ಬಸವಗಿರಿಯಲ್ಲಿ 21 ದಿನಗಳ ಶಿವಯೋಗ ಅನುಷ್ಠಾನದ ಸಮಾರೋಪ

ಬೀದರ:

ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಇಲ್ಲಿಯ ಬಸವಗಿರಿಯಲ್ಲಿ ಕೈಗೊಂಡಿದ್ದ 21 ದಿನಗಳ ಶಿವಯೋಗ ಅನುಷ್ಠಾನ ಮಂಗಳವಾರ ಸಮಾರೋಪಗೊಂಡಿತು.

ಅನುಷ್ಠಾನ ಮಂಗಲ ನಿಮಿತ್ತ ನೆರೆದ ಭಕ್ತಗಣದ ಸಮ್ಮುಖದಲ್ಲಿ ಷಟ್‍ಸ್ಥಲ ಧ್ವಜಾರೋಹಣ, ಗುರು ಪೂಜೆ, ಪ್ರಾರ್ಥನೆ, ಸಾಮೂಹಿಕ ಶಿವಯೋಗ, ಯೋಗಾಂಗ ತ್ರಿವಿಧಿ ಪಠಣ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ, ಶ್ರದ್ಧೆಯಿಂದ ನೆರವೇರಿದವು.

ಪ್ರಭುದೇವ ಸ್ವಾಮೀಜಿ ಅವರು ಬಸವಣ್ಣನವರ ವಚನ ಓದುವ ಮೂಲಕ ಮೌನ ಮುರಿದರು. ನಂತರ ಆಶೀರ್ವಾದದ ಅನುಭಾವ ನೀಡಿದರು.

ಗುರು ಸಾಮಾನ್ಯನಲ್ಲ. ಹೀಗಾಗಿ ಗುರುವಿನಲ್ಲಿ ನಂಬಿಕೆ ಮುಖ್ಯ. ಅಲ್ಲಿ ಅನುಮಾನಕ್ಕೆ ಅವಕಾಶ ಇಲ್ಲ ಎಂದು ಪ್ರಭುದೇವ ಸ್ವಾಮೀಜಿ ಹೇಳಿದರು.

ಗುರುವಿನ ಕರುಣೆಯಿಂದ ಸರ್ವ ಸಾಧನೆಯೂ ಸಾಧ್ಯವಾಗುತ್ತದೆ. ಗುರುವಿನ ನಂಬಿಕೆಗೆ ಪಾತ್ರನಾದರೆ ಭಕ್ತಿ, ನಿಷ್ಠೆಗಳು ನೆಲೆಗೊಳ್ಳುತ್ತವೆ ಎಂದು ತಿಳಿಸಿದರು.

ಜೀವ ದೇವನಾಗುವುದು, ಭಕ್ತ ಭಗವಂತನಾಗುವುದೇ ಬದುಕಿನ ಪರಮ ಗುರಿ. ಅದನ್ನು ಸಾಧಿಸಲು ಅನುಷ್ಠಾನ ಅವಶ್ಯಕ ಎಂದು ಹೇಳಿದರು.

ದೇಹದ ಗುಣ ಪರಿವರ್ತನೆ. ದಿನೇ ದಿನೇ ಶರೀರ ನಾಶದತ್ತ ಸಾಗುತ್ತದೆ. ಈ ಸತ್ಯದ ಅರಿವಿಲ್ಲದೆ ದೇಹ ನಾನೆಂಬ ಅಹಂಭಾವ ಬೇಡ. ದೇಹವೇ ನಾನಲ್ಲ, ನಾನು ಪರಮಾತ್ಮನ ಅಂಶ ಎಂಬ ಅರಿವು ಮೂಡಿದರೆ ಅದೇ ಸಾಧನೆಯ ಮೊದಲ ಹಂತ ಎಂದರು.

ವಿಷಯವಾಸನೆಯಲ್ಲಿ ಮಗ್ನವಾಗಿರುವ ಮನವನ್ನು ದೇವನತ್ತ ತಿರುಗಿಸುವುದು ಎರಡನೇ ಹಂತ ಎಂದು ತಿಳಿಸಿದರು.

ರೈತ ಹೊಲ ಸ್ವಚ್ಛಗೊಳಿಸಿ, ಬೀಜ ಬಿತ್ತಿ ಬೆಳೆ ಬೆಳೆಸುವಂತೆ, ಅಂತರಂಗ -ಬಹಿರಂಗಗಳನ್ನು ದೇವ ನೆನಹಿನಲ್ಲಿ ಸ್ವಚ್ಛಗೊಳಿಸಬೇಕು. ಆಗಲೇ ಅರಿವು ಮೂಡುತ್ತದೆ. ಸುಜ್ಞಾನದ ಬೆಳೆ ಬರುತ್ತದೆ. ಮದ, ಮತ್ಸರಾದಿಗಳನ್ನು ಕಳೆದು, ಚಂಚಲತೆಯನ್ನು ಅಳಿದು, ಏಕಾಗ್ರತೆಯಿಂದ ದೇವನಲ್ಲಿ ಮನ ನಿಲ್ಲಿಸಬೇಕು ಎಂದು ಹೇಳಿದರು.

ಶರಣ ನಿದ್ರೆಗೈದಡೆ ಜಪ ಕಾಣಿರೋ ಎಂಬ ಬಸವ ವಾಣಿಯಂತೆ ದೇವನಲ್ಲಿ ತಾನೆ ತಾನಾಗಿ ವಿಹರಿಸಬೇಕು. ಇವುಗಳೆಲ್ಲ ಮೈಗೂಡಿಸಿಕೊಳ್ಳಲು ಅನುಷ್ಠಾನ ಕೈಗೊಂಡಿದ್ದು, ಸಂಕಲ್ಪ ಈಡೇರಿದೆ ಎಂದು ತಿಳಿಸಿದರು.

ಸಾಹಿತಿ ರಮೇಶ ಮಠಪತಿ ಮಾತನಾಡಿ, ಜಗಜ್ಯೋತಿ, ಧರ್ಮಗುರು, ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ಬಸವಣ್ಣನವರು ಭಕ್ತಿ ಭಂಡಾರಿಯೂ ಆಗಿದ್ದರು. ಭಕ್ತಿ ನೆಲೆಗೊಳ್ಳದೆ ಯಾವ ಸಾಧನೆಯೂ ಸಾಧ್ಯವಿಲ್ಲ ಎಂದು ಹೇಳಿದರು.

ಅಕ್ಕ ಅನ್ನಪೂರ್ಣತಾಯಿಯವರು ಪ್ರತಿವರ್ಷ ಶ್ರಾವಣದಲ್ಲಿ ಒಂದು ತಿಂಗಳು ಪೂರ್ತಿ ಮೌನ ಅನುಷ್ಠಾನ, ಶಿವಯೋಗ ಸಾಧನೆಯ ಅನುಷ್ಠಾನ ಕೈಗೊಳ್ಳುತ್ತಿದ್ದರು.

ಅವರ ಶಿಷ್ಯರಾದ ಪ್ರಭುದೇವ ಸ್ವಾಮೀಜಿ ಅವರು ಹಾಕಿಕೊಟ್ಟ ದಾರಿಯಲ್ಲೇ ಮುನ್ನಡೆಯುತ್ತಿದ್ದಾರೆ. ಪ್ರತಿ ವರ್ಷವೂ 21 ದಿನಗಳ ಅನುಷ್ಠಾನ ಕೈಗೊಂಡು, ಅಕ್ಕನವರ ಪರಂಪರೆ ಮುಂದುವರಿಸುತ್ತಿದ್ದಾರೆ. ಇದು ಇಂದಿನ ಪೀಳಿಗೆಗೆ ಆದರ್ಶ ಹಾಗೂ ಅನುಕರಣೀಯವಾಗಿದೆ.

ಶ್ರೀಗಳು ಸ್ವತಃ ಶಿವಯೋಗ ಅನುಷ್ಠಾನ ಕೈಗೊಂಡು ನಮಗೆಲ್ಲ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ತಿಳಿಸಿದರು.

ಪರುಷ ಕಟ್ಟೆಯ ಚನ್ನಬಸವಣ್ಣ, ಮುದ್ದೇಬಿಹಾಳದ ಬಸವರಾಜ ಕೋರಿ ಮಾತನಾಡಿದರು.

ಇದೇ ವೇಳೆ ಶ್ರೀಗಳ ಜನ್ಮದಿನ ಸಹ ಆಚರಿಸಲಾಯಿತು. ಶ್ರೀಗಳಿಗೆ ಶಾಲು ಹೊದಿಸಿ, ವಸ್ತ್ರ ನೀಡಿ, ಗೌರವ ಸಮರ್ಪಿಸಲಾಯಿತು.

ಪ್ರಕಾಶ ಮಠಪತಿ ಅಧ್ಯಕ್ಷತೆ ವಹಿಸಿದ್ದರು.

ಮುದ್ದೆಬಿಹಾಳದ ಸಾಹಿತಿ ಮಹಾದೇವಪ್ಪ ಬಿರಾದಾರ ಷಟ್‍ಸ್ಥಲ ಧ್ವಜಾರೋಹಣ ಮಾಡಿದರು. ರೇವಣಪ್ಪ ಮೂಲಗೆ, ಗುರುಶ್ರೀ ಮತ್ತು ಮಹಾಂತೇಶ ಸುಶ್ರಾವ್ಯವಾಗಿ ವಚನ ಗಾಯನ ಮಾಡಿದರು.

ಲಿಂಗಾಯತ ಮಹಾಮಠದ ಕಾರ್ಯದರ್ಶಿ ಚನ್ನಬಸಪ್ಪ ಹಂಗರಗಿ ಸ್ವಾಗತಿಸಿದರು. ಸ್ವಾತಿ ಸಚ್ಚಿದಾನಂದ ಮಠಪತಿ ಭಕ್ತಿ ದಾಸೋಹಗೈದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
1 Comment

Leave a Reply

Your email address will not be published. Required fields are marked *