ಪ್ರವಚನ: ಶರಣರು ಮಾಸ, ವಾರ, ದಿನಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ

ಬಸವ ಮೀಡಿಯಾ
ಬಸವ ಮೀಡಿಯಾ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ

ಕಲಬುರಗಿ

ವಾರ ಏಳೆಂಬರು ಕುಲ ಹದಿನೆಂಟೆಂಬರು
ಇದು ನಾವು ನಂಬೆವು.
ಹಗಲೊಂದು ವಾರ ಇರುಳೊಂದು ವಾರ
ಇದು ನಾವು ಬಲ್ಲೆವು
ಕೂಡಲ ಸಂಗಮದೇವ
ಎಂಬಂತೆ ಬಸವಾದಿ ಶರಣರು ಬಾಳಿ ಬದುಕಿದ್ದರು.

ಶರಣರು ವರ್ಷದ 12 ತಿಂಗಳಲ್ಲಿ ಒಂದು ತಿಂಗಳು, ಧರ್ಮ, ದಾಸೋಹಕ್ಕಾಗಿ ಮೀಸಲಿಡಿ ಎಂದರು.‌ ಕಷ್ಟ (ಕೂದಲು, ಗಡ್ಡ) ಬಿಡು ಎಂದಿರಲಿಲ್ಲ.

ಬಸವಣ್ಣನವರ ವಾರಸುದಾರರು ಎಂದು ಕರೆಯಿಸಿಕೊಳ್ಳುವ ಲಿಂಗಾಯತರು ಕೂಡ ಅಂಗವನ್ನು ಲಿಂಗವನ್ನಾಗಿ ಮಾಡಿಕೊಂಡು ಶರಣರ ಆಶಯದಂತೆ ಬದುಕಬೇಕು.

ತೆಲುಗು ಕವಿ ಪಾಲ್ಕುರಿಕೆ ಸೋಮನಾಥ ಅವರು ಮೊಟ್ಟ ಮೊದಲು ಬಸವ ಪುರಾಣ ಬರೆದರು. ಅದನ್ನು ರಸ್ತಾಪುರದ ಭೀಮಕವಿ ಕನ್ನಡಕ್ಕೆ ಅನುವಾದಿಸಿದರು. ತರುವಾಯ ಹರಿಹರನು ಬಸವಣ್ಣ ಹಾಗೂ ಪ್ರಭುದೇವರ ರಗಳೆ ಬರೆದರು.

ನಾಲ್ಕು ಪ್ರಕಾರಗಳಲ್ಲಿ ಶೂನ್ಯ ಸಂಪಾದನೆಗಳು ಸಿಗುತ್ತವೆ. 14ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಪ್ರೌಢ ದೇವರಾಯನ ಕಾಲದಲ್ಲಿ ನೂರೊಂದು ವಿರಕ್ತರಿದ್ದರು. ಅವರಲ್ಲಿ ಚಾಮರಸ ಕೂಡ ಒಬ್ಬರು.

ಇವರು ಸಾಯುವವರ ಮತ್ತು ಅಹಂಕಾರದಿಂದ ಮರೆಯುವವರ, ಲೌಕಿಕ ಜಂಜಡಗಳಲ್ಲಿ ಮುಳುಗೇಳುವವರ ಬಗ್ಗೆ ಕಾವ್ಯ ಬರೆಯದೆ ಶಿವಯೋಗದ ಮಹಾ ಬೆಳಕು ಅಲ್ಲಮಪ್ರಭುದೇವರ ಸಲ್ಲಲಿತ ಪರಂಪರೆಯ ಬಗ್ಗೆ ಷಟ್ಪದಿ ಕಾವ್ಯ ಬರೆದರು. ಅದುವೇ ಚಾಮರಸನ ಪ್ರಭುಲಿಂಗಲೀಲೆ.

ಸೂಫಿಸಂತ, ಶಿಶುನಾಳ ಶರೀಫ್ ಸಾಬರಿಗೆ ಪ್ರಭುಲಿಂಗ ಲೀಲೆ ಮುಖೋದ್ಗತವಾಗಿತ್ತು. ಆರು ಶಾಸ್ತ್ರ, ಹದಿನೆಂಟು ಪುರಾಣಗಳು ನನ್ನ ಬೆನ್ನ ಮೇಲೆ. ಪ್ರಭುಲಿಂಗ ಲೀಲೆ ನನ್ನ ತಲೆಯ ಮೇಲೆ ಎಂದು ಅವರು ಹೇಳುತ್ತಿದ್ದರು.

ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರು, ಇಡೀ ವಿಶ್ವದಲ್ಲಿ ಅಲ್ಲಮರಂಥ ಅನುಭಾವಿ ಯಾರೂ ಸಿಗುವುದಿಲ್ಲ ಎಂದು ಹೇಳುತ್ತಿದ್ದರು.

ಪ್ರಭುವಿನ ಪ್ರಭುಲಿಂಗ ಲೀಲೆ ಮನುಷ್ಯತ್ವದ ಶಾಲೆ. ಗುಹೇಶ್ವರನ ಅರಿವಿನ ಬೆಳಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *