ಲಿಂಗಾಯತ ಚಳುವಳಿ: ವಿರೋಧ ತಗ್ಗಿಸಿ ಮಾತುಕತೆಗೆ ಬಂದ ವಿಜಯೇಂದ್ರ

ಎಂ. ಎ. ಅರುಣ್
ಎಂ. ಎ. ಅರುಣ್

ಬೆಳೆಯುತ್ತಿರುವ ಲಿಂಗಾಯತ ಧರ್ಮ ಹೋರಾಟದ ಪ್ರಭಾವವನ್ನು ಗುರುತಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಬೆಂಗಳೂರು:

ಇತ್ತೀಚೆಗೆ ನಡೆದ ಶರಣ ಸಾಹಿತ್ಯ ಸಮ್ಮೇಳನ ತೀವ್ರವಾಗುತ್ತಿರುವ ಲಿಂಗಾಯತ ಚಳುವಳಿಯ ಬಗ್ಗೆ ಪ್ರಖರವಾದ ಸಂದೇಶ ಕಳಿಸಿತು.

ಸಮ್ಮೇಳನದ ಅಧ್ಯಕ್ಷರಾಗಿ ಬಂದಿದ್ದ ಹಿರಿಯರಾದ ಗೊ.ರು.ಚನ್ನಬಸಪ್ಪ ತಮ್ಮ ಭಾಷಣದಲ್ಲಿ ಕೇಂದ್ರ ಸರಕಾರ ಲಿಂಗಾಯತರಿಗೆ ಅಲ್ಪಸಂಖ್ಯಾತ ಧರ್ಮದ ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿದರು.

ನಂತರ ಮಾತನಾಡಿದ ಹಲವಾರು ಪೂಜ್ಯರು, ಚಿಂತಕರು, ಗಣ್ಯರು ಲಿಂಗಾಯತ ಧರ್ಮದ ಪರವಾಗಿ ಬಲವಾದ ಧ್ವನಿಯೆತ್ತಿದ್ದರು.

ಶರಣ ಸಾಹಿತ್ಯ ಪರಿಷತ್ ಲಿಂಗಾಯತ ಧರ್ಮ ಹೋರಾಟದ ಮುಂಚೂಣಿಯಲ್ಲಿ ಕಾಣಿಸಿಕೊಳ್ಳದ ಸಂಸ್ಥೆ. ಸಮ್ಮೇಳನದ ಮುಂದಾಳತ್ವ ವಹಿಸಿದ್ದ ಅನೇಕ ಗಣ್ಯರೂ ಈ ಬೇಡಿಕೆಯ ಬಗ್ಗೆ ನಿರ್ಲಿಪ್ತರಾಗಿ, ತಮ್ಮದೇ ಬಯಕೆ, ಜಂಜಾಟಗಳಲ್ಲಿ ತೊಳಲಾಡುತ್ತಿದ್ದಾರೆ. ಇಂತಹ ಕಾರ್ಯಕ್ರಮದಲ್ಲಿಯೂ ಲಿಂಗಾಯತ ಧರ್ಮದ ಹೋರಾಟ ಮುನ್ನೆಲೆಗೆ ಬಂದಿದ್ದು ವಿಶೇಷ ಅನಿಸಿತು.

ಅಷ್ಟೇ ಗಮನ ಸೆಳೆದಿದ್ದು ಲಿಂಗಾಯತ ಧರ್ಮದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ ಮಾತುಗಳು.

ಅವರು ತಮ್ಮ ಭಾಷಣದಲ್ಲಿ ಲಿಂಗಾಯತ ಧರ್ಮ ಬೆಂಬಲಿಸಿ ಮಾತನಾಡಿದರು ಎಂದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಜಯೇಂದ್ರ ಆ ರೀತಿಯ ಯಾವುದೇ ಸಾಹಸ ಮಾಡಲಿಲ್ಲ. ಅವರ ಪಕ್ಷದ ಯಾವುದೇ ನಿಲುವು, ನಿಯಮ ಮೀರದೆಯೇ ಮಾತನಾಡಿದರು.

ಕೆಳಗಿನ ವಿಡಿಯೋದಲ್ಲಿ ತಾಂತ್ರಿಕ ದೋಷದಿಂದ ಅವರ ಮಾತು ಅಸ್ಪಷ್ಟವಾಗಿದೆ. ಆದರೂ ಗಮನವಿಟ್ಟು ಕೇಳಿದರೆ ಅವರ ನಿಲುವಿನಲ್ಲಿ ಮಹತ್ತರವೇ ಎನ್ನಬಹುದಾದ ಕೆಲವು ಬದಲಾವಣೆಗಳನ್ನು ಗುರುತಿಸಬಹುದು.

ಹೇಳದ ಮಾತು: ಧರ್ಮ ಒಡೆಯಬೇಡಿ

ಇಲ್ಲಿಯತನಕ ಯಾರಾದರೂ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಕೇಳಿದರೆ ವಿಜಯೇಂದ್ರ ಅವರಿಂದ ಬರುತ್ತಿದ್ದ ಮೊದಲ ಪ್ರತಿಕ್ರಿಯೆ ‘ಹಿಂದೂ ಧರ್ಮ ಒಡೆಯಬೇಡಿ’ ಎಂಬ ಆಕ್ರೋಶ.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪದ ನಂತರ “ಪ್ರತ್ಯೇಕ ಧರ್ಮದ ಕೂಗು ಮತ್ತೆ ಮುನ್ನಲೆಗೆ ಬಂದಿದೆ. ಇದನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ,” ಎಂದು ಪ್ರತಿಕ್ರಿಯೆ ನೀಡಿದ್ದರು.

“ವೀರಶೈವ ಲಿಂಗಾಯತ ಸಮಾಜ ವಿಭಜಿಸುವ, ಹಿಂದೂ ಧರ್ಮವನ್ನು ಒಡೆಯುವ ದುಸ್ಸಾಹಸದ ಕೆಲಸ ನಡೆಯುತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಕೂಗಿನಿಂದ ನಾವಿಂದು ಹಿಂದೂ ಧರ್ಮವನ್ನು ರಕ್ಷಿಸಬೇಕಿದೆ,” ಎಂದು ಹೇಳಿದ್ದರು.

ಆದರೆ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಬಾರಿಗೆ ಲಿಂಗಾಯತ ಧರ್ಮದ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸದೆ ಚರ್ಚೆಗೆ ಕರೆ ನೀಡಿದರು.

ಇದು ಅವರು ಹೇಳಿದ್ದು:

ಸರಕಾರದಿಂದ ಸವಲತ್ತು ಸಿಗತ್ತೆ ಅಂತ ಪ್ರತ್ಯೇಕ ಧರ್ಮ ಕೇಳ್ತಾ ಇದ್ದೀವಾ ಅಥವಾ ಯಾವ ವಿಚಾರಕ್ಕಾಗಿ ನಾವು ಪ್ರತ್ಯೇಕ ಧರ್ಮ ಕೇಳ್ತಾ ಇದ್ದೀವಿ ಎನ್ನುವುದು ಕೂಡ ಸಮಾಜದಲ್ಲಿ ಚರ್ಚೆಯಾಗಬೇಕು.

ವಿಜಯೇಂದ್ರ ಜೂಲೈ 8

ಅವರ ಎರಡೂ ಪ್ರಶ್ನೆಗಳಿಗೂ ಉತ್ತರ ಸ್ಪಷ್ಟವಾಗಿದೆ. ಮಕ್ಕಳ ಭವಿಷ್ಯ, ನಮ್ಮ ವಿಶಿಷ್ಟ ಧರ್ಮ ಹಾಗೂ ಪರಂಪರೆ ಉಳಿಸಿಕೊಳ್ಳಲು ಲಿಂಗಾಯತ ಹೋರಾಟ ನಡೆಯುತ್ತಿದೆ.

ಇದರ ಬಗ್ಗೆ ಹಲವಾರು ವರ್ಷಗಳಿಂದ ಚರ್ಚೆ, ಸಂವಾದ ನಡೆಯುತ್ತಿದೆ, ಸಕ್ರಿಯ ರಾಜಕಾರಣದಲ್ಲಿರುವವರಿಗೆ ಇದರ ವಿವರಗಳು ಈಗಾಗಲೇ ಗೊತ್ತಿರಬೇಕಿತ್ತು.

ಆದರೆ ತಡವಾಗಿಯಾದರೂ ವಿಜಯೇಂದ್ರ ಒಳ್ಳೆಯ ಪ್ರಶ್ನೆ ಕೇಳುತ್ತಿದ್ದಾರೆ. ಮುಖ ನೋಡದೆ ನಿರಾಕರಿಸುವವರು ಮಾತುಕತೆಗೆ ಮುಂದಾಗುವುದು ಒಳ್ಳೆಯ ಬೆಳವಣಿಗೆ.

ಹೇಳದ ಮಾತು: ಇದು ಕಾಂಗ್ರೆಸ್ ಹೋರಾಟ

ಲಿಂಗಾಯತ ಚಳುವಳಿಗೆ ಬಹಳ ಪೆಟ್ಟುಕೊಟ್ಟಿರುವುದು ಇದು ಕಾಂಗ್ರೆಸ್ ಪಕ್ಷದ ಪ್ರಾಯೋಜಿತ ಹೋರಾಟ ಎನ್ನುವ ಅಭಿಪ್ರಾಯ.

2018ರಲ್ಲಿ ಕಾಂಗ್ರೆಸ್ ಪಕ್ಷ ಲಿಂಗಾಯತ ಹೋರಾಟವನ್ನು ಬಳಸಿಕೊಳ್ಳಲು ಪ್ರಯತ್ನಿಸಿದ್ದು ಸತ್ಯ. ಅದರ ನಂತರ ಈ ಚಳುವಳಿ ಯಾವುದೇ ಪಕ್ಷದ ಅಥವಾ ರಾಜಕಾರಣಿಯ ಸೋಂಕಿಲ್ಲದೆ ತೀವ್ರವಾಗುತ್ತಿರುವುದೂ ಅಷ್ಟೇ ಸತ್ಯ.

ಲಿಂಗಾಯತ ಧರ್ಮದ ವಿಷಯ ಬಂದಾಗಲೆಲ್ಲ ವಿಜಯೇಂದ್ರ ಇದು ಕಾಂಗ್ರೆಸ್ ಪ್ರಾಯೋಜಿತ ಹೋರಾಟ ಎಂದು ಹೇಳಿ ಸಿದ್ದರಾಮಯ್ಯನವರನ್ನು ನೇರವಾಗಿ ದೂಷಿಸುತ್ತಾರೆ.

‘ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ, ಕೆಲವರು ಧರ್ಮದಲ್ಲಿ ರಾಜಕಾರಣ ತಂದು ಷಡ್ಯಂತ್ರ ನಡೆಸುತ್ತಿದ್ದಾರೆ. ಹಿಂದೆಯೂ ಇಂಥ ಷಡ್ಯಂತ್ರ, ಪ್ರಯತ್ನ ನಡೆದಿತ್ತು. ಅದರಲ್ಲಿ ಯಶಸ್ಸು ಸಿಕ್ಕಿರಲಿಲ್ಲ, ಮುಂದೆಯೂ ಸಿಗಲು ಸಾಧ್ಯವಿಲ್ಲ.’

ಇದೂ ಕೂಡ ವಿಜಯೇಂದ್ರ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪಕ್ಕೆ ನೀಡಿದ್ದ ಪತಿಕ್ರಿಯೆ.

ನನಗೆ ತಿಳಿದ ಹಾಗೆ, ಶರಣ ಸಾಹಿತ್ಯ ಸಮ್ಮೇಳನದಲ್ಲಿ, ಮೊದಲ ಬಾರಿಗೆ ವಿಜಯೇಂದ್ರ ಲಿಂಗಾಯತ ಧರ್ಮದ ಹೋರಾಟವನ್ನು ಕಾಂಗ್ರೆಸ್ ಪಕ್ಷದೊಂದಿಗೆ ಜೋಡಿಸದೆ ಮಾತನಾಡಿದರು.

ಇದು ಅವರು ಹೇಳಿದ್ದು: 

ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ನೆನ್ನೆ ನಿರ್ಣಯ ತೆಗೆದುಕೊಂಡಿದ್ದು ಕೂಡ ಗಮನಿಸಿದ್ದೇನೆ. ಇದರ ಬಗ್ಗೆ ಚರ್ಚೆಯಾಗಲಿ…

ವಿಜಯೇಂದ್ರ, ಜೂಲೈ 8

ಯಾರೂ ಕೂಡ ಅನ್ಯಥಾ ಭಾವಿಸಬಾರದು…ಇವತ್ತು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮಾತನಾಡುತ್ತಿಲ್ಲ…

ವಿಜಯೇಂದ್ರ, ಜೂಲೈ 8

ಬೆಂಬಲಿಸಲಿಲ್ಲ, ಗಟ್ಟಿಯಾಗಿ ವಿರೋಧಿಸಲೂ ಇಲ್ಲ

ಲಿಂಗಾಯತ ಚಳುವಳಿಯ ಪರವಾಗಿ ವಿಜಯೇಂದ್ರ ಮಾತನಾಡಲಿಲ್ಲ. ಆದರೆ ಅವರ ಆಕ್ರೋಶ, ವಿರೋಧದ ತೀಕ್ಷ್ಣತೆ ಗಣನೀಯವಾಗಿ ಇಳಿದಿತ್ತು. ವಿರೋಧಕ್ಕಿಂತಲೂ ಜಾಗರೂಕತೆಯಿಂದ ಹೆಜ್ಜೆಯಿಡಿ ಎಂದು ಹೇಳಿದಂತೆ ಅನಿಸಿತು.

ಇದು ಅವರು ಹೇಳಿದ್ದು: 

ಧರ್ಮದ ಆಧಾರದ ಮೇಲೆ ಭಾರತ ಪಾಕಿಸ್ತಾನ ಪ್ರತ್ಯೇಕ ದೇಶಗಳಾಗಿರುವುದು ನೋಡಿದ್ದೇವೆ… ಸಮಾಜದ ದೇಶದ ಹಿತದೃಷ್ಟಿಯಿಂದ ಎಲ್ಲ ಒಂದಾಗಿ ಸಾಗಬೇಕು.

ವಿಜಯೇಂದ್ರ, ಜೂಲೈ 8

ಭಾರತದಲ್ಲಿರುವ ಪ್ರತಿಯೊಬ್ಬರೂ ಕೂಡ ನಾವು ಹಿಂದೂಗಳು ಅನ್ನುವ ಭಾವನೆಯಿಂದ ಒಗ್ಗಟ್ಟಾಗಿ ಒಂದಾಗಿ ಹೋಗಬೇಕು. ಈ ಸಂದರ್ಭದಲ್ಲಿ ಇದು ಸಮಗ್ರವಾಗಿ ಚರ್ಚೆಯಾದರೆ ಮಾತ್ರ ಸರಿಯಾದ ದಾರಿ ಕಾಣಿಸುತ್ತದೆ…

ವಿಜಯೇಂದ್ರ, ಜೂಲೈ 8

ಈ ವಿಷಯದಲ್ಲಿ ಎಡವಿದರೆ ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲು ಸಾಧ್ಯವಿಲ್ಲ…

ವಿಜಯೇಂದ್ರ, ಜೂಲೈ 8

ವಿಜಯೇಂದ್ರ ‘ಸರಿಯಾದ ದಾರಿ’ ಕಾಣಿಸಲಿ ಎಂದು ಹೇಳಿದರು. ಇದೇ ದಾರಿಯಲ್ಲಿ ಹೋಗೋಣ ಎಂದು ಹೇಳಲಿಲ್ಲ.

ಲಿಂಗಾಯತ ಚಳುವಳಿಯ ಬಗ್ಗೆ ಆತಂಕವಿದೆ

ಒಂದು ಮತಬ್ಯಾಂಕಿನಂತೆ ಕೆಲಸ ಮಾಡುತ್ತಿದ್ದ ಲಿಂಗಾಯತ ಸಮಾಜದಲ್ಲಿ ಇಂದು ಗಂಭೀರ ಒಡಕುಗಳು ಮೂಡಿರುವುದು ವಾಸ್ತವ.

ಸಂಪ್ರದಾಯಕ್ಕೆ ಅಂಟಿಕೊಂಡಿರುವ ವೀರಶೈವವಾದಿಗಳು, ಬಸವತತ್ವಕ್ಕೆ ಜೀವ ಕೊಡುವ ಲಿಂಗಾಯತ ಕಾರ್ಯಕರ್ತರು, ಉಪ ಪಂಗಡಗಳನ್ನು ವಿಭಜಿಸಿ ಹಿಡಿತಕ್ಕೆ ತೆಗೆದುಕೊಳ್ಳಲು ಬೆವರು ಸುರಿಸುತ್ತಿರುವ ಆರೆಸ್ಸೆಸ್ಸಿನವರು ಇಂದು ಸಮುದಾಯ ಬೇರೆ ಬೇರೆ ದಿಕ್ಕುಗಳಲ್ಲಿ ಸಾಗುವಂತೆ ಮಾಡಿದೆ.

ಇದು ಈ ಮತಬ್ಯಾಂಕಿನ ಲಾಭ ಪಡೆದುಕೊಂಡ ರಾಜಕಾರಣಿಗಳ ನಿದ್ದೆಕೆಡಿಸಿದೆ.

ಇದು ಅವರು ಹೇಳಿದ್ದು: 

ಇಂದು ಲಿಂಗಾಯತ ವರ್ಸಸ್ ವೀರಶೈವ, ಲಿಂಗಾಯತ ವರ್ಸಸ್ ಹಿಂದೂ, ಜಂಗಮ ವರ್ಸಸ್ ಜಂಗಮೇತರ ಎಂದು ಚರ್ಚೆಯಾಗುತ್ತಿದೆ. ಪಂಚಮಸಾಲಿ, ಸಾದರ, ಬಣಜಿಗ ಎಂದೂ ಚರ್ಚೆಯಾಗುತ್ತಿದೆ…

ವಿಜಯೇಂದ್ರ, ಜೂಲೈ 8

ದೊಡ್ಡ ರಾಜಕೀಯ ಶಕ್ತಿ ಇರುವಂತಹ ಸಮಾಜ ಒಡೆದು ಹತ್ತಾರು ದಿಕ್ಕಿನಲ್ಲಿ ಹೋಗುತ್ತಿರುವುದುನ್ನು ನಾವು ಗಮನಿಸಬೇಕಾಗುತ್ತದೆ…

ವಿಜಯೇಂದ್ರ, ಜೂಲೈ 8

ಸೈದ್ಧಾಂತಿಕ ಬದ್ಧತೆ, ಸಂಘಟನಾ ಸಾಮರ್ಥ್ಯದಿಂದ ರಭಸದಿಂದ ಮುನ್ನುಗ್ಗುತ್ತಿರುವ ಲಿಂಗಾಯತ ಚಳುವಳಿಯ ಬಗ್ಗೆ, ಅದು ಮುಂದೆ ಪಡೆದುಕೊಳ್ಳಬಹುದಾದ ರಾಜಕೀಯ ಸ್ವರೂಪದ ಬಗ್ಗೆ ವಿಶೇಷವಾದ ಅವರಿಗೆ ಆತಂಕವಿದೆ.

