ಡಾ. ಫ. ಗು. ಹಳಕಟ್ಟಿ ಜಯಂತಿ ಅಂಗವಾಗಿ ವಚನ ಕುಸುಮಗಳು ಪ್ರಶಸ್ತಿ ಪ್ರಧಾನ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು:

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ವತಿಯಿಂದ ಅರಮನೆ ಜಪದಕಟ್ಟೆ ಮಠದಲ್ಲಿ ಆಯೋಜಿಸಿದ್ದ ಡಾ. ಫ. ಗು. ಹಳಕಟ್ಟಿ ಅವರ ಜಯಂತಿ ಕಾರ್ಯಕ್ರಮದಲ್ಲಿ, ವಚನ ಸಾಹಿತ್ಯದ ಪ್ರಸಾರ, ಪ್ರಚಾರ ಹಾಗೂ ಬಸವತತ್ತ್ವದ ಸೇವೆಯನ್ನು ಗುರುತಿಸಿ ಮೈಸೂರಿನ ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಹಾಗೂ ರೂಪಾ ಕುಮಾರಸ್ವಾಮಿ ದಂಪತಿಗಳಿಗೆ “ವಚನ ಕುಸುಮಗಳು” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಅರಮನೆ ಜಪದಕಟ್ಟೆ ಮಠದ ಶ್ರೀ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಜ್ಞಾನದ ಹಸಿವನ್ನು ನೀಗಿಸುವಲ್ಲಿ ವಚನ ಸಾಹಿತ್ಯದ ಮಹತ್ವವನ್ನು ವಿವರಿಸಿ, ಡಾ. ಫ. ಗು. ಹಳಕಟ್ಟಿಯವರ ಸೇವೆ ಕನ್ನಡ ನಾಡಿನ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಪರಂಪರೆಗೆ ಅಪೂರ್ವ ಕೊಡುಗೆ ಎಂದರು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ರೂಪಾ ಕುಮಾರಸ್ವಾಮಿ, ಡಾ. ಫ. ಗು. ಹಳಕಟ್ಟಿಯವರು ತಮ್ಮ ಇಡೀ ಜೀವನವನ್ನೇ ವಚನ ಸಾಹಿತ್ಯದ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆಗೆ ಮುಡಿಪಾಗಿಟ್ಟು ಸಮಾಜಕ್ಕೆ ಅಮೂಲ್ಯ ಸಾಹಿತ್ಯ ಸಂಪತ್ತನ್ನು ನೀಡಿದ ಮಹನೀಯರು.

ವಚನಗಳನ್ನು ಕೇವಲ ಓದುವುದಷ್ಟೇ ಅಲ್ಲ, ಅದರ ಜೀವನಮೌಲ್ಯಗಳನ್ನು ಅಳವಡಿಸಿಕೊಂಡು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದರು.

ವಚನ ಕುಮಾರಸ್ವಾಮಿ ಮಾತನಾಡಿ, ವಚನ ಸಾಹಿತ್ಯವು ವಿಶ್ವದಾದ್ಯಂತ ಹರಡಲು ಡಾ. ಫ. ಗು. ಹಳಕಟ್ಟಿ, ಹರ್ಡೇಕರ್ ಮಂಜಪ್ಪ ಹಾಗೂ ರೆವರೆಂಡ್ ಉತ್ತಂಗಿ ಚೆನ್ನಪ್ಪ ಅವರ ಅಪಾರ ಸೇವೆ ಕಾರಣವಾಗಿದ್ದು, ಶರಣ ಸಂಸ್ಕೃತಿಯಲ್ಲಿ ಅವರನ್ನು ಗುರು–ಲಿಂಗ–ಜಂಗಮ ಸ್ವರೂಪಗಳಾಗಿ ಕಾಣಬಹುದು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ಧನ್ಯ ಸತ್ಯೇಂದ್ರಮೂರ್ತಿ ಮಾತನಾಡಿ, ಶರಣು ವಿಶ್ವವಚನ ಫೌಂಡೇಷನ್ ವಚನ ಸಾಹಿತ್ಯವನ್ನು ಮನೆಮನೆಗೆ ತಲುಪಿಸುವ ಮೂಲಕ ಡಾ. ಫ. ಗು. ಹಳಕಟ್ಟಿಯವರ ಆದರ್ಶವನ್ನು ಮುಂದುವರಿಸುತ್ತಿದೆ.

ಜೀವನದ ಮೊದಲ ಪುಟ ಹುಟ್ಟು, ಕೊನೆಯ ಪುಟ ಸಾವು. ಈ ಎರಡರ ಮಧ್ಯೆ ದೊರೆತಿರುವ ಅಮೂಲ್ಯ ಜೀವನವನ್ನು ಸತ್ಸಂಗ, ಸತ್ಕಾರ್ಯ ಮತ್ತು ಮೌಲ್ಯಯುತ ಸೇವೆಯ ಮೂಲಕ ಸಾರ್ಥಕಪಡಿಸಿಕೊಳ್ಳಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ದೂರ ಶಿವಕುಮಾರ ಮಹಿಳಾ ಘಟಕದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು.

ಮೈಸೂರು ವಚನಕೋಗಿಲೆ ಶೈಲಾ ಸಿದ್ದಾರಾಮಪ್ಪ ಅವರ ನೇತೃತ್ವದ ವಚನ ದಾಸೋಹ ತಂಡದ ಸುಮಧುರ ವಚನಗಾಯನವು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.

ಕಾರ್ಯಕ್ರಮದಲ್ಲಿ ಗೀತಾ ರಾಜಶೇಖರ ಪ್ರಾರ್ಥಿಸಿದರು. ಸುಜಾತ ಮುಳ್ಳೂರು ಸ್ವಾಗತಿಸಿದರು. ಚಂದ್ರಕಲಾ ಹಾಗೂ ಶೈಲಾ ಸಿದ್ದಾರಾಮಪ್ಪ ಅತಿಥಿಗಳನ್ನು ಪರಿಚಯಿಸಿದರು. ರೇಣುಕಾ ಬಸವಣ್ಣ ವಂದಿಸಿದರು. ಪೂರ್ಣಿಮಾ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಕಾರ್ಯದರ್ಶಿ ಮಲ್ಲಿಕಾ ಮಹದೇವಸ್ವಾಮಿ, ಸತ್ಯೇಂದ್ರಮೂರ್ತಿ, ದಾರಿಪುರ ಚಂದ್ರಶೇಖರ, ಶರಣು ವಿಶ್ವವಚನ ಫೌಂಡೇಷನ್‌ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ ಇತರರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *