ಹುಬ್ಬಳ್ಳಿ
“ಎಷ್ಟೇ ಹೋರಾಟ ನಡೆಸಿದರೂ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ದೊರಕುವುದು ಅಸಾಧ್ಯ,” ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಲಿಂಗಾಯತ ಸ್ವತಂತ್ರ್ಯ ಧರ್ಮ ಮಾಡಿ ಹಿಂದುಳಿದ ವರ್ಗಕ್ಕೆ ಸೇರಿಸುವ ಬದಲು ಸಮಗ್ರ ವೀರಶೈವ-ಲಿಂಗಾಯತ ಧರ್ಮವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಕಾರ್ಯವಾಗಬೇಕು. ಇದಕ್ಕೆಲ್ಲ ಸಮಾಜ ಬಾಂಧವರು ಹೋರಾಡಬೇಕಿದೆ.
‘ಪ್ರತ್ಯೇಕ ಧರ್ಮವಾದರೆ ಯಾವುದೋ ಒಂದು ಶಿಕ್ಷಣ ಸಂಸ್ಥೆಗೆ ಮಾತ್ರ ಅನುಕೂಲವಾಗುತ್ತದೆ. ಬದಲಿಗೆ ಇಡೀ ಸಮಾಜಕ್ಕೆ ಒಳಿತಾಗುವುದಿಲ್ಲ. ತೆಲಂಗಾಣ, ಮಹಾರಾಷ್ಟ್ರದಲ್ಲಿ ವೀರಶೈವ ಲಿಂಗಾಯತ ಸಮಾಜವನ್ನು ಈಗಾಗಲೇ ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ರಾಜ್ಯದಲ್ಲಿಯೂ ಅದಕ್ಕೆ ಪ್ರಯತ್ನಿಸಬೇಕು’ ಎಂದು ಹೇಳಿದರು.
ಧರ್ಮದ ಹೋರಾಟದಿಂದ ಒಡಕು
ಪ್ರತ್ಯೇಕ ಧರ್ಮದ ಹೋರಾಟದಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗಿದ್ದು, ವೀರಶೈವ-ಲಿಂಗಾಯತ ಸಮಾಜವು ಒಡೆದ ಮನೆಯಂತಾಗಿದೆ. ವೀರಶೈವ ಮತ್ತು ಲಿಂಗಾಯತ ಸಮುದಾಯವನ್ನು ಒಂದಾಗಿಸುವ ಪ್ರಯತ್ನಕ್ಕೆ ಕೆಲ ಹೋರಾಟಗಾರರು ಸಿದ್ಧರಿಲ್ಲ ಎಂದರು.
ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆ ಬೇರೆ, ಸ್ವತಂತ್ರ ಧರ್ಮ ಎಂದು ಜನರಲ್ಲಿ ಗೊಂದಲ ಸೃಷ್ಟಿಮೂಡಿಸಲಾಗುತ್ತಿದೆ. ಇದನ್ನು ತಗೆದುಹಾಕುವ ಕೆಲಸವಾಗಬೇಕಿದೆ. ಮೊದಲು ಎಲ್ಲ ಮಠಾಧೀಶರು ಒಂದಾಗಬೇಕಿದೆ. ಅವರಲ್ಲಿರುವ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಮಠಾಧೀಶರನ್ನು ಒಗ್ಗೂಡಿಸುವ ಕೆಲಸವನ್ನು ಸಮಾಜವೇ ಮಾಡಬೇಕಾಗಿದೆ.
ನನ್ನನ್ನು ಕಡೆಗಣಿಸಲಾಗುತ್ತಿದೆ
ರಾಜಕೀಯದಲ್ಲಿ ಈಗಲೂ ನನ್ನನ್ನು ಕಡೆಗಣಿಸುವ ಕಾರ್ಯ ನಡೆಯುತ್ತಿದೆ ಎಂದು ಶೆಟ್ಟರ್ ತೀವ್ರ ಬೇಸರ ವ್ಯಕ್ತಪಡಿಸಿದರು.
ಒಂದು ರಾಜಕೀಯ ಪಕ್ಷ ನನ್ನನ್ನು ಬಳಸಿಕೊಂಡು ಬೆಳೆಯಿತು. ಬಳಿಕ ನನ್ನನ್ನೇ ಕಡೆಗಣಿಸುವ ಕಾರ್ಯ ಮಾಡಿತು. ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗಲೆಲ್ಲ ಅದನ್ನು ಸವಾಲಾಗಿ ಸ್ವೀಕರಿಸಿ ಮುನ್ನುಗ್ಗುತ್ತಿರುವೆ. ಸಮಾಜ ಬಾಂಧವರ ಆಶೀರ್ವಾದದಿಂದಲೇ ನಾನು ಇಂದು ಈ ಸ್ಥಾನದಲ್ಲಿರುವೆ. ನನ್ನ ರಾಜಕೀಯ ರಂಗದಲ್ಲಿ ಸಾಕಷ್ಟು ಏಳು, ಬೀಳು ಎಲ್ಲವನ್ನೂ ಅನುಭವಿಸಿದ್ದೇನೆ, ಎಂದು ಹೇಳಿದರು.
