ಫ.ಗು. ಹಳಕಟ್ಟಿ ಬದುಕು ವಚನ ಸಾಹಿತ್ಯಕ್ಕೆ ಮುಡಿಪು
ಭಾಲ್ಕಿ:
ಬಸವಾದಿ ಶರಣರ ವಚನ ಸಾಹಿತ್ಯವನ್ನು ಸಂಗ್ರಹಿಸಿ ಸಂರಕ್ಷಿಸುವ ಮೂಲಕ ವಚನ ಸಾಹಿತ್ಯವನ್ನು ಪುನರುತ್ಥಾನ ಮಾಡಿದವರು ಫ.ಗು. ಹಳಕಟ್ಟಿಯವರು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲದಲ್ಲಿ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ವತಿಯಿಂದ ಭಾನುವಾರ ಆಯೋಜಿಸಿದ್ದ ವಚನ ಪಿತಾಮಹ ಫ.ಗು. ಹಳಕಟ್ಟಿ ಜಯಂತಿ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಅಲ್ಲಲ್ಲಿ ಉಳಿದುಕೊಂಡಿದ್ದ ಹಾಗೂ ಕಳೆದುಹೋಗಿದ್ದ ಎಲ್ಲ ವಚನಗಳನ್ನು ಸಂಗ್ರಹಿಸಲು ನಾಡಿನಾದ್ಯಂತ ಸಂಚರಿಸಿ ಅವುಗಳನ್ನು ಸಂಗ್ರಹಿಸಿದರು. ಆ ಮೂಲಕ ಅಚ್ಚುಕಟ್ಟಾಗಿ ವಚನಗಳನ್ನು ಅಚ್ಚುಮಾಡಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದರು.
ಫ.ಗು. ಹಳಕಟ್ಟಿಯವರು ತಮ್ಮ ಇಡೀ ಜೀವನವನ್ನೇ ವಚನ ಸಾಹಿತ್ಯದ ಉಳಿವಿಗಾಗಿ ಮುಡಿಪಾಗಿಟ್ಟಿದ್ದ ಮಹಾನ್ ವಿದ್ವಾಂಸರು ಎಂದು ಬಣ್ಣಿಸಿದರು.
ಅನುಭಾವ ನುಡಿದ ಹೊಸಪೇಟೆಯ ಹಿರಿಯ ಸಾಹಿತಿ ಡಾ. ಮೃತ್ಯುಂಜಯ ರುಮಾಲೆ, ಹಳಕಟ್ಟಿಯವರು ತಮ್ಮ ಜೀವನವನ್ನು ವಚನ ಸಾಹಿತ್ಯಕ್ಕಾಗಿ ಮುಡಿಪಾಗಿಟ್ಟವರು. ವಚನ ಸಾಹಿತ್ಯದ ಬೆಳಕನ್ನು ನಾಡಿನಾದ್ಯಂತ ಪಸರಿಸಿದ ಕೀರ್ತಿ ಹಳಕಟ್ಟಿಯವರಿಗೆ ಸಲ್ಲುತ್ತದೆ ಎಂದರು.
ವಿದ್ಯಾರ್ಥಿಗಳು ಹಳಕಟ್ಟಿ ಅವರ ಜೀವನ ಮತ್ತು ಸಾಧನೆಯ ಕುರಿತು ಚೆನ್ನಾಗಿ ಅಧ್ಯಯನ ಮಾಡಿ ಸಂಸ್ಕಾರಭರಿತ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಡಾ. ಶಾಂತಕುಮಾರ ಸಂಗೊಳಗೆ, ಶಾಮರಾವ ಡೊಂಗರಗಿ ಸೇರಿದಂತೆ ಹಲವರು ಇದ್ದರು. ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಸ್ವಾಗತಿಸಿದರು. ಮಧುಕರ ಗಾಂವಕರ ನಿರೂಪಿಸಿ, ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP
