(ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದಲ್ಲಿ ೨೮೦೬ನೆಯ ಶಿವಾನುಭವದಲ್ಲಿ ಇಂದು ೬೦ನೆಯ ಪ್ರದರ್ಶನ)
ಗದಗ
ಬದುಕು ಅದೆಷ್ಟು ಸವಾಲುಗಳಿಂದ ಕೂಡಿದ್ದರೂ ಆ ಎಲ್ಲ ಸವಾಲುಗಳನ್ನು ಮೀರಿ ಬದುಕನ್ನು ಸಹ್ಯಗೊಳಿಸಿಕೊಳ್ಳುವಲ್ಲಿಯೇ ಜೀವನದ ಸಾರ್ಥಕ್ಯವಿದೆ ಎಂಬ ಸಂದೇಶವುಳ್ಳ ‘ಕೌದಿ’ ಎಂಬ ಏಕವ್ಯಕ್ತಿ ನಾಟಕ ಈಗಾಗಲೇ ನಾಡಿನಾದ್ಯಂತ ಐವತ್ರೋಂಬತ್ತು ಪ್ರಯೋಗಗಳನ್ನು ಕಂಡು ಅರವತ್ತನೆಯ ಪ್ರಯೋಗವನ್ನು ಗದುಗಿನ ಜಗದ್ಗುರು ಶ್ರೀ ತೋಂಟದಾರ್ಯ ಸಂಸ್ಥಾನಮಠದ ಲಿಂಗಾಯತ ಪ್ರಗತಿಶೀಲ ಸಂಘದ ಅಡಿಯಲ್ಲಿ ಜರುಗುವ ೨೮೦೬ನೆಯ ಶಿವಾನುಭವದಲ್ಲಿ ಇಂದು ಸಂಜೆ ಏಳು ಗಂಟೆಗೆ ಮೈಸೂರಿನ ಕವಿತಾ ಕಲಾ ತಂಡದಿಂದ ಪ್ರದರ್ಶನಗೊಳ್ಳುತ್ತಿದೆ.
ಈ ನಾಟಕದ ಕರ್ತೃ ಮೈಸೂರಿನವರಾದ ಪತ್ರಕರ್ತರು ಹಾಗೂ ಲೇಖಕ ಗಣೇಶ ಅಮೀನಗಡ ಅವರು.
ಗಣೇಶ ಅಮೀನಗಡ ಅವರು ಈ ನಾಟಕದ ರಚನೆಯ ಉದ್ದೇಶವನ್ನು ಕುರಿತು “ನಾನು ನಾಟಕ ರಚನೆ ಮಾಡುವ ಸಲುವಾಗಿ ಹುಬ್ಬಳ್ಳಿ, ಕೊಪ್ಪಳದ ಭಾಗ್ಯನಗರ ಮೊದಲಾದೆಡೆ ತಿರುಗಾಡಿದ್ದೇನೆ. ಹುಬ್ಬಳ್ಳಿಯ ಲಿಂಗರಾಜ ನಗರದ ಹತ್ತಿರ ಈಗಲೂ ಅಲೆಮಾರಿ ಸಮುದಾಯದ ಗೊಂದಲಿಗರು, ಹಳ್ಳಿಹಳ್ಳಿಗೆ ತಿರುಗಾಡಿ ಹಳೆಯ ಬಟ್ಟೆಗಳನ್ನು ಸಂಗ್ರಹಿಸಿ ಕೌದಿ ಹೊಲಿದು ಕೊಡುತ್ತಾರೆ. ಹಾಗೆ ಹೊಲೆದು ಕೊಟ್ಟಾಗ ಅವರಿಗೆ ಸಿಗುವ ೩೦೦-೪೦೦ ರೂಪಾಯಿ ಅವರ ಕಷ್ಟದ ಬದುಕಿಗೆ ಆಧಾರ.
ಅವರು ಈ ಕೌದಿಗಳನ್ನು ತಯಾರು ಮಾಡುವಾಗ ಎದುರಿಸುವ ಸವಾಲುಗಳೇನು? ಸಮಸ್ಯೆಗಳೇನು? ಆತಂಕಗಳೇನು? ಎಂಬುದನ್ನು ಸಾಹಿತ್ಯವಾಗಿ ಹಿಡಿದಿಟ್ಟು ಅದನ್ನು ರಂಗದ ಮೇಲೆ ಪ್ರಯೋಗ ಮಾಡುವುದರ ಮೂಲಕ, ಕೌದಿಯೊಂದಿಗೆ ಇನ್ನೂ ಅನೇಕ ಗುಡಿ ಕಸುಬುಗಳನ್ನು ಮಾಡುವ ಸಮುದಾಯಗಳ ತೊಳಲಾಟಗಳನ್ನು ಏಕವ್ಯಕ್ತಿ ಮೂಲಕ ಅಭಿನಯಿಸಿ ತೋರಿಸುವುದು ನಾಟಕದ ಉದ್ದೇಶ.
ನಾಟಕದಲ್ಲಿ ಪಾತ್ರ ನಿರ್ವಹಿಸುವ ಪಾತ್ರದಾರಿಯ ಹಿಂದಿರುವ ಭಾವಗಳು, ಅಲೆಮಾರಿ ಸಮುದಾಯದ ಬಹು ಜನರ ನೋವು-ಯಾತನೆ, ಸವಾಲುಗಳನ್ನು ಬಹು ಸುಂದರವಾಗಿ ಕಟ್ಟಿಕೊಡುವಲ್ಲಿ ಕೌದಿ ನಾಟಕ ಯಶಸ್ವಿಯಾಗಿದೆ.
ನಾಟಕಕಾರ ಗಣೇಶ ಅಮೀನಗಡ ಅವರು ಪತ್ರಕರ್ತರು. ಅವರು ಸಮಾಜದ ಮಧ್ಯೆ ಇದ್ದು ಅನೇಕ ಸಮಸ್ಯೆಗಳನ್ನು ಪತ್ರಿಕೆಗಳಿಗೆ ವರದಿ ಮಾಡಿದವರು. ಆದರೆ ವರದಿ ಮಾಡುವುದಕ್ಕೂ ಮತ್ತು ಅದನ್ನು ಭಾವ-ವಿಭಾವಗಳಿಂದ ರಸತ್ವದ ಹಿನ್ನೆಲೆಯಲ್ಲಿ ಹಿಡಿದಿಡುವುದಕ್ಕೂ ಗಜಗಾತ್ರದ ವ್ಯತ್ಯಾಸವಿದೆ. ಅಮೀನಗಡ ಅವರು ಇದನ್ನು ಮೀರಿ ಸಮರ್ಥವಾಗಿ ನಾಟಕ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಕೌದಿಯನ್ನು ಸಾಮಾನ್ಯವಾಗಿ ಗೊಂದಲಿಗ ಸಮಾಜದ ಸದಸ್ಯರು ಜೀವನೋಪಾಯಕ್ಕಾಗಿ ತಯಾರು ಮಾಡಿ ಮಾರುತ್ತಾರೆ. ಈ ಮೊದಲು ಉತ್ತರ ಕರ್ನಾಟಕದ ಮನೆ-ಮನೆಗಳಲ್ಲಿಯೂ ಸಾಮಾನ್ಯವೆಂಬಂತೆ ಕೌದಿಗಳು ಕಂಡುಬರುತ್ತಿದ್ದವು. ಆದರೆ ಕಾಲ ಗತಿಸಿದಂತೆ ಹಳೆ ತಲೆಮಾರು ಹಿಂದೆ ಸರಿದು ಜೆನ್-ಜೀ ತಲೆಮಾರು ಅಡಿ ಇಟ್ಟಿರುವ ಈ ಸಂಕೀರ್ಣ ಸಂದರ್ಭದಲ್ಲಿ, ಹಳೆಯದನ್ನು ಉಳಿಸಿಕೊಂಡು ಹೊಸತನಕ್ಕೆ ಒಗ್ಗಿಕೊಳ್ಳುವ ಸಂಕ್ರಮಣದ ಸಂಧಿಕಾಲದಲ್ಲಿದ್ದೇವೆ. ಆದರೆ ಯುವ ಸಮುದಾಯಕ್ಕೆ ಹಳೆಯದು, ಬಹುತೇಕವಾಗಿ ಆಸ್ತಿಯೊಂದನ್ನು ಹೊರತುಪಡಿಸಿ ಯಾವುದು ಬೇಡವಾಗಿದೆ.
ಹೆತ್ತ ತಂದೆ-ತಾಯಿಗಳನ್ನು ಊರಲ್ಲಿ ಒಂಟಿಯಾಗಿ ಬಿಟ್ಟು, ಇಲ್ಲವೆ ವೃದ್ಧಾಶ್ರಮಕ್ಕೆ ಸೇರಿಸಿ, ತಾವು ನಗರಕ್ಕೆ ಬಂದು ನಿರಮ್ಮಳವಾಗಿದ್ದೇವೆ ಎಂಬ ಭಾವದಲ್ಲಿದ್ದಾರೆ. ಆದರೆ ನಿಜಕ್ಕೂ ನಾವು ತಂದೆ-ತಾಯಿ, ಅಜ್ಜ-ಅಜ್ಜಿ ಎಂಬ ಬಂಧುತ್ವದ ಭಾವಗಳನ್ನು ಕಳಚಿಕೊಂಡು ಭಾವಹೀನರಾಗಿದ್ದೇವೆ. ಇಂತಹ ಭಾವಗಳಿಲ್ಲದ ಮೊಬೈಲ್, ಎ.ಐ. ಎಂಬ ತಂತ್ರಜ್ಞಾನದಲ್ಲಿ ಮುಳುಗಿ ಒಂಟಿಯಾಗಿ ನಮ್ಮ ಸುತ್ತ ನಾವೇ ಗೋಡೆಗಳನ್ನು ಕಟ್ಟಿಕೊಂಡು ಅನಾಥ ಭಾವವನ್ನು ಒಳಗೊಳಗೆ ಅನುಭವಿಸಿ ನರಕಯಾತನೆ ಅನುಭವಿಸುತ್ತಿರುವೆವು.
ಇಂತಹ ಸಂದರ್ಭದಲ್ಲಿ ಕೌದಿ ಎಂಬ ನಾಟಕ ನಮ್ಮನ್ನು ಇಂತಹ ಸ್ವಾರ್ಥ ಭಾವಗಳಿಂದ ಮುಕ್ತರನ್ನಾಗಿ ಮಾಡಿ ಅಜ್ಜ-ಅಜ್ಜಿಯ, ತಂದೆ-ತಾಯಿಯರ ಉಟ್ಟು ಬಿಟ್ಟುಹೋದ ಹಳೆಯ ಹರಿದ ಬಟ್ಟೆಗಳಿಂದ ಮಾಡಿದ ಕೌದಿಯ ಬೆಚ್ಚಗಿನ ಹೊದಿಕೆಯಲ್ಲಿ ಬಂಧಿಯಾಗಿಸಿ ನಿರಾಳ ಭಾವ ಮೂಡಿಸುತ್ತದೆ.
ಹೆತ್ತ ತಂದೆ ತಾಯಿಗಳನ್ನು ನಾವು ಭೌತಿಕವಾಗಿ ಕಳೆದುಕೊಂಡಿರಬಹುದು. ಆದರೆ ಅವರು ಉಟ್ಟು-ಬಿಟ್ಟು ಹೋದ ಅನೇಕ ನೆನಪುಗಳನ್ನು ತಮ್ಮಲ್ಲಿ ಹುದುಗಿಸಿಕೊಂಡ ದೋತಿ, ಇಳಕಲ್ ಸೀರೆ, ಗುಳೇದಗುಡ್ಡ ಕಣ ಮೊದಲಾದ ಹರಿದ ಬಟ್ಟೆಗಳನ್ನು ಅಲಂಕಾರಿಕವಾಗಿ ‘ಸರಸ್ವತಿ ಚಿಮ್ಮಲಗಿ’ ಅವರು ಬರೆದ ‘ಕೌದಿ’ ಕವನದ- “ಚಿಂದಿಗಳ ಹೊಂದಿಸಿದ ಬಣ್ಣಬಣ್ಣದ/ ಬಡಬಾಳಿಗೆ ಆಧಾರವಾದ ಬಂಗಾರದಂಥ ಕೌದಿ/ಹಳೆಬಟ್ಟೆಗಳ ಹೊಂದಿಸಿದ ಬಣ್ಣಬಣ್ಣದ ಕೌದಿ/ಬಿಸಿಲ ಶಾಖಕ್ಕೆ ತಂಪನೆರಚುವ ಪಗಡಿಯಚ್ಚಿನ ಕೌದಿ” ಎಂಬ ಸಾಲುಗಳಿಗೆ ವ್ಯಾಖ್ಯಾನದಂತೆ, ನಿಸರ್ಗದ ಸಹಜವಾದ ಏಳು ಬಣ್ಣಗಳ ಜೊತೆಗೆ ಎಂಟನೆಯ ಬಣ್ಣವನ್ನು ರೂಪಿಸಿಕೊಂಡ ಕೌದಿ ಅಂದು ಮನೆ-ಮನೆಗಳಲ್ಲಿಯೂ ರಾರಾಜಿಸುತ್ತಿತ್ತು.

ಆದರೆ ಇಂದು ಕರ್ಲ್ ಆನ್, ಬೆಡ್ಸೀಟ್ ಮೊದಲಾದ ಆಧುನಿಕ ಹಾಸಿಗೆ-ಹೊದಿಕೆಗಳ ಮಧ್ಯೆ ಕೌದಿ ಮರೆಯಾಗುತ್ತಿದೆ. ಆದರೆ ಅದನ್ನು ತಯಾರಿಸುವ ಗೊಂದಲಿಗರ ಜೀವನದ ಭಾಗವಾಗಿದ್ದ ಕೌದಿಯ ತಯಾರಿಕೆಯೂ ಕಡಿಮೆಯಾಗಿದೆ. ಕಾರಣ ಕೊಂಡುಕೊಳ್ಳುವವರ ಕೊರತೆಯಿಂದ. ಈ ನಾಟಕ ಕೇವಲ ಕೌದಿ ಮಾಡುವವರಷ್ಟೆ ಅಲ್ಲ, ಹೊಟ್ಟೆಪಾಡಿಗಾಗಿ ಊರಿಂದ ಊರಿಗೆ ಅಲೆಯುವ ಹಚ್ಚೆ ಹಾಕುವವರು, ಕರಡಿ ಕುಣಿತದ ಗುಂಪಿನವರು ಹಗಲು ವೇಷಗಾರರು, ಬುಡುಬುಡುಕೆ, ಚವರಿ ಕೂದಲು ಮಾರುವವರು, ಹಗ್ಗ ಮಾಡುವವರು ಹೀಗೆ ಮೊದಲಾದ ಅಲೆಮಾರಿ ಜನಾಂಗಗಳ ಬದುಕಿನ ನಿಜ ಜೀವನದ ಚಿತ್ರವನ್ನು ತೋರಿಸುವ ಚಿತ್ರಪಟದಂತೆ ಗೋಚರಿಸುತ್ತದೆ.
ಕೌದಿಯ ವಿಶೇಷ ಬೇಸಿಗೆಯಲ್ಲಿ ತಂಪಾಗಿಸುವ, ಚಳಿಯಲ್ಲಿ ಬೆಚ್ಚಗಾಗಿಸುವ ಗುಣ. ಇಂತಹ ಗುಣಗಳ ಬಹುರೂಪ ಸಂಯೋಗದಂತಿರುವ ಕೌದಿ ನಾಟಕವನ್ನು ಕವಿತಾ ಕಲಾ ತಂಡದವರು ಕೇವಲ ಒಂದು ಗಂಟೆಯ ಅವಧಿಯ ಪ್ರದರ್ಶನದಲ್ಲಿ ವಿನ್ಯಾಸಗೊಳಿಸಿದ್ದಾರೆ. ಈ ನಾಟಕದಲ್ಲಿ ಏಕ ವ್ಯಕ್ತಿ ಪಾತ್ರಧಾರಿಯಾಗಿ ಕಲಬುರ್ಗಿಯ ಭಾಗ್ಯಶ್ರೀ ಪಾಳಾ ಎಂಬ ರಂಗಕಲಾವಿದೆ ಬಹಳ ಸುಂದರವಾಗಿ ಅಭಿನಯಿಸುತ್ತಾರೆ.
ನಾಟಕ ಮತ್ತು ಸಂಗೀತ ನಿರ್ದೇಶನ ಜಗದೀಶ ಆರ್. ಜಾನಿ ಅವರದ್ದು. ನಾಟಕದ ಕರ್ತೃ ಗಣೇಶ ಅಮೀನಗಡ ಅವರು ನಾಟಕದ ಕುರಿತು ಪ್ರಾಸಂಗಿಕವಾಗಿ ಶಿವಾನುಭವದಲ್ಲಿ ಮಾತನಾಡುವರು. ಶ್ರೀಮಠದ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ನಾಟಕ ಪ್ರದರ್ಶನಗೊಳ್ಳುತ್ತಿದ್ದು, ಎಲ್ಲಾ ಕಲಾಸಕ್ತರು ಸರಿಯಾದ ಸಮಯಕ್ಕೆ ಬಂದು ನಾಟಕವನ್ನು ಆನಂದಿಸಲು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ವೀ. ಪುರದ ಹಾಗೂ ಎಲ್ಲ ಪದಾಧಿಕಾರಿಗಳು ವಿನಂತಿಸಿದ್ದಾರೆ
