಪ, ಬಸವರಾಜ ಕಟ್ಟಿ, ನಾಗರಾಜ ಸಂಗಮ್, ಸಿದ್ದಾಪುರ ಮಲ್ಲಿಕಾರ್ಜುನಪ್ಪ, ಎಸ್. ವೀರೇಶ್, ಡಿ.ವಿ. ಮುರುಗೇಶ, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಗಾಣಿಗ ಸಮಾಜದ ಅಧ್ಯಕ್ಷ ತಿಪ್ಪೇಸ್ವಾಮಿ, ಅಂಚೆ ಕಛೇರಿಯ ರಾಜಶೇಖರ, ಎಸ್.ಎಂ. ಕೊಟ್ರೇಶಪ್ಪ, ಬಸವರಾಜ ಅಂಗಡಿ, ಶಿವಾನಂದ, ಮಹಾಂತಮ್ಮ, ಕವಿ ಗಂಗಾಧರಪ್ಪ, ಚಂದ್ರಣ್ಣ, ಸವಿತಾ ಶ್ರೀನಿವಾಸ್, ಎಸ್.ವಿ. ಕೊಟ್ರೇಶ್, ಕುಂಚಿಗ ಸಮಾಜದ ಕುಬೇರಪ್ಪ ಮೊದಲಾದವರಿದ್ದರು.

ಸಮಾರಂಭದ ಆರಂಭಕ್ಕೆ ಜಮುರಾ ಕಲಾವಿದ ಉಮೇಶ್ ಪತ್ತಾರ ಫ.ಗು. ಹಳಕಟ್ಟಿಯವರ ಬಗೆಗಿನ ಗೀತೆ ಹಾಡಿದರು. ಅಮೃತ ಸಂತೋಷ ಸ್ವಾಗತಿಸಿದರು. ಶಿಕ್ಷಕಿ ಗೀತಾ ರುದೇಶ್ ಕಾರ್ಯಕ್ರಮ ನಿರೂಪಿಸಿ ನಂತರ ಶರಣು ಸಮರ್ಪಣೆ ನೆರವೇರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *