ಹೊಳಲ್ಕೆರೆ:
ಈ ನಾಡಿಗೆ ಅನುಪಮ ಸೇವೆ ಸಲ್ಲಿಸಿದವರ ಜಯಂತಿ, ಸ್ಮರಣೋತ್ಸವದಂತಹ ಆಚರಣೆಗಳನ್ನು ವಿಜೃಂಭಣೆ, ವೈಭವ, ಅದ್ಧೂರಿಯಾಗಿ ನಡೆಸುವುದು ಒಂದು ಕಡೆಯಾದರೆ, ಆ ಪುಣ್ಯಪುರುಷರು ಯಾವ ಉದ್ಧೇಶಕ್ಕಾಗಿ ಸ್ಮರಣೆಗೆ ಯೋಗ್ಯರಾಗಿದ್ದಾರೆ.
ಅವರಿಂದ ಎಂತಹ ಉದಾತ್ತ ತತ್ವಗಳ ಪ್ರತಿಪಾದನೆ ಆಗಿದೆ ಮತ್ತು ಅನುಷ್ಠಾನಕ್ಕಾಗಿ ಶ್ರದ್ಧೆ ಮತ್ತು ಭಕ್ತಿಯಿಂದ ಅವರು ಅನುಸರಿಸಿದ ಪಥದ ಮಾರ್ಗದಲ್ಲಿ ನಡೆಯುವಂತಾದರೆ ಅದಕ್ಕೊಂದಷ್ಟು ಅರ್ಥ ಬರುತ್ತದೆಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಅಭಿಪ್ರಾಯಪಟ್ಟರು.
ಶ್ರೀಗಳವರು ಇಲ್ಲಿನ ಒಂಟಿಕಂಬದ ಮುರುಘಾಮಠದ ಪ್ರಾಂಗಣದ ಲಿಂಗೈಕ್ಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸ್ಥಾನದಲ್ಲಿ ಏರ್ಪಡಿಸಿದ್ದ ೩೨ನೇ ಸ್ಮರಣೋತ್ಸವ ಪೂರ್ವಭಾವಿ ಸಭೆಯ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು.

ಮಹಿಮಾಪುರುಷರು ಹೇಗೆ ತಪಸ್ಸು, ಶಕ್ತಿ ಮತ್ತು ಶಿವಯೋಗ ಸಾಧನೆಯಿಂದ ಮುಂದಾಗುವ ಭವಿಷ್ಯವನ್ನು ತಮ್ಮ ವಾಣಿಯಲ್ಲಿ ಸತ್ಯವಾಗುವ ಘಟನೆಗಳನ್ನು ಹೇಳುತ್ತಿದ್ದರು.
ಮುರುಘಾಮಠದ ಮೂಲಕರ್ತೃ ಮುರಿಗೆಯ ಶಾಂತವೀರ ಮಹಾಸ್ವಾಮಿಗಳವರು ದನಗಾಹಿ ಯುವಕನಿಗೆ ರಾಜನಾಗುವೆ ಎಂದು ಹೇಳಿ ಆತ ಮುಂದೆ ದುರ್ಗದ ದೊರೆಯಾದ ಬಗ್ಗೆ, ಅಥಣಿ ಮುರುಘೇಂದ್ರ ಶಿವಯೋಗಿಗಳು ಜಯದೇವ ಮುರುಘರಾಜೇಂದ್ರರನ್ನು ಚಿತ್ರದುರ್ಗ ಬೃಹನ್ಮಠಕ್ಕೆ ಪೀಠಾಧಿಕಾರಿಯಾಗುವವರು ಬರುತ್ತಿದ್ದಾರೆ. ಅವರಿಗೆ ಸೂಕ್ತ ಜಾಗ ಮಾಡಿಕೊಡಿ ಎಂದ ನಿದರ್ಶನಗಳು ಕೇವಲ ಭಾಷಣದ ಸರಕಾದರೆ ಸಾಲದು ಅವುಗಳಲ್ಲಿ ಕಿಂಚಿತ್ತಾದರೂ ಬದುಕಿನಲ್ಲಿ ಬರಬೇಕಿದೆ.
ಹಾಗೆಯೇ ಮುರುಘಾಮಠದ ಅಭಿವೃದ್ಧಿಗೆ ಜಯದೇವ ಜಗದ್ಗುರುಗಳು ಕಾರಣವಾದರೆ ಅದರಂತೆ ಮಲ್ಲಿಕಾರ್ಜುನ ಶ್ರೀಗಳು ಶಿಕ್ಷಣ ಸಂಸ್ಥೆಗಳ ಮೂಲಕ ಶ್ರೀಮಠದ ಶ್ರೇಯಸ್ಸಿಗೆ ಕೊಡುಗೆ ನೀಡಿದವರು. ಅವರು ಲಿಂಗೈಕ್ಯರಾಗುವ ಮುನ್ನವೇ ಬಯಲಾಗುವ ದಿನ ಮತ್ತು ಸಮಾಧಿ ಸ್ಥಳವನ್ನು ತೋರಿಸಿ, ಅದೇ ದಿನದಂದು ಲೀಲಾವಿಶ್ರಾಂತಿ ಪಡೆದಿದ್ದು ಸೋಜಿಗವಲ್ಲವೆ.
ಮಲ್ಲಿಕಾರ್ಜುನ ಶ್ರೀಗಳವರ ಮಾತು ಅಂದರೆ ಅದು ನುಡಿದರೆ ಲಿಂಗಮೆಚ್ಚಿ ಅಹುದೆನ್ನುವಂತೆ ಆ ಮಾತಿನಲ್ಲಿ ಸ್ಪಷ್ಟತೆ ಮತ್ತು ನಿಖರತೆ ಇರುತ್ತಿತ್ತು.
ಹೀಗೆ ಶ್ರೀಮಠಕ್ಕೆ ಒಬ್ಬ ಸಂಸ್ಕೃತ ವಿದ್ವಾಂಸರೊಬ್ಬರು ಬಂದು ಚರ್ಚೆಯಲ್ಲಿ ತೊಡಗಿದ್ದಾಗ ಶ್ರೀಗಳವರ ಒಂದು ಪಶ್ನೆಗೆ ಉತ್ತರಿಸದೇ ತಡವರಿಸಿದಾಗ, ನೀನು ಈಜಿ ಬಂದವನಲ್ಲ ತೇಲಿ ಬಂದಿರಬೇಕೆಂದು ಮಾರ್ಮಿಕವಾಗಿ ಹೇಳಿದ್ದನ್ನು ಸ್ಮರಿಸಿಕೊಂಡರು.
ಹಾಗೆಯೇ ಆಗಸ್ಟ್ ೮ರಂದು ಶ್ರೀಗಳವರ ಸ್ಮರಣೋತ್ಸವವು ಈ ತಾಲ್ಲೂಕಿನ ಜನತೆಯ ಮುಂದಾಳತ್ವದಲ್ಲಿ ನಡೆಯಬೇಕು. ಅವರು ಇಲ್ಲಿ ಬಂದು ನೆಲೆಸಿದ ಕಾರಣ ಈ ಪ್ರದೇಶವು ಆಧ್ಯಾತ್ಮಿಕ, ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಮಾರಕವಾಗಲು ಸಹಕಾರಿಯಾಗಿದೆ. ಈ ಪ್ರದೇಶದ ಅಭಿವೃದ್ಧಿಗೂ ಸಹ ಆಡಳಿತ ಸಮಿತಿಯ ಅಧ್ಯಕ್ಷರು ಬದ್ಧರಾಗಿದ್ದು ಸುತ್ತ ಕಾಂಪೌಂಡ್ ನಿರ್ಮಿಸುವ, ಶಾಲಾ-ಕಾಲೇಜು, ಮಳಿಗೆಗಳನ್ನು ನಿರ್ಮಿಸುವ ಯೋಜನೆಯಿದೆ.
ಅಂದು ಚಿತ್ರದುರ್ಗದಲ್ಲಿ ನೂತನ ಕಟ್ಟಡಗಳ ಉದ್ಘಾಟನೆ, ಕೆಲ ಶಂಕುಸ್ಥಾಪನೆ ನಡೆಯಲಿದೆ. ಇಂತಹ ಅಭಿವೃದ್ಧಿ ಕಾರ್ಯಗಳಲ್ಲಿ ಬೃಹನ್ಮಠದ ಅಭಿಮಾನಿ ಭಕ್ತರುಗಳು ಶ್ರೀಮಠದೊಂದಿಗಿದ್ದು ಯಶಸ್ವಿಗೊಳಿಸ ಬೇಕೆಂದರು.
ಸಭೆಯಲ್ಲಿದ್ದ ಶ್ರೀ ಮಲ್ಲಿಕಾರ್ಜುನ ಶ್ರೀಗಳವರನ್ನು ಹತ್ತಿರದಿಂದ ಬಲ್ಲವರು, ಒಡನಾಡಿಗಳು, ಭಕ್ತರೂ ಆದ ಮಾಜಿ ಶಾಸಕ ಪಿ. ರಮೇಶ್ ಮಾತನಾಡಿ, ಚಿತ್ರದುರ್ಗದಲ್ಲಿ ಅದಾಗಲೇ ಈ ಹಿಂದೆ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳವರಿಗೆ ಲಿಂಗೈಕ್ಯ ಗದ್ದುಗೆ ರೆಡಿಯಾಗಿತ್ತು. ಅಂತಹುದನ್ನು ಬಿಟ್ಟು ಹೊಳಲ್ಕೆರೆಗೆ ಬಂದಿದ್ದಾರೆಂದರೆ ಯಾವುದೋ ಒಂದು ಸದುದ್ಧೇಶವಿದೆ.
