ಚಲನಚಿತ್ರ ಲೋಕದ ದಂತಕಥೆ ಎಸ್. ಜಾನಕಿ : ಡಾ. ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಕನ್ನಡ ಚಲನಚಿತ್ರ ರಂಗದಲ್ಲಿ ಗಾಯಕಿ ಎಸ್. ಜಾನಕಿ ಅವರ ಸಾಧನೆ ಬಹಳ ದೊಡ್ಡದು. ಕನ್ನಡದಲ್ಲಿ ಅತೀ ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ಬದುಕಿರುವಾಗಲೇ ದಂತಕಥೆಯಾಗಿದ್ದಾರೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಮಾತನಾಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ ೨೮೦೭ನೆಯ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಕೋಗಿಲೆಯ ಧ್ವನಿಯಂತೆ ಜಾನಕಿ ಅವರ ಧ್ವನಿಯು ಇಂಪಾಗಿತ್ತು. ಜಾನಕಿ ಅವರು ತಮ್ಮ ಇಂಪಾದ ಧ್ವನಿಯ ಮೂಲಕ ಜನಮನವನ್ನು ರಂಜಿಸಿದ್ದಾರೆ. ಕನ್ನಡದಲ್ಲಿ ಹೆಚ್ಚು ಗೀತೆಗಳನ್ನು ಹಾಡಿದ್ದಲ್ಲದೆ, ೧೭ ಭಾಷೆಗಳಲ್ಲಿ ೪೮೦೦೦ ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ ಕೀರ್ತಿ ಜಾನಕಿ ಅವರಿಗೆ ಸಲ್ಲುತ್ತದೆ. ತಮ್ಮ ಧ್ವನಿಯ ಮೂಲಕ ಸಾಕಷ್ಟು ಹಾಡುಗಳಿಗೆ ಜೀವ ತುಂಬಿದ್ದಾರೆ ಎಂದು ಶ್ರೀಗಳು ಸ್ಮರಿಸಿದರು.

ದೇವೇಗೌಡರ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ಅವರಿಗೆ ಸಂತಾಪ ಸೂಚಿಸಿದ ಪೂಜ್ಯರು, ದೇವೇಗೌಡರು ಮತ್ತು ಶ್ರೀಮತಿ ಚೆನ್ನಮ್ಮನವರು ಬಹಳ ಅನ್ಯೊನ್ಯತೆಯಿಂದ ಜೀವನ ಸಾಗಿಸಿದ್ದಾರೆ. ಕುಟುಂಬವನ್ನು ಹೇಗೆ ಮುನ್ನಡೆಸಬೇಕು ಎಂಬುದಕ್ಕೆ ಶ್ರೀಮತಿ ಚೆನ್ನಮ್ಮನವರಲ್ಲಿದ್ದ ಆದರ್ಶ ಗುಣಗಳು ಮಾದರಿಯಾಗಿವೆ. ಲಿಂಗೈಕ್ಯ ಶ್ರೀಮತಿ ಚೆನ್ನಮ್ಮ ಅವರ ಆತ್ಮಕ್ಕೆ ಬಸವಾದಿ ಶರಣರು ಶಾಂತಿ ನೀಡಲಿ ಮತ್ತು ದುಃಖ ಸಹಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದಯಪಾಲಿಸಲಿ ಎಂದು ಶ್ರೀಗಳು ಸಂತಾಪ ಸೂಚಿಸಿದರು.

ವಿರುಪಾಕ್ಷಗೌಡ ಪಾಟೀಲ ಅವರು ಮಾತನಾಡಿ, ೧೯೫೧ರಲ್ಲಿ ಮೈಸೂರಿನ ಮಹಾರಾಜರು ಗದಗ ನಗರಕ್ಕೆ ಬಂದಿದ್ದರು. ಜಯರಾಮರಾಜೇಂದ್ರ ಒಡೆಯರಿಗೆ ಸಿದ್ಧಲಿಂಗೇಶ್ವರರ ಇತಿಹಾಸ ಕುರಿತು ಪುಸ್ತಕಗಳನ್ನು ರಚಿಸಿ ನೀಡಿದ್ದನ್ನು ಸ್ಮರಿಸಿದರು. ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಕುರಿತು ೧೯೫೧ ರಲ್ಲಿಯೇ ಚರ್ಚೆಗಳು ಜರುಗಿದ ಬಗ್ಗೆ ಮತ್ತು ಲಿಂಗಾಯತ ಹೋರಾಟ ಬೆಳೆದು ಬಂದ ಬಗ್ಗೆ ಕೂಲಂಕುಷವಾಗಿ ತಿಳಿಸಿದರು.

ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ಶಿಕ್ಷಕ ಎಸ್.ಎನ್. ಕಲ್ಲಿಗನೂರ ಅವರ ಅಗಲುವಿಕೆಗೆ ಸಂತಾಪ ಸೂಚಿಸಲಾಯಿತು.

ರಾಣಿ ಚೆನ್ನಮ್ಮ ವಿವಿದೋದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷರಾದ ಶಿವಲೀಲಾ ಪ್ರಕಾಶ ಅಕ್ಕಿ, ಲಿಂಗಾಯತ ಪ್ರಗತಿಶೀಲ ಸಂಘದ ಮಾಜಿ ಅಧ್ಯಕ್ಷ ಅಮರೇಶ ಅಂಗಡಿ ಅವರನ್ನು ಸನ್ಮಾನಿಸಲಾಯಿತು.

ಡೈಟ್ ಅದೀಕ್ಷಕರಾದ ಶ್ರೀನಿವಾಸ ದತ್ತಾತ್ರೇಯ ಕುಲಕರ್ಣಿ, ಪ್ರೌಢಶಾಲಾ ಶಿಕ್ಷಕರಾದ ಶಿಲ್ಪಾ ವಿ. ಕುರಹಟ್ಟಿ, ಯೋಗ ಹಾಗೂ ಸಂಗೀತ ಶಿಕ್ಷಕಿಯರಾದ ಸುನಂದ ಜಾನೋಪಂಥರ, ಲಲಿತಾ ಇಂಗಳಹಳ್ಳಿ, ಎಂ. ಎಂ. ಮಂಗಳೂರು, ಭುವನೇಶ್ವರಿ ಹಿರೇಮಠ ಅವರು ಎಸ್. ಜಾನಕಿ ಹಾಡಿರುವ ಹಾಡುಗಳನ್ನು ಪ್ರಸ್ತುತಪಡಿಸಿದರು.

ವಚನ ಸಂಗೀತ ಮೃತ್ಯುಂಜಯ ಹಿರೇಮಠ, ಗುರುನಾಥ ಸುತಾರ, ಧರ್ಮಗ್ರಂಥ ಪಠಣ ವರ್ಷ ಯಳವತ್ತಿಮಠ, ವಚನ ಚಿಂತನ ವೇದಾವತಿ ಮಠದ ಅವರು ನೆರವೇರಿಸಿದರು. ದಾಸೋಹ ಸೇವೆಯನ್ನು ಎಸ್.ಎ. ಪಾಟೀಲ ಮತ್ತು ಸಹೋದರರು, ರತ್ನಕ್ಕ ಪಾಟೀಲ ಗದಗ ಅವರು ವಹಿಸಿಕೊಂಡಿದ್ದರು.

ಸ್ವಾಗತವನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ, ನಿರೂಪಣೆಯನ್ನು ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ, ವಿದ್ಯಾ ಗಂಜಿಹಾಳ ಮಾಡಿದರು. ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಸೇರಿದಂತೆ ಶಿವಾನುಭವದಲ್ಲಿ ಸಿದ್ದಣ್ಣ ಬಂಗಾರಶೆಟ್ಟರ, ಗಂಗಾಧರ ಹಿರೇಮಠ, ದಾನಯ್ಯ ಗಣಾಚಾರಿ, ಅಶೋಕ ಬರಗುಂಡಿ, ಪ್ರಕಾಶ ಅಸುಂಡಿ, ಜಿ.ಬಿ. ಪಾಟೀಲ ಶಕುಂತಲಾ ಸಿಂಧೂರ, ಶ್ರೀಮಠದ ಭಕ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM

Share This Article
Leave a comment

Leave a Reply

Your email address will not be published. Required fields are marked *