ಶರಣ ಸಂಗಮ ಕಾರ್ಯಕ್ರಮ
ಬೀದರ
ಡಾ. ಫ.ಗು. ಹಳಕಟ್ಟಿ, ರೆವರೆಂಡ್ ಉತ್ತಂಗಿ ಚನ್ನಪ್ಪ ಹಾಗೂ ಹರ್ಡೆಕರ್ ಮಂಜಪ್ಪ 19-20ನೇ ಶತಮಾನದ ಲಿಂಗಾಯತ ರತ್ನತ್ರಯರು ಎಂದು ಸಾಹಿತಿ ರಮೇಶ ಮಠಪತಿ ಬಣ್ಣಿಸಿದರು.
ಲಿಂಗಾಯತ ಮಹಾಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ಈಚೆಗೆ ಆಯೋಜಿಸಿದ್ದ ಮಾಸಿಕ ಶರಣ ಸಂಗಮದಲ್ಲಿ ಲಿಂಗಾಯತ ರತ್ನತ್ರಯರು ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಕಿತ್ತು ತಿನ್ನುವ ಬಡತನವನ್ನು ಅಪ್ಪಿಕೊಂಡು, ಎಷ್ಟೇ ಕಷ್ಟ-ನಷ್ಟಗಳು ಎದುರಾದರೂ ವಚನ ಧರ್ಮಕ್ಕಾಗಿ ತಮ್ಮನ್ನು ತಾವು ಗಂಧದ ಕೊರಡಿನಂತೆ ಸವೆದ ಮಹನೀಯರಿವರು ಎಂದು ಹೇಳಿದರು.
ಕಲ್ಯಾಣ ಕ್ರಾಂತಿಯ ನಂತರ ಎಂಟು ನೂರು ವರ್ಷಗಳವರೆಗೆ ಭೂಗತವಾಗಿದ್ದ ವಚನ ಸಾಹಿತ್ಯವನ್ನು ಹೆಕ್ಕಿ, ಸಂಗ್ರಹಿಸಿ, ಸಂಶೋಧನೆಗೈದು, ಪ್ರಕಟಿಸಿ, ಸಾಹಿತ್ಯ ಲೋಕಕ್ಕೆ ಸಮರ್ಪಿಸಿ ವಚನ ಪಿತಾಮಹ ಎನಿಸಿದವರು ಹಳಕಟ್ಟಿ ಎಂದರು.
ವಕೀಲಿ ವೃತ್ತಿಗೆ ಎಳ್ಳು ನೀರು ಬಿಟ್ಟು ವಚನ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡರು. ವಚನಗಳ ಮುದ್ರಣಕ್ಕೆ ತೊಂದರೆಯಾದಾಗ, ಇದ್ದ ಒಂದು ಮನೆ ಮಾರಿ ಹಿತ ಚಿಂತಕ ಮುದ್ರಣಾಲಯ ಆರಂಭಿಸಿದರು. ಒಂದು ವಿಶ್ವವಿದ್ಯಾಲಯದಿಂದ ಮಾಡಲಾಗದ ಕೆಲಸ ಒಬ್ಬ ವ್ಯಕ್ತಿಯಾಗಿ ಹಳಕಟ್ಟಿ ಮಾಡಿದರು.

ಬದುಕಿನ ಕೊನೆಯ ಉಸಿರಿನ ವರೆಗೆ ಶಿವಾನುಭವ ಪತ್ರಿಕೆ ಮೂಲಕ ವಚನಗಳ ಆದರ್ಶಗಳನ್ನು ಜನ ಮನಕ್ಕೆ ತಲುಪಿಸಿದರು. ಕರ್ನಾಟಕ ಏಕೀಕರಣಕ್ಕಾಗಿಯೂ ದುಡಿದರು ಎಂದು ತಿಳಿಸಿದರು.
ಸರ್ವಜ್ಞ ಕವಿಯ ವಚನಗಳ ಸಂಶೋಧನೆಗೈದು ಕನ್ನಡ ಸಾಹಿತ್ಯ ಲೋಕಕ್ಕೆ ಮಹದುಪಕಾರ ಮಾಡಿದ ಶ್ರೇಯಸ್ಸು ರೆವರೆಂಡ್ ಉತ್ತಂಗಿ ಚನ್ನಪ್ಪನವರಿಗೆ ಸಲ್ಲುತ್ತದೆ ಎಂದು ಹೇಳಿದರು.
ತ್ರಿಪದಿ ವಚನಗಳನ್ನು ಉಳಿಸಿ, ಸರ್ವಜ್ಞನಂತೆ ಜನಪ್ರಿಯರಾದರು. ತಿರುಳಗನ್ನಡ ತಿರುಕರೆನಿಸಿದರು. ಬಸವಾದಿ ಶರಣರ ವಿರೋಧಿಗಳು ಬಸವ ಧರ್ಮದ ಬಗ್ಗೆ ಇಲ್ಲ ಸಲ್ಲದ ಸಂಶಯಗಳನ್ನು ಎತ್ತಿದಾಗ, ಅವುಗಳಿಗೆ ಸಮರ್ಪಕ ಉತ್ತರ ನೀಡಿದರು ಎಂದು ತಿಳಿಸಿದರು.
ಕಲಬುರಗಿಯ ವಕೀಲರೊಬ್ಬರು ಅನುಭವ ಮಂಟಪವೇ ಇರಲಿಲ್ಲ ಎಂದಾಗ, ‘ವಚನ ಮಂಟಪ ದಿ. ಹಾರ್ಟ್ ಆಫ್ ಲಿಂಗಾಯತ ರಿಲಿಜಿಯನ್’ ಪುಸ್ತಕ ಬರೆದು, ಅದರ ಐತಿಹಾಸಿಕತೆಯನ್ನು ಸಿದ್ಧಪಡಿಸಿದರು.
ಸೊನ್ನಲಾಪುರದ ಸಿದ್ಧರಾಮೇಶ್ವರರು ಕಲ್ಯಾಣಕ್ಕೆ ಬಂದಿರಲಿಲ್ಲ. ಅವರು ಲಿಂಗ ಧರಿಸಿರಲಿಲ್ಲವೆಂದು ಮೈಸೂರಿನ ಪಂಡಿತರು ಸಂದೇಹ ಎತ್ತಿದರು. ಉತ್ತಂಗಿ ಚನ್ನಪ್ಪನವರು ವಚನಗಳ ಆಧಾರವನ್ನೇ ಬಳಸಿ ಸಿದ್ಧರಾಮರು ಕಲ್ಯಾಣಕ್ಕೆ ಬಂದು ಚನ್ನಬಸವಣ್ಣನವರಿಂದ ದೀಕ್ಷೆ ಪಡೆದ ಸತ್ಯ ಬಿಚ್ಚಿಟ್ಟರು ಎಂದು ಹೇಳಿದರು.
ಉತ್ತಂಗಿ ಚನ್ನಪ್ಪನವರ ಪ್ರೇರಣೆಯಿಂದಲೇ ಅಕ್ಕ ಅನ್ನಪೂರ್ಣತಾಯಿ ಲಿಂಗಾಯತ ಧರ್ಮಗ್ರಂಥ ಹೊರತಂದರು. ನೀಲಮ್ಮನ ಬಳಗ ಆರಂಭಿಸಿದರು ಎಂದು ತಿಳಿಸಿದರು. 1913 ರಲ್ಲಿ ಸಾರ್ವಜನಿಕ ಬಸವ ಜಯಂತಿ ಆಚರಣೆ ಜಾರಿಗೆ ತಂದವರು ಹರ್ಡೆಕರ್ ಮಂಜಪ್ಪ ಅವರು ಎಂದರು.

ಹಳಕಟ್ಟಿ, ಉತ್ತಂಗಿ ಚನ್ನಪ್ಪ ಹಾಗೂ ಹರ್ಡೇಕರ್ ಮಂಜಪ್ಪ ಸದಾ ಸ್ಮರಣೀಯರು. ಅವರ ಆದರ್ಶ ಮಾನವ ಕುಲಕೋಟಿಗೆ ಮಾರ್ಗದರ್ಶಿಯಾಗಿದೆ ಎಂದು ತಿಳಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಮಾತನಾಡಿ, ಹರ್ಡೇಕರ್ ಮಂಜಪ್ಪನವರು ಶರಣ ತತ್ವಕ್ಕೆ ಸಂಬಂಧಿಸಿದ 82 ಕೃತಿಗಳನ್ನು ಕೊಟ್ಟಿದ್ದಾರೆ. ಶ್ರೀ ಬಸವೇಶ್ವರ ಸೇವಾ ದಳ ಹುಟ್ಟು ಹಾಕಿ, ಆ ಮೂಲಕ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧಿಜಿ ಅವರಿಗೆ ಬಸವಣ್ಣನವರನ್ನು ಪರಿಚಯಿಸಿದರು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಸುಂದರ ಬದುಕಿನ ಸೂತ್ರಗಳಾದ ವಚನಗಳನ್ನು ಉಳಿಸಲು ಅಂದು ಶರಣರು ಪ್ರಾಣ ಕೊಟ್ಟರು. ವಚನಗಳಿಗಾಗಿ ದುಡಿದ ಅಂಥ ಮೂರು ಅಮೂಲ್ಯ ರತ್ನಗಳ ಚಿಂತನೆ ನಡೆದದ್ದು ಅರ್ಥಪೂರ್ಣ ಎಂದು ತಿಳಿಸಿದರು.
ಪರಮಾತ್ಮನ ಸ್ವರೂಪವೇ ಶರಣರು, ಶರಣರನ್ನು ನೋಡಿ, ನಂಬಿ, ನಾವು ಸಹ ಮಾನವೀಯತೆ ಹರಡಲು ಕಿಂಚಿತ್ತಾದರೂ ಶ್ರಮಿಸಬೇಕು ಎಂದು ಸಲಹೆ ಮಾಡಿದರು.
ಕಲಬುರಗಿ ಜಿಲ್ಲಾ ಪಂಚಾಯಿತಿ ನಿವೃತ್ತ ಮುಖ್ಯ ಯೋಜನಾಧಿಕಾರಿ ಶರಣಬಸವ ಮಠಪತಿ, ಗುರುಮಠಕಲ್ ಸರ್ಕಾರಿ ಐಟಿಐ ನಿವೃತ್ತ ಪ್ರಾಚಾರ್ಯ ಕಲ್ಲಪ್ಪ ಡಿಗ್ಗಿ ಹಾಗೂ ನಿಡೋದಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕಿ ರಾಜಮ್ಮ ಚಿಕ್ಕಪೇಟೆ ಅವರನ್ನು ಅಭಿನಂದಿಸಲಾಯಿತು.
ಶರಣಬಸವ ಮಠಪತಿ ಕಾರ್ಯಕ್ರಮ ಉದ್ಘಾಟಿಸಿದರು. ಮಹಾನಂದ ಶ್ರೀಕಾಂತ ಬೀಕ್ಲೆ ಅಧ್ಯಕ್ಷತೆ ವಹಿಸಿದ್ದರು.
ಪ್ರಕೃತಿ ಮಹಾಂತೇಶ ಹಾಗೂ ಗುರುಶ್ರೀ ಸುಮಧುರವಾಗಿ ವಚನ ಗಾಯನ ಮಾಡಿದರು. ನೀಲಮ್ಮನ ಬಳಗದ ಸದಸ್ಯೆಯರು ಪ್ರಾರ್ಥನೆಗೈದರು. ಶ್ರೇಯಸ್ ಪಾಟೀಲ ಗುರು ಪೂಜೆ ನೆರವೇರಿಸಿದರು.
ಸಂಧ್ಯಾರಾಣಿ ಮುತ್ತಂಗೆ ಸ್ವಾಗತಿಸಿದರು. ವರ್ಷಾ ಸಂತೋಷ್ ಪಾಟೀಲ ಭಕ್ತಿ ದಾಸೋಹಗೈದರು.