ಈಗ ಈ ಸ್ಥಳವು ಒಂದು ಸುಕ್ಷೇತ್ರವಾಗಿ ನಿರ್ಮಾಣವಾಗಿದೆ. ಇಂತಹ ವಾತಾವರಣವನ್ನು ಭಕ್ತರು ಸದುಪಯೋಗ ಪಡಿಸಿಕೊಳ್ಳಬೇಕು. ಅಂದರೆ ಶ್ರೀಮಠದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಬರೀ ಮೊಬೈಲ್ ನೋಡುತ್ತ ಕಾಲ ಕಳೆಯುವುದಲ್ಲ ಎಂದು ತಿಳಿಹೇಳಿದ ಅವರು ಒಂದು ಕಾಲಘಟ್ಟದಲ್ಲಿ ಒಂದೊಂದು ಬಾರಿ ವ್ಯತ್ಯಾಸಗಳಾಗುತ್ತವೆ. ಅದಕ್ಕೆ ವ್ಯಥೆಪಡುವ ಬದಲು ಅದರೊಂದಿಗೆ ಹೊಂದಿಕೊಂಡು ಹೋಗುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು.

ಸಭೆಯಲ್ಲಿ ರೈತಮುಖಂಡ ರಂಗಸ್ವಾಮಿ ಮಾತನಾಡಿ, ಚಿತ್ರದುರ್ಗ ಬೃಹನ್ಮಠವು ರೈತರ ಪರವಾಗಿದ್ದು ಭದ್ರಾ ಮೇಲ್ದಂಡೆ ಯೋಜನೆ ಆರಂಭದಿಂದಲೂ ರೈತರೊಂದಿಗಿದ್ದು ಸಹಕಾರ ನೆರವು ನೀಡಿದೆ. ಅಂತಹ ಜನಪರ ಕಾಳಜಿಯ ಶ್ರೀಮಠದೊಂದಿಗೆ ಎಲ್ಲರ ಜತೆ ರೈತರೂ ಸಹ ಪಾಲ್ಗೊಳ್ಳಬೇಕೆಂದರು.
ರಾಜಣ್ಣ ಅವರು ಮಾತನಾಡಿ, ಈ ಹಿಂದೆ ಜನ ಭಾರೀ ಸಂಖ್ಯೆಯಲ್ಲಿ ಸೇರುತ್ತಿದ್ದರು. ಈಗ ಕೊರತೆಯಾಗಿದೆ, ಇದು ನಮ್ಮ ತಾಲ್ಲೂಕಿನ ಜನರಿಂದಲೇ ಆಗಬೇಕಾದರೆ ಪ್ರತಿಹಳ್ಳಿಯಿಂದ ಒಬ್ಬ ಅಥವಾ ಇಬ್ಬರನ್ನು ಸೇರಿಸಿಕೊಂಡು ಸ್ಮರಣೋತ್ಸವ ಸಮಿತಿ ರಚನೆ ಮಾಡಿಕೊಂಡು ಅವರ ಮೂಲಕ ಸಂಘಟಿಸಿ ಜನರಿಗೆ ಸಮಾರಂಭದ ಮಾಹಿತಿ ತಲುಪಿಸಿ ಅವರು ಬರುವಂತೆ ಮಾಡಿದರೆ ಯಶಸ್ವಿಯಾಗುತ್ತದೆಂಬ ಸಲಹೆಗೆ ಸ್ಥಳದಲ್ಲಿಯೇ ಸಮಿತಿ ರಚನೆಗೆ ತೀರ್ಮಾನಿಸಲಾಯಿತು.
ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ಭಕ್ತರು ಹಾಗೂ ಬೇರೆ ಕಡೆಗಳಿಂದ ಆಗಮಿಸಿದ್ದ ಅನೇಕರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಬಸವ ಮುರುಘೇಂದ್ರ ಶ್ರೀಗಳು, ತಿಪ್ಪೇರುದ್ರ ಸ್ವಾಮಿಗಳು, ಪೂರ್ಣಾನಂದ ಶ್ರೀಗಳು, ರೈತಸಂಘದ ಸಿದ್ಧರಾಮಪ್ಪ, ಸಾಂತೇನಹಳ್ಳಿಯ ತಿಪ್ಪೇಸ್ವಾಮಿ, ಕರಿಬಸಪ್ಪ (ಅಜ್ಜಪ್ಪ), ಶ್ರೀಕಾಂತ, ರಾಜಣ್ಣ ಎಲ್.ಪಿ.ಸಿ., ಕೃಷಿಕ ಸಮಾಜದ ಮಹೇಶ್ವರಪ್ಪ ಸೇರಿದಂತೆ ನೂರಾರು ಭಕ್ತರು, ಸಾರ್ವಜನಿಕರು, ಎಸ್.ಜೆ.ಎಂ. ವಿದ್ಯಾಸಂಸ್ಥೆಯ ಸಿಬ್ಬಂದಿ ಪಸ್ಥಿತರಿದ್ದರು.

ಸ್ಮರಣೋತ್ಸವ ಸಮಿತಿಯ ಮುರುಘೇಶ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಕಲಾವಿದ ತಿಪ್ಪೇಸ್ವಾಮಿ ಪ್ರಾರ್ಥಿಸಿದರು. ತಿಪ್ಪೇರುದ್ರ ಸ್ವಾಮಿಗಳು ಶರಣು ಸಮರ್ಪಣೆ ಮಾಡಿದರು.
