ಚಿತ್ರದುರ್ಗ:
ಶೂನ್ಯಪೀಠ ಪರಂಪರೆಯ ಚಿತ್ರದುರ್ಗದ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಮಂಗಳವಾರ ಕುಂಬಾರ ಗುಂಡಯ್ಯ ಹಾಗೂ ಗಾಣದ/ಗಾಳದ ಕಣ್ಣಪ್ಪನವರ ಶರಣೋತ್ಸವ ಕಾರ್ಯಕ್ರಮ ಜರುಗಿತು.
ಬಸವಣ್ಣನವರ ಜತೆಗಿದ್ದು ತಮ್ಮ ಕಾಯಕವನ್ನು ನಿಷ್ಠೆಯಿಂದ ನಿರ್ವಹಿಸಿ ವಚನಗಳನ್ನೂ ರಚನೆ ಮಾಡಿದ ಇಬ್ಬರು ಮಹಾನ್ ಶಿವಶರಣರಾದ ಕುಂಬಾರ ಗುಂಡಯ್ಯ ಹಾಗೂ ಗಾಣದ/ಗಾಳದ ಕಣ್ಣಪ್ಪ (ಕನ್ನಯ್ಯ-ಮೀನ ಹಿಡಿಯುವ ಕಾಯಕ) ಈ ಮಹಾಮಹಿಮರ ಜೀವನ ಸಾಧನೆಯ ಪಥದರ್ಶನದ ಅವಲೋಕನ ಅರ್ಥಪೂರ್ಣವಾಗಿ ನೆರವೇರಿತು.

ಆರಂಭದಲ್ಲಿ ಶಿವಶರಣರಾದ ಕುಂಬಾರ ಗುಂಡಯ್ಯನವರ ವಿಷಯಾವಲೋಕನ ಮಾಡಿದ ಕುಂಬಾರ ಗುರುಪೀಠದ ಕಾರ್ಯದರ್ಶಿಗಳಾದ ವೈ. ಮೃತ್ಯುಂಜಯ ಅವರು, ಕಾಯಕವಿಲ್ಲದ ಲಿಂಗಪೂಜೆ ಲೇಸಲ್ಲ ಎನ್ನುವ ತತ್ವದ ಶಿವಶರಣರು ೧೨ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು. ಸಾಮಾನ್ಯರ ಇಹಪರಗಳು ಶುದ್ಧವಾಗಿ ಆ ಮೂಲಕ ಚಿಂತನಶೀಲರಾಗುವಂತೆ ಅನುಭವ ಮಂಟಪದಲ್ಲಿ ಬೆಳಗಿದರು. ಮನುಷ್ಯರು ಸೇರಿದಂತೆ ಸಕಲ ಜೀವರಾಶಿಗೂ ಲೇಸನ್ನೇ ಬಯಸಿದ ಕಲ್ಯಾಣದ ಅನುಭವ ಮಂಟಪದಲ್ಲಿ ಅಸಂಖ್ಯಾತ ಶಿವಶರಣರಲ್ಲಿ ಕುಂಬಾರ ಗುಂಡಯ್ಯನವರೂ ಒಬ್ಬರು.

ಇವರು ತನ್ನ ವೃತ್ತಿಯಲ್ಲಿ ತೃಪ್ತಿ ಕಾಣುವ ಆ ಮೂಲಕ ಶಿವನೊಲುಮೆಗೆ ಪಾತ್ರವಾದರೆಂದು ಪ್ರತೀತಿ ಇದೆ. ಹದವಾಗಿ ಮಣ್ಣನ್ನು ತುಳಿಯುತ್ತ ಶಿವಗಣಂಗಳಿಗೆ ಮಣ್ಣಿನ ಪರಿಕರ ಮಾಡಿಕೊಡುವ ಅಂತಹ ಮಣ್ಣಿನ ವಸ್ತುಗಳಾದ ಗಡಿಗೆಯಲ್ಲಿ ಸುಂದರವಾದ ಸುನಾದ ಬರುವಂತೆ ಕುಣಿ-ಕುಣಿದು ತನ್ನ ಕಾಯಕದಲ್ಲಿ ಕೈಲಾಸವನ್ನೇ ತನ್ನತ್ತ ಬರಮಾಡಿಕೊಂಡಿದ್ದ ಮಹಾಮೇರು ಗುಂಡಯ್ಯ ದಂಪತಿಗಳಾಗಿದ್ದರು.
ಕಾಯಕದಲ್ಲಿ ಕರ್ಮಯೋಗಿಯಾಗಿ, ಪಾರಮಾರ್ಥದಲ್ಲಿ ತೇಜೋಮೂರ್ತಿಯಾಗಿ, ಶಿವಶರಣರಲ್ಲಿ ಶರಣರಾಗಿ ಇತಿಹಾಸದ ಮಹಾವ್ಯಕ್ತಿಯಾಗಿ ತನ್ನ ಧರ್ಮಪತ್ನಿ ಮಹಾಶಿವಶರಣೆ ಕೇತಲದೇವಿಯೊಂದಿಗೆ ಸಂಸಾರಿಕ ಭವಸಾಗರವನ್ನು ದಾಟಿದವರಾಗಿದ್ದರು. ಗುಂಡಯ್ಯನವನ ಬಗ್ಗೆ ಚರಿತ್ರೆಕಾರರು ಹಲವು ರೀತಿಯಲ್ಲಿ ಚಿತ್ರಿಸಿರಬಹುದು. ಗುಂಡಯ್ಯನ ತಂದೆ ಸತ್ಯಣ್ಣ, ತಾಯಿ ಸಂಗಮ್ಮ, ಸಹೋದರಿ ನೀಲಲೋಚನೆ, ಮಡದಿ ಕೇತಲದೇವಿ ಎಂದು ತಿಳಿದುಬರುತ್ತದೆ.
ಕುಂಬಾರಿಕೆ ವೃತ್ತಿಯಾದರೂ ಹೊರಗೆ ಮಡಕೆ, ಕುಡಿಕೆ, ಗಡಿಗೆ ಮಾಡುವುದು. ಅಂತರಂಗದಲ್ಲಿ ಶಿವಸೇವಾ ಕಾಯಕ ಎರಡನ್ನೂ ಕಾಯಕ ಏಕಕಾಲಕ್ಕೆ ನಡೆಸುತ್ತಿದ್ದರು. ಶಿವಭಾವದಲ್ಲಿ ಲೀನವಾಗಿ ಕಾಯಕ ಮಾಡುತ್ತ ಊಟ ನಿದ್ರೆಗಳ ಪರಿವೇ ಇಲ್ಲದೆ ಕಾಯಕದಲ್ಲಿ ನಿರತನಾಗಿ ಹೊಸ ಹೊಸ ವಿಭಿನ್ನ ಮಣ್ಣಿನ ಸಾಮಾನುಗಳನ್ನು ಮಾಡುತ್ತಿದ್ದರು. ಇವರ ವಚನಗಳು ಲಭ್ಯವಿಲ್ಲದಿದ್ದರೂ ಇವರ ಪತ್ನಿ ಕೇತಲದೇವಿಯವರ ೨ ವಚನಗಳು ಮಾತ್ರ ಲಭ್ಯವಿವೆ.
ಇಂತಹವರ ಜಯಂತಿ ಆಚರಿಸುವ ಮೂಲಕ ಸಣ್ಣ ಸಮಾಜಗಳನ್ನು ಮುರುಘಾಮಠ ಆದರಿಸುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಿವಶರಣರಾದ ಗಾಣದ/ಗಾಳದ ಕಣ್ಣಪ್ಪ ಅವರ ಬಗೆಗೆ ವಿಷಯಾವಲೋಕನ ಮಾಡಿದ ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ಡಾ. ಪುಷ್ಪಾ ಅವರು, ಗಾಣದ ಕಣ್ಣಪ್ಪ ೧೨ನೇ ಶತಮಾನದ ಶರಣರು ಮತ್ತು ವಚನಕಾರರು. ಇವರು ಒಟ್ಟು ೧೦ ಅನುಭಾವಿಕ ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳಲ್ಲಿ ಮೀನುಗಾರಿಕೆ ಸಂಬಂಧಿಸಿದ ಸಾಂಕೇತಿಕ ಪದಗಳು ಮತ್ತು ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಿ ಕಂಡು ಬರುತ್ತದೆ. ಇವರು ವೃತ್ತಿಯಲ್ಲಿ ಮೀನುಗಾರರಾಗಿದ್ದರು. ಕಲ್ಯಾಣದ ತ್ರಿಪುರಾಂತಕೇಶ್ವರ ಕೆರೆಯಲ್ಲಿ ಮೀನು ಹಿಡಿಯುವುದು ಇವರ ನಿತ್ಯ ಕಾಯಕವಾಗಿತ್ತು. ಹೆಂಡತಿ ರೇಚವ್ವೆ. ಸತಿಪತಿಗಳಿಬ್ಬರೂ ಶಿವಾನುಭವ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು. ಗಾಳ/ಗಾಣದ ಕಣ್ಣಪ್ಪನ ಆದ್ಯಗುರು ಅಲ್ಲಮಪ್ರಭು ಆಗಿದ್ದರು. ಆದ್ದರಿಂದಲೇ ಈತನು ಅಲ್ಲಮಪ್ರಭುವಿನ ಹೆಸರಿನಿಂದಲೇ ವಚನಗಳನ್ನು ರಚಿಸಿರುವುದು ಕಂಡುಬರುತ್ತದೆ.
ಇವರ ಅಂಕಿತ – ಗುಹೇಶ್ವರ ಶರಣ ಅಲ್ಲಮ. ಕಣ್ಣಪ್ಪ ಕಾಯಕವೇ ಕೈಲಾಸ ಎಂಬ ತತ್ವವನ್ನು ಅನುಸರಿಸಿ, ಪ್ರಾಮಾಣಿಕ ದುಡಿಮೆ ಮತ್ತು ದಾಸೋಹದ ಮಹತ್ವವನ್ನು ಸಾರಿದರು.
ಜಾತಿ ಮತ ಭೇದವನ್ನು ವಿರೋಧಿಸಿ ಎಲ್ಲರೂ ಸಮಾನರು ಎಂಬ ಸಂದೇಶವನ್ನು ತಮ್ಮ ವಚನಗಳಲ್ಲಿ ತಿಳಿಸಿದರು. ಅವರ ವಚನಗಳಲ್ಲಿ ಸರಳತೆ, ಸತ್ಯ, ಭಕ್ತಿ, ಕಾಯಕ ಮತ್ತು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಸ್ಥಾನವನ್ನು ನೀಡಿರುವುದನ್ನು ಅವರ ವಚನಗಳಲ್ಲಿ ಕಾಣಬಹುದು. ಅವರು ಶಿವಭಕ್ತರಾಗಿದ್ದು, ತಮ್ಮ ವಚನಗಳಲ್ಲಿ ಭಕ್ತಿ ಮತ್ತು ನೀತಿಯ ಬದುಕನ್ನು ಬೋಧಿಸಿದ್ದಾರೆ.
ಒಮ್ಮೆ ಇವರಿಗೆ ಗಣಪರ್ವ ಮಾಡಬೇಕೆಂಬ ಆಸೆಯಾಯಿತು. ಅಂದು ಲಿಂಗಪೂಜೆಗೆ ಕುಳಿತಾಗ, ‘ನಿನಗೇನು ಬೇಕು’ ಎಂಬ ಅವ್ಯಕ್ತ ಧ್ವನಿ ಕೇಳಿಸಿತು. ತನಗೆ ಒಂದು ಸ್ವರ್ಣಮತ್ಸ್ಯಬೇಕು ಎಂದ ಕಣ್ಣಪ್ಪ. ‘ಆಗಲಿ’ ಎಂಬ ಉತ್ತರವೂ ಕೇಳಿಬಂದಿತು. ಅಂದು ತ್ರಿಪುರಾಂತಕ ಕೆರೆಯಲ್ಲಿ ಬಲೆಯನ್ನು ಹಾಕಿದಾಗ ಒಂದು ಸ್ವರ್ಣ ಮತ್ಸ್ಯ ದೊರೆಯಿತು. ಅದನ್ನು ಮಾರಿ ಬಂದ ಹಣದಿಂದ ಗಣಪರ್ವ ಮಾಡಲು ನಿರ್ಧರಿಸಿ ಶಿವಾನುಭವ ಮಂಟಪಕ್ಕೆ ತೆರಳಿ ಜಂಗಮಮೂರ್ತಿಗಳಿಗೆ ಬಿನ್ನಹ ಮಾಡಿದನು.
ಕಣ್ಣಪ್ಪನ ಮನೆಗೆ ಬಂದ ಜಂಗಮರು ಅಲ್ಲಿ ಸತ್ತು ಬಿದ್ದ ಮೀನುಗಳ ವಾಸನೆಯನ್ನು ಸಹಿಸಿಕೊಳ್ಳಲಾರದೆ ಅಸಹ್ಯಪಟ್ಟು ಬಸವಣ್ಣನ ಮಹಾಮನೆಗೆ ಬಂದರು. ಅವರನ್ನು ಕಣ್ಣಪ್ಪ ಮತ್ತೆ ಕರೆಯಲು ಬಂದಾಗ ಜಂಗಮರು ಅವನಿಗೆ ಛೀಮಾರಿ ಹಾಕಿದರು ಮತ್ತು ಅವನ ಲಿಂಗವನ್ನು ಕಿತ್ತು ಹೊರಗೆ ಹಾಕಿದರು. ಇತ್ತ ಬಸವಣ್ಣನ ಮಹಾಮನೆಯಲ್ಲಿ ಲಿಂಗಪೂಜೆಗೆ ಕುಳಿತ ಜಂಗಮರು ತಮ್ಮ ಕರಡಿಗೆಯನ್ನು ಬಿಚ್ಚಿದಾಗ ಸಜ್ಜೆಯಲ್ಲಿ ಲಿಂಗಗಳೇ ಇರಲಿಲ್ಲ. ವಿಷಯ ತಿಳಿದ ಬಸವಣ್ಣ ಕಣ್ಣಪ್ಪನ ಮನೆಗೆ ಅವರನ್ನು ಕರೆದುಕೊಂಡು ಹೋಗಿ ಅವರ ತಪ್ಪನ್ನು ಮನ್ನಿಸುವಂತೆಯೂ ಹಾಗೂ ಅವರ ಇಷ್ಟಲಿಂಗಗಳನ್ನು ಹಿಂತಿರುಗಿಸುವಂತೆಯೂ ಕೇಳಿಕೊಂಡರು.
ಬಸವಣ್ಣನಿಂದ ವಿಚಾರ ತಿಳಿದ ಕಣ್ಣಪ್ಪ ಜಂಗಮರನ್ನು ತ್ರಿಪುರಾಂತಕ ಕೆರೆಯ ಬಳಿಗೆ ಕರೆದುಕೊಂಡು ಹೋಗಿ ತಾನು ಧ್ಯಾನಾಸಕ್ತನಾದನು. ಆಗ ಸ್ವಲ್ಪ ಹೊತ್ತಿನಲ್ಲಿಯೇ ಕಳೆದುಹೋದ ಲಿಂಗಗಳು ನೀರಿನಲ್ಲಿ ತೇಲಿ ಬಂದವು. ಜಂಗಮರು ತಮ್ಮ ತಮ್ಮ ಲಿಂಗಗಳನ್ನು ಪಡೆದು ಕಣ್ಣಪ್ಪನನ್ನು ಸ್ತುತಿಸಿ ಹೋದರು. ಈ ಪವಾಡ ಕಥೆ ಅಥವಾ ಕಣ್ಣಪ್ಪನ ಕಥೆ ಬಗ್ಗೆ ಪಾಲ್ಕುರಿಕೆ ಸೋಮೇಶ್ವರ ಪುರಾಣ, ಚತುರಾಚಾರ್ಯ ಪುರಾಣ, ಬಸವೇಶ್ವರ ಪುರಾಣ ಕಥಾಸಾಗರ, ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರ, ಶರಣ ಲೀಲಾಮೃತ ಮೊದಲಾದ ಕೃತಿಗಳಲ್ಲಿ ಕಂಡು ಬರುತ್ತದೆ.
ಕಣ್ಣಪ್ಪನ ವಚನಗಳು ಸಾಮಾನ್ಯವಾಗಿ ಗೂಢಾರ್ಥಗಳಿಂದ ಕೂಡಿರುತ್ತವೆ. ಅವರು ಹೇಳುವ ಬಿಲ್ಲು, ಬಾಣ, ಕಳ್ಳರು, ಸೂಳೆಯರು, ಮತ್ತಗಜ, ಎರಳೆ ಇತ್ಯಾದಿ ಪದಗಳನ್ನು ನೇರ ಅರ್ಥದಲ್ಲಿ ನೋಡದೇ ಇವುಗಳೆಲ್ಲ ಮಾನವನ ಮನಸ್ಸು, ಅಹಂಕಾರ, ಆಸೆಗಳು, ಬಂಧನಗಳು ಮತ್ತು ಆತ್ಮಜ್ಞಾನದ ಸ್ಥಿತಿಗಳನ್ನು ಸೂಚಿಸುವ ರೂಪಕಗಳಾಗಿವೆ. ಈ ವಚನಗಳಲ್ಲಿ ಆತ್ಮಸಾಕ್ಷಾತ್ಕಾರಕ್ಕೆ ಹೋಗುವ ಸಾಧಕನ ಅಂತರಂಗದ ಪಯಣವನ್ನು ಚಿತ್ರಿಸಲಾಗಿದೆ.
ಈ ಎಲ್ಲಾ ವಚನಗಳ ಮೂಲ ಸಂದೇಶವೇನೆಂದರೆ, ಮನುಷ್ಯನು ತನ್ನೊಳಗಿನ ಅಹಂಕಾರ, ಆಸೆ, ಮೋಹ, ಕ್ರೋಧ, ಲೋಭ ಮತ್ತು ಭೇದಭಾವಗಳನ್ನು ಮೀರಿ ಆತ್ಮಜ್ಞಾನವನ್ನು ಪಡೆಯಬೇಕು. ಆತ್ಮಜ್ಞಾನ ಬಂದಾಗ ಹೊರಗಿನ ಎಲ್ಲ ಭೇದಗಳು ಅರ್ಥಹೀನವಾಗುತ್ತವೆ. ಆಗ ಜೀವಿಯು ಪರಮಸತ್ಯದೊಂದಿಗೆ ಒಂದಾಗುತ್ತಾನೆ. ಕಣ್ಣಪ್ಪನ ಪ್ರಕಾರ ಇದೇ ಮಾನವ ಜೀವನದ ಪರಮಗುರಿ ಮತ್ತು ನಿಜವಾದ ಮುಕ್ತಿ.

ಈ ವಚನಗಳ ಒಟ್ಟಾರೆ ಆಶಯ ಆತ್ಮಜ್ಞಾನ, ಅಹಂಕಾರದ ನಾಶ, ಮತ್ತು ಪರಮಸತ್ಯದ ಅನುಭವವಾಗಿದೆ. ಕಣ್ಣಪ್ಪ ಅವರು ರೂಪಕಗಳ ಮೂಲಕ ಮನಸ್ಸಿನ ಬಂಧನಗಳನ್ನು ಮೀರಿ ಶಿವತತ್ವವನ್ನು ಅರಿಯುವ ಮಾರ್ಗವನ್ನು ವಿವರಿಸಿದ್ದಾರೆ ಎಂದರು.
ಸಮಾರಂಭದ ಸಮ್ಮುಖ ವಹಿಸಿದ್ದ ಶಿವಶರಣ ಕುಂಬಾರ ಗುರುಪೀಠದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ನೇತೃತ್ವದಲ್ಲಿ ಶರಣ ಚಳುವಳಿಯ ಭಾಗವಾಗಿ ನಮ್ಮ ಕುಂಬಾರ ಗುಂಡಯ್ಯನವರು ಸೇರಿಕೊಂಡಿದ್ದರು. ಅಂತಹ ಪುಣ್ಯ ಪುರುಷರನ್ನೆಲ್ಲ ಮುರುಘಾಮಠವು ಸ್ಮರಿಸುವ ಕೆಲಸ ಮಾಡುತ್ತ ಅಲಕ್ಷಿತ ಸಮುದಾಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಸಹಕಾರ, ನೆರವು ನೀಡುವಲ್ಲಿ ಮುಂದಿದೆ. ಅದು ಯಥಾಪ್ರಕಾರ ನಡೆಯಲಿ ಎಂದು ಕೇಳಿಕೊಂಡರು.
ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದ ಇತಿಹಾಸಕಾರರು ನಿವೃತ್ತ ಉಪನ್ಯಾಸಕರು ಆದ ಜಿ. ರಾಜಶೇಖರಯ್ಯ ಅವರು ಮಾತನಾಡಿ, ನಾವು ಮೊದಲು ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸುವತ್ತ ನಮ್ಮ ಚಿತ್ತ ಹರಿಸಬೇಕಿದೆ. ನಾನು ೩೫ ವರ್ಷಗಳ ಕಾಲ ಅಧ್ಯಾಪನ ಕರ್ತವ್ಯದಲ್ಲಿ ಬಹುಪಾಲು ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಇತರ ವಿಷಯಗಳನ್ನು ಬೋಧಿಸುತ್ತಿದ್ದೆ. ಅವರನ್ನು ತಿದ್ದಿ ತಿದ್ದಿ ಮೂರ್ತಿಯಾಗಿಸುವುದು ಬೋಧಕನ ಕೆಲಸ, ವಚನಗಳು ಸರ್ವಕಾಲಕ್ಕೂ ವೇದ್ಯವಾಗುವಂತಹವು. ಅವನ್ನು ಮಕ್ಕಳಿಗೆ ಮನನ ಮಾಡಿಸಬೇಕೆಂದು ವಿನಂತಿಸಿದರು.
ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ ಎಸ್. ಜಾನಕಿ ಹಾಗೂ ಗಾಂಧಿವಾದಿ ಎಸ್. ನಿಜಲಿಂಗಪ್ಪನವರ ಒಡನಾಡಿ ಮಾಜಿ ರಾಜ್ಯಸಭಾ ಸದಸ್ಯರಾಗಿದ್ದ ಹೆಚ್. ಹನುಮಂತಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಮೌನಾಚರಣೆ ಮೂಲಕ ಸಂತಾಪ ವ್ಯಕ್ತಪಡಿಸಲಾಯಿತು.

ಮತ್ತೋರ್ವ ಅತಿಥಿ ನಿವೃತ್ತ ಶಿಕ್ಷಕರಾದ ಕೆ.ಸಿ. ಮಂಜಪ್ಪ ಮಾತನಾಡಿ, ನಾನು ಶ್ರೀಮಠದ ವಿದ್ಯಾಪೀಠದ ಬೃಹನ್ಮಠ ಪ್ರೌಢಶಾಲೆಯಲ್ಲಿ ೩ ದಶಕಗಳ ಕಾಲ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿ ಹೊಂದಿದ್ದೇನೆ. ಈ ಸಂಸ್ಥೆಯಲ್ಲಿದ್ದುದೇ ಒಂದು ಸುದೈವ. ನನಗೀಗ ೮೨ ವರ್ಷ. ನನ್ನ ಶಿಕ್ಷಕ ವೃತ್ತಿ ಶಿಷ್ಯರಾಗಿದ್ದ ನಾಲ್ಕಾರು ಜನ ಈ ಮಠದ ಶಾಖಾಮಠಗಳಿಗೆ ಸ್ವಾಮಿಗಳಾಗಿರುವುದು ಒಂದು ವಿಶೇಷ ಎಂದು ಸಂತಸಪಟ್ಟರು.
ವೇದಿಕೆಯಲ್ಲಿ ಮುರುಘಾಮಠದ ಬಸವ ಮುರುಘೇಂದ್ರ ಸ್ವಾಮೀಜಿ, ಹೊಳಲ್ಕೆರೆಯ ತಿಪ್ಪೇರುದ್ರ ಸ್ವಾಮೀಜಿ, ಕುಂಬಾರ ಸಮಾಜದ ಎರ‍್ರಿಸ್ವಾಮಿ, ಸಮಾಜದ ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳಾದ ಬಸವರಾಜ ಕಟ್ಟಿ, ಎಸ್. ವೀರೇಶ, ನಾಗರಾಜ ಸಂಗಮ, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ, ಇಟಗಿ ವಿಜಯಕುಮಾರ, ಮೆರವಣಿಗೆ ಗುರು, ಜವಳಿ ಮುರುಘೇಶ, ಕವಿ ಗಂಗಾಧರಪ್ಪ, ಡಾ. ಬಿ. ರಾಜಶೇಖರಪ್ಪ, ಯಶೋದಾ ರಾಜಶೇಖರಪ್ಪ, ಮುಖ್ಯಶಿಕ್ಷಕಿ ಆಶಾರಾಣಿ ಸೇರಿದಂತೆ ಎಸ್.ಜೆ.ಎಂ. ವಿದ್ಯಾಪೀಠದ ಶಾಲಾ ಕಾಲೇಜುಗಳ ಕೆಲ ಸಿಬ್ಬಂದಿ ಭಾಗವಹಿಸಿದ್ದರು.
ನಗರದ ಬೃಹನ್ಮಠ ಪ್ರೌಢಶಾಲೆಯ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಗೀತಾ ರುದ್ರೇಶ, ಮಹಾಂತಮ್ಮ ಜಯಪ್ಪ ಹಾಗೂ ಭಾಗ್ಯಲಕ್ಷ್ಮಿ ಅವರುಗಳು ಇಬ್ಬರು ಶಿವಶರಣರ ವಚನಗಳ ಪ್ರಾರ್ಥನೆ ನಡೆಸಿಕೊಟ್ಟರು. ಶಿಕ್ಷಕ ಜಿ.ಎಂ. ಪುಟ್ಟಸ್ವಾಮಿ ಸ್ವಾಗತಿಸಿದರು. ನಾಗಾನಾಯ್ಕ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.
