‘ಶರಣರ ಆಶಯದ ಕಲ್ಯಾಣ ಕರ್ನಾಟಕ ಕಟ್ಟಬೇಕಿದೆ’

ಮೈಸೂರು:

ಶ್ರೇಷ್ಠ ಗುರಿ ತಲುಪಲಿಕ್ಕೆ ಹಾಗೂ ಸಮುದಾಯದ ಉದ್ಧಾರಕ್ಕೆ ಹಲವು ಸಮಾನ ಮನಸ್ಕ ಜನ ಒಗ್ಗೂಡಿ, ಸಂಘಟಿತರಾಗಿ ಕೆಲಸ ಮಾಡುವುದು ಎಂದಿಗಿಂತ ಇಂದು ಅತಿ ಅವಶ್ಯ, ಹಾಗೆ ಮಾಡಿದಾಗ ಆ ಕಾರ್ಯದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಲು ಸಾಧ್ಯ ಎಂದು ಕವಿ, ಮೈಸೂರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಜಯಪ್ಪ ಹೊನ್ನಾಳಿ ಹೇಳಿದರು.

ಲಲಿತಾದ್ರಿ ಮಹಿಳಾ ವೇದಿಕೆ, ಮೈಸೂರು ನಗರದ ಜೆಎಸ್ಎಸ್ ಬಡಾವಣೆಯ ದ್ವಾರಕೀಶ್ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಂಡಿದ್ದ ತನ್ನ ನಾಲ್ಕನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಯಾವುದೇ ದೊಡ್ಡ ಸಮಸ್ಯೆಗಳನ್ನು ಅಥವಾ ಅಜ್ಞಾನ ಮತ್ತು ಮೂಢನಂಬಿಕೆಗಳುಳ್ಳ ಜನರ ವಿರೋಧವನ್ನು ಒಬ್ಬೊಬ್ಬರಾಗಿ ಎದುರಿಸುವ ಬದಲು, ಸಾಮೂಹಿಕವಾಗಿ; ಸಂಘಟಿತರಾಗಿ ಎದುರಿಸುವುದು ಸುಲಭ, ಜೇನುಗೂಡಿಗೆ ಬಲವಾದ ಕಾಡಾನೆಯ ಹಿಂಡೂ ಹೆದರುತ್ತದೆ, ಕಾಡಿನ ರಾಜ ಸಿಂಹದ ದಂಡೂ ಬೆದರುತ್ತದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಸಾಂಸ್ಥಿಕವಾಗಿ ಮುನ್ನಡೆಯಲು ಒಗ್ಗಟ್ಟು ಮತ್ತು ಸಾಂಘಿಕ ಪ್ರಯತ್ನ ಅತ್ಯಗತ್ಯ.

ಬಸವಾದಿ ಪ್ರಮಥರ ಪ್ರಜ್ಞಾಪೂರ್ಣ ಆಚಾರ ವಿಚಾರಗಳನ್ನು ಸಮಷ್ಟಿಗೆ ತಿಳಿಸಲು; ಅದರೊಳಿತಿಗೆ ಪರಿಶ್ರಮಿಸಲು ಸಂಘಟನೆಯನ್ನು ಸಶಕ್ತಗೊಳಿಸಿಕೊಳ್ಳಿ, ಈ ವೇದಿಕೆ ನಮ್ಮದು ಎಂದುಕೊಳ್ಳದೆ, ‘ನನ್ನದು’ ಎಂದುಕೊಳ್ಳಿ, ಪರಸ್ಪರ ಅವಿನಾಭಾವದಿಂದ ಏಕತೆ ತೋರುತ್ತ, ಸಮತೆ ಮಮತೆಗಳ ಸಾದರಪಡಿಸುತ್ತ ಮುನ್ನಡೆಯಿರಿ ಎಂದರು.

ಜಗತ್ತಿನಲ್ಲಿ ಜಾತಿಭೇದ, ಲಿಂಗಭೇದ, ವರ್ಗಭೇದ, ವರ್ಣಭೇದಗಳನ್ನು ಮಾಡದೆ, ಅತ್ಯಂತ ವೈಜ್ಞಾನಿಕವಾದ ಹಾಗೂ ಮಾನವೀಯ ತಳಹದಿಯ ಮೇಲೆ ಕಟ್ಟಲಾದ ಏಕೈಕ ವಿಶಾಲ ಪ್ರಜ್ಞೆಯ ವಿಶ್ವಧರ್ಮವಾದ ಬಸವಾದಿ ಪ್ರಮಥರ ಶರಣ ಧರ್ಮವನ್ನು ಜಗತ್ತಿಗೆ ತಿಳಿಯಪಡಿಸುವ ಮೂಲಕ, ಲೋಕದ ಇಂದಿನ ಬಹುತೇಕ ಸಮಸ್ಯೆಗಳಿಗೆ ಪರಿಹಾರಗಳನ್ನೂ, ಚಿಕಿತ್ಸೆಯೊಂದಿಗೆ ಔಷಧಿ ಮುಲಾಮುಗಳನ್ನೂ ಬಸವಧರ್ಮಾನುಯಾಯಿಗಳಾದ ನಾವು ನೀಡಬೇಕಾಗಿದೆ, ಆ ಮೂಲಕ ಶರಣರು ಕಟ್ಟಬಯಸಿದ್ದ ಸರ್ವೋದಯದ ಕಲ್ಯಾಣ ಕರ್ನಾಟಕವನ್ನು ನಾವು ಕಟ್ಟಬೇಕಾಗಿದೆ ಎಂದರು.

ಸಮಾರಂಭದ ಉದ್ಘಾಟನೆಯನ್ನು ಮೈಸೂರು ಅಪರ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಅವರು ಜ್ಯೋತಿ ಬೆಳಗುವ ಮೂಲಕ ಮಾಡಿ, ಲಲಿತಾದ್ರಿ ಮಹಿಳಾ ವೇದಿಕೆಯ ಸಮಸ್ತರಿಗೂ ಶುಭಕೋರಿ ಅಭಿನಂದಿಸಿದರು.

ಕದಳಿ ವೇದಿಕೆಯ ಅಧ್ಯಕ್ಷರಾದ ಶೋಭಾರಾಣಿ ಜೈಪ್ರಕಾಶ್ ಅವರನ್ನೂ, ಮೈಸೂರು ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಡಾ.ಭಾವನಾ, ಆರ್. ಗಜೇಂದ್ರ ಅವರನ್ನೂ ಸನ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಜ್ಯೋತೇಶ್ವರಿ ಓಂಪ್ರಕಾಶ್ ವಹಿಸಿಕೊಂಡು, ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪೂರ್ವ ವಲಯದ ಬಸವ ಬಳಗಗಳ ಅಧ್ಯಕ್ಷ ಶಿವಸ್ವಾಮಿ ಎಸ್, ಜೆಎಸ್ಎಸ್ ಬಡಾವಣೆಯ ನಿವಾಸಿಗಳ ಸೇವಾ ಸಮಿತಿ ಅಧ್ಯಕ್ಷ ಗಂಗಾಧರ ಎಂ, ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಎಂ. ಚಿನ್ನಸ್ವಾಮಿ, ಕಾರ್ಯದರ್ಶಿ ನಂದೀಶ್ವರ ಬಿ.ಎನ್, ಸಂಚಾಲಕ ಡಾ. ಲೋಕೇಶಪ್ಪ, ಕಲ್ಯಾಣಿ ನಟರಾಜ, ಲಲಿತಾದ್ರಿ ಮಹಿಳಾ ವೇದಿಕೆಯ ಖಜಾಂಚಿ ಸತ್ಯವತಿ ಶಿವಪ್ಪ, ಸದಸ್ಯರು, ಪದಾಧಿಕಾರಿಗಳು ಮುಂತಾದವರಿದ್ದರು.

ಪ್ರಾರ್ಥನೆ ಹಾಗೂ ವಚನ ಗಾಯನವನ್ನು ವೇದಿಕೆಯ ಮಹಿಳೆಯರು ಸಾಮೂಹಿಕವಾಗಿ ಮಾಡಿದರು. ಅತಿಥಿಗಳ ಪರಿಚಯವನ್ನು ರೇವತಿ, ಶಿಲ್ಪಾರಾಣಿ, ಸುಧಾ, ಸಂಧ್ಯಾ ಮಾಡಿದರೆ, ನಿರೂಪಣೆಯನ್ನು ಹೇಮಲತಾ ಮಾಡಿ, ವಂದನಾರ್ಪಣೆಯನ್ನು ಮಂಜುಳಾ ಗಂಗಾಧರ್ ಸಲ್ಲಿಸಿದರು. ವಾರ್ಷಿಕ ವರದಿಯನ್ನು ಮಲ್ಲಿಕಾ ಮಹದೇವಸ್ವಾಮಿ ಪ್ರಸ್ತುತಪಡಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/IuAONC0TfmA8PyaqHT9WIP

Share This Article
Leave a comment

Leave a Reply

Your email address will not be published. Required fields are marked *