ಪ್ರವಚನ: ಹಡಪದ ಅಪ್ಪಣ್ಣ, ಲಿಂಗಮ್ಮರನ್ನು ಲಿಂಗ ಸ್ವರೂಪಿ ಎಂದ ಬಸವಣ್ಣ

ಬಸವ ಮೀಡಿಯಾ
ಬಸವ ಮೀಡಿಯಾ

ಕಲ್ಯಾಣಾಶ್ರಮದ ಪೂಜ್ಯ ಮಹಾಂತ ಸ್ವಾಮಿಗಳ ಪ್ರಭುಲಿಂಗಲೀಲೆ ಪ್ರವಚನ 8

ಕಲಬುರಗಿ:

ನಿಜಸುಖಿ ಅಪ್ಪಣ್ಣ, ನಿಜಮುಕ್ತೆ ಲಿಂಗಮ್ಮ
ಕಾಡಬೇಡ ಕಂಡವರ, ಬೇಡ ಬೇಡ ನರರುಗಳ,
ಆಡಬೇಡ ಅನೃತವ, ನೋಡಬೇಡ ಪರಸ್ತ್ರೀಯರ,
ಗಾಢಗಂಭೀರ ಲಿಂಗಾರೂಢವಾದ
ಬಸವಪ್ರಿಯ ಕೂಡಲಚೆನ್ನಬಸವಣ್ಣ

ಈಗ್ಗೆ 900 ವರ್ಷಗಳ ಹಿಂದೆ ಬಾಳಿ ಬದುಕಿದ್ದ ಹಡಪದ ಅಪ್ಪಣ್ಣ ಮತ್ತು ಹಡಪದ ಲಿಂಗಮ್ಮರ ನಿಜಸುಖಿ, ನಿಜಮುಕ್ತೆ ಜೀವನ ನಮ್ಮದಾಗಬೇಕಾದರೆ ಅಪ್ಪಣ್ಣನವರ ಈ ವಚನ ಅನುಭವಿಸಬೇಕು. ಇಡೀ ವಿಶ್ವಕ್ಕೆ ಮನುಕುಲಕ್ಕೆ ಜೀವನ ಸಂದೇಶ ನೀಡುವ ವಚನ ಇದಾಗಿದೆ. ನೈತಿಕವಾಗಿ, ಚಾರಿತ್ರಿಕವಾಗಿ ಸಮಾಜಕ್ಕೆ ಒಳಿತನ್ನು ಮಾಡುವ ವಿಚಾರ ಇದಾಗಿದೆ.

ಆದರೂ ನಾವು ಇಂದಿಗೂ ಈ ಸಮಾಜದವರನ್ನು ಕಂಡರೆ ಅಪಶಕುನ, ಮುಖ ನೋಡಬಾರದು ಎನ್ನುವ ಮೂಢನಂಬಿಕೆ ಬೆಳೆಸಿಕೊಂಡಿದ್ದೇವೆ. ಆದರೆ ಬಸವಣ್ಣನವರು ಹಡಪದ ಅಪ್ಪಣ್ಣ ಮತ್ತು ಲಿಂಗಮ್ಮರನ್ನು ಲಿಂಗ ಸ್ವರೂಪಿಗಳು, ಜಂಗಮ ಸ್ವರೂಪಿಗಳು ಎಂದು ಕರೆದರು. ಅಪ್ಪಣ್ಣನವರಿಗೆ ಗೌರವದ ಸ್ಥಾನ ಕೊಟ್ಟರು.

ಅಂತೆಯೇ ಅಲ್ಲಮಪ್ರಭುಗಳು ಅಪ್ಪಣ್ಣನವರನ್ನು ನಿಜ ಸುಖಿ, ಲಿಂಗಮ್ಮನನ್ನು ನಿಜಮುಕ್ತೆ ಎಂದು ಕರೆದಿದ್ದಾರೆ. ಇವುಗಳನ್ನು ಹೇಳುವುದು ಸುಲಭ. ಆದರೆ ಅದನ್ನು ಅನುಭವಿಸುವ ಮಾರ್ಗ ಬಹು ಎತ್ತರದ ಮಾರ್ಗ. ನಿಜಸುಖದ ಅರಿವಿನ ಪ್ರಜ್ಞೆ ತುಂಬುವುದಕ್ಕಾಗಿ ಚಾಮರಸ ಪ್ರಭುಲಿಂಗಲೀಲೆ ರಚಿಸಿದ.

ಯಾವುದೋ ಸುಖಕ್ಕಾಗಿ ಹಂಬಲಿಸಿ ದುಃಖದಿಂದ ಬದುಕುವುದಕ್ಕಿಂತ ನಿತ್ಯಾನಂದ ರೀತಿಯಲ್ಲಿ ಬದುಕಬೇಕು. ಸುಳ್ಳಿನ ಬದುಕು ನಮಗೆ ಒಂದಲ್ಲ ಒಂದು ದಿನ ದುಃಖ ತಂದು ಕೊಡುತ್ತವೆ. ಅಂತಹ ಆನಂದ ಶರಣರ ವಚನಗಳಲ್ಲಿ ದೊರೆಯುತ್ತವೆ. 

ಮಾಯೆ ಹುಟ್ಟಿದ ಪ್ರಸಂಗವನ್ನು ಸ್ತ್ರೀ ರೂಪದಲ್ಲಿ ಶೃಂಗಾರಮಯವಾಗಿ ವರ್ಣನೆ ಮಾಡಿದ್ದಾರೆ. ಮಾಯೆ ಎಂದರೆ ಕೇವಲ ಹೆಣ್ಣಲ್ಲ. ವಸ್ತುವಿನ ಮೂಲ ಸ್ವರೂಪ ಮರೆ ಮಾಡಿ ನೋಡುವ ಮನದ ಸ್ಥಿತಿಯೇ ಮಾಯೆ. ಹೆಣ್ಣು, ಹೊನ್ನು, ಮಣ್ಣು ಬಿಟ್ಟು ಬದುಕು ಮಾಡಲು ಸಾಧ್ಯವಿಲ್ಲ. ಮನದ ಮುಂದಣ ಆಸೆಯೇ ಮಾಯೆ ಎಂದು ಶರಣರು‌ ಹೇಳಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *