ಬಸವನಬಾಗೇವಾಡಿ:
ವಚನ ಸಾಹಿತ್ಯ ಸಂಶೋಧನೆ ಹಾಗೂ ಮುದ್ರಣಕ್ಕಾಗಿ ತಮ್ಮ ಬದುಕನ್ನೇ ಸವಿಸಿದ ಮಹಾಪುರುಷ ಡಾ. ಫ. ಗು. ಹಳಕಟ್ಟಿ ಅವರು ಆಗಿದ್ದರು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಪ್ರಭಾಕರ ಖೇಡದ ಅವರು ಹೇಳಿದರು.

ಅವರು ಈಚೇಗೆ ಸ್ಥಳೀಯ ವಿರಕ್ತಮಠದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಫ.ಗು. ಹಳಕಟ್ಟಿ ಅವರ ಜಯಂತೋತ್ಸವ ಹಾಗೂ ಲಿಂಗಾನಂದ ಸ್ವಾಮಿಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
250ಕ್ಕೂ ಹೆಚ್ಚು ವಚನಕಾರರನ್ನು ಪರಿಚಯಿಸಿದ ಕೀರ್ತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ. ಅವರು ವಿಜಯಪುರ ಜಿಲ್ಲೆಗೆ ಕೊಟ್ಟ ಕೊಡುಗೆ ಅಪಾರವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಆವರ ಕೊಡುಗೆ ಚಿರಸ್ಮರಣೀಯವಾಗಿದೆ ಎಂದು ಹೇಳಿದರು.

ವಿಜಯಪುರ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಸವರಾಜ ಕೊಂಡಗೂಳಿ ಪ್ರವಚನ ಕೇಸರಿ ಲಿಂಗಾನಂದ ಸ್ವಾಮಿಗಳ ಕುರಿತು ಮಾತನಾಡಿ, ವಚನ ಸಾಹಿತ್ಯದ ಮೇಲೆ ಪ್ರವಚನ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟವರು ಲಿಂಗಾನಂದ ಸ್ವಾಮಿಗಳು ಎಂದು ಹೇಳಿದರು.
ವೈಜ್ಞಾನಿಕವಾಗಿ ವಚನ ಸಾಹಿತ್ಯವನ್ನು ಜನರಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿ ಅನೇಕ ಪ್ರವಚನಕಾರರನ್ನು ತಯಾರು ಮಾಡಿದ ಕೀರ್ತಿಗೆ ಅವರು ಬಾಜನರಾಗಿದ್ದಾರೆ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಶಿರಸಿಯ ಬಣ್ಣದ ಮಠದ ಆಟವಿ ಶಿವಲಿಂಗ ಸ್ವಾಮಿಗಳು ಮಾತನಾಡಿ, ದೇಹವನ್ನೇ ದೇವಾಲಯ ಮಾಡಿಕೊಂಡ ನಮ್ಮ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಹೇಳಿದರು. ಮಕ್ಕಳಿಗೆ ವಚನಗಳ ಸಂಸ್ಕಾರವನ್ನು ನೀಡಬೇಕಾಗಿದೆ ಎಂದು ತಿಳಿಸಿದರು. ನಮ್ಮ ನಾಡಿಗಾಗಿ ನಮಗಾಗಿ ದುಡಿದ ಮಹಾಪುರುಷರನ್ನು ನೆನೆಯುವರು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಎಂ. ಜಿ. ಆದಿಗೊಂಡ ಹಾಗೂ ನೇತೃತ್ವ ವಹಿಸಿದ್ದ ಸಿದ್ದಲಿಂಗ ಸ್ವಾಮಿಗಳು ಮಾತನಾಡಿದರು.

ವೇದಿಕೆಯ ಮೇಲೆ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷರಾದ ಎಸ್. ಡಿ. ಅವಜಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ಮಹಾದೇವಿ ಬಿರಾದರ ಉಪಸ್ಥಿತರಿದ್ದರು.
ಶಿಕ್ಷಕ ವಾಯ್. ಜಿ. ಮಿಣಜಗಿ ಸ್ವಾಗತಿಸಿದರು. ಬಸವರಾಜ ಹೆಗಡ್ಯಾಳ ಸ್ವಾಗತ ಗೀತೆ ಹಾಡಿದರು. ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಕಲ್ಯಾಣಶೆಟ್ಟಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಕೊಟ್ರೇಶ್ ಹೆಗಡ್ಯಾಳ ನಿರೂಪಿಸಿದರು.