ಹೋರಾಟದ ಗಂಭೀರತೆ ಅರ್ಥವಾಗಿದೆ

ಕಳೆದ ಕೆಲವು ದಶಕಗಳಿಂದ ರಾಜ್ಯದಲ್ಲಿ ನೂರಾರು ಬಸವ ಸಂಘಟನೆಗಳು ತಲೆಯೆತ್ತಿ ಸಕ್ರಿಯವಾಗಿ ದುಡಿಯುತ್ತಿವೆ.

ಇವುಗಳು ಸ್ವತಂತ್ರವಾಗಿ ಕೆಲಸ ಮಾಡಿದರೂ ಅಗತ್ಯ ಬಂದಾಗ ಕೈ ಜೋಡಿಸಿ ಒಂದೇ ತಂಡವಾಗಿ ರೂಪುಗೊಳ್ಳುವುದನ್ನೂ ನೋಡಿದ್ದೇವೆ.

ಇವರ ಸಂಘಟನಾ ಸಾಮರ್ಥ್ಯ ಬಸವ ಸಂಸ್ಕೃತಿ ಅಭಿಯಾನ, ಬಸವ ಜಯಂತಿಗಳಗಳಂತಹ ಸಂದರ್ಭಗಳಲ್ಲಿ ಪ್ರಕಟವಾಗುವುದನ್ನೂ ನೋಡಿದ್ದೇವೆ.

2017-18ರ ಹೋರಾಟದ ನಂತರ ಬಸವ ಸಂಘಟನೆಗಳಲ್ಲಿ ಲಿಂಗಾಯತ ಧರ್ಮದ ಹೋರಾಟದ ಬಗ್ಗೆ ಜಾಗೃತಿ, ಒಮ್ಮತ ಮೂಡಿದೆ. ಆ ಜಾಗೃತಿ ಈಗ ಜನಸಾಮಾನ್ಯರನ್ನು ಮುಟ್ಟಲೂ ಶುರುವಾಗಿದೆ.

ರಾಜಕಾರಣಿಗಳು ಕೈ ಬಿಟ್ಟರೂ, ಲಿಂಗಾಯತ ಚಳುವಳಿ ಮುಂದುವರೆಯಲು ಇದು ಕಾರಣ. ಆದರೆ ಸಂಘ ಪರಿವಾರದವರು, ಅವರ ನಿಯತ್ತಿನ ಮಾಧ್ಯಮಗಳು ಇದೆಲ್ಲಾ ಕೆಲವು ಕಮ್ಯುನಿಸ್ಟರ ಕೈವಾಡ ಎಂದು ಹೇಳಿ ಸಮಾಧಾನ ಪಟ್ಟುಕೊಳ್ಳುತ್ತಾರೆ.

ಶರಣ ಸಾಹಿತ್ಯ ಸಮ್ಮೇಳನದ ಭಾಷಣದಲ್ಲಿ ವಿಜಯೇಂದ್ರ ಲಿಂಗಾಯತ ಚಳುವಳಿಯ ಬೆಂಬಲದಲ್ಲಿ ಗಟ್ಟಿಯಾಗುತ್ತಿರುವ ಜನಶಕ್ತಿಯನ್ನು ಪರೋಕ್ಷವಾಗಿ ಗುರುತಿಸಿದರು.

ಇದು ಅವರು ಹೇಳಿದ್ದು:

ಸಮಾಜ ಯಾವ ದಿಕ್ಕಿನಲ್ಲಿ ಸಾಗ್ತಾ ಇದೆ ಎನ್ನುವುದನ್ನೂ ಗಮನ ಹರಿಸಬೇಕಾಗಿದೆ…

ವಿಜಯೇಂದ್ರ, ಜೂಲೈ 8

ಇವತ್ತಿನ ಆದ್ಯತೆ ಕೂಡ ನಾವು ಮತ್ತೆ ಮತ್ತೆ ಚರ್ಚೆ ಮಾಡಬೇಕು…

ವಿಜಯೇಂದ್ರ, ಜೂಲೈ 8

ವೀರಶೈವ ಲಿಂಗಾಯತ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಅಂತ ಇಡೀ ರಾಜ್ಯ ನಮ್ಮನ್ನು ಗಮನಿಸುತ್ತಿದೆ…

ವಿಜಯೇಂದ್ರ, ಜೂಲೈ 8

ಇದು ಗಮನಿಸಬೇಕಾದ ಭಾಷಣವೇ?

ವಿಜಯೇಂದ್ರ ಸಂದರ್ಭಕ್ಕೆ ತಕ್ಕಂತೆ ಮಾತನಾಡಿದ್ದಾರೆ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಸ್ನೇಹಿತರೊಬ್ಬರು ಹೇಳಿದರು. 

ಬಣ್ಣ ಬದಲಿಸುವ ಗೋಸುಂಬೆಗಳಂತೆ ರಾಜಕಾರಣಿಗಳು ಮಾತನಾಡುವುದು ಸಹಜ. ಆದರೆ ಲಿಂಗಾಯತ ಧರ್ಮದ ಬಗ್ಗೆ ಮಾತನಾಡಿ ಎಂದು ವಿಜಯೇಂದ್ರ ಅವರಿಗೆ ಅಂತ ಸಮ್ಮೇಳನದಲ್ಲಿ ಯಾರೂ ಮನವಿ ಕೊಟ್ಟಿರಲಿಲ್ಲ. ಸಮ್ಮೇಳನದಲ್ಲಿ ಮಾತನಾಡಿದ ಅನೇಕರು ಈ ವಿಷಯದಿಂದ ದೂರವುಳಿದರು.

ಆದರೆ ಇಂದು ಕರ್ನಾಟಕ ರಾಜಕೀಯದಲ್ಲಿ ಸಕ್ರಿಯವಾಗಿರುವವರಿಗೆ ಲಿಂಗಾಯತ ಚಳುವಳಿಯ ಬೆಳೆಯುತ್ತಿರುವ ಪ್ರಭಾವವನ್ನು ಗುರುತಿಸುವುದು ಅನಿವಾರ್ಯವಾಗಿದೆ. ವಿಜಯೇಂದ್ರ ಮಾತನಾಡಿದ್ದು ಇದೆ ಕಾರಣಕ್ಕೆ.

ಆದರೆ ಲಿಂಗಾಯತ ಚಳುವಳಿಗೆ ವಿಜಯೇಂದ್ರರಂತವರು ದುಮುಕುತ್ತಾರೆ ಎಂದು ನಿರೀಕ್ಷಿಸುವುದು ಮೂರ್ಖತನ. ಅವರಿರುವ ಪರಿವಾರದಲ್ಲಿ ಸೈದ್ಧಾಂತಿಕ ರಾಜಿಗೆ ಅವಕಾಶವಿಲ್ಲ. ಜಿನ್ನಾರನ್ನು ಪ್ರಶಂಶಿಸಿದಕ್ಕೆ ಅದ್ವಾನಿಯಂತವರನ್ನೇ ಕಿತ್ತೆಸೆದ ಮತಾಂಧರ ಪಕ್ಷವದು.

ಆದರೆ ವಿಜಯೇಂದ್ರರಂತಹ ರಾಜಕಾರಾಣಿಗಳಿಗೆ ಲಿಂಗಾಯತ ಮತಗಳು ಅಸ್ತಿತ್ವದ ಪ್ರಶ್ನೆ.

ಚುನಾವಣೆಗೆ ಎಂದೂ ನಿಲ್ಲದವರು ಬೇಕಾದ್ದು ಹೇಳಬಹುದು. ಆದರೆ ಚುನಾವಣೆಯಲ್ಲಿ ಗೆಲ್ಲಬೇಕಾಗುವವರು ಲಿಂಗಾಯತ ಚಳುವಳಿಯ ಬಗ್ಗೆ ಒಂದು ಒಪ್ಪಂದಕ್ಕೆ ಬರುವ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ವಿಜಯೇಂದ್ರ ಮಾಡಿದ್ದೂ ಇದನ್ನೇ.

ನೇರ ನೇರ ವಿರೋದಿಸುತ್ತಿದ್ದವರು ಮಾತುಕತೆಗೆ ಬಂದಿದ್ದಾರೆ. ನಾಳೆ ನಾವು ಮತ್ತಷ್ಟು ಗಟ್ಟಿಯಾದರೆ ನಮ್ಮ ಜೊತೆಗೆಯೇ ಬರುತ್ತಾರೆ.

ಲಿಂಗಾಯತ ಚಳುವಳಿಯನ್ನು, ಬಸವ ಸಂಘಟನೆಗಳನ್ನು ರಾಜಕೀಯವಾಗಿ ಆದರೆ ಪಕ್ಷಾತೀತವಾಗಿ ಬಲಪಡಿಸುವುದು ಸದ್ಯದಲ್ಲೇ ಶುರುವಾಗುತ್ತಿರುವ ಬಸವ ಶಕ್ತಿ ಶಬಿರಗಳ ಮುಖ್ಯ ಉದ್ದೇಶ.

ಶರಣ ಸಾಹಿತ್ಯ ಸಮ್ಮೇಳನದಲ್ಲಿ ವಿಜಯೇಂದ್ರ ಭಾಷಣ (ತಾಂತ್ರಿಕ ಸಮಸ್ಯೆಯಿದೆ)

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
2 Comments
  • ಇವರಪ್ಪ ಕೂಡ ವೋಟ್ ಪಡೆಯಲು ದೊಡ್ಡ ನಾಟಕ ಮಾಡುತ್ತಿದ್ದ.
    ನಾನು ಮುಖ್ಯಮಂತ್ರಿ ಅದ ಎರಡು ದಿನದಲ್ಲಿ ಮಹದಾಯಿ ಯೋಜನೆ ಪ್ರಾರಂಭ ಆಗುತ್ತದೆ ಅಂತ ಮಲಪ್ರಭಾ ನೀರು ಹೋರಾಟಗಾರರ ಮತ ಸೆಳೆದಿದ್ದ.
    Rss ಚಡ್ಡಿಯಲ್ಲಿ ಉರುಳಾಡುವ ಈತ ಕೂಡ ಅವರಪ್ಪನಂತೆ ವೋಟಿಗಾಗಿ ನಾಟಕ ಮಾಡುತ್ತಿರಬೇಕ್.

    ಇಲ್ಲ ಅಂದರ್ ಈಗಲೇ ಬಹಿರಂಗವಾಗಿ ಈಗಲೇ ಬಿಜೆಪಿಯ ಎಲ್ಲ ಸಂಸದರನ್ನು, ಶಾಸಕರನ್ನು ಕರೆದುಕೊಂಡು ಹೋಗಿ ಮೋದಿ ಬೇಟಿ ಆಗಲಿ.

  • ಅವರಮೇಲೆ ವಿಶ್ವಾಸ ಇಡಬೇಡಿ 👏🏻ಶರಣು 👏🏻

Leave a Reply

Your email address will not be published. Required fields are marked *